ಇದು ನಟನೆ, ತಾಂತ್ರಿಕತೆ ಇತ್ಯಾದಿಗಳನ್ನು ಮೀರಿ ಹಡ್ಡಿ ಮತ್ತು ಹಾರಿಕಾಳ ಅಂತರಂಗದ ದ್ವಂದ್ವಗಳ ಕುರಿತು ಒಂದು ಚಿಂತನೆಯನ್ನು ಮನಸ್ಸಲ್ಲಿ ಮೂಡಿಸಿ ಮುಗಿಯುವ ಕಥೆ. ಚಿತ್ರದಲ್ಲಿ ಅದೇನೇ ಕೊರತೆಗಳಿದ್ದರೂ ಚಿತ್ರದ ಮುಖ್ಯ ಪಾತ್ರದ ಅಂತರಂಗ ವೀಕ್ಷಕರನ್ನು ಕಾಡದೇ ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಇದೊಂದು ಉತ್ತಮ ಚಿತ್ರ. ‘ಹಡ್ಡಿ’ ZEE5ನಲ್ಲಿ stream ಆಗುತ್ತಿದೆ.

ಅನುರಾಗ್ ಕಶ್ಯಪ್ ಅವರನ್ನು ಜನರು ನಿರ್ದೇಶಕರಾಗಿ ಬಲ್ಲರು. ಅವರ ಅಭಿನಯ ಚಾತುರ್ಯ ಕೂಡ ಅಲ್ಲಲ್ಲಿ ನೋಡಿರಬಹುದು. ಇದೀಗ ಪೂರ್ಣ ಪ್ರಮಾಣದಲ್ಲಿ ಖಳನಾಯಕನ ಪಾತ್ರದಲ್ಲಿ ‘ಹಡ್ಡಿ’ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಅನುರಾಗ್ ಕಶ್ಯಪ್ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ‘ಹಡ್ಡಿ’ ಚಿತ್ರದ ನಿರ್ದೇಶಕರು ಅಕ್ಷತ್ ಅಜಯ್ ಶರ್ಮ.

ಇದೊಂದು ಸೇಡಿನ ಚಿತ್ರ. ನವಾಜುದ್ದೀನ್ ಈ ಚಿತ್ರದಲ್ಲಿ ಮಂಗಳಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ NCR ಪ್ರಾಂತ್ಯದ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಅನುರಾಗ್ ಕಶ್ಯಪ್ ಕೇರ್ ಫ್ರೀ ಮಾದರಿಯ ಖಳನಾಯಕನ ಪಾತ್ರದಲ್ಲಿ ಕಥೆಯ ಏರಿಳಿತಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಹೋಗುತ್ತಾರೆ. ‘ಹಡ್ಡಿ’ ಚಿತ್ರದ ನಿರ್ದೇಶಕ ಅಕ್ಷತ್, ಅನುರಾಗ್ ಕಶ್ಯಪ್ ಅವರ ಗರಡಿಯಲ್ಲಿ ಪಳಗಿದವರು. ಗುರುಗಳು ಹಾಕಿಕೊಟ್ಟ ದಾರಿಯಲ್ಲೇ ಸಾಗಿರುವುದು ಚಿತ್ರದ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ. ಅದರಲ್ಲೂ ಚಿತ್ರದಲ್ಲಿ ಬಳಸಿರುವ ಹಿನ್ನೆಲೆ ಸಂಗೀತ, ದೃಶ್ಯ ಜೋಡಣೆಯ ವಿನ್ಯಾಸ ಎಲ್ಲವೂ ಅನುರಾಗ್ ಕಶ್ಯಪ್ ಅವರ ಚಿತ್ರಗಳನ್ನು ಬಹುವಾಗಿ ನೆನಪಿಸುತ್ತದೆ. ಬಹಳ ಮೊನಚಾದ ಮುಖ್ಯಪಾತ್ರ, ಗಾಢವಾದ ಹಿನ್ನೆಲೆ ಮತ್ತು ಪಾತ್ರವರ್ಗದ ಆಯ್ಕೆ, ಸಾಂಸ್ಕೃತಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿದ ಪಾತ್ರಚಿತ್ರಣ, ಚಿತ್ರದುದ್ದಕ್ಕೂ ಅನುಭವಕ್ಕೆ ಬರುವ ಒಂದು ದುಗುಡ, ಕಣ್ಣಿಗೆ ರಾಚುವಂತಹ ದೃಶ್ಯವೈಭವ, ಸಾಂಪ್ರದಾಯಿಕವಲ್ಲದ ಚಿತ್ರಕತೆ ಇವೆಲ್ಲವೂ ಅನುರಾಗ್ ಅವರ ಚಿತ್ರದ ಸಿದ್ಧ ಮಾದರಿ. ಅದೇ ಮಾದರಿ ಇಲ್ಲಿಯೂ ಅವರ ಶಿಷ್ಯ ಅಕ್ಷತ್ ನಿರ್ದೇಶಿಸಿರುವ ಮೊದಲನೇ ಚಿತ್ರದಲ್ಲಿ ಕಂಡುಬರುತ್ತದೆ.

