ಕಥಾನಾಯಕ ಹಗಲುಕನಸು ಕಾಣೋ ಹುಡುಗ. ಉಂಡಾಡಿ ಗುಂಡ. ಹುಡುಗಿಯ ಅನ್ವೇಷಣೆಯಲ್ಲಿರುತ್ತಾನೆ. ಅವನ ಜೀವನದಲ್ಲಿ ನಡೆಯುವ ಕೆಲ ತಿರುವುಗಳು ಚಿತ್ರದ ಕಥಾವಸ್ತು. ಗುರುರಾಜ್‌ ಜೇಷ್ಠ ನಿರ್ದೇಶನದ ‘ಹರೀಶ ವಯಸ್ಸು 36’ ನಾಳೆ ತೆರೆಕಾಣುತ್ತಿದೆ.

“ಹಾಸ್ಯವನ್ನೇ ಬೇಸ್ ಆಗಿಟ್ಟುಕೊಂಡು ಎಮೋಷನ್ಸ್‌ ಹೇಳುವ ಪ್ರಯತ್ನವಿದು. ಕಾಮಿಡಿಯ ಜೊತೆಗೆ ಸಂಬಂಧಗಳನ್ನು ಹೇಳಿದ್ದೇವೆ. ನಾಯಕ, ನಾಯಕಿ ಕಾನ್ಸೆಪ್ಟ್ ಬಿಟ್ಟು ಒಂದು ಸಿನಿಮಾ ಅನುಭವ ಹೇಳುವ ಪ್ರಯತ್ನ ಮಾಡಿದ್ದೇವೆ” ಎಂದರು ನಿರ್ದೇಶಕ ಗುರುರಾಜ್‌ ಜೇಷ್ಠ. ಅವರ ಸಾರಥ್ಯದಲ್ಲಿ ತಯಾರಾದ ‘ಹರೀಶ ವಯಸ್ಸು 36’ ಸಿನಿಮಾ ನಾಳೆ ತೆರೆಕಾಣುತ್ತಿದೆ. “ಕಥಾನಾಯಕ ಹಗಲುಕನಸು ಕಾಣೋ ಹುಡುಗ. ಉಂಡಾಡಿ ಗುಂಡ. ಹುಡುಗಿಯ ಅನ್ವೇಷಣೆಯಲ್ಲಿರುತ್ತಾನೆ. ಅವನ ಜೀವನದಲ್ಲಿ ನಡೆಯುವ ಕೆಲ ತಿರುವುಗಳನ್ನು ಇಟ್ಟುಕೊಂಡು ಎಲ್ಲಾ ವಯೋಮಾನದ ಪ್ರೇಕ್ಷಕರಿಗಾಗಿ ನಿರ್ಮಿಸಿರುವ ಕೌಟುಂಬಿಕ ಮನರಂಜನಾತ್ಮಕ ಚಿತ್ರ” ಎಂದು ತಮ್ಮ ಸಿನಿಮಾದ ಕಥಾನಾಯಕನನ್ನು ಅವರು ಪರಿಚಯಿಸಿದರು.

‘ಹರೀಶಣ್ಣಂಗೆ ವಯಸ್ಸು 36, ಮದುವೆ ಆಗಿಲ್ಲಂತ ಬೇಜಾರು’ ಎಂದು ಶುರುವಾಗುವ ಚಿತ್ರದ ಶೀರ್ಷಿಕೆ ಗೀತೆಯನ್ನು ನಟ ಪುನೀತ್‌ ರಾಜಕುಮಾರ್‌ ಹಾಡಿರುವುದು ವಿಶೇಷ. ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಮತ್ತು ಮಂಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಮಂಗಳೂರು ಕನ್ನಡ ಇಲ್ಲಿದೆ. ಯೋಗೀಶ್ ಶೆಟ್ಟಿ ಚಿತ್ರದ ಕಥಾನಾಯಕನಾದರೆ, ಶ್ವೇತ ಅರಹೊಳೆ, ಉಮೇಶ್‌, ರೋಹಿಣಿ ಜಗರಾಮ್, ಪ್ರಕಾಶ್, ಸೌಮ್ಯ ಇತರರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟಿಸಿರುವ ಕನ್ನಡ ಚಿತ್ರರಂಗದ ಹಿರಿಯನಟ ಉಮೇಶ್ ಮಾತನಾಡಿ, “ನಾನು ಹೆಚ್ಚಾಗಿ ಹಾಸ್ಯಪಾತ್ರಗಳನ್ನೇ ಮಾಡುತ್ತ ಬಂದವನು. ಆದರೆ ಈ ಚಿತ್ರದಲ್ಲಿ ಸ್ವಲ್ಪ ಗಂಭೀರವಾದ ಪಾತ್ರವಿದೆ. ಇಲ್ಲಿ ನಾಯಕ ಅಂತೇನೂ ಇಲ್ಲ, ಕಥೆಯೇ ನಾಯಕ, ಲಕ್ಷಿಕಾಂತ್ ಅವರು ಬರೀ ನಿರ್ಮಾಪಕರಷ್ಟೇ ಅಲ್ಲ, ಸಿಂಗರ್ ಕೂಡ. ಒಂದು ಹಾಡನ್ನು ಹಾಡಿದ್ದಾರೆ, ಎಲ್ಲರೂ ಇಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ” ಎಂದರು.

ಚಿತ್ರದ ನಿರ್ಮಾಪಕ ಲಕ್ಷಿಕಾಂತ್ ಮಾತನಾಡಿ, ” ಚಿತ್ರ ಬಿಡುಗಡೆಯಾಗುವ ಖುಷಿ, ಆತಂಕ ಎರಡೂ ಇದೆ. ಉಮೇಶಣ್ಣ ಅವರ ಪುತ್ರ ಇತ್ತೀಚೆಗೆ ತೀರಿಕೊಂಡಿದ್ದರು. ಚಿತ್ರದಲ್ಲೊಂದು ಎಮೋಷನಲ್ ಸೀನ್ ಇದೆ. ಆಗವರು ತಮ್ಮ ಮಗನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಈಚೆಗೆ ಹುಬ್ಬಳ್ಳಿ, ದಾವಣಗೆರೆಗೆ ಪ್ರಚಾರಕ್ಕೆ ಹೋದಾಗ ಜನರ ರಿಯಾಕ್ಷನ್ ನೋಡಿ ತುಂಬಾ ಸಂತೋಷವಾಯಿತು. ವಿತರಕ ವಿಜಯಕುಮಾರ್ ಅವರು ನಮ್ಮ ಜೊತೆ ಇದ್ದು, ಥಿಯೇಟರ್‌ ಸೆಟ್‌ಅಪ್‌ ಮಾಡಿಕೊಡುತ್ತಿದ್ದಾರೆ” ಎಂದರು. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾರಾಮ್ ಮಾತನಾಡಿ, “ಚಿತ್ರದಲ್ಲಿ ಒಳ್ಳೇ ಪಾತ್ರ ಮಾಡಿದ್ದೇನೆ. ಮಂಗಳೂರು ಕನ್ನಡ ಎಷ್ಟು ಮುದ್ದಾಗಿದೆಯೋ ಅಷ್ಟೇ ಸೊಗಸಾಗಿದೆ ಈ ಸಿನಿಮಾ” ಎಂದರು.

LEAVE A REPLY

Connect with

Please enter your comment!
Please enter your name here