ಪ್ರೇಮಿಗಳ ದಿನದ ವಿಶೇಷವೆಂದು ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳ ವೀಡಿಯೋ ಸಾಂಗ್‌, ಟೀಸರ್‌, ಪೋಸ್ಟರ್‌ಗಳು ಬಿಡುಗಡೆಯಾಗಿವೆ. ‘ಏಕ್‌ ಲವ್‌ ಯಾ’, ‘ಶಿವ 143’, ‘ಮ್ಯಾಟ್ನಿ’ ಸೇರಿದಂತೆ ಹೊಸಬರ ಹಲವು ಸಿನಿಮಾಗಳು ತಮ್ಮ ಕಂಟೆಂಟ್‌ನೊಂದಿಗೆ ವ್ಯಾಲೆಂಟೇನ್ಸ್‌ ಡೇಗೆ ರಂಗು ತುಂಬಿವೆ.

ಸಿನಿಮಾಗಳಲ್ಲಿ ಪ್ರೀತಿಯ ಹಾಡುಗಳು ಇರಲೇಬೇಕು. ಪ್ರೀತಿಯ ಹಾಡುಗಳನ್ನು ಬಿಡುಗಡೆ ಮಾಡಲು ವ್ಯಾಲೆಂಟೇನ್ಸ್‌ ಡೇ ಅತ್ಯಂತ ಸೂಕ್ತ ಸಂದರ್ಭ. ಈ ಪ್ರೇಮಿಗಳ ದಿನದ ನೆಪದಲ್ಲಿ ತೆರೆಗೆ ಸಿದ್ಧವಿರುವ ಸ್ಯಾಂಡಲ್‌ವುಡ್‌ನ ಕೆಲವು ಸಿನಿಮಾಗಳು ಹಾಡು, ಟೀಸರ್‌, ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿವೆ. ರಕ್ಷಿತಾ ಪ್ರೇಮ್‌ ನಿರ್ಮಾಣ, ಪ್ರೇಮ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ”ಏಕ್‌ ಲವ್‌ ಯಾ’ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ತಮ್ಮ ಸಿನಿಮಾಗಳಲ್ಲಿ ಹಾಡುಗಳನ್ನು ಚೆನ್ನಾಗಿ ರೂಪಿಸುವ ಪ್ರೇಮ್‌ ಪ್ರೇಮಿಗಳ ದಿನಕ್ಕಾಗಿ ಚಿತ್ರದ ‘ಎದೆಬಡಿತ ಜೊರಾಗಿದೆ’ ವೀಡಿಯೋ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಮದುವೆ ಮನೆಯ ಸಂಭ್ರಮದ ಹಿನ್ನೆಲೆಯಲ್ಲಿ ಚಿತ್ರಿಸಿರುವ ಹಾಡು ಸರಳ ಸಾಹಿತ್ಯ, ಅದಕ್ಕೆ ಹೊಂದುವಂತಹ ಸಂಗೀತದೊಂದಿಗೆ ಇಷ್ಟವಾಗುತ್ತದೆ. ಮಂಜುನಾಥ್‌ ಬಿ.ಎಸ್‌. ರಚನೆಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದ್ದು, ನಿರ್ದೇಶಕ ಪ್ರೇಮ್‌ ಅವರೇ ಹಾಡಿದ್ದಾರೆ.

