ಹಿರಿಯ ನಟಿ ಭಾರ್ಗವಿ ನಾರಾಯಣ್‌ (84 ವರ್ಷ) ಇಂದು ಇಳಿಸಂಜೆ 7.30ಕ್ಕೆ ಅಗಲಿದ್ದಾರೆ. ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ್ದ ಅವರು ಸುಮಾರು ಆರು ದಶಕಗಳ ಕಾಲ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು.

“ನನ್ನ ಬದುಕಿಗೆ ತಿರುವು ನೀಡಿದ ಇಬ್ಬರು ಪ್ರಮುಖರು – ತಾಯಿ ನಾಮಗಿರಿಯಮ್ಮ ಮತ್ತು ಪತಿ ಮೇಕಪ್‌ ನಾಣಿ” ಎಂದು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು ನಟಿ ಭಾರ್ಗವಿ ನಾರಾಯಣ್‌. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಪಾತ್ರ ಮಾಡಲು ಪ್ರೇರೇಪಿಸಿದ್ದು ಅಮ್ಮ ಮತ್ತು ಮುಂದೆ ರಂಗಭೂಮಿಯಲ್ಲಿ ಸಕ್ರಿಯರಾಗಲು ಕಾರಣರಾಗಿದ್ದು ಪತಿ. ದಶಕಗಳ ಕಾಲ ಸುಮಾರು ಐನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಅವರು ಕಿರುತೆರೆ ಮತ್ತು ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದರು. ಭಾರ್ಗವಿ ಅವರ ನಿಧನದಿಂದಾಗಿ ಮಹತ್ವದ ಕಲಾವಿದರೊಬ್ಬರನ್ನು ಕನ್ನಡ ರಂಗಭೂಮಿ ಕಳೆದುಕೊಂಡಂತಾಗಿದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಭಾರ್ಗವಿ ನಾರಾಯಣ್‌ ಅವರ ಶಾಲಾ ವಿದ್ಯಾಭ್ಯಾಸ ನಡೆದದ್ದು NR ಕಾಲೋನಿಯ ಆಚಾರ್ಯ ಪಾಠಶಾಲಾ ಪಬ್ಲಿಕ್‌ ಸ್ಕೂಲ್‌ನಲ್ಲಿ. ವಿಜಯಾ ಕಾಲೇಜಿನಲ್ಲಿ ಪಿಯೂಸಿ ಓದಿದ ಅವರು ಮಹಾರಾಣಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪದವಿ ಪಡೆದರು. ಮುಂದೆ ದೂರಶಿಕ್ಷಣದ ಮೂಲಕ ಇಂಗ್ಲಿಷ್‌ MA ಓದಿದರು. ಚಿಕ್ಕಂದಿನಲ್ಲೇ ಅವರಿಗೆ ಓದಿನ ಗೀಳು ಶುರುವಾಗಿತ್ತು. “ಲೈಬ್ರರಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದೆ. ಟಿ.ಪಿ.ಕೈಲಾಸಂ, ಕುವೆಂಪು, ಶಿವರಾಮ ಕಾರಂತರ ಕೃತಿಗಳು ನನ್ನ ಬದುಕನ್ನು ರೂಪಿಸಿದವು” ಎಂದು ಹೇಳಿಕೊಂಡಿದ್ದರು ಭಾರ್ಗವಿ.

