ಸಾಹಿತಿ, ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ದಾದಾ ಸಾಹೇಭ್‌ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದು, ಗಾಂಧಿಯಾಗಿ ಕಿಶೋರ್‌ ಕಾಣಿಸಿಕೊಂಡಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ‘ಕಸ್ತೂರ್‌ ಬಾ ವರ್ಸಸ್‌ ಗಾಂಧಿ’ ಕಾದಂಬರಿ ಆಧರಿಸಿ ‘ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ಗೀತರಚನೆ ಅವರದ್ದೆ. ಈ ಸಿನಿಮಾ ಲಾಸ್‌ ಏಂಜಲೀಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಈಗ ಚಿತ್ರ 12ನೇ ದಾದಾ ಸಾಹೇಬ್‌ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಭಾರತೀಯ ಸಿನಿಮಾದ ಜನಕ ಎಂದೇ ಕರೆಸಿಕೊಳ್ಳುವ ದಾದಾ ಸಾಹೇಬ್ ಫಾಲ್ಕೆ ಅವರ ನೆನಪಿನಲ್ಲಿ ದೆಹಲಿಯ ಸಂಸ್ಥೆಯೊಂದು ಕಳೆದ ಹನ್ನೊಂದು ವರ್ಷಗಳಿಂದ ಈ ಚಿತ್ರೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ ಅಭಿನಯಿಸಿದ್ದಾರೆ. ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಇದ್ದು, ಹಿರಿಯ ನಟ ಶ್ರೀನಾಥ್ ಅವರು ಡಾ.ಅಂಬೇಡ್ಕರ್ ಪಾತ್ರದಲ್ಲಿದ್ದಾರೆ.

“ಈ ಚಿತ್ರವು ಕಸ್ತೂರ್ ಬಾ ಮತ್ತು ಗಾಂಧಿಯವರನ್ನು ಮುಖಾಮುಖಿಯಾಗಿಸುತ್ತ ಇಬ್ಬರ ಸಕಾರಾತ್ಮಕ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಮುಖ್ಯವಾಗಿ ಕಸ್ತೂರ್ ಬಾ ಅವರ ಅನುಭವದ ನೋಟದಲ್ಲಿ ಗಾಂಧಿಯವರನ್ನು ಕಂಡುಕೊಳ್ಳುವ ಅಭಿವ್ಯಕ್ತಿ ವಿಧಾನವನ್ನು ಇಲ್ಲಿ ಅನುಸರಿಸಲಾಗಿದೆ. ಕಸ್ತೂರ್ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಎದುರಿಸಿದ ಮಾನಸಿಕ ತಲ್ಲಣಗಳನ್ನು ಚಿತ್ರಿಸಲಾಗಿದೆ” ಎನ್ನುತ್ತಾರೆ ನಿರ್ದೇಶಕ ಬರಗೂರು. ಶ್ರೀಮತಿ ಬಿ.ಜಿ.ಗೀತಾ ಅವರ ಜನಮಿತ್ರ ಮೂವೀಸ್ ಮೂಲಕ ನಿರ್ಮಾಣವಾಗಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸುಂದರರಾಜ್, ರೇಖಾ, ಪ್ರಮೀಳಾ ಜೋಷಾಯ್, ರಾಘವ್, ವೆಂಕಟರಾಜು, ವತ್ಸಲಾ ಮೋಹನ್ ಇದ್ದಾರೆ. ಸುರೇಶ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here