ನಟ ರಾಮಕುಮಾರ್‌ ಪುತ್ರ ಧೀರೇನ್‌ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ‘ಶಿವ 143’ ಸಿನಿಮಾದ ‘ಮಳೆ ಹನಿಯೇ’ ಹಾಡು ಇಂದು ಬಿಡುಗಡೆಯಾಗಿದೆ. ಧೀರೇನ್‌ಗೆ ಜೋಡಿಯಾಗಿ ‘ಟಗರು’ ಸಿನಿಮಾ ಖ್ಯಾತಿಯ ಮಾನ್ವಿತಾ ಕಾಮತ್‌ ಇದ್ದಾರೆ. ಅನಿಲ್‌ ಕುಮಾರ್‌ ನಿರ್ದೇಶನದಲ್ಲಿ ಸಿದ್ಧವಾಗಿರುವ ಸಿನಿಮಾದ ಹಾಡು ಸಖತ್‌ ಬೋಲ್ಡ್‌ ಆಗಿದೆ. ಕನ್ನಡಕ್ಕೆ ಅಪರೂಪವಾದ ಲಿಪ್‌ಲಾಕ್‌ ಸನ್ನಿವೇಶಗಳು ಸಾಕಷ್ಟಿವೆ. ಜಯಣ್ಣ ಫಿಲ್ಮ್ಸ್‌ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಇದೆ. ಕ್ರಾಂತಿ ಕುಮಾರ್‌ ರಚನೆಯ ಗೀತೆಯನ್ನು ನಿಹಾಲ್‌ ಮತ್ತು ಪೃಥ್ವಿ ಭಟ್‌ ಹಾಡಿದ್ದಾರೆ. ನಿರ್ದೇಶಕ ಅನಿಲ್‌ ಕುಮಾರ್‌ ಅವರೇ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು, ಹಾಡಿನಲ್ಲಿ ಏಸ್ತಟಿಕ್‌ ಸೆನ್ಸ್‌ ಮೀರಿದ ಚುಂಬನ ದೃಶ್ಯಗಳ ಅಗತ್ಯತೆ ಇತ್ತೇ? ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ.

ಸತೀಶ್‌ ನೀನಾಸಂ ಮತ್ತು ರಚಿತಾ ರಾಮ್‌ ಜೋಡಿಯ ‘ಮ್ಯಾಟ್ನಿ’ ಸಿನಿಮಾ ಇತ್ತೀಚೆಗೆ ಸುದ್ದಿಯಾಗಿರಲಿಲ್ಲ. ಕೋವಿಡ್‌, ಲಾಕ್‌ಡೌನ್‌ನಿಂದ ವಿಳಂಬವಾಗಿರುವ ಸಿನಿಮಾಗಳ ಪಟ್ಟಿಯಲ್ಲಿದ್ದ ಈ ಚಿತ್ರದ ಟೀಸರ್‌ ಇಂದು ಬಿಡುಗಡೆಯಾಗಿದೆ. ಪ್ರೇಮಿಗಳ ದಿನಕ್ಕೆ ಸೂಕ್ತವಾಗಿ ಹೊಂದಿಕೆಯಾಗುವ, ಪ್ರೀತಿಯನ್ನು ನಿವೇದಿಸುವ ಸುಂದರ ಸಾಲುಗಳ ಹೆಣಿಗೆ ಟೀಸರ್‌ನಲ್ಲಿದೆ. ಪಾರ್ವತಿ ಗೌಡ ನಿರ್ಮಾಣದ ಸಿನಿಮಾದ ನಿರ್ದೇಶಕರು ಮನೋಹರ್‌ ಕಾಂಪಳ್ಳಿ. ಪೂರ್ಣ ಚಂದ್ರ ತೇಜಸ್ವಿ ಸಂಗೀತ, ಸುಧಾಕರ್‌ ರಾಜ್‌ ಛಾಯಾಗ್ರಹಣ, ಕಲಾ ನಿರ್ದೇಶಕ ಪ್ರತಾಮ್‌ ಮೆಂಡನ್‌ ಕೆಲಸ ಟೀಸರ್‌ನಲ್ಲಿ ಗಮನ ಸೆಳೆಯುತ್ತದೆ. ಇವುಗಳ ಹೊರತಾಗಿ ಹೊಸಬರ ಸಿನಿಮಾಗಳ ಪೋಸ್ಟರ್‌ಗಳು, ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗ ‘ವ್ಯಾಲೆಂಟೇನ್‌ ಸ್ಪೆಷಲ್‌ ಪೋಸ್ಟರ್‌’ಗಳು ಇಂದು ಬಿಡುಗಡೆಯಾಗಿವೆ.

LEAVE A REPLY

Connect with

Please enter your comment!
Please enter your name here