ಮುಗ್ಧ ಪ್ರೀತಿಗೆ ಮುಳುವಾಗುವ ಸಂದರ್ಭಗಳನ್ನು ಪೋಣಿಸುತ್ತಲೇ ಸಿನಿಮಾ ಕಟ್ಟುತ್ತಾ ಹೋಗುತ್ತಾರೆ ನಿರ್ದೇಶಕರು. ‘ಬದುಕಿಗೆ ಬೇಕಿರೋದು ಮನುಷ್ಯತ್ವದ ಸೆಲೆ’ ಎನ್ನುವ ಸಂದೇಶವನ್ನು ನಿರ್ದೇಶಕರು ನೇರವಾಗಿ ಹೇಳದೆ, ಪಾತ್ರ ಹಾಗೂ ಸನ್ನಿವೇಶಗಳ ಮೂಲಕ ದಾಟಿಸಲು ಯತ್ನಿಸಿರುವುದು ಚಿತ್ರದ ಹೆಗ್ಗಳಿಕೆ. ವರ್ಷಾಂತ್ಯದಲ್ಲಿ ತೆರೆಕಂಡಿರುವ feel good ಫ್ಯಾಮಿಲಿ ಮೂವಿ ‘ಜಮಾಲಿಗುಡ್ಡ’.

ಸಣ್ಣ ಜುಳುಜುಳು ಸದ್ದಿನೊಂದಿಗೆ ನದಿಯನ್ನು ಸೇರುವ ತೊರೆಯಂತಿದೆ ‘ಜಮಾಲಿಗುಡ್ಡ’. ನಿರ್ದೇಶಕ ಕುಶಾಲ್‌ ಗೌಡ ಸರಳವಾದ ಕತೆ ಮಾಡಿಕೊಂಡು ಸಾಧ್ಯವಾದಷ್ಟೂ ಸರಳವಾಗಿಯೇ ನಿರೂಪಿಸಲು ಯತ್ನಿಸಿದ್ದಾರೆ. ಇಲ್ಲಿ ಅಬ್ಬರಿಸುವ ವಿಲನ್‌ಗಳಿಲ್ಲ. ಜಿಗುಪ್ಸೆ ಹುಟ್ಟಿಸುವಂತೆ ಹೆಣೆದಿರುವ ಸನ್ನಿವೇಶಗಳಿಲ್ಲ. ಮುಗ್ಧ ಪ್ರೀತಿಗೆ ಮುಳುವಾಗುವ ಸಂದರ್ಭಗಳನ್ನು ಪೋಣಿಸುತ್ತಲೇ ಸಿನಿಮಾ ಕಟ್ಟುತ್ತಾ ಹೋಗುತ್ತಾರವರು. ‘ಬದುಕಿಗೆ ಬೇಕಿರೋದು ಮನುಷ್ಯತ್ವದ ಸೆಲೆ’ ಎನ್ನುವ ಸಂದೇಶವನ್ನು ನಿರ್ದೇಶಕರು ನೇರವಾಗಿ ಹೇಳದೆ, ಪಾತ್ರ ಹಾಗೂ ಸನ್ನಿವೇಶಗಳ ಮೂಲಕ ದಾಟಿಸಲು ಯತ್ನಿಸಿರುವುದು ಚಿತ್ರದ ಹೆಗ್ಗಳಿಕೆ.

