ನಟ ಶಿವರಾಂ ಅವರಿಗೆ ಎಪ್ಪತ್ತು ವರ್ಷ ತುಂಬಿದ ಸಂದರ್ಭದಲ್ಲಿ ‘ಬೆಳ್ಳಿ – ರಂಗದ ಬಂಗಾರ ಶಿವರಾಮಣ್ಣ’ ಅಭಿನಂದನಾ ಗ್ರಂಥ (2008) ಹೊರತರಲಾಗಿತ್ತು. ಗೌರಿ ಸುಂದರ್ ಕೃತಿಯನ್ನು ಸಂಪಾದಿಸಿದ್ದರು. ಈ ಪುಸ್ತಕದಲ್ಲಿ ಬಹುಭಾಷಾ ನಟಿ ಬಿ.ಸರೋಜಾದೇವಿ ಅವರು ಶಿವರಾಂರ ಕುರಿತು ಲೇಖನ ಬರೆದಿದ್ದರು. ನಟ ಶಿವರಾಂ ಅಗಲಿಕೆಯ ಈ ಸಂದರ್ಭದಲ್ಲಿ ಆ ಬರಹವನ್ನು ಬಳಕೆ ಮಾಡಿಕೊಳ್ಳಲಾಗಿದೆ.

ನಾನು ಶಿವರಾಂ ಅವರನ್ನು ಮೊದಲು ನೋಡಿದ್ದು ‘ಬೆರೆತ ಜೀವ’ ಚಿತ್ರದ ಸಂದರ್ಭದಲ್ಲಿ. ಕು.ರ.ಸೀತಾರಾಮ ಶಾಸ್ತ್ರಿಗಳು ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರದಲ್ಲಿ ಶಿವರಾಂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರ ಪರಿಚಯವಾಯಿತು. ಅಲ್ಲಿಂದ ಪ್ರಾರಂಭವಾದ ನಮ್ಮ ಸ್ನೇಹ ಗಟ್ಟಿಯಾಗಿ ಮುಂದುವರೆಯಿತು. ಅದಾದ ಮೇಲೆ ನಾನು ಅವರ ಜತೆ ಹೆಚ್ಚಿಗೆ ಅಭಿನಯಿಸಲಿಲ್ಲ. ಆದರೂ ನಮ್ಮ ನಡುವಿನ ಸ್ನೇಹ ಅಷ್ಟೇ ಗಟ್ಟಿಯಾಗಿತ್ತು.

ಸ್ನೇಹ ಎನ್ನುವುದಕ್ಕಿಂತ ಯಾವುದೋ ಜನ್ಮದ ಬಾಂಧವ್ಯ ನಮ್ಮನ್ನು ಬೆಸೆದಿತ್ತು ಎಂದರೆ ತಪ್ಪಲ್ಲ. ನನಗೆ ಪುನರ್ಜನ್ಮದಲ್ಲಿ ನಂಬಿಕೆ ಇದೆ. ಹಾಗಾಗಿ ಯಾವುದೋ ಜನ್ಮದಲ್ಲಿ ಶಿವರಾಂ ನನ್ನ ಸಹೋದರರಾಗಿ ಹುಟ್ಟಿದ್ದಾರೆ ಎಂದೇ ನನ್ನ ನಂಬಿಕೆ. ಅವರು ಸ್ನೇಹಿತರು ಎನ್ನುವುದಕ್ಕಿಂತ ನಮ್ಮ ಕುಟುಂಬದವರು ಎನ್ನುವುದು ಸರಿ. ನಮ್ಮ ತಾಯಿ ರುದ್ರಮ್ಮನವರಿಗೆ ಶಿವರಾಂ ಅವರ ಮೇಲೆ ತುಂಬಾ ವಿಶ್ವಾಸ. ಪ್ರತಿ ವಿಷಯವನ್ನೂ ಅವರ ಜತೆ ಹಂಚಿಕೊಳ್ಳುತ್ತಿದ್ದರು. ನಮ್ಮ ಯಜಮಾನರಾದ ಶ್ರೀಹರ್ಷ ಅವರು ತೀರಿಕೊಂಡಾಗ ಶಿವರಾಂ ಅವರೇ ಮುಂದೆ ನಿಂತು ಎಲ್ಲಾ ಕಾರ್ಯಗಳನ್ನು ನಡೆಸಿಕೊಟ್ಟಿದ್ದರು.