ಗ್ಯಾಂಗ್‌ಸ್ಟರ್‌ ಮಾದರಿಯ ಕಥೆಯ ಪರಿಭಾಷೆಯೊಂದಿಗೆ ಚಿತ್ರ ಶುರುವಾಗುತ್ತದೆ. ‘ಹಡ್ಡಿ’ ಪಾತ್ರದಲ್ಲಿ ನವಾಜುದ್ದೀನ್ ಒಬ್ಬ ಸಣ್ಣ ಮಟ್ಟದ ಕಳ್ಳ ಸಾಗಾಣಿಕೆ ಮಾಡುವವ. ಅಲಹಾಬಾದಿನಿಂದ ದೆಹಲಿಗೆ ಓಡಿ ಬಂದು ಭ್ರಷ್ಟ ರಾಜಕಾರಣಿ ಪ್ರಮೋದ್ ನಡೆಸುವ ದಂಧೆಗೆ ಸೇರುತ್ತಾನೆ. ಹಡ್ಡಿಗೆ ಈ ಕೆಲಸಗಳೇನೂ ಹೊಸದಲ್ಲ. ತನ್ನ ಕೈಚಳಕ, ಚಾಕಚಕ್ಯತೆಯಿಂದ ದಂಧೆಯ ಒಂದೊಂದೇ ಮೆಟ್ಟಿಲು ಇರುತ್ತಾ ತನ್ನ ಬಾಸ್ ಪ್ರಮೋದ್‌ನ ಮೆಚ್ಚುಗೆಯ ಕಣ್ಣಿಗೆ ಬೀಳುತ್ತಾನೆ. ಆದರೆ ಇಲ್ಲಿ ಹಡ್ಡಿಯ ನಿಜವಾದ ಉದ್ದೇಶಗಳ ಬಗ್ಗೆ ವೀಕ್ಷಕರಿಗೆ ಮೊದಲೇ ಸುಳಿವು ಸಿಕ್ಕಿಬಿಡುವ ಹಾಗೆ ಕಥೆಯನ್ನು ಹೆಣೆದಿದ್ದಾರೆ. ಹಡ್ಡಿ ದೆಹಲಿಗೆ ಹೋಗುವ ಬಸ್ಸಿನಲ್ಲಿ ತನ್ನ ಸಹಚರನಿಗೆ ಹೊಡೆದು ಹುನ್ನಾರ ಮಾಡುವುದು ಆ ಪಾತ್ರದ ಬಗ್ಗೆ ಆತನ ಉದ್ದೇಶಗಳ ಬಗ್ಗೆ, ಪೂರ್ವನಿಯೋಜಿತ ಕೆಲಸಗಳನ್ನು ಮಾಡುವುದರ ಬಗ್ಗೆ, ಪ್ರತೀಕಾರ ತೆಗೆದುಕೊಳ್ಳುವ ಇರಾದೆ ಇರುವ ಬಗ್ಗೆ ಮಹತ್ವದ ಸುಳಿವುಗಳನ್ನು ಬಿಟ್ಟುಕೊಟ್ಟುಬಿಡುತ್ತದೆ. ಇದೊಂದು ರೀತಿಯ ನಿರಾಸೆ ಎಂದೇ ಹೇಳಬಹುದು.

