ಸಾತ್ವಿಕ್‌ ನಿರ್ದೇಶನದ ಹಾರರ್‌ – ಥ್ರಿಲ್ಲರ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಗೆಸ್ಟ್‌ಹೌಸ್‌ನಲ್ಲಿ ಸಿಲುಕಿದ ಯುವಕ – ಯುವತಿಯರು ಪ್ರೇತಾತ್ಮಗಳಿಂದ ತಪ್ಪಿಸಿಕೊಳ್ಳುವ ಕಥಾಹಂದರವಿದು. ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಒಂದಷ್ಟು ಸ್ನೇಹಿತರ ತಂಡ ವೀಕೆಂಡ್ ಕಳೆಯಲು ಜಾಲಿ ಟ್ರಿಪ್ ಹೊರಡುತ್ತಾರೆ. ಅವರು ಗೆಸ್ಟ್‌ಹೌಸ್‌ವೊಂದಕ್ಕೆ ತೆರಳಿ ಅಲ್ಲಿ ತಂಗುತ್ತಾರೆ. ಅನಿರೀಕ್ಷಿತವಾಗಿ ನಡೆದ ಕೆಲವು ಘಟನೆಗಳಿಂದಾಗಿ ಅತಿಥಿ ಗೃಹದಲ್ಲಿ ಆತ್ಮಗಳಿರುವುದು ಗೊತ್ತಾಗಿ ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅ ಮನೆಯಲ್ಲಿ ಬೆಲೆಬಾಳುವ ಅಮೂಲ್ಯ ವಜ್ರವಿದ್ದು, ಈ ಆತ್ಮಗಳೆಲ್ಲ ಅದಕ್ಕೆ ಕಾವಲಾಗಿರುತ್ತವೆ ಎಂದು ಅವರಿಗೆ ಗೊತ್ತಾಗುತ್ತದೆ. ಅದರಲ್ಲಿ ಒಂದು ಅತ್ಮ ಮಾತ್ರ ಇವರನ್ನು ಅಲ್ಲಿಂದ ಹೊರಕಳಿಸಲು ನೋಡಿದರೆ, ಮತ್ತೊಂದು ಆತ್ಮ ಅಲ್ಲೇ ಇರುವಂತೆ ನೋಡಿಕೊಳ್ಳುತ್ತದೆ. ಆ ಆತ್ಮದ ಸಹಾಯದಿಂದ ಅವರು ಹೇಗೆ ವಜ್ರವನ್ನು ವಶಪಡಿಸಿಕೊಂಡು ಹೊರಬರುತ್ತಾರೆ ಎನ್ನುವುದು ಚಿತ್ರದ ಕಥಾಹಂದರ.

ಸಾತ್ವಿಕ್‌ ನಿರ್ದೇಶನದ ಹಾರರ್‌ – ಥ್ರಿಲ್ಲರ್‌ ಚಿತ್ರವಿದು. ’21-21-21′ ಶೀರ್ಷಿಕೆಯ ಅಡಿಬರಹ. ಈ ನಂಬರ್‌ಗೂ, ಚಿತ್ರದ ಮುಖ್ಯಪಾತ್ರಗಳಿಗೂ ಇರುವ ಸಂಬಂಧವೂ ಚಿತ್ರಕಥೆಯಲ್ಲಿ ಇರಲಿದೆ. ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಹಿರಿಯ ನಟ ಸುಚೇಂದ್ರಪ್ರಸಾದ್ ಮತ್ತು ನಟಿ ಸಂಜನಾ ನಾಯ್ಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಿತೇಶ್ ಮೂವೀಸ್ ಬ್ಯಾನರ್‌ ನಿರ್ಮಿಸಿರುವ ಚಿತ್ರವೀಗ ತೆರೆಗೆ ಸಿದ್ಧವಾಗಿದೆ. ಈ ಹಿಂದೆ ‘ಮಳೆಬಿಲ್ಲು’ ಚಿತ್ರದ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಸಾತ್ವಿಕ್ ಎಂ ಭೂಪತಿ ಅವರು ಈ ಚಿತ್ರದ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ.

ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ, ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಾಯಿ ಸೋಮೇಶ್ ಸಂಗೀತ, ಬುಗುಡೆ ವೀರೇಶ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಹರಿಪ್ರಸಾದ್ ಸಾಹಿತ್ಯ ಮತ್ತು ತೇಜ್ ಆರಾಧ್ಯ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಪಂಚಮಜೀವ, ಸುಪ್ರೀತ್ ಶರ್ಮ ಹಾಗೂ ಸುರಭಿ ಭಾರದ್ವಾಜ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ದರ್ಶಿನಿ ಆರ್ ಒಡೆಯರ್, ನಿಸರ್ಗ ಮನ್ವೀರ್ ಚವ್ಹಾನ್, ವಿವೇಕ ಚಕ್ರವರ್ತಿ, ವಜ್ರ, ಕಾವ್ಯಪ್ರಕಾಶ್, ಜಾಹ್ನವಿ, ನಾರಾಯಣ ಸ್ವಾಮಿ ಡಿ ಎಂ, ಸಾತ್ವಿಕ್ ಎಂ ಭೂಪತಿ, ಶಿವಕುಮಾರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಡಿ ಎಸ್ ಕೆ ಸಿನಿಮಾಸ್‌ನ ಸುನಿಲ್ ಕುಂಬಾರ್ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here