ನಟ ಶಿವರಾಜಕುಮಾರ್‌ ‘ರೇಮೊ’ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ. ಪವನ್‌ ಒಡೆಯರ್‌ ನಿರ್ದೇಶನದ ಮ್ಯೂಸಿಕಲ್‌ ಲವ್‌ಸ್ಟೋರಿ ಇದು. ಇಶಾನ್‌ ಮತ್ತು ಆಶಿಕಾ ಮುಖ್ಯಭೂಮಿಕೆಯ ಸಿನಿಮಾ. ನಾಯಕಿ ಆಶಿಕಾ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇರುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ.

“ಕನ್ನಡ ಚಿತ್ರರಂಗ ಸುದ್ದಿಯಲ್ಲಿದೆ. ‘ಕಾಂತಾರ’ ಸಿನಿಮಾ ನಮಗೆಲ್ಲಾ ಒಂದು ಹೆಮ್ಮೆ. ಆ ಚಿತ್ರದ ಟ್ರೈಲರ್‌, ಸಾಂಗ್‌ ನೋಡಿ ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿ ಅಭಿನಂದಿಸಿದ್ದೆ. ‘ರೇಮೊ’ ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಎಂದು ಪ್ರಾರ್ಥಿಸುತ್ತೇನೆ. ಇಶಾನ್ ಹಾಗೂ ಆಶಿಕಾ ಮುದ್ದಾಗಿ ಕಾಣುತ್ತಿದ್ದಾರೆ” ಎಂದು ನಟ ಶಿವರಾಜಕುಮಾರ್‌ ‘ರೇಮೊ’ ಸಿನಿಮಾಗೆ ಶುಭಹಾರೈಸಿದರು. ಇದು ಮೂರು ವರ್ಷದ ಸಿನಿಮಾ. ಕೋವಿಡ್‌ನಿಂದಾಗಿ ತಡವಾಗಿ ಥಿಯೇಟರ್‌ಗೆ ಬರುತ್ತಿದೆ. “ನನ್ನನ್ನು ಚಿತ್ರರಂಗಕ್ಕೆ ಬರಲು ಹೇಳಿದ್ದು ಶಿವಣ್ಣ. ಇವತ್ತು ಅವರಿಂದಲೇ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಖುಷಿಯಾಗಿದೆ. ನಾನು ಎಷ್ಟೇ ಸಿನಿಮಾ ಮಾಡಬಹುದು. ಆದರೆ ಈ ಸಿನಿಮಾ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ” ಎನ್ನುತ್ತಾರೆ ನಾಯಕ ಇಶಾನ್.

ಟ್ರೈಲರ್‌ ನೋಡಿದಾಗ ನಟಿ ಆಶಿಕಾ ರಂಗನಾಥ್ ಅವರಿಗೆ ಚಿತ್ರದಲ್ಲಿ ಗಟ್ಟಿಯಾದ ಪಾತ್ರವಿರುವುದು ಸ್ಪಷ್ಟವಾಗುತ್ತದೆ. “ಇಷ್ಟು ದಿನ ನನ್ನನ್ನು ಕ್ಯೂಟ್ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಆದರೆ ಈ ಸಿನಿಮಾದಲ್ಲಿನ ಪಾತ್ರ ಭಿನ್ನವಾಗಿದೆ. ಈವರೆಗೆ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್. ಹೀರೋಗೆ ಸಮನಾದ ಪಾತ್ರ” ಎನ್ನುವ ಆಶಿಕಾ ಈ ಅವಕಾಶ ಕಲ್ಪಿಸಿದ ನಿರ್ದೇಶಕರಿಗೆ ಧನ್ಯವಾದ ಹೇಳುತ್ತಾರೆ. ನಿರ್ದೇಶಕ ಪವನ್‌ ಒಡೆಯರ್‌ ಇಲ್ಲಿ ಮ್ಯೂಸಿಕಲ್‌ ಲವ್‌ಸ್ಟೋರಿ ಹೇಳಿದ್ದಾರೆ. ವೈದಿ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಅವರ ಕತೆಗೆ ಹೈಲೈಟ್‌. ಸಿ.ಆರ್‌.ಮನೋಹರ್‌ ನಿರ್ಮಾಣದ ಚಿತ್ರಕ್ಕೆ ನಿರ್ದೇಶಕ ಪವನ್‌ ಒಡೆಯರ್‌ ಪತ್ನಿ ಅಪೇಕ್ಷಾ ಪುರೋಹಿತ್ ವಸ್ತ್ರವಿನ್ಯಾಸ ಮಾಡಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ, ಪಿ.ಗುಣಶೇಖರನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ನವೆಂಬರ್‌ 25ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here