ಈ ವಾರ ತೆರೆಕಾಣುತ್ತಿರುವ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ದುಬಾರಿ ಬಜೆಟ್‌ನಲ್ಲಿ ಸಿದ್ಧವಾಗಿರುವ ತಮ್ಮ ಸಿನಿಮಾ ಜನರಿಗೆ ಮನರಂಜನೆ ನೀಡುವಲ್ಲಿ ಹಿಂದೆ ಬೀಳುವುದಿಲ್ಲ ಎನ್ನುವ ವಿಶ್ವಾಸ ಸುದೀಪ್‌ ಅವರದ್ದು.

ಕೋವಿಡ್ ಸಂಕಷ್ಟಗಳ ನಂತರದ ದಿನಗಳಲ್ಲಿ ತೆರೆಕಾಣುತ್ತಿರುವ ತಮ್ಮ ‘ಕೋಟಿಗೊಬ್ಬ 3’ ಸಿನಿಮಾ ಕುರಿತು ನಟ ಸುದೀಪ್ ಅವರಿಗೆ ತುಂಬಾ ಪ್ರೀತಿಯಿದೆ. ಜೊತೆಗೆ ಸಾಕಷ್ಟು ಆತಂಕವೂ ಇದೆ! “ಕೋವಿಡ್ ದಿನಗಳಲ್ಲಿ ಜನರು ತುಂಬಾ ಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮಧ್ಯಮವರ್ಗ, ಕೆಳಮಧ್ಯಮವರ್ಗದ ಜನರ ವರಮಾನದಲ್ಲಿ ಏರುಪೇರಾಗಿದೆ. ಹಲವರು ಕೆಲಸ ಕಳೆದುಕೊಂಡಿದ್ದರೆ, ಮತ್ತಷ್ಟು ಜನರ ವೇತನಗಳು ಕಡಿತವಾಗಿವೆ. ನೂರಾರು ರೂಪಾಯಿ ತೆತ್ತು ಸಿನಿಮಾ ನೋಡುವಾಗ ಅವರು ಯೋಚಿಸುವಂತಾಗಿದೆ. ಹಾಗಾಗಿ ಥಿಯೇಟರ್‌ಗಳಲ್ಲಿ ಮೊದಲಿನ ಸಂಚಲನ ಕಾಣಿಸುತ್ತಿಲ್ಲ. ಸಹಜವಾಗಿಯೇ ತೆರೆಕಾಣಲಿರುವ ಚಿತ್ರಗಳಿಗೆ ಯಾವ ಪ್ರತಿಕ್ರಿಯೆ ಸಿಗುವುದೋ ಎನ್ನುವ ಆತಂಕವಿದೆ” ಎನ್ನುತ್ತಾರೆ ಸುದೀಪ್‌.

ನಟ ಸುದೀಪ್ ಈಗ ಕನ್ನಡಕ್ಕಷ್ಟೇ ಸೀಮಿತರಾಗಿ ಉಳಿದಿಲ್ಲ. ತೆಲುಗು, ಬಾಲಿವುಡ್ ಸಿನಿಮಾಗಳ ಮೂಲಕ ಅವರು ದಕ್ಷಿಣ ಭಾರತ ಮತ್ತು ಬಾಲಿವುಡ್‌ ಪ್ರೇಕ್ಷಕರಿಗೂ ಪರಿಚಿತರು. ‘ಕೋಟಿಗೊಬ್ಬ 3’ ಟ್ರೈಲರ್‌ಗೆ ಸಿಕ್ಕಿರುವ ಕಾಮೆಂಟ್‌ಗಳು, ವಿಮರ್ಶೆಗಳು ಇದನ್ನು ಸಾಬೀತುಪಡಿಸಿವೆ. ಟ್ರೈಲರ್‌ನಲ್ಲಿನ ವಿದೇಶಿ ಲೊಕೇಶನ್‌ಗಳು ಪ್ರಮುಖವಾಗಿ ಗಮನಸೆಳೆಯುತ್ತವೆ. ಈ ಬಗ್ಗೆ ಮಾತನಾಡಿದ ಸುದೀಪ್‌, “ವಿದೇಶಗಳಲ್ಲಿ ಚಿತ್ರೀಕರಿಸಿದ ಮಾತ್ರಕ್ಕೆ ಸಿನಿಮಾ ಚೆನ್ನಾಗಿ ಆಗೋಲ್ಲ. ಅಲ್ಲಿ ಹೇಗೆ, ಏನು ಚಿತ್ರಿಸಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಎರಡು ಬಾರಿ ವಿದೇಶಕ್ಕೆ ಹೋಗಿ ಚಿತ್ರಿಸಿದ್ದೇವೆ. ಕತೆಗೆ ಪೂರಕವಾದ ಈ ಸನ್ನಿವೇಶಗಳು ಖಂಡಿತವಾಗಿ ಪ್ರೇಕ್ಷಕರಿಗೆ ಮುದ ನೀಡುತ್ತವೆ” ಎನ್ನುತ್ತಾರೆ.

