‘ಲವ್ ಮಾಕ್‌ಟೇಲ್’ ಹುಡುಗ ಕೃಷ್ಣ ಅಭಿನಯದ ‘srikrishna@gmail.com’ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ. ಚಿತ್ರದ ನಾಯಕಿ ಭಾವನಾ ಮೆನನ್.
ಮೈಸೂರಿನ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ನಿರ್ದೇಶಕ ನಾಗಶೇಖರ್ ಅವರು ಅಭಿಷೇಕ್ ಅಂಬರೀಶ್ ಅವರಿಗಾಗಿ ಈ ಹಿಂದೆ ‘ಅಮರ್’ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅದೇ ಸಂಸ್ಥೆಗಾಗಿ ನಾಗಶೇಖರ್ ನಿರ್ದೇಶಿಸಿರುವ ‘srikrishna@gmail.com’ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಮೈಸೂರಿನ ಹುಡುಗನೇ ಆದ ಕೃಷ್ಣ ಚಿತ್ರದ ಹೀರೋ. ‘ಲವ್ ಮಾಕ್‌ಟೇಲ್’ ಚಿತ್ರದ ಯಶಸ್ಸಿನ ನಂತರ ಯುವ ಸಿನಿಪ್ರಿಯರ ಪ್ರೀತಯ ಹೀರೋ ಆಗಿರುವ ‘ಡಾರ್ಲಿಂಗ್ ಕೃಷ್ಣ’ ಅವರ ಚಿತ್ರವಿದು. ಅವರಿಗೆ ನಾಯಕಿಯಾಗಿ ಭಾವನಾ ಮೆನನ್ ಇದ್ದಾರೆ. ನಿರ್ದೇಶಕ ನಾಗಶೇಖರ್ ಚಿತ್ರದ ಕತೆಯನ್ನು ಬಿಟ್ಟುಕೊಡದೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದಾರೆ.
“ನಾನು ಮೈಸೂರಿನವನೇ ಆಗಿರುವುದರಿಂದ ಚಿಕ್ಕಂದಿನಿಂದಲೂ ನಿರ್ಮಾಪಕರನ್ನು ಬಲ್ಲೆ. ಅವರ ಸಂದೇಶ್ ಹೋಟೆಲ್‌ಗೆ ಹೋಗುತ್ತಿದ್ದೆ. ಈಗ ಅವರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ನಾಗಶೇಖರ್ ನಿರ್ದೇಶನ ಅಂದ ಮೇಲೆ ಕಥೆ, ಹಾಡುಗಳು ಚೆನ್ನಾಗಿರುತ್ತವೆ. ಚಿತ್ರದಲ್ಲಿ ದತ್ತಣ್ಣ ಅವರಂತಹ ಹಿರಿಯರೊಂದಿಗೆ ನಟಿಸಿದ್ದು ಮರೆಯಲಾಗದ ಅನುಭವ” ಎನ್ನುವುದು ಹೀರೋ ಕೃಷ್ಣ ಅವರ ಅನಿಸಿಕೆ. “ಇದೊಂದು ವಿಭಿನ್ನ ಕಥೆ. ನಾನು ಮತ್ತು ಪ್ರೀತಂ ಗುಬ್ಬಿ ಚಿತ್ರಕಥೆ ಬರೆದಿದ್ದೇವೆ. ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ” ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.
ಇನ್ನು ನಿರ್ಮಾಪಕರಾಗಿ ಸಂದೇಶ್ ನಾಗರಾಜ್ ಅವರಿಗೆ ಚಿತ್ರದ ಕಂಟೆಂಟ್ ಬಗ್ಗೆ ಅಪಾರ ಭರವಸೆಯಿದೆ. ಈ ವಾರ ಎರಡು ದೊಡ್ಡ ಚಿತ್ರಗಳ ಮಧ್ಯೆ ತಮ್ಮ ಸಿನಿಮಾ ತೆರೆಗೆ ತರುತ್ತಿರುವುದರ ಬಗ್ಗೆ ಅವರಿಗೆ ಆತಂಕವೇನೂ ಇದ್ದಂತಿಲ್ಲ. ಹಾಗೆ ನೋಡಿದರೆ ಥಿಯೇಟರ್‌ಗಳಲ್ಲಿ ಶೇ.50ರಷ್ಟು ಸೀಟಿಂಗ್ ಆಕ್ಯುಪೆನ್ಸೀ ಇದ್ದಾಗಲೇ ಚಿತ್ರವನ್ನು ತೆರೆಗೆ ತರಲು ಆಲೋಚಿಸಿದ್ದರು. ಕಾರಣಾಂತರಗಳಿಂದ ಬಿಡುಗಡೆ ಮುಂದಕ್ಕೆ ಹೋಯ್ತು. “ದಸರಾಗೆ ಸಾಲುಸಾಲು ರಜೆ ಇದ್ದು, ಪ್ರೇಕ್ಷಕರು ಥಿಯೇಟರ್‌ಗೆ ಬರಲು ಅನುಕೂಲವಾಗುತ್ತದೆ. ಇದೇ ವೇಳೆ ಇನ್ನೂ ಎರಡು ಚಿತ್ರಗಳು ಬಿಡುಗಡೆಯಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಸಂದೇಶ ಸಾರಿದರು ಸಂದೇಶ್ ನಾಗರಾಜ್. ಚಿತ್ರದಲ್ಲಿ ಚಂದನ್ ಗೌಡ ದ್ವಿತೀಯ ನಾಯಕನಾಗಿ ಅಭಿನಯಿಸಿದ್ದು, ಅತಿಥಿ ಪಾತ್ರವೊಂದರಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವುದು ವಿಶೇಷ. ದತ್ತಣ್ಣ, ಸಾಧುಕೋಕಿಲ, ಅಚ್ಯುತರಾವ್, ಸಾತ್ವಿಕ್ ತಾರಾಬಳಗದಲ್ಲಿದ್ದಾರೆ. ಕವಿರಾಜ್ ರಚನೆಯ ಐದು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿರುವ ಚಿತ್ರಕ್ಕೆ ದೀಪು ಎಸ್. ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನವಿದೆ.
