ಕಾಲಿವುಡ್‌ನ ಖ್ಯಾತ ನಿರ್ದೇಶಕ ಪಾ.ರಂಜಿತ್‌ ನೂತನ ಚಿತ್ರದಲ್ಲಿ ವಿಕ್ರಂ ನಾಯಕನಟನಾಗಿ ಅಭಿನಯಿಸಲಿದ್ದಾರೆ. ಇದೊಂದು ಪೊಲಿಟಿಕಲ್‌ ಡ್ರಾಮಾ ಸಿನಿಮಾ ಆಗಲಿದ್ದು, ನಾಯಕನಟ ಹಿಂದುಳಿದ ಜನಾಂಗದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾನೆ.

ವಿಶಿಷ್ಟ ಸಿನಿಮಾಗಳ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದೊಂದು ನೆಲೆ ಕಂಡುಕೊಂಡಿರುವ ನಿರ್ದೇಶಕ ಪಾ.ರಂಜಿತ್‌ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಅವರ ಚಿತ್ರದ ಹೀರೋ ವಿಕ್ರಂ. ‘Super excited to get this started’  ಎಂದು ನಿರ್ದೇಶಕ ಪಾ.ರಂಜಿತ್‌ ಅವರು ವಿಕ್ರಂ ಮತ್ತು ಚಿತ್ರದ ನಿರ್ಮಾಪಕರೊಂದಿಗಿನ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ. ಸ್ಟುಡಿಯೋ ಗ್ರೀನ್ ಈ ಸಿನಿಮಾ ನಿರ್ಮಿಸುತ್ತಿದ್ದು, ಇನ್ನುಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ. ಈ ಹಿಂದಿನ ಪಾ.ರಂಜಿತ್ ಚಿತ್ರಗಳಂತೆ ಇಲ್ಲಿಯೂ ನಾಯಕನಟ ಹಿಂದುಳಿದ, ಶೋಷಿಯ ವರ್ಗದ ಪ್ರತಿನಿಧಿಯಾಗಿರುತ್ತಾನೆ ಎನ್ನಲಾಗಿದೆ.

ಪಾ.ರಂಜಿತ್‌ರ ಇತ್ತೀಚಿನ ಸಿನಿಮಾ ‘ಸರ್ಪಟ್ಟ ಪರಾಂಬರೈ’ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಿತ್ತು. ಚಿತ್ರಕ್ಕೆ ವಿಮರ್ಶಕರು ಮಾತ್ರವಲ್ಲದೆ ವೀಕ್ಷಕರಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಎಪ್ಪತ್ತರ ದಶಕದಲ್ಲಿ ಚೆನ್ನೈನ ಉತ್ತರ ಭಾಗದಲ್ಲಿ ಚಾಲ್ತಿಯಲ್ಲಿದ್ದ ಬಾಕ್ಸಿಂಗ್ ಕಲ್ಚರ್ ಚಿತ್ರದಲ್ಲಿ ನಿರೂಪಣೆಗೊಂಡಿತ್ತು. ಇನ್ನು ನಟ ವಿಕ್ರಂ ಅಭಿನಯದ ನಾಲ್ಕು ಸಿನಿಮಾಗಳು ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿವೆ. ಕಾರ್ತೀಕ್ ಸುಬ್ಬರಾಜ್‌ ನಿರ್ದೇಶನದ ‘ಮಹಾನ್‌’, ಗೌತಮ್ ಮೆನನ್‌ ಅವರ ‘ಧ್ರುವ ನಚ್ಛತಿರಂ’, ಮಣಿರತ್ನಂ ನಿರ್ದೇಶನದ ಫ್ಯಾಂಟಸಿ ಡ್ರಾಮಾ ‘ಪೊನ್ನಿಯಿನ್ ಸೆಲ್ವನ್‌’ ತೆರೆಗೆ ಸಿದ್ಧವಾಗುತ್ತಿವೆ. ಅಜಯ್ ಜ್ಞಾನಮುತ್ತು ನಿರ್ದೇಶನದಲ್ಲಿ ವಿಕ್ರಂ ನಟಿಸಿರುವ ‘ಕೋಬ್ರಾ’ ಕೂಡ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿದೆ.

LEAVE A REPLY

Connect with

Please enter your comment!
Please enter your name here