ನಮ್ಮ ಮನೆಗಳಲ್ಲಿ ಏನೇ ಕಷ್ಟ-ಸುಖಗಳಾದರೂ ಶಿವರಾಂ ಅವರಿಗೆ ಕರೆ ಮಾಡುವುದು ರೂಢಿಯಾಗಿತ್ತು. ನನಗೆ ಡಾಕ್ಟರೇಟ್ ಸಿಕ್ಕಾಗ, ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದ್ದೆವು. ಅವತ್ತು ನನ್ನ ಹುಟ್ಟುಹಬ್ಬ ಕೂಡ ಇತ್ತು. ಅಂದು ಶಿವರಾಂ ಸಮಾರಂಭದ ಉಸ್ತುವಾರಿ ವಹಿಸಿಕೊಂಡಿದ್ದರು. ಬೆಳಗ್ಗೆಯೇ ಗಣಪತಿ ಪೂಜೆ ಮಾಡಿಸಿಕೊಂಡು ಬಂದು ಪ್ರಸಾದ ತಂದುಕೊಟ್ಟಿದ್ದರು. ಮನೆಗೆ ಬಂದ ಅತಿಥಿಗಳ ಊಟೋಪಚಾರ ನೋಡಿಕೊಂಡರು. ತಮಗೇ ಡಾಕ್ಟರೇಟ್ ಸಿಕ್ಕಷ್ಟು ಸಂಭ್ರಮದಿಂದ ಓಡಾಡಿದರು.

ನಮ್ಮ ಮನೆ ಮಾತ್ರವಲ್ಲ, ಚಿತ್ರರಂಗದಲ್ಲಿ ಯಾರಿಗೆ ಏನೇ ಆದರೂ ನಮಗೆ ನೆನಪಿಗೆ ಬರುವ ಮೊದಲ ಹೆಸರು ಶಿವರಾಂ. ನಟ ಕಲ್ಯಾಣ್ ಕುಮಾರ್‌ ಕಾಲವಾದಾಗ ಎಲ್ಲಾ ಕಾರ್ಯಗಳನ್ನು ನೋಡಿಕೊಂಡಿದ್ದರು ಶಿವರಾಂ. ಅವರ ನೆನಪಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ, “ನಾನು ಕಾಲವಾದರೆ ಎಲ್ಲಾ ಕೆಲಸಗಳನ್ನು ಶಿವರಾಂ ಅವೇ ಮಾಡುತ್ತಾರೆ” ಎಂದು ಬಹಿರಂಗವಾಗಿ ವೇದಿಕೆಯಲ್ಲೇ ಹೇಳಿದ್ದೆ.

ಶಿವರಾಂ ಅವರು ಹಾಗೆಯೇ. ಯಾರಿಗೆ ಏನೇ ತೊಂದರೆಗಳಾದರೂ, ಅನಾಹುತಗಳಾದರೂ ಶಿವರಾಂ ಅಲ್ಲಿರುತ್ತಾರೆ. ನಿಸ್ವಾರ್ಥದಿಂದ ಸೇವೆ ಮಾಡುತ್ತಾರೆ. ಸಾಮಾನ್ಯವಾಗಿ ಜನ ಯಾರಿಗಾದರೂ ಸಹಾಯ ಮಾಡಬೇಕಾದರೆ ಅದಕ್ಕೆ ಬದಲಿಯಾಗಿ ಏನಾದರೂ ಎದುರು ನೋಡುತ್ತಾರೆ. ಲಾಭ ಇದ್ರೆ ಸಹಾಯ ಮಾಡುತ್ತಾರೆ. ಇಲ್ಲದಿದ್ದರೆ ಮುಖ ತಿರುಗಿಸಿಕೊಳ್ಳುತ್ತಾರೆ. ಆದರೆ, ಶಿವರಾಂರದ್ದು ದೊಡ್ಡ ಗುಣ. ಯಾರೇ ಕಷ್ಟ ಎಂದು ಬಂದರೂ ರೆಡಿಯಾಗಿ ನಿಂತಿರುತ್ತಾರೆ. ಅದಕ್ಕೆ ಶಿವರಾಂ ಎಂದರೆ ಇಡೀ ಚಿತ್ರೋದ್ಯಮಕ್ಕೆ ಇಷ್ಟ.

