ಬಹುತಾರಾಗಣದ ‘ಕಲ್ಕಿ 2898 AD’ ಹಿಂದಿ ಮತ್ತು ತೆಲುಗು ದ್ವಿಭಾಷಾ ಸಿನಿಮಾ ಇದೇ ಜೂನ್ 27ರಂದು ತೆರೆಕಾಣುತ್ತಿದೆ. ಪ್ರಚಾರದ ಅಂಗವಾಗಿ ಈ ಸಿನಿಮಾದ ‘ಬುಜ್ಜಿ’ ಸಿನಿಮಾ ಕುಂದಾಪುರಕ್ಕೆ ಬಂದಿಳಿದಿದ್ದು, ರಿಷಭ್ ಶೆಟ್ಟಿ ಇದನ್ನು ರೈಡ್ ಮಾಡಿದ್ದಾರೆ.
ಪ್ರಭಾಸ್ ನಟನೆಯ ಬಹುತಾರಾಗಣದ ‘ಕಲ್ಕಿ 2898 AD’ ಸಿನಿಮಾದಲ್ಲಿನ ಭೈರವನ ‘ಬುಜ್ಜಿ’ ವಾಹನ ಕುಂದಾಪುರಕ್ಕೆ ಬಂದಿಳಿದಿದೆ. ಈ ವಾಹನವನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಓಡಿಸಿದ್ದಾರೆ. ಇದನ್ನು ತಯಾರಿಸಿದ ಮಹೀಂದ್ರಾ ಕಂಪನಿಯ ಆನಂದ್ ಮಹೀಂದ್ರ ಸಹ ಇತ್ತೀಚೆಗಷ್ಟೇ ಈ ವಾಹನ ಏರಿದ್ದರು. ಇದೀಗ ಸ್ಟೈಲಿಷ್ ಲುಕ್‌ನ ಈ ವಾಹನವನ್ನು ಕುಂದಾಪುರದಲ್ಲಿ ‘ಕಾಂತಾರ’ ನಟ ರಿಷಭ್ ಶೆಟ್ಟಿ ರೈಡ್ ಮಾಡಿದ್ದಾರೆ. ರೈಡ್‌ನ ಕಿರು ವಿಡಿಯೋವನ್ನು ವೈಜಯಂತಿ ಮೂವೀಸ್ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ಕಲ್ಕಿ X ಕಾಂತಾರ’ ಎನ್ನುವ ಕ್ಯಾಪ್ಶನ್ ನೀಡಿದೆ. ಕಲ್ಕಿ ಸಿನಿಮಾದಲ್ಲಿನ ಆಕರ್ಷಣೆಯ ಕೇಂದ್ರಬಿಂದುವಾದ ಬುಜ್ಜಿ ವಾಹನವನ್ನು ರಿಷಭ್ ಶೆಟ್ಟಿ ರೈಡ್ ಮಾಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಸಿನಿಮಾದ ಬಗೆಗಿನ ಚಿತ್ರಣ ಸಿಗುತ್ತದೆ. ಕಾಶಿಯನ್ನು ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ಅದರ ಉಳಿವಿಗಾಗಿ ನಡೆಯುವ ಹೋರಾಟವಿದು. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಆಕರ್ಷಕ ಹಿನ್ನೆಲೆ ಸಂಗಿತ, ಗುಣಮಟ್ಟದ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳು ಸಿನಿಮಾದಲ್ಲಿ ಇರಲಿವೆ ಎನ್ನುವ ಸೂಚನೆ ಸಿಗುತ್ತದೆ. ನಾಗ್ ಅಶ್ವಿನ್ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್, ಕಮಲ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಇದ್ದಾರೆ. ಮೂಲ ಹಿಂದಿ ಮತ್ತು ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.