ಇಷ್ಟರಲ್ಲಾಗಲೇ ದಂಧೆ ನಡೆಸುವುದರ ಹೊರತಾಗಿಯೂ ಹಡ್ಡಿಗೆ ಇರಬಹುದಾದ ಬೇರೆ ಉದ್ದೇಶಗಳ ಬಗ್ಗೆ ಊಹೆ ಮಾಡಬಹುದು ಆದ್ದರಿಂದ ಹಡ್ಡಿಯ ನಿಜವಾದ ಲಿಂಗದ ರಹಸ್ಯದ ಬಗ್ಗೆ ವೀಕ್ಷಕರಿಗೆ ತೋರಿಸುವ ವೇಳೆಗಾಗಲೇ ಕುತೂಹಲದ ಅಂಶ ಪೂರ್ತಿ ತಗ್ಗಿಬಿಟ್ಟಿರುತ್ತದೆ. ಚಿತ್ರದ ಆರಂಭದಲ್ಲೇ ಬರುವ ಒಂದು ಸನ್ನಿವೇಶ ಕೂಡ ಸುಳಿವು ಬಿಟ್ಟುಕೊಟ್ಟು ನಿಜವಾದ ಸತ್ಯ ತೆರೆಯ ಮೇಲೆ ಬರುವ ವೇಳೆಗೆ ಕುತೂಹಲವೇ ಇಲ್ಲವಾಗಿದೆ. ಹಡ್ಡಿಯ ನಿಜವಾದ ಹೆಸರು ಹಾರಿಕಾ, ಪ್ರಮೋದನಿಂದ ಹತವಾದ ಹಿಜಡಾಗಳ ಸಮುದಾಯದ ಕೊನೆಯ ಕೊಂಡಿ ಎನ್ನುವ ಸತ್ಯ ಬಯಲಾಗುತ್ತದೆ. ಹಡ್ಡಿ ದಂಧೆ ನಡೆಸಲು ಬಂದಿಲ್ಲ, ಬದಲಿಗೆ ಗುಂಪಿನೊಳಗೆ ಸೇರಿ ತನ್ನ ಗುರು ರೇವತಿ ಅಮ್ಮನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲು ಬಂದಿರುತ್ತಾನೆ ಎಂದು ಬಹಳ ಸುಲಭವಾಗಿ ಊಹಿಸಿಬಿಡಬಹುದು.ಚಿತ್ರ ಸಾಗುತ್ತಾ ಹೋದಂತೆ ಹಡ್ಡಿಯ ಸ್ವಭಾವದ ವಿವಿಧ ಮಜಲುಗಳ ಅನಾವರಣ ಆಗುತ್ತಾ ಹೋಗುತ್ತದೆ. ಅನ್ಯಾಯಕ್ಕೆ ಒಳಗಾದವರ ಮನಸ್ಥಿತಿಯ ವಿವಿಧ ಮಜಲುಗಳ ಅನಾವರಣವಾಗುತ್ತಾ ಹೋಗುತ್ತದೆ. ಹಡ್ಡಿ ದಂಧೆ ಸಾಮ್ರಾಜ್ಯದ ದೌರ್ಬಲ್ಯಗಳನ್ನು ಪತ್ತೆ ಮಾಡಿ ಒಡೆಯುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾ ಹೋಗುತ್ತಾನೆ.

ಚಿತ್ರದ ಓಘ ವೇಗವಾಗಿದ್ದರೂ ಚಿತ್ರಕಥೆಯಲ್ಲಿ ಇರಬೇಕಾದ ಸ್ಪಷ್ಟತೆ ನಿರೀಕ್ಷೆಯ ಮಟ್ಟ ತಲುಪಿಲ್ಲ. ಕೆಲವು ಸನ್ನಿವೇಶಗಳಂತೂ ನಿಖರತೆ ಇಲ್ಲದೇ ಸುಮ್ಮನೆ ಬಲವಂತಕ್ಕೆ ತುರುಕಿದ ಹಾಗಿವೆ. ಹಡ್ಡಿಯ ಇಡೀ ಜೀವನದ ಕಥೆಯನ್ನು ಒಂದು ಹಾಡಿನಲ್ಲಿ ಹೇಳ ಹೊರಟಿರುವ ಪ್ರಯತ್ನ ಆ ಪಾತ್ರಕ್ಕೆ ಮಾಡಿರುವ ಅನ್ಯಾಯ ಎಂದೇ ಹೇಳಬಹುದು. ಪ್ರಮೋದ್ ದಂಧೆಯ ಪ್ರಪಂಚದ ಚಿತ್ರಣ ಕೂಡ ಗೋಜಲು ಗೋಜಲಾಗಿದೆ. ಇನ್ನು ಚಿತ್ರದ ಅಂತ್ಯವಂತೂ ಬಹಳ ರಕ್ತಸಿಕ್ತವಾಗಿದೆ. ಇಷ್ಟಾಗಿಯೂ ಅಂದುಕೊಂಡ ಪರಿಣಾಮವನ್ನು ವೀಕ್ಷಕರ ಮೇಲೆ ಬೀರುವಲ್ಲಿ ವಿಫಲವಾಗಿದೆ.