ಅವರು ತಮಗೆ ಅದೆಷ್ಟೇ ಕಷ್ಟವಿದ್ದರೂ, ಅಪ್ಪಿತಪ್ಪಿಯೂ ಬೇರೆಯವರೊಡನೆ ಅದನ್ನು ಹೇಳಿಕೊಳ್ಳುವುದಿಲ್ಲ. ತಮ್ಮ ಕಷ್ಟಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬೇರೆಯವರನ್ನು ನಗಿಸುತ್ತಾರೆ. ಅವರ ಜತೆ ಪ್ರಯಾಣ ಹೋಗುವುದಕ್ಕೆ ನನಗೆ ತುಂಬಾ ಇಷ್ಟ. ನಗಿಸುವ ಜತೆಗೆ ಎಲ್ಲಾ ಜವಾಬ್ದಾರಿಗಳನ್ನೂ ಅವರೇ ವಹಿಸಿಕೊಳ್ಳುತ್ತಾರೆ. ನಾವು ಕೈಬೀಸಿಕೊಂಡು ಹೋಗಿಬರಬಹುದು. ಅಷ್ಟೇ ಅಲ್ಲ, ಅವರು ಬಹಳ ಶಿಸ್ತಿನ ಮನುಷ್ಯ. ಏನೇ ಕೆಲಸ ಕೊಟ್ಟರೂ ಅದನ್ನು ಮಾಡಿ ಮುಗಿಸುತ್ತಾರೆ. ಮತ್ತು ಒಂದು ಪೈಸೆಯೂ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತಾರೆ. ಹಣ ಹೇಗೆ ನಿಭಾಯಿಸಬೇಕೆಂದು ನಾನು ಅವರಿಂದ ಕಲಿತಿದ್ದೇನೆ. ಎಷ್ಟೋ ಬಾರಿ ಅವರಿಗೆ ನನ್ನ ಎಲ್ಲಾ ಜವಾಬ್ದಾರಿಗಳನ್ನು ನೀವೇ ನೋಡಿಕೊಳ್ಳಿ, ನಾನು ಸ್ವಲ್ಪ ನೆಮ್ಮದಿಯಾಗಿರುತ್ತೇನೆ ಎಂದು ಹೇಳಿದ್ದಿದೆ. ಆದರೆ ಅವರು ನನಗೊಬ್ಬಳಿಗೆ ಮಾತ್ರವಲ್ಲ, ಇಡೀ ಉದ್ಯಮಕ್ಕೆ ಬೇಕಾದವರು. ಹಾಗಾಗಿ ಅವರನ್ನು ಒಂದು ಕಡೆ ಕಟ್ಟಿಹಾಕುವುದಕ್ಕೆ ಇಷ್ಟವಿಲ್ಲ.

ನನಗೆ ಒಂದೇ ಒಂದು ಬೇಸರವೆಂದರೆ, ಅವರಂಥ ಕಲಾವಿದರನ್ನು ಉದ್ಯಮ ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೆಲವು ನಿರ್ದೇಶಕರನ್ನು ಹೊರತುಪಡಿಸಿದರೆ ಮಿಕ್ಕವರು ಅವರೊಳಗಿನ ಕಲಾವಿದನನ್ನು ಸಂಪೂರ್ಣವಾಗಿ ಹೊರತೆಗೆಯಲಿಲ್ಲ. ಕಾಮಿಡಿ ಪಾತ್ರಗಳಾಗಲೀ, ಗಂಭೀರ ಪಾತ್ರಗಳಾಗಲೀ… ಎಂಥಹ ಪಾತ್ರಗಳಲ್ಲಾದರೂ ಅವರು ಸಲೀಸು. ಮೇಲಾಗಿ ಶುದ್ಧ ಕನ್ನಡ ಕೇಳಲು ಇಷ್ಟ. ಎಂಥಾ ಪಾತ್ರವನ್ನು ಬೇಕಾದರೂ ಅರ್ಥ ಮಾಡಿಕೊಂಡು ಅಭಿನಯಿಸುವ ಕಲಾವಿದ.

LEAVE A REPLY

Connect with

Please enter your comment!
Please enter your name here