ರಮಾನಂದ ಸಾಗರ್‌ ಅವರ ‘ರಾಮಾಯಣ’ ಸರಣಿಯಲ್ಲಿ ‘ಸೀತೆ’ಯಾಗಿ ನಟಿಸಿದ್ದ ದೀಪಿಕಾ ಚಿಕ್ತಿಯಾ ಅವರು ‘ಆದಿಪುರುಷ್‌’ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೌಲ್ಯಗಳಿರುವ ಕತೆಯನ್ನು ಹಲವು ವಿಧದಲ್ಲಿ ಪ್ರಯೋಗಕ್ಕೆ ಎಡೆಮಾಡುವುದು ಸರಿಯಲ್ಲ ಎನ್ನುವುದು ಅವರ ಅಭಿಪ್ರಾಯ. ರಮನಾಂದ ಸಾಗರ್‌ ಅವರ ಪುತ್ರ ಪ್ರೇಮ್‌ ಸಾಗರ್‌ ಸಿನಿಮಾದ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ರಾಮಾಯಣ ಕೃತಿಯನ್ನು ಆಧರಿಸಿ ಆಗಿದ್ದಾಂಗೆ ತಯಾರಾಗುವ ಟೀವಿ, ಸಿನಿಮಾ ಕಂಟೆಂಟ್‌ ವಿವಾದಕ್ಕೆ ಕಾರಣವಾಗುತ್ತದೆ. ಈಗ ಆದಿಪುರುಷ್‌ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಮಾಯಣ ಮನರಂಜನೆಗಲ್ಲ ಎನ್ನುವುದನ್ನು ಮೊದಲು ಸಿನಿಮಾ ಮಾಡುವವರು ತಿಳಿದುಕೊಳ್ಳಬೇಕು. ಮೂರೂವರೆ ದಶಕದ ಹಿಂದೆ ಬಂದಿದ್ದ ನಮ್ಮ ರಾಮಾಯಣ ಸರಣಿಗೆ ಹೋಲಿಸಿ ಮಾತನಾಡಿದಾಗ ಮೌಲ್ಯಗಳ ತಿಕ್ಕಾಟ ಎದುರಾಗುತ್ತದೆ’ ಎಂದಿದ್ದಾರೆ ನಟಿ ದೀಪಿಕಾ ಚಿಕ್ಲಿಯಾ. 36 ವರ್ಷಗಳ ಹಿಂದೆ ಮೂಡಿಬಂದ ರಮಾನಂದ ಸಾಗರ್‌ ಅವರ ಹಿಂದಿ ಸರಣಿ ‘ರಾಮಾಯಣ’ದಲ್ಲಿ ಅವರು ಸೀತೆಯಾಗಿ ಅಭಿನಯಿಸಿದ್ದರು. ‘ಸೀತೆ’ಯಾಗಿ ಅರುಣ್‌ ಗೋವಿಲ್‌ (ರಾಮನ ಪಾತ್ರಧಾರಿ) ಅವರೊಂದಿಗಿನ ದೀಪಿಕಾ ಫೋಟೊಗಳನ್ನು ಹಲವರು ತಮ್ಮ ಮನೆಗಳಲ್ಲಿ ತೂಗುಹಾಕಿ ಪೂಜಿಸುತ್ತಿದ್ದುದು ಹೌದು.

https://www.instagram.com/reel/CtqDFxNIWa1/?utm_source=ig_web_copy_link

ಓಂ ರಾವುತ್‌ ನಿರ್ದೇಶನದ ‘ಆದಿಪುರುಷ್‌’ ವಿವಾದಕ್ಕೆ ಸಿಲುಕಿದೆ. ಈಗ ಒಬ್ಬೊಬ್ಬರಾಗಿ ಚಿತ್ರದ ಬಗ್ಗೆ ಮಾತನಾಡತೊಡಗಿದ್ದಾರೆ. ಪ್ರಮುಖವಾಗಿ ಚಿತ್ರದ ಪಾತ್ರವಿನ್ಯಾಸ, ಸಂಭಾಷಣೆ, ಕಳಪೆ VFX ಚರ್ಚೆಗೆ ಈಡಾಗುತ್ತಿವೆ. ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ಬಗ್ಗೆ ಮಾತನಾಡಿರುವ ದೀಪಿಕಾ, ‘ರಾಮಾಯಣದಲ್ಲಿ ಮೌಲ್ಯಗಳಿವೆ. ನಿರ್ಮಾಪಕರು, ನಿರ್ದೇಶಕರು ತಮ್ಮ ಕಲ್ಪನೆಯಂತೆ ವಿಶಿಷ್ಟ ರೀತಿಯಲ್ಲಿ ಅಲ್ಲಿನ ಪಾತ್ರಗಳನ್ನು ಚಿತ್ರಿಸುವುದು ಸರಿಯಲ್ಲ. ಕೇವಲ ಮನರಂಜನೆ ಉದ್ದೇಶಕ್ಕಾಗಿ ವಿಶಿಷ್ಟವಾಗಿ ಚಿತ್ರಿಸಲು ಹೊರಡುವುದು ವೈಯಕ್ತಿಕವಾಗಿ ನನಗೆ ನೋವುಂಟು ಮಾಡುತ್ತದೆ’ ಎಂದಿದ್ದಾರೆ. ‘ಸೀತೆ’ ಪಾತ್ರದ ಜನಪ್ರಿಯತೆ ನಂತರ ಅವರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದಾಗ್ಯೂ ತಮ್ಮನ್ನು ಜನರು ‘ಸೀತೆ’ ಪಾತ್ರದ ಮೂಲಕವೇ ಗುರುತಿಸುತ್ತಾರೆ ಎಂದು ಅಭಿಮಾನದಿಂದ ಹೇಳುತ್ತಾರೆ 58ರ ಹರೆಯದ ದೀಪಿಕಾ ಚಿಕ್ಲಿಯಾ.