ಇಷ್ಟರಲ್ಲಿ ಹಡ್ಡಿಯ ಸೇಡಿನ ಕಥೆಗಿಂತ ಮನಸ್ಸಲ್ಲಿ ನಿಲ್ಲುವುದು ಹಡ್ಡಿಯ ಜೀವನದ ಕಥೆ ಮತ್ತು ಆಕೆಯ ಪ್ರೇಮದ ಕಥೆ. ಆ ಭಾಗ ಬಹಳ ಮನೋಜ್ಞವಾಗಿ ಮೂಡಿಬಂದಿದೆ. ಉಳಿದಂತೆ ಆಕೆಯ ಸೇಡಿನ ಕಥೆ ದಿಕ್ಕಿಲ್ಲದಂತೆ ನಿರೂಪಿತವಾಗಿದೆ. ಎಲ್ಲಕ್ಕಿಂತ ಕಣ್ ಸೆಳೆಯುವುದು ನವಾಜ್ ಅವರ ನಟನೆ. ಹಡ್ಡಿ ಹಾಗೂ ಹಾರಿಕಾ ಪಾತ್ರದಲ್ಲಿ ಮಂಗಳಮುಖಿಯಾಗಿ ಏನೆಲ್ಲಾ ಭಾವಗಳನ್ನು ವ್ಯಕ್ತಪಡಿಸಬಹುದೋ ಅಷ್ಟನ್ನೂ ನಿಖರವಾಗಿ ಅಭಿನಯಿಸಿ ಎರಡೂ ಆಯಾಮಗಳಲ್ಲಿ ನವಾಜ್ ಜೀವಿಸಿದ್ದಾರೆ. ಅದರಲ್ಲೂ ಇರ್ಫಾನ್‌ನೊಂದಿಗಿನ ಪ್ರೇಮದ ಸನ್ನಿವೇಶಗಳು ಬಹಳ ಪರಿಣಾಮಕಾರಿಯಾಗಿ ಮನಸ್ಸಲ್ಲಿ ನಿಲ್ಲುತ್ತವೆ.

ಅನುರಾಗ್ ನಟನೆ ಬಗ್ಗೆ ಎರಡು ಮಾತಿಲ್ಲ. ಎಲ್ಲ ಪಾತ್ರಧಾರಿಗಳೂ ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಆದರೆ ಇದು ನಟನೆ, ತಾಂತ್ರಿಕತೆ ಇತ್ಯಾದಿಗಳನ್ನು ಮೀರಿ ಹಡ್ಡಿ ಮತ್ತು ಹಾರಿಕಾಳ ಅಂತರಂಗದ ದ್ವಂದ್ವಗಳ ಕುರಿತು ಒಂದು ಚಿಂತನೆಯನ್ನು ಮನಸ್ಸಲ್ಲಿ ಮೂಡಿಸಿ ಮುಗಿಯುವ ಕಥೆ. ಹಡ್ಡಿಯ ಬಹಿರಂಗದ, ಹಾರಿಕಾಳ ಅಂತರಂಗದ ತುಮುಲಗಳನ್ನು ನಮ್ಮಲ್ಲೂ ಮೂಡಿಸಿ ಮುಗಿಯುವ ಕಥೆ. ಚಿತ್ರದಲ್ಲಿ ಅದೇನೇ ಕೊರತೆಗಳಿದ್ದರೂ ಚಿತ್ರದ ಮುಖ್ಯ ಪಾತ್ರದ ಅಂತರಂಗ ವೀಕ್ಷಕರನ್ನು ಕಾಡದೇ ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಇದೊಂದು ಉತ್ತಮ ಚಿತ್ರ. ‘ಹಡ್ಡಿ’ ZEE5ನಲ್ಲಿ stream ಆಗುತ್ತಿದೆ.

LEAVE A REPLY

Connect with

Please enter your comment!
Please enter your name here