ಕನ್ನಡ ನಟಿ ಆಶಿಕಾ ರಂಗನಾಥ್‌ ನಟಿಸುತ್ತಿರುವ ‘ನಾ ಸಾಮಿ ರಂಗ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದು ನಾಯಕನಟಿಯನ್ನು ಪರಿಚಯಿಸುವ ಟೀಸರ್‌ ಎನ್ನುವುದು ವಿಶೇಷ. ವಿಜಯ್‌ ಬಿನ್ನಿ ನಿರ್ದೇಶಿಸುತ್ತಿರುವ ಚಿತ್ರದ ಹೀರೋ ನಾಗಾರ್ಜುನ.

‘ನಾ ಸಾಮಿ ರಂಗ’ ತಂಡ ಚಿತ್ರದ ನಾಯಕನಟಿ ಆಶಿಕಾ ರಂಗನಾಥ್‌ ಟೀಸರ್‌ ಬಿಡುಗಡೆ ಮಾಡಿದೆ. ಅಕ್ಕಿನೇನಿ ನಾಗಾರ್ಜುನ ಹೀರೋ ಆಗಿ ನಟಿಸುತ್ತಿರುವ ಈ ತೆಲುಗು ಚಿತ್ರವನ್ನು ನೃತ್ಯ ಸಂಯೋಜಕ ವಿಜಯ್‌ ಬಿನ್ನಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಆಶಿಕಾ ಸಾಂಪ್ರದಾಯಿಕ ಹುಡುಗಿ ‘ವರಲಕ್ಷಿ’ಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಅನಾವರಣಗೊಳಿಸಿರುವ ವಿಶೇಷ ಟೀಸರ್‌ನಲ್ಲಿ ಅಲಂಕಾರ ಮಾಡಿಕೊಳ್ಳುತ್ತಾ ಕಿವಿಗೆ ಜುಮುಕಿ ಹಾಕಿಕೊಳ್ಳುತ್ತಿರುವ, ನಾಗಾರ್ಜುನ ಅವರು ಆಶಿಕಾಳನ್ನು ಓಲೈಸುತ್ತಿರುವ ದೃಶ್ಯಗಳಿವೆ. ಹಿನ್ನೆಲೆಯಲ್ಲಿ ಜಾನಪದ ಗೀತೆ ಕೇಳಿಸುತ್ತದೆ.

ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ. ‘ನಾಟು ನಾಟು’ ಖ್ಯಾತಿಯ ಆಸ್ಕರ್ ಪ್ರಶಸ್ತಿ ವಿಜೇತ ಚಂದ್ರಬೋಸ್ ಸಾಹಿತ್ಯ ರಚಿಸಿದ್ದಾರೆ. Srinivasaa Silver Screen ಬ್ಯಾನರ್‌ ಅಡಿಯಲ್ಲಿ ಶ್ರೀನಿವಾಸ ಚಿತ್ತೂರಿ ಸಿನಿಮಾವನ್ನು ನಿರ್ಮಿಸುತ್ತಿದ್ದು, ಪ್ರಸನ್ನ ಕುಮಾರ್ ಬೆಜವಾಡ ಅವರು ಈ ಆಕ್ಷನ್-ಥ್ರಿಲ್ಲರ್‌ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮಲಯಾಳಂ ಚಿತ್ರ ‘ಪೊರಿಂಜು ಮರಿಯಂ ಜೋಸ್‌’ನ ರಿಮೇಕಿದು ಎಂದು ಹೇಳಲಾಗುತ್ತಿದೆ. ಇನ್ನು ಕನ್ನಡದಲ್ಲಿ ಆಶಿಕಾರ ಎರಡು ಸಿನಿಮಾಗಳು ಚಿತ್ರೀಕರಣದಲ್ಲಿವೆ. PRK Productions ಅವರ ‘ಓ2’ ಸಿನಿಮಾದಲ್ಲಿ ಆಶಿಕಾ ನಟಿಸಿದ್ದು, ಸಿನಿಮಾ ತೆರೆಗೆ ಸಿದ್ಧವಾಗಿದೆ. ನಿರ್ದೇಶಕ ಸಿಂಪಲ್‌ ಸುನಿ ಮತ್ತು ದುಷ್ಯಂತ್‌ ಅವರ ‘ಗತವೈಭವ’ ಚಿತ್ರದಲ್ಲಿ ಕೂಡ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here