ತಮಿಳು ನಟ ಅಜಿತ್‌ ಅವರಿಗೆ ಪ್ರಶಾಂತ್‌ ನೀಲ್‌ ಸಿನಿಮಾ ಮಾಡಲಿದ್ದಾರೆ ಎನ್ನುವ ವದಂತಿ ದಟ್ಟವಾಗಿ ಹರಡಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನ ‘KGF3’ ಸರಣಿಯಲ್ಲಿ ಯಶ್‌ ಜೊತೆ ಅಜಿತ್‌ ಕೂಡ ಇರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಶಾಂತ್‌ ನೀಲ್‌ ಮತ್ತು ಹೊಂಬಾಳೆ ಫಿಲಂಸ್‌ ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿಲ್ಲ.

‘KGF’ ಸರಣಿ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ನಿರ್ದೇಶಕ ಪ್ರಶಾಂತ್‌ ನೀಲ್‌ ‘ಸಲಾರ್‌’ ನಿರ್ದೇಶಿಸಿದ್ದರು. ಈಗಾಗಲೇ ‘ಸಲಾರ್‌’ ಮೊದಲ ಭಾಗ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಪ್ರಿಯರು ಪಾರ್ಟ್‌ 2ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಪಾರ್ಟ್‌ 2ಗೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಬೇಕಿದೆ. ಇದಾದ ನಂತರ ಪ್ರಶಾಂತ್‌ ನೀಲ್‌ ಅವರು ಜ್ಯೂನಿಯರ್‌ NTR ಅವರಿಗೆ ಸಿನಿಮಾ ನಿರ್ದೇಶಿಸಲಿದ್ದಾರೆ. ಈ ಚಿತ್ರದ ನಂತರ ಅವರು ಅಜಿತ್‌ರಿಗೆ ಆಕ್ಷನ್‌ – ಕಟ್‌ ಹೇಳಲಿದ್ದಾರೆ ಎನ್ನಲಾಗಿದೆ. ಅದರಲ್ಲೂ ಈ ಸಿನಿಮಾ ‘KGF3’ ಸರಣಿ ಎನ್ನುವ ವದಂತಿ ಇದೆ. ಹಾಗಾದಲ್ಲಿ ಯಶ್‌ ಮತ್ತು ಅಜಿತ್‌ ಮೊದಲ ಬಾರಿ ಜೊತೆಗೂಡಲಿದ್ದಾರೆ ಎಂದು ನಟರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಹೊಂಬಾಳೆ ಫಿಲಂಸ್‌ ‘ರಘು ತಾತ’ ತಮಿಳು ಚಿತ್ರ ನಿರ್ಮಾಣದೊಂದಿಗೆ ಈಗಾಗಲೇ ಕಾಲಿವುಡ್‌ ಪ್ರವೇಶಿಸಿದೆ. ಸುಮನ್‌ ಕುಮಾರ್‌ ಈ ಸಿನಿಮಾ ನಿರ್ದೇಶಿಸಿದ್ದಾರೆ. ಈಗ ಅವರು ಅಜಿತ್‌ ಸಿನಿಮಾ ಮಾಡುವ ಸುದ್ದಿ ಹರಿದಾಡುತ್ತಿದೆ. ಸದ್ಯ ಅಜಿತ್‌ ‘ವಿದಾಮುಯಾರ್ಚಿ’ ಮತ್ತು ‘ಗುಡ್‌ ಬ್ಯಾಡ್‌ ಅಗ್ಲೀ’ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್‌ ‘Toxic’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಹಾಗಾಗಿ ‘KGF3’ ಮುಂದಿನ ವರ್ಷ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳ ಪ್ರಕಾರ ತಿಳಿದುಬರುತ್ತದೆ.

LEAVE A REPLY

Connect with

Please enter your comment!
Please enter your name here