ಚುಕ್ಕಿ ಪಾತ್ರದ ಮೂಲಕ ಸಿನಿಮಾದ ಕತೆ ತೆರೆದುಕೊಳ್ಳುತ್ತದೆ. ಹರೆಯದ ಯುವತಿ ತನ್ನ ಬದುಕಿನಲ್ಲಿ ಕಂಡ ಹೀರೋ ಬಗ್ಗೆ ಹೇಳುತ್ತಾ ಹೋಗುತ್ತಾಳೆ. ಚಿತ್ರಕ್ಕೆ ಬೇಕಾದ ಕುತೂಹಲಕಾರಿ ಅಡಿಪಾಯ ಆರಂಭದಲ್ಲೇ ಸಿಗುತ್ತದೆ. ‘ಹಿರೋಶಿಮಾ – ನಾಗಸಾಕಿ’ ಪಾತ್ರಗಳು ಒಂದು ವರ್ಗದ ಬದುಕಿನ ತಲ್ಲಣಗಳನ್ನು ಹೇಳಿದರೆ, ಚುಕ್ಕಿ ಬದುಕಿನ ಸುತ್ತಲಿನ ಪಾತ್ರಗಳು ಇನ್ನೊಂದು ವರ್ಗವನ್ನು ಪ್ರತಿನಿಧಿಸುತ್ತವೆ. ಕುಟುಂಬಕ್ಕಾಗಿ ತನ್ನ ಬದುಕು ಮುಡಿಪಿಡುವ ಚಿತ್ರದ ನಾಯಕಿಯದ್ದು ಮತ್ತೊಂದು ಟ್ರ್ಯಾಕ್‌. ಹೀಗೆ ವಿವಿಧ ಸ್ತರಗಳ ವ್ಯಕ್ತಿತ್ವಗಳನ್ನು ಮುಖಾಮುಖಿಯಾಗಿಸುತ್ತಾ ಪ್ರೇಕ್ಷಕರನ್ನು ಒಳಗೊಳ್ಳುತ್ತಾ ಸಾಗುತ್ತದೆ ಸಿನಿಮಾ.

ಇತ್ತೀಚಿನ ಸಿನಿಮಾಗಳಲ್ಲಿ ಕ್ರೌರ್ಯ, ಹಿಂಸೆಯನ್ನು ವಿಜೃಂಭಿಸುವ ಪರಿಪಾಠ ಹೆಚ್ಚಾಗಿದೆ. ನೇರವಾಗಿ ಮಚ್ಚು ಝಳಪಿಸುವುದು ಒಂದು ಬಗೆಯಾದರೆ, ಅಸಹಾಯಕ ಪಾತ್ರಗಳನ್ನು ಸೃಷ್ಟಿಸಿ ಪ್ರೇಕ್ಷಕರ ಮನಸ್ಸಿಗೆ ಘಾಸಿ ಉಂಟಾಗುವಂತೆ ಚಿತ್ರಿಸುವುದು ಮತ್ತೊಂದು ಬಗೆ. ಸೂಕ್ಷ್ಮವಾಗಿ ಚಿತ್ರಿಸಬಹುದಾದ ಅತ್ಯಾಚಾರ, ದೌರ್ಜನ್ಯದ ಸನ್ನಿವೇಶಗಳು ನಿರ್ದೇಶಕರ ಕಲ್ಪನೆಯಲ್ಲಿ ವಿಕ್ಷಿಪ್ತವಾಗಿ ಚಿತ್ರಣಗೊಳ್ಳುತ್ತವೆ. ಸ್ಟಾರ್‌ ನಟರು, ಸ್ಟಾರ್‌ ನಿರ್ದೇಶಕರೆನಿಸಿಕೊಂಡವರೂ ಕೂಡ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳರು. ಫ್ಯಾಮಿಲಿ ಎಂಟರ್‌ಟೇನರ್‌ ಎಂದು ಬಿಂಬಿಸಿಕೊಳ್ಳುವ ಇಂತಹ ಸಿನಿಮಾಗಳು ನಿರಾಸೆಯನ್ನು ಉಂಟುಮಾಡುವ ಸಂದರ್ಭಗಳೇ ಹೆಚ್ಚು. ಸ್ಟಾರ್‌ ನಟರನ್ನು ನಂಬಿ ಫ್ಯಾಮಿಲಿ ಆಡಿಯನ್ಸ್‌ ಥಿಯೇಟರ್‌ಗೆ ಹೋಗುತ್ತಾರೆ. ಅಲ್ಲಿ ಬೇಸರವಾದರೆ ಮತ್ತೆ ಥಿಯೇಟರ್‌ಗೆ ಹೋಗಲು ಅವರು ಹೇಗೆ ಮನಸ್ಸು ಮಾಡುತ್ತಾರೆ!? ಈ ಹಾದಿಯಲ್ಲಿ ‘ಜಮಾಲಿಗುಡ್ಡ’ದ ನಿರ್ದೇಶಕರದ್ದು ಎಚ್ಚರಿಕೆಯ ನಡೆ. ಚಿತ್ರದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹೆಣ್ಣುಮಗುವಿನ ಪಾತ್ರವನ್ನು ಅವರು ಪ್ರೀತಿಯಿಂದ, ಆಪ್ತವಾಗಿ ಚಿತ್ರಿಸಿದ್ದಾರೆ.