ಈ ಹಿಂದಿನ ಅವರ ‘ಕೋಟಿಗೊಬ್ಬ2’ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ವಿಯಾಗಿತ್ತು. ಈ ಗೆಲುವೇ ಸೀಕ್ವೆಲ್‌ಗೆ ಪ್ರೇರಣೆ ಎನ್ನುವುದು ಅವರ ಅಭಿಪ್ರಾಯ. “ಯಾವುದೇ ಚಿತ್ರವಾದರೂ ಸೀಕ್ವೆಲ್ ಮಾಡಬೇಕಾದರೆ ಅದಕ್ಕೆ ಅದರದ್ದೇ ಒಂದು ತೂಕ ಇರಬೇಕಾಗುತ್ತದೆ. ಕೋಟಿಗೊಬ್ಬ ಸಿನಿಮಾಗೆ ಆ ವ್ಯಾಲ್ಯೂ ಇದೆ. ಹಾಗಾಗಿ ಸೀಕ್ವೆಲ್ ಆಯ್ತು. ಈ ಸರಣಿ ಕೂಡ ಹಿಂದಿ ಚಿತ್ರದ ಘನತೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಿದೆ. ನಿರ್ಮಾಪಕ ಸೂರಪ್ಪ ಬಾಬು ಚಿತ್ರಕ್ಕೆ ಅವಶ್ಯವಿದ್ದ ಎಲ್ಲವನ್ನೂ ಮರುಮಾತಿಲ್ಲದೆ ಒದಗಿಸುತ್ತಿದ್ದರು. ಅವರ ಸಿನಿಮಾ ಪ್ರೀತಿ ದೊಡ್ಡದು. ಇನ್ನು ನಿರ್ದೇಶಕ ಶಿವಕಾರ್ತೀಕ್ ಯುವಕನಾದರು ಅನುಭವಿ ತಂತ್ರಜ್ಞರಂತೆ ಕೆಲಸ ಮಾಡಿದ್ದಾರೆ” ಎಂದು ತಮ್ಮ ತಂಡದ ಬಗ್ಗೆ ಸುದೀಪ್ ಹೇಳಿಕೊಳ್ಳುತ್ತಾರೆ.

ಸ್ಟಾರ್‌ವಾರ್ ಇಲ್ಲ : ತಮ್ಮ ಸಿನಿಮಾ ಜೊತೆ ‘ಸಲಗ’ ಬಿಡುಗಡೆಯಾಗುತ್ತಿರುವ ಬಗ್ಗೆ ಸುದೀಪ್‌ರಿಗೆ ಯಾವುದೇ ಸಮಸ್ಯೆ ಇದ್ದಂತಿಲ್ಲ. ಆ ತಂಡಕ್ಕೂ ಶುಭ ಕೋರುವ ಅವರು ಸ್ಪರ್ಧೆ ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾರೆ. “ವಿಜಿ ಅವರ ಸಲಗ ಚಿತ್ರದ ಮುಹೂರ್ತಕ್ಕೆ ಹೋಗಿ ಕ್ಲ್ಯಾಪ್ ಮಾಡಿ ಬಂದಿದ್ದೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿ ಬಂದ ಮೇಲೆ ಅವರ ಚಿತ್ರದ ಬಗ್ಗೆ ಮಾತನಾಡುವುದೇ ತಪ್ಪು. ಅವರೂ ಕಷ್ಟಪಟ್ಟು ಸಿನಿಮಾ ಮಾಡಿದ್ದು, ಅವರಿಗೂ ಒಳಿತಾಗಲಿ” ಎನ್ನುವ ಸುದೀಪ್‌ರಿಗೆ ಸ್ಟಾರ್‌ವಾರ್ ಬಗ್ಗೆ ಅಸಮಧಾನವಿದೆ. “ಕಳೆದೆರೆಡು ದಶಕಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ನನ್ನಲ್ಲೇನೋ ಸತ್ವ ಇರುವುದರಿಂದ ನಾನು ಇಂದಿಗೂ ಉಳಿಯಲು ಸಾಧ್ಯವಾಗಿದೆ. ನನ್ನನ್ನು ನಂಬಿ ನನಗಾಗಿ ಹಣ ಹೂಡುವ ನಿರ್ಮಾಪಕರಿದ್ದಾರೆ. ಟ್ರಾಫಿಕ್‌ನಲ್ಲಿ ವಾಹನಗಳ ಭರಾಟೆ ಸಹಜ. ಇದಕ್ಕೆ ಅಂಜುವ ಅವಶ್ಯಕತೆಯಿಲ್ಲ” ಎನ್ನುತ್ತಾರೆ ಸುದೀಪ್‌.

