ರಂಗಭೂಮಿ ಮತ್ತು ಸಿನಿಮಾ ನಟಿ ಅಕ್ಷತಾ ಪಾಂಡವಪುರ ತಮ್ಮ ಕನಸಿನ ‘ಜನಮನ ಅಂಗಡಿ’ ಶುರು ಮಾಡಿದ್ದಾರೆ. ನಟನೆ ಜೊತೆ ವಸ್ತ್ರವಿನ್ಯಾಸ ಅವರ ನೆಚ್ಚಿನ ಹವ್ಯಾಸ. ಈಗ ಪತಿ, ರಂಗನಿರ್ದೇಶಕ ಪ್ರಸನ್ನ ಅವರೊಡಗೂಡಿ ತಮ್ಮ ಕನಸು ಸಾಕಾರಗೊಳಿಸಿದ್ದಾರೆ. ಅಕ್ಷತಾರ ರಂಗಭೂಮಿ ಮತ್ತು ಸಿನಿಮಾ ಸ್ನೇಹಿತರು ಅವರ ಹೊಸ ಹೆಜ್ಜೆಗೆ ಶುಭಹಾರೈಸಿದ್ದಾರೆ.
ನಟಿ ಅಕ್ಷತಾ ಪಾಂಡವಪುರ ಅಭಿನಯದ ‘ಪಿಂಕಿ ಎಲ್ಲಿ?’ ಸಿನಿಮಾ ಇತ್ತೀಚೆಗೆ ಪ್ರತಿಷ್ಠಿತ ಫಿಲ್ಮ್ ಪೆಸ್ಟಿವಲ್‌ಗಳಲ್ಲಿ ಪ್ರದರ್ಶನಗೊಂಡಿತ್ತು. ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸ್ಕ್ರೀನ್ ಆಗಿದ್ದ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಅಕ್ಷತಾ ಉತ್ತಮ ನಟಿ ಗೌರವಕ್ಕೆ ಪಾತ್ರರಾದರು. ಇದೀಗ ಅವರು ತಮ್ಮ ಬಹುದಿನಗಳ ಕನಸು ನನಸಾದ ಮತ್ತೊಂದು ಖುಷಿಯಲ್ಲಿದ್ದಾರೆ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಪದವೀಧರೆಯಾದ ಅವರು ಮೊದಲು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಮುಂದೆ ಸಿನಿಮಾ ನಂಟು ಬೆಳೆಯಿತು. ಆಗ ನಟನೆ ಜೊತೆ ವಸ್ತ್ರವಿನ್ಯಾಸ, ಇಂಟೀರಿಯರ್ ಡಿಸೈನಿಂಗ್ ಅವರ ನೆಚ್ಚಿನ ಹವ್ಯಾಸವಾಗಿತ್ತು. ಬಿಡುವಿನ ವೇಳೆಯಲ್ಲಿ ವಿನ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈ ಹವ್ಯಾಸಕ್ಕೆ ವೃತ್ತಿಪರ ಟಚ್ ಕೊಡುವ ಅವರ ಕನಸು ‘ಜನಮನ ಅಂಗಡಿ’ ಮೂಲಕ ನೆರವೇರಿದೆ.
ಅಕ್ಷತಾ – ಪ್ರಸನ್ನ ದಂಪತಿಯ ಆತ್ಮೀಯರಾದ ಚಿತ್ರಸಾಹಿತಿ ಕವಿರಾಜ್ ಅವರು ಮೊನ್ನೆ ‘ಜನಮನ ಅಂಗಡಿ’ಗೆ ಚಾಲನೆ ನೀಡಿದ್ದಾರೆ. ಬೆಂಗಳೂರು ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್‌ನಲ್ಲಿ ‘ಜನಮನ’ ಶುರುವಾಗಿದೆ. ಅಂದು ರಂಗಭೂಮಿ, ಸಿನಿಮಾರಂಗ, ಬಿಗ್‌ಬಾಸ್ ಶೋನಲ್ಲಿನ ಅಕ್ಷತಾರ ಸ್ನೇಹಿತರು ಆಗಮಿಸಿ ನಟಿಯ ಹೊಸ ಯೋಜನೆಗೆ ಶುಭ ಹಾರೈಸಿದ್ದಾರೆ. “ನಟನೆ ಜೊತೆ ಸೃಜನಶೀಲ ಕಲೆಯಾದ ವಸ್ತ್ರವಿನ್ಯಾಸ ನನ್ನ ಇಷ್ಟದ ಹವ್ಯಾಸ. ಆನ್‌ಲೈನ್‌ನಲ್ಲಿ ಚಾಲ್ತಿಯಲ್ಲಿದ್ದ ಪ್ರಾಜೆಕ್ಟ್ ಈಗ ‘ಜನಮನ’ದೊಂದಿಗೆ ಔಟ್‌ಲೆಟ್ ರೂಪ ತಾಳಿದೆ. ‘ನಿಮ್ಮ ಶೈಲಿಗೆ ನಮ್ಮ ವಿನ್ಯಾಸ’ ಎನ್ನುವುದು ನಮ್ಮ ‘ಜನಮನ’ದ ಟ್ಯಾಗ್‌ಲೈನ್. ಸೃಜನಶೀಲ ಮನಸ್ಸುಗಳು ಅಪೇಕ್ಷಿಸುವ ವಸ್ತ್ರವಿನ್ಯಾಸಗಳಿಗೆ ನಾವು ರೂಪ ಕೊಡಲಿದ್ದೇವೆ” ಎನ್ನುತ್ತಾರೆ ಅಕ್ಷತಾ. ಇನ್ನು ಸಿನಿಮಾ ವಿಚಾರವಾಗಿ ಹೇಳುವುದಾದರೆ ಚಂಪಾ ಶೆಟ್ಟಿ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಮುಂದಿನ ವಾರದಿಂದ ಶೂಟಿಂಗ್ ಶುರು. ಜಾಗತಿಕ ವಲಯದ ಪ್ರಮುಖ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಅವರ ‘ಪಿಂಕಿ ಎಲ್ಲಿ?’ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ಅಕ್ಷತಾ ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ‘ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’ ಸಿನಿಮಾ ಕೂಡ ತೆರೆಗೆ ಸಿದ್ಧವಾಗಿದೆ. ಕೋವಿಡ್ ತಿಳಿಯಾಗುತ್ತಿದ್ದು ಥಿಯೇಟರ್ ಶೋಗಳನ್ನು ಮತ್ತೆ ಆರಂಭಿಸಬೇಕು ಎನ್ನುತ್ತಾರೆ ಅಕ್ಷತಾ.