ಫಸ್ಟ್‌ಲುಕ್‌, ಟೀಸರ್‌ನೊಂದಿಗೆ ಸುದ್ದಿಯಾಗಿದ್ದ ಶಾರುಖ್‌ ಖಾನ್‌ರ ‘ಜವಾನ್‌’ ಸಿನಿಮಾದ ಪ್ರೀವ್ಯೂ ಬಿಡುಗಡೆಯಾಗಿದೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ ಎನ್ನುವುದು ಟೀಸರ್‌ನಲ್ಲಿ ದಟ್ಟವಾಗಿ ಕಾಣಿಸುತ್ತದೆ. ಶಾರುಖ್‌ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸೆಪ್ಟೆಂಬರ್‌ 7ರಂದು ಸಿನಿಮಾ ತೆರೆಕಾಣಲಿದೆ.

ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಜವಾನ್’ ಪ್ರಿವ್ಯೂ ಇಂದು ಬಿಡುಗಡೆಯಾಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್. ಸಮಾಜದ ತಪ್ಪುಗಳನ್ನು ತಿದ್ದುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಯ ಕತೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆರಂಭದಿಂದಲೂ ಕುತೂಹಲವಿತ್ತು. ಆ ನಿರೀಕ್ಷೆ ಮತ್ತು ಕುತೂಹಲಗಳನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ ಟೀಸರ್‌. ದೊಡ್ಡ ಕ್ಯಾನ್ಸಾಸ್‌ನಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಸಿನಿಮಾ ಆಕ್ಷನ್ ಮತ್ತು ಎಮೋಷನ್‌ಗಳನ್ನು ಹದವಾಗಿ ಹಿಡಿದಿಟ್ಟಿರುವಂತೆ ಕಾಣಿಸುತ್ತದೆ. ಶಾರುಖ್‌ ಧ್ವನಿಯಲ್ಲಿ ಪ್ರಾರಂಭವಾಗುವ ಪ್ರಿವ್ಯೂ, ನಂತರ ಚಿತ್ರ ಏನಿರಬಹುದು ಎಂದು ಪರಿಚಯಿಸಿಕೊಡುತ್ತದೆ.

ಪ್ರಿವ್ಯೂನ ಒಂದು ವಿಶೇಷತೆಯೆಂದರೆ, ಇದುವರೆಗೂ ನೀವು ನೋಡದೆ ಇರುವ ಶಾರುಖ್ ಅವರನ್ನು ಇಲ್ಲಿ ಹಲವು ಅವತಾರಗಳಲ್ಲಿ ನೋಡಬಹುದು. ಶಾರುಖ್ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಭಾವಂತರನ್ನು ಪ್ರಿವ್ಯೂನಲ್ಲಿ ಪರಿಚಯಿಸಲಾಗಿದೆ. ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು, ಅದ್ಧೂರಿ ಹಾಡುಗಳು ಪ್ರಿವ್ಯೂ ಹೈಲೈಟ್ಸ್‌. ಅಟ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ. ಪ್ರಿವ್ಯೂನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅದು ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರಾಜಕುಮಾರಿ ಅವರು ಹಾಡಿರುವ ‘ದಿ ಕಿಂಗ್ ಖಾನ್ RAP’ ಸಾಂಗ್‌.

ಶಾರುಖ್ ಖಾನ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ಜವಾನ್‌’. ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್‌ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಗೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ದೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಿಯಾ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದಕ್ಕೂ ಮುನ್ನ ಪೋಸ್ಟರ್ ಮತ್ತು ಸಣ್ಣ ಟೀಸರ್ ಮೂಲಕ ಸಿನಿಮಾ ಸುದ್ದಿಯಾಗಿತ್ತು. ಈಗ ಪ್ರಿವ್ಯೂ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್‌ ಅಡಿ ಗೌರಿ ಖಾನ್ ಚಿತ್ರ ನಿರ್ಮಿಸಿದ್ದಾರೆ. ಗೌರವ್ ವರ್ಮ ಸಹ -ನಿರ್ಮಾಪಕ. ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ‘ಜವಾನ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here