ಪ್ರೇಮ್‌ ಸಾಗರ್‌ ಪ್ರತಿಕ್ರಿಯೆ : ‘ಆದಿಪುರುಷ್‌’ ಸಿನಿಮಾ ಬಗ್ಗೆ ಹಿರಿಯ ನಟರಾದ ಅರುಣ್‌ ಗೋವಿಲ್‌, ಮುಖೇಶ್‌ ಖನ್ನಾ, ಸುನಿಲ್‌ ಲಹ್ರಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ‘ರಾಮಾಯಣ’ ಟೀವಿ ಸರಣಿ ನಿರ್ದೇಶಕ ರಮಾನಂದ ಸಾಗರ್‌ ಪುತ್ರ ಪ್ರೇಮ್‌ ಸಾಗರ್‌ ನಿನ್ನೆ ಚಿತ್ರದ ನಿರ್ದೇಶಕ ಓಂ ರಾವುತ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇಂದಿನ ಪ್ರೇಕ್ಷಕರಿಗೆ ತಾವು ಚಿತ್ರದಲ್ಲಿ ಬಳಕೆ ಮಾಡಿರುವ ಸಂಭಾಷಣೆ ಇಷ್ಟವಾಗುತ್ತದೆ ಏನ್ನುವ ನಿರ್ದೇಶಕ ಓಂ ರಾವುತ್‌ರ ಸಮರ್ಥನೆಯೇ ಮೂರ್ಖತನದ್ದು. ದಯವಿಟ್ಟು ನಿಮ್ಮ ಚಿತ್ರ ವಾಲ್ಮೀಕಿ ರಾಮಾಯಣ ಆಧರಿಸಿದ್ದು ಎಂದು ಹೇಳಿಕೊಳ್ಳಬೇಡಿ. ತಾಂತ್ರಿಕ ಸೌಲಭ್ಯಗಳನ್ನು ಬಳಕೆ ಮಾಡಿ ನೀವು ಬೇರೆ ಕತೆಯ ಫ್ಯಾಂಟಸಿ ಸಿನಿಮಾ ಮಾಡಬಹುದಿತ್ತು. ರಾಮಾಯಣವನ್ನು ಜನರು ಭಕ್ತಿಯಿಂದ ನೋಡುತ್ತಾರೆ. ನೀವು ಅವರ ಭಾವನೆಗಳಿಗೆ ಧಕ್ಕೆ ತರಬೇಡಿ. ನಾನು ಚಿತ್ರದ ಕೆಲವು ತುಣುಕುಗಳನ್ನು ನೋಡಿದ್ದೇನೆ. ಇಡಿಯಾಗಿ ಚಿತ್ರವನ್ನು ವೀಕ್ಷಿಸಬೇಕೆನ್ನುವ ಆಸೆಯಂತೂ ಇಲ್ಲವೇ ಇಲ್ಲ’ ಎಂದಿದ್ದಾರೆ ಪ್ರೇಮ್‌ ಸಾಗರ್‌.

ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಗುತ್ತಿದೆ. ನೇಪಾಳ ಸರ್ಕಾರ ಚಿತ್ರವನ್ನು ನಿಷೇಧಿಸಿದ್ದು, ಭಾರತೀಯ ಸಿನಿಮಾದ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಚಿತ್ರಕ್ಕೆ ಋಣಾತ್ಮಕ ಪ್ರತಿಕ್ರಿಯೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜನರು ಸಿನಿಮಾ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕಳೆದೆರೆಡು ದಿನಗಳಲ್ಲಿ ಚಿತ್ರದ ಗಳಿಕೆಯಲ್ಲಿ ಇಳಿಮುಖವಾಗಿದೆ.

Previous article‘ನಾ ರೆಡಿ’ ಸಾಂಗ್‌ ಪ್ರೋಮೊ | ಲೋಕೇಶ್‌ ಕನಗರಾಜ್‌ – ವಿಜಯ್‌ ‘ಲಿಯೋ’ ಸಿನಿಮಾ
Next articleಸುಂದರ ನಗರಿ ಪ್ಯಾರಿಸ್‌ ಹಿನ್ನೆಲೆಯಲ್ಲಿ ಸ್ನೇಹ, ಪ್ರೇಮ, ವಿರಸ ‘ಎಮಿಲಿ ಇನ್ ಪ್ಯಾರಿಸ್’

LEAVE A REPLY

Connect with

Please enter your comment!
Please enter your name here