ರಂಗಭೂಮಿ ಹಾಗೂ ಸಿನಿಮಾ ನಟ, ಲೇಖಕ ಡಾ.ಸಿದ್ದರಾಮ ಕಾರಣಿಕ ನಿನ್ನೆ ಜಮಖಂಡಿಯಲ್ಲಿ ಅಗಲಿದ್ದಾರೆ. ‘ಸೂರ್ಯಕಾಂತಿ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅವರು ‘ರಮಾಬಾಯಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ನಟ, ಲೇಖಕ, ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ಡಾ.ಸಿದ್ದರಾಮ ಕಾರಣಿಕ (48 ವರ್ಷ) ಅವರು ನಿನ್ನೆ ಜಮಖಂಡಿಯಲ್ಲಿ ಹೃದಯಘಾತದಿಂದ ಅಗಲಿದ್ದಾರೆ. ಮೂಲತಃ ರಾಯಭಾಗದವರಾದ ಅವರು ವೃತ್ತಿಯಲ್ಲಿ ಪ್ರಾಧ್ಯಾಪಕರು. ಇಂಡಿಯನ್ ಪೀಪಲ್ ಥಿಯೇಟರ್ ಅಸೋಷಿಯೇಷನ್ ಮೂಲಕ ರಂಗಭೂಮಿ ಸಂಪರ್ಕಕ್ಕೆ ಬಂದ ಅವರು ‘ಮಿಸೆಸ್ ಅಂಬೇಡ್ಕರ್’ ನಾಟಕವನ್ನು ರಂಗಕ್ಕೆ ಅಳವಡಿಸಿದ್ದರು. ಇದೇ ಕತೆ ‘ರಮಾಬಾಯಿ’ (2016) ಶೀರ್ಷಿಕೆಯಡಿ ಸಿನಿಮಾ ಆಗಿತ್ತು. ಈ ಚಿತ್ರದಲ್ಲಿ ಅವರು ಡಾ.ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದರು.
ನಟ ಚೇತನ್ ಅಭಿನಯದ ‘ಸೂರ್ಯಕಾಂತಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರು ‘ಧಾಂಗುಡಿ’ (ಮರಾಠಿ ಮತ್ತು ಕನ್ನಡ), ‘ಬರಗಾಲ’, ‘ಕಾಲಬ್ರಹ್ಮ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೀ ವಾಹಿನಿಯ ‘ಗಂಗಾ’ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಸಿದ್ದರಾಮ ಕಾರಣಿಕ ಕೊರೆಗಾವ್ ಹೋರಾಟದ ಕತೆಯನ್ನು ಬೆಳ್ಳಿತೆರೆಗೆ ಅಳವಡಿಸಲು ಸಿದ್ಧತೆ ನಡೆಸಿದ್ದರು. ಜನಪರ ಚಳುವಳಿಗಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.