ಹಣ ಮಾಡುವ ವಿಷಯದಲ್ಲಿ ದಕ್ಷಿಣದ ಮಾಸ್ ಎಂಟರ್‌ಟೇನರ್‌ಗಳು ಉತ್ತರದಲ್ಲಿ ಗೆದ್ದಿವೆಯಾದರೂ, ಒಟಿಟಿ ಕಾಂಟೆಂಟ್ ಸೃಷ್ಟಿಯಲ್ಲಿ ಬಾಲಿವುಡ್ ತೀರಾ ಹಿಂದೇನೂ ಬಿದ್ದಿಲ್ಲ. ಈ ವರ್ಷದ ಕಮರ್ಷಿಯಲ್ ಚಿತ್ರಗಳ ಸೋಲು, ಅಲ್ಲಿ ಹೊಸ ಅಲೆಗೆ ಕಾರಣವಾದರೆ ಅದು ಒಟ್ಟಾರೆ ಲೆಕ್ಕಾಚಾರದಲ್ಲಿ ನಷ್ಟವಂತೂ ಅಲ್ಲ.

ಕೋವಿಡ್ ಪ್ರಹಾರಕ್ಕೆ ತತ್ತರಿಸಿದ್ದ ಚಿತ್ರೋದ್ಯಮ, ಈ ವರ್ಷ ಮೈ ಕೊಡವಿ ಎದ್ದು ನಿಲ್ಲಲು ಯತ್ನಿಸಿತು. ಆದರೆ, ಕಳೆದೆರಡು ವರ್ಷಗಳಲ್ಲಿ ಪ್ರೇಕ್ಷಕರ ಅಭಿರುಚಿ, ಆದ್ಯತೆಗಳು ಎಷ್ಟರಮಟ್ಟಿಗೆ ಬದಲಾಗಿ ಬಿಟ್ಟಿದ್ದವೆಂದರೆ ಭಾರತೀಯ ಚಿತ್ರೋದ್ಯಮಕ್ಕೆ ಊಹಿಸದೇ ಇರದ ಹೊಸ ಸವಾಲುಗಳು ಎದುರಾದವು. ನಿಧಾನವಾಗಿ ಹರಡುತ್ತಿದ್ದ ಒಟಿಟಿ ಹವಾ, ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಬಿರುಗಾಳಿಯ ವೇಗ ಪಡೆಯಿತು. ಅಂಗೈ ತುದಿಯಲ್ಲೇ ದೊರಕುವ, ಅಗಾಧ ಆಯ್ಕೆಗಳನ್ನು ಹೊಂದಿರುವ, ಕಡಿಮೆ ವೆಚ್ಚದ, ಹೆಚ್ಚು ಸುಲಭ ಮತ್ತು ಆರಾಮದಾಯಕವೆನಿಸುವ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರು ಸಿನಿಮಾ ನೋಡುವ ವಿಧಾನದಲ್ಲಿ ಕ್ರಾಂತಿಯನ್ನೇ ತಂದವು. ಅಷ್ಟೇ ಅಲ್ಲ, ಅದುವರೆಗೆ ತಮಗೆ ಅರ್ಥವಾಗುವ ಭಾಷೆಗಳ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರೂ ಕೂಡ, ಡಬ್ಬಿಂಗ್ ನಿಂದಾಗಿ ಹೊಸ ಭಾಷೆಯ, ಹೊಸ ಪ್ರದೇಶದ ಸಿನಿಮಾಗಳಿಗೆ ತೆರೆದುಕೊಂಡರು. ಈ ಬದಲಾವಣೆಗಳು ಹೆಚ್ಚು ಪರಿಣಾಮ ಬೀರಿದ್ದು ಮೇಲ್ನೋಟಕ್ಕಂತೂ ಬಾಲಿವುಡ್ ಮೇಲೆ.

ಹಿಂದಿಯಲ್ಲಿ ರಿಮೇಕ್ ಆಗುವ ದಕ್ಷಿಣದ ಹಿಟ್ ಸಿನಿಮಾಗಳಿಗೆ ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಇದುವರೆಗೆ ದೊಡ್ಡ ಮಾರುಕಟ್ಟೆ ಇತ್ತು. ಜೊತೆಗೆ ಈ ಎಲ್ಲಾ ರಿಮೇಕ್ ಚಿತ್ರಗಳು ಸೂಪರ್ ಸ್ಚಾರ್‌