ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್ ‘ಬ್ಯಾಂಗ್‌’ ಚಿತ್ರದೊಂದಿಗೆ ನಟನಾಗಿ ತೆರೆಗೆ ಬರುತ್ತಿದ್ದಾರೆ. ನಟಿ ಶಾನ್ವಿ ಶ್ರೀವಾತ್ಸವ್‌ ಇಲ್ಲಿ ಮೊದಲ ಬಾರಿ ಗ್ಯಾಂಗ್‌ಸ್ಟರ್ ಪಾತ್ರ ನಿರ್ವಹಿಸುತ್ತಿದ್ದು, ಇದೊಂದು ಆಕ್ಷನ್‌ – ಥ್ರಿಲ್ಲರ್ ಸಿನಿಮಾ ಎನ್ನುತ್ತಿದ್ದಾರೆ ನಿರ್ದೇಶಕ ಗಣೇಶ್ ಪರಶುರಾಮ್‌.

“ನಲವತ್ತೆಂಟು ಗಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಇದೊಂದು ಡಾರ್ಕ್ ಕಾಮಿಡಿ, ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ” ಎಂದರು ಚಿತ್ರದ ನಿರ್ದೇಶಕ ಗಣೇಶ್ ಪರಶುರಾಮ್. ಅವರ ನಿರ್ದೇಶನದಲ್ಲಿ ‘ಬ್ಯಾಂಗ್’ ಸಿನಿಮಾ ಸಿದ್ಧವಾಗಿದ್ದು, ಫಸ್ಟ್‌’ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್‌ ನಟನಾಗುತ್ತಿರುವುದು ವಿಶೇಷ. ಇನ್ನು ನಟಿ ಶಾನ್ವಿ ಶ್ರೀವಾತ್ಸವ್‌ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೆ ಒಂದು ವರ್ಗಕ್ಕೆ ಸೀಮಿತವಾಗದೇ, ಎಲ್ಲರಿಗೂ ಹಿಡಿಸುವ ಕಥೆಯಿದು ಎನ್ನುತ್ತಾರೆ ನಿರ್ದೇಶಕರು.

ನಟಿ ಶಾನ್ವಿ ಮಾತನಾಡಿ, “ನಾನು ಯಾವತ್ತೂ ಈ ರೀತಿಯ ಪಾತ್ರ ಯಾವತ್ತೂ ಮಾಡಿಲ್ಲ.‌ ನನಗೆ ಈ ಪಾತ್ರ ಸರಿ ಹೊಂದುತ್ತದೋ, ಇಲ್ಲವೋ ಎಂದು ತುಂಬಾ ಯೋಚಿಸಿದ್ದೆ. ಮೊದಲ ದಿನ  ಚಿತ್ರೀಕರಣಕ್ಕೆ ಹೋದಾಗ, ನನ್ನ ನಿರ್ಧಾರ ಸರಿ ಅನಿಸಿತು. ನಾಯಕಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂತಹ ಪಾತ್ರಗಳು ಬರುವುದು ಕಡಿಮೆ. ಕತೆ ತುಂಬಾ ಚೆನ್ನಾಗಿದೆ” ಎಂದರು. ತಮ್ಮನ್ನು ನಟನಾಗಿಸಿದ ಚಿತ್ರತಂಡಕ್ಕೆ ಗಾಯಕ ರಘು ದೀಕ್ಷಿತ್‌ ಧನ್ಯವಾದ ಅರ್ಪಿಸಿದರು. “ಗೆಳೆಯ ರಿತ್ವಿಕ್ ಹಾಗೂ ನಿರ್ದೇಶಕ ಗಣೇಶ್ ಮಾತನಾಡಲು ಮನೆಗೆ ಬಂದರು. ನಾನು ಸಂಗೀತ ನಿರ್ದೇಶನ ಅಥವಾ ಹಾಡು ಹಾಡಿಸುವುದಕ್ಕಾಗಿ ಕೇಳಲು ಮನೆಗೆ ಬಂದಿದ್ದಾರೆ ಎಂದುಕೊಂಡೆ. ನಂತರ ಅವರು ನೀವು ಈ ಚಿತ್ರದಲ್ಲಿ ನಟಿಸಬೇಕೆಂದರು.‌ ಒಂದು ಸಲ ಆಶ್ಚರ್ಯವಾಯಿತು. ಮೊದಲು ನಾನು ಒಪ್ಪಲಿಲ್ಲ. ನಂತರ ಅವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡೆ. ‘ಡ್ಯಾಡಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ” ಎಂದರು ರಘು ದೀಕ್ಷಿತ್.

ಚಿತ್ರದಲ್ಲಿ ನಾಲ್ಕು ಸ್ನೇಹಿತರ ಪಯಣದ ಕತೆಯಿದೆಯಂತೆ. ಚಿತ್ರದ‌ ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ್ ‘ಆರವ್’ ಪಾತ್ರದಲ್ಲಿ, ಸುನೀಲ್ ತಮ್ಮದೇ ಹೆಸರಿನ ಪಾತ್ರದಲ್ಲಿ, ನಾಟ್ಯ ರಂಗ, ‘ಭೂಷಣ್’ ಆಗಿ‌ ಹಾಗೂ ಸಾತ್ವಿಕ ಅವರು ‘ಸಿರಿ’ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ.‌ ಈಗಾಗಲೇ ‘ಆನ ಹಾಗೂ ನಾನು’, ‘ಅದು ಮತ್ತು ಸರೋಜ’ ಚಿತ್ರಗಳನ್ನು ನಿರ್ಮಿಸಿರುವ ಪೂಜಾ ವಸಂತಕುಮಾರ್ ನಿರ್ಮಾಣದ ಮೂರನೇ ಚಿತ್ರ ‘ಬ್ಯಾಂಗ್’. ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಚಿತ್ರಕ್ಕಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ತಯಾರಾಗಿದ್ದು, ಫೆಬ್ರವರಿಯಲ್ಲಿ ಸಿನಿಮಾ ಬಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

LEAVE A REPLY

Connect with

Please enter your comment!
Please enter your name here