ಅಮೀರ್‌ ಖಾನ್‌ ನೂತನ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಶೀರ್ಷಿಕೆ ‘ಸಿತಾರೆ ಜಮೀನ್​ ಪರ್​’ ಎಂದು ನಿಗದಿಯಾಗಿದೆ. ಈ ಹಿಂದೆ ಅವರು ನಿರ್ದೇಶಿಸಿ, ನಟಿಸಿದ್ದ ‘ತಾರೆ ಜಮೀನ್​ ಪರ್​’ ಸಿನಿಮಾ ಡಿಸ್ಲೆಕ್ಸಿಯಾ ಕುರಿತು ಹೇಳಿತ್ತು. ಈ ಬಾರಿಯೂ ಇಂಥದ್ದೊಂದು ವಿಷಯವನ್ನು ತೆರೆಗೆ ಅಳವಡಿಸುತ್ತಿರುವುದಾಗಿ ಹೇಳಿದ್ದಾರೆ ಅಮೀರ್‌.

ನಟ, ನಿರ್ದೇಶಕ ಅಮೀರ್‌ ಖಾನ್‌ ಹೊಸ ಸಿನಿಮಾ ಘೊಷಣೆ ಮಾಡಿದ್ದಾರೆ. 2007ರಲ್ಲಿ ಬಿಡುಗಡೆ ಆಗಿದ್ದ ‘ತಾರೆ ಜಮೀನ್​ ಪರ್​’ ಸಿನಿಮಾದ ರೀತಿಯಲ್ಲಿಯೇ ಇನ್ನೊಂದು ಕಥೆಯನ್ನು ಇಟ್ಟುಕೊಂಡು ‘ಸಿತಾರೆ ಜಮೀನ್​ ಪರ್​’ ಎಂಬ ಶೀರ್ಷಿಕೆಯ ಸಿನಿಮಾ ಮಾಡಲಿದ್ದಾರೆ. ಅವರ ಲೇಟೆಸ್ಟ್‌ ಸಿನಿಮಾ ‘ಲಾಲ್​ ಸಿಂಗ್ ಛಡ್ಡಾ’ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿಸಿದ ಯಶಸ್ಸು ಕಾಣಲಿಲ್ಲ. ಹಾಗಾಗಿ ಅಮೀರ್ ಹೊಸ ಸಿನಿಮಾ ಘೋಷಿಸಲು​ ಸಾಕಷ್ಟು ಸಮಯ ತೆಗೆದುಕೊಂಡರು. ಈಗ ಮುಂದಿನ ಸಿನಿಮಾ ಬಗ್ಗೆ​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಸಿನಿಮಾದ ಕಾನ್ಸೆಪ್ಟ್​ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಅಮಿರ್ ಖಾನ್​ ನಿರ್ದೇಶಿಸಿ, ನಟಿಸಿದ್ದ ‘ತಾರೆ ಜಮೀನ್​ ಪರ್​’ ಸಿನಿಮಾ ಓದಲು, ಬರೆಯಲು ಕಷ್ಟಪಡುವ (ಡಿಸ್ಲೆಕ್ಸಿಯಾ) ಬಾಲಕನ ಕುರಿತ ಚಿತ್ರವಾಗಿತ್ತು. ಈಗ ನೂತನ ಚಿತ್ರದಲ್ಲೂ ಇಂಥದ್ದೊಂದು ಕಥಾವಸ್ತು ಇರಲಿದೆ ಎನ್ನುತ್ತಾರವರು.

‘ನಾನು ಈ ವಿಚಾರದ ಬಗ್ಗೆ ಬಹಿರಂಗವಾಗಿ ಈವರೆಗೂ ಮಾತನಾಡಿಲ್ಲ. ಈಗ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ಈ ಸಿನಿಮಾದ ಶೀರ್ಷಿಕೆ​ ಏನು ಎಂಬುದನ್ನು ಹೇಳುತ್ತೇನೆ. ‘ಸಿತಾರೆ ಜಮೀನ್​ ಪರ್​’ ಎಂದು ನಿಗಧಿಯಾಗಿದೆ. ನಿಮಗೆ ನನ್ನ ‘ತಾರೆ ಜಮೀನ್​ ಪರ್​’ ಸಿನಿಮಾ ನೆನಪಿರಬಹುದು. ಈಗ ಅಂಥದ್ದೇ ಒಂದು ವಿಷಯವನ್ನು ತೆರೆಗೆ ಅಳವಡಿಸಲಿದ್ದೇನೆ. ಅಂದು ‘ತಾರೆ ಜಮೀನ್​ ಪರ್’ ಸಿನಿಮಾ ಭಾವನಾತ್ಮಕವಾಗಿತ್ತು.​ ನಿಮ್ಮನ್ನೆಲ್ಲ ಅಳಿಸಿತ್ತು. ಆದರೆ ಈಗ ‘ಸಿತಾರೆ ಜಮೀನ್ ಪರ್​’ ಚಿತ್ರ ನಿಮ್ಮನ್ನೆಲ್ಲಾ ನಗಿಸಿ ಮನರಂಜನೆ ನೀಡುತ್ತದೆ’ ಎಂದು ಆಮಿರ್ ಖಾನ್​ ಹೇಳಿದ್ದಾರೆ. ಇದಲ್ಲದೇ ಅಮೀರ್‌ ನಿರ್ಮಾಣದಲ್ಲೂ ಸಕ್ರಿಯರಾಗಿದ್ದು, ಒಟ್ಟಿಗೇ ಮೂರು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here