ಪೈರಸಿ ಪಿಡುಗು: ಪೈರಸಿ ಬಗ್ಗೆ ಬೇಸರ ವ್ಯಕ್ತಿಪಡಿಸುವ  ಸುದೀಪ್‌ ಅವರಿಗೆ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಅಸಮಾಧಾನವೂ ಇದೆ. ಹಿಂದೆ ಅವರ ‘ಪೈಲ್ವಾನ್‌’ ಸಿನಿಮಾ ಸಂದರ್ಭದಲ್ಲೂ ಪೈರಸಿ ಕಾಡಿತ್ತು. ಆದರೆ ಅಭಿಮಾನಿಗಳು, ನಿರ್ಮಾಪಕರು ಚಿತ್ರವನ್ನು ಗೆಲ್ಲಿಸಿದರು ಎಂದು ಸ್ಮರಿಸುತ್ತಾರೆ. “ಈಗ ಪೈರಸಿಯನ್ನೂ ತುಂಬಾ ಪ್ರೊಫೆಷನಲ್‌ ಆಗಿ ಮಾಡುತ್ತಾರೆ. ನಮ್ಮವರೇ ಈ ಕಾರ್ಯದಲ್ಲಿ ನಿರತರಾಗಿದ್ದಾಗ ನಾವು ತಾನೇ ಏನು ಮಾಡಲು ಸಾಧ್ಯ? ಚೋರ್ ಬಜಾರ್‌ನಲ್ಲಿ ಸಾಮಾನು ಖರೀದಿಸುವವರು ಮಾಲ್‌ನಲ್ಲಿ ಶಾಪಿಂಗ್ ಮಾಡೋಲ್ಲ. ಅದು ಅವರಿಗೆ ರುಚಿಸುವುದೂ ಇಲ್ಲ. ಈ ಪೈರಸಿ ಸಮಸ್ಯೆಗೆ ಸೂಕ್ತ ಪರಿಹಾರ ಅಷ್ಟು ಸುಲಭವಲ್ಲ” ಎನ್ನುವ ಸುದೀಪ್‌ ತಮ್ಮ ಪ್ರಾಮಾಣಿಕ ಕೆಲಸವನ್ನು ನಂಬಿ ಮುನ್ನಡೆಯುವುದಾಗಿ ಹೇಳುತ್ತಾರೆ.

ಒಂದೆಡೆ ‘ಸಲಗ’ ಚಿತ್ರತಂಡ ಜೋರಾಗಿ ಪ್ರೊಮೋಷನ್ ನಡೆಸುತ್ತಿರುವಾಗ ‘ಕೋಟಿಗೊಬ್ಬ 3’ ತಂಡವೇಕೆ ಮಂಕಾಗಿದೆ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿತ್ತು. ಇದೀಗ ಸುದೀಪ್ ಸುದ್ದಿಗೋಷ್ಠಿ ಮಾಡಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಬಹಳಷ್ಟು ದಿನಗಳ ನಂತರ ಎರಡು ದೊಡ್ಡ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಪ್ರೇಕ್ಷಕರಿಂದ ಚಿತ್ರಗಳಿಗೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕು.

LEAVE A REPLY

Connect with

Please enter your comment!
Please enter your name here