ಬಾಲಿವುಡ್‌ ನಟ ಅಜಯ್‌ ದೇವಗನ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ‘ಮೈದಾನ್‌’ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಲಾಗಿದೆ. 5 ವರ್ಷಗಳ ಹಿಂದೆ ಸಿನಿಮಾ ಘೋಷಿಸಿ, ಪೋಸ್ಟರ್‌ ರಿಲೀಸ್‌ ಮಾಡಲಾಗಿತ್ತು. ಇದೀಗ ಚಿತ್ರದ ಫೈನಲ್‌ ಟ್ರೇಲರ್‌ ರಿಲೀಸ್‌ ಆಗಿದೆ.

ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಬಿ ಟೌನ್‌ನ ನಟ ಅಜಯ್‌ ದೇವಗನ್‌ 55ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ‘ಮೈದಾನ್‌’ ಚಿತ್ರತಂಡ ಫೈನಲ್‌ ಟ್ರೇಲರ್‌ ರಿಲೀಸ್‌ ಮಾಡಿದೆ. ಬೋನಿ ಕಪೂರ್‌ ನಿರ್ಮಿಸಿರುವ ಈ ಚಿತ್ರವನ್ನು ಅಮಿತ್‌ ಶರ್ಮಾ ನಿರ್ದೇಶನ ಮಾಡಿದ್ದಾರೆ. ಐದು ವರ್ಷಗಳ ಹಿಂದೆಯೇ ಅಂದರೆ 2019ರಲ್ಲೇ ಈ ಚಿತ್ರವನ್ನು ಘೋಷಿಸಲಾಗಿತ್ತು. ಜೊತೆಗೆ ಆಗ ಸಿನಿಮಾದ ಪೋಸ್ಟರ್‌ ಸಹ ರಿಲೀಸ್‌ ಮಾಡಲಾಗಿತ್ತು.

ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದ್ದು, ಚಿತ್ರದ ಟ್ರೇಲರ್‌ ಅಜಯ್‌ ದೇವಗನ್‌ ನಿರೂಪಣೆಯೊಂದಿಗೆ ಆರಂಭವಾಗುತ್ತದೆ. ಸಾಕಷ್ಟು ಪಂಚಿಂಗ್‌ ಡೈಲಾಗ್‌ಗಳಿಂದ ಕೂಡಿರುವ ಈ ಟ್ರೇಲರ್‌ನಲ್ಲಿ ವಿಶ್ವ ಮಟ್ಟದ ಫುಟ್ಬಾಲ್‌ ಆಟಗಾರರ ತಂಡ ಕಟ್ಟುವ ಕೋಚ್‌ ಪಾತ್ರದಲ್ಲಿ ಅಜಯ್‌ ಕಾಣಿಸಿಕೊಂಡಿದ್ದಾರೆ. ಬಲಿಷ್ಠವಾದ ತಂಡಕ್ಕಾಗಿ ವಿರೋಧದ ನಡುವೆಯೇ ಸ್ಲಂಗಳಿಂದಲೂ ಆಟಗಾರರ ಆಯ್ಕೆ ನಡೆಯುತ್ತದೆ. ಈ ಹಿಂದೆ ಬಿಡುಗಡೆಯಾಗಿದ್ದ ಟ್ರೇಲರ್‌ಗಿಂತ ಈ ಸಲದ ಟ್ರೇಲರ್‌ ವಿಶೇಷವಾಗಿದೆ. 2019ರಲ್ಲಿ ಅನೌನ್ಸ್‌ ಆಗಿದ್ದ ‘ಮೈದಾನ್‌’ ಸಿನಿಮಾ 2020ರಲ್ಲೇ ತೆರೆ ಕಾಣಬೇಕಿತ್ತು. ಸಿನಿಮಾ ಚಿತ್ರೀಕರಣ ಮುಗಿದಿದ್ದರೂ ನಾನಾ ಕಾರಣಗಳಿಂದ ಚಿತ್ರದ ರಿಲೀಸ್‌ ದಿನಾಂಕ ಮುಂದಕ್ಕೆ ಹೋಗುತ್ತಲೇ ಇತ್ತು. ಇನ್ನು ಈ ಚಿತ್ರದಲ್ಲಿ ಪ್ರಿಯಾಮಣಿ, ಗಜರಾಜ್‌ ರಾವ್‌ ಹಾಗೂ ಬಂಗಾಳಿ ನಟ ರುದ್ರನೀಲ್‌ ಘೋಷ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here