ಬರ್ತ್‌ಡೇ ಆಚರಣೆಗೆಂದು ಫಾರ್ಮ್‌ಹೌಸ್‌ಗೆ ತೆರಳಿದ್ದ ನಟ ಸಲ್ಮಾನ್ ಖಾನ್‌ರಿಗೆ ನಿನ್ನೆ ಹಾವು ಕಚ್ಚಿತ್ತು. ಇದು ವಿಷಪೂರಿತವಲ್ಲದ ಹಾವಾದ್ದರಿಂದ ತಮಗೇನೂ ತೊಂದರೆಯಾಗಿಲ್ಲ ಎಂದಿದ್ದಾರವರು. ಇಂದು ಸಲ್ಮಾನ್ 56ನೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದು, ಹಲವು ತಾರೆಯರು ನಟನಿಗೆ ಶುಭ ಹಾರೈಸಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇಂದು 56 ತುಂಬಿತು. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಫಾರ್ಮ್‌ಹೌಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಅವರ ರೂಢಿ. ಅದರಂತೆ ಫಾರ್ಮ್‌ಹೌಸ್‌ಗೆ ತೆರಳಿದ್ದಾಗ ಅವರಿಗೆ ಹಾವು ಕಚ್ಚಿತ್ತು. ಕೂಡಲೇ ಆಸ್ಪತ್ರೆಗೆ ತೆರಳಿದ್ದ ಅವರು ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಆರು ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದು ಡಿಸ್ಚಾರ್ಜ್ ಆದಾಗ ಅವರು ಹೇಳಿದ್ದಿಷ್ಟು – “ಫಾರ್ಮ್‌ಹೌಸ್‌ನೊಳಗೆ ಹಾವು ನುಸುಳಿತ್ತು. ಅದಕ್ಕೆ ಹಾನಿ ಮಾಡದೆ ದೊರ ಒಯ್ದು ಬಿಡಲೆಂದು ಕೋಲಿನಿಂದ ಅದನ್ನು ಹಿಡಿಯಲು ಪ್ರಯತ್ನಿಸಿದೆ. ಒಮ್ಮೆಗೇ ಜಿಗಿದ ಹಾವು ನನ್ನ ಅಂಗೈಗೆ ಒಂದಲ್ಲ, ಮೂರು ಬಾರಿ ಕಚ್ಚಿತು. ಕೂಡಲೇ ಜೊತೆಗಿದ್ದ ಗೆಳೆಯರು ನನ್ನನ್ನು ಚಿಕಿತ್ಸೆಗೆಂದು ಕರೆದೊಯ್ದರು. ಇದು ವಿಷಪೂರಿತವಲ್ಲದ ಹಾವಾಗಿದ್ದು, ತೊಂದರೆಯಿಲ್ಲ ಎಂದರು ವೈದ್ಯರು. ಅದಾಗ್ಯೂ ಆಂಟಿ – ವಿನೊಮಸ್ ಇಂಜೆಕ್ಷನ್ ಕೊಟ್ಟು ಅಬ್ಸರ್‌ವೇಷನ್‌ನಲ್ಲಿಟ್ಟು ಡಿಸ್ಚಾರ್ಜ್ ಮಾಡಿದರು. ನಾನು ಆರಾಮವಾಗಿದ್ದೇನೆ” ಎಂದಿದ್ದಾರೆ ಸಲ್ಮಾನ್.
ಆಸ್ಪತ್ರೆಯಿಂದ ಮನೆಗೆ ಬಂದ ಸಲ್ಮಾನ್‌ರನ್ನು ಅವರ ತಂದೆ, ಖ್ಯಾತ ಚಿತ್ರಕಥೆಗಾರ ಸಲೀಂ ಖಾನ್, “ಹಾವು ಬದುಕಿದೆಯೇ?” ಎಂದು ಕೇಳಿದ್ದಾರೆ. ಅದಕ್ಕೆ ಸಲ್ಮಾನ್, “ಟೈಗರ್ ಭೀ ಜಿಂದಾ ಹೈ, ಸಾಂಪ್ ಭೀ!” ಎಂದು ನಗುತ್ತಲೇ ಉತ್ತರಿಸಿದರಂತೆ. ನಿನ್ನೆ ರಾತ್ರಿ ಫಾರ್ಮ್‌ಹೌಸ್‌ನಲ್ಲಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಹಾಗೂ ಸಿನಿಮಾರಂಗದ ಹಲವರು ಸಲ್ಮಾನ್‌ಗೆ ಶುಭ ಹಾರೈಸಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಸಲ್ಮಾನ್ ಜೊತೆಗಿನ ತಮ್ಮ ವಿಶಿಷ್ಟ ಪೋಟೊ ಹಾಕಿ, “ನಿಮಗೆ ನನ್ನ ಕಡೆಯಿಂದ ಯಾವಾಗಲೂ ಶುಭ ಹಾರೈಕೆ ಇರುತ್ತದೆ. ನನ್ನನ್ನು ಸದಾ ನಿಮ್ಮ ಕುಟುಂಬದ ಸದಸ್ಯನಂತೆ ಪ್ರೀತಿ ತೋರುತ್ತೀರಿ. ನೆಮ್ಮದಿ, ಸಂತೃಪ್ತಿಯ ಬದುಕು ನಿಮ್ಮದಾಗಲಿ” ಎಂದು ಟ್ವೀಟ್ ಮಾಡಿದ್ದಾರೆ. ನಟ ಸಲ್ಮಾನ್ ಅಭಿನಯದ ‘ಅಂತಿಮ್’ ಹಿಂದಿ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ಅವರ ‘ಕಿಕ್ 2’, ‘ಟೈಗರ್ 3’ ಚಿತ್ರೀಕರಣದಲ್ಲಿವೆ. ಯಶಸ್ವೀ ‘ಭಜರಂಗಿ ಭಾಯಿಜಾನ್’ ಸೀಕ್ವೆಲ್‌ಗೆ ಚಿತ್ರಕಥೆ ಸಿದ್ಧವಾಗುತ್ತಿದೆ.