ಮೇಕಪ್‌ ನಾಣಿ ಅವರನ್ನು ಭಾರ್ಗವಿ ಅವರು ಭೇಟಿಯಾದದ್ದು ಕೂಡ ನಾಟಕದ ಸಂದರ್ಭವೊಂದರಲ್ಲಿ. ಕಾಲೇಜು ನಾಟಕವೊಂದರಲ್ಲಿ ಭಾರ್ಗವಿ ಅವರು ಪುರುಷ ಪಾತ್ರವೊಂದನ್ನು ಮಾಡಬೇಕಿತ್ತು. ಆಗ ಮೇಕಪ್‌ ಹಾಕಲು ಬಂದಿದ್ದರು ನಾಣಿ. ಈ ಪರಿಚಯದ ಮೂಲಕ ಮುಂದೆ ಸತಿ – ಪತಿಯಾದರು. 1958ರಲ್ಲಿ ಮದುವೆಯಾದಾಗ ಭಾರ್ಗವಿ ಅವರಿಗೆ 20 ವರ್ಷ. ESI ನಲ್ಲಿ ಕೆಲಸಕ್ಕೆ ಸೇರಿದ ಭಾರ್ಗವಿ ರಂಗಭೂಮಿಯಲ್ಲೂ ಸಕ್ರಿಯರಾದರು. ಕನ್ನಡ ರಂಗಭೂಮಿಯ ಪ್ರಮುಖ ನಿರ್ದೇಶಕರ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಅವರ ಮನೆ ‘ಗ್ರೀನ್‌ರೂಂ’ನಲ್ಲಿ ನಾಟಕಗಳ ರಿಹರ್ಸಲ್‌ ನಡೆಯುತ್ತಿದ್ದವು. ಅವರ ಮನೆ ರಂಗಾಸಕ್ತರ ನೆಚ್ಚಿನ ತಾಣವಾಗಿತ್ತು.

ಕಿರುತೆರೆ ಮತ್ತು ಸಿನಿಮಾಗಳಲ್ಲೂ ಭಾರ್ಗವಿ ಅವರ ಹೆಜ್ಜೆ ಗುರುತುಗಳಿವೆ. ಹತ್ತಾರು ಧಾರಾವಾಹಿಗಳ ವಿಶಿಷ್ಟ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮಂಥನ, ಮುಕ್ತ, ಪುತ್ರ ಪ್ರಕಾಶ್‌ ಬೆಳವಾಡಿ ನಿರ್ದೇಶಿಸಿದ ‘ಗರ್ವ’ ಅವರ ಪ್ರಮುಖ ಧಾರಾವಾಹಿಗಳು. ಪಲ್ಲವಿ, ಪ್ರೊಫೆಸರ್‌ ಹುಚ್ಚೂರಾಯ, ಎರಡು ಕನಸು, ಹಂತಕನ ಸಂಚು, ಪಲ್ಲವಿ ಅನುಪಲ್ಲವಿ, ಜಂಬೂಸವಾರಿ, ಬಾ ನಲ್ಲೆ ಮಧುಚಂದ್ರಕೆ ಸೇರಿದಂತೆ ನಲತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಪ್ರೊಫೆಸರ್‌ ಹುಚ್ಚೂರಾಯ’ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಂದಿದೆ. ರಾಜ್ಯೋತ್ಸವ ಗೌರವ ಸೇರಿದಂತೆ ರಂಗಭೂಮಿ ಕ್ಷೇತ್ರದಲ್ಲಿ ಅವರಿಗೆ ಹತ್ತಾರು ಪುರಸ್ಕಾರಗಳು ಸಂದಿವೆ. ಸುಜಾತಾ, ಪ್ರಕಾಶ, ಪ್ರದೀಪ ಮತ್ತು ಸುಧಾ ಅವರ ನಾಲ್ವರು ಮಕ್ಕಳು. ಪ್ರಕಾಶ, ಪ್ರದೀಪ ಮತ್ತು ಸುಧಾ ಅವರು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊಮ್ಮಗಳು ಸಂಯುಕ್ತಾ ಸಿನಿಮಾ ನಟಿ. ‘ನಾನು ಭಾರ್ಗವಿ’ ಅವರ ಆತ್ಮಕಥನ.

Previous articleವ್ಯಾಲೆಂಟೇನ್‌ | ಸ್ಯಾಂಡಲ್‌ವುಡ್‌ನಲ್ಲಿ ಹಾಡು, ಟೀಸರ್‌, ಪೋಸ್ಟರ್‌ ಝಲಕ್‌
Next articleಟ್ರೈಲರ್‌ | ಅಜಯ್‌ ದೇವಗನ್‌ ಸೈಕಾಲಾಜಿಕಲ್‌ ಡ್ರಾಮಾ ‘ರುದ್ರ’; ಹಾಟ್‌ಸ್ಟಾರ್‌ನಲ್ಲಿ ಮಾರ್ಚ್‌ 4ರಿಂದ

LEAVE A REPLY

Connect with

Please enter your comment!
Please enter your name here