ಇನ್ನು ಪಾತ್ರಧಾರಿಗಳ ಬಗ್ಗೆ ಹೇಳುವುದಾದರೆ ನಟ ಧನಂಜಯ ತಮ್ಮ ಪಾತ್ರವನ್ನಿಲ್ಲಿ ಅಂಡರ್‌ಪ್ಲೇ ಮಾಡಿದ್ದಾರೆ. ಅದು ಈ ಪಾತ್ರಕ್ಕೆ ಅಗತ್ಯವೂ ಇತ್ತು. ಧನಂಜಯ ತಮ್ಮ ಪಾತ್ರವನ್ನು ಅರ್ಥ ಮಾಡಿಕೊಂಡಿರುವುದು ಅವರ ಬಾಡಿ ಲಾಂಗ್ವೇಜ್‌ ಮತ್ತು ಡೈಲಾಗ್‌ ಡೆಲಿವರಿಯಿಂದ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಈ ವರ್ಷ ಅವರ ಹಲವು ಸಿನಿಮಾಗಳು ತೆರೆಕಂಡಿದ್ದು, ‘ಜಮಾಲಿಗುಡ್ಡ’ ಪಾತ್ರಕ್ಕೆ ಹೆಚ್ಚಿನ ಚಪ್ಪಾಳೆ ಸಿಗಬೇಕು. ನಾಯಕಿ ಅದಿತಿ ಅವರಿಗೂ ಇದು ವೃತ್ತಿಬದುಕಿನ ಅಪರೂಪದ ಪಾತ್ರ. ಅವರು ಜವಾಬ್ದಾರಿಯಿಂದಲೇ ಪಾತ್ರ ನಿಭಾಯಿಸಿದ್ದಾರೆ. ತೆರೆಯ ಮೇಲೆ ಪ್ರೇಮಿಗಳಾಗಿ ಧನಂಜಯ – ಅದಿತಿ ಜೋಡಿ ಮುದ್ದಾಗಿ ಕಾಣಿಸುತ್ತದೆ. ಪ್ರೇಮಿಗಳ ಸಲ್ಲಾಪದ ಕೆಲವು ಸನ್ನಿವೇಶಗಳು ಮುದನೀಡುತ್ತವೆ. ಅನೂಪ್‌ ಸಿಳೀನ್‌ ಹಿನ್ನೆಲೆ ಸಂಗೀತ, ಕಾರ್ತಿಕ್‌ ಛಾಯಾಗ್ರಹಣ, ಮಾಸ್ತಿ ಅವರ ಸಂಭಾಷಣೆ, ಹರೀಶ್‌ ಕೊಮ್ಮೆ ಸಂಕಲನ ಚಿತ್ರದ ಅಂದ ಹೆಚ್ಚಿಸಿವೆ. ವರ್ಷಾಂತ್ಯದಲ್ಲಿ ತೆರೆಕಂಡಿರುವ feel good ಫ್ಯಾಮಿಲಿ ಮೂವಿ ‘ಜಮಾಲಿಗುಡ್ಡ’.

LEAVE A REPLY

Connect with

Please enter your comment!
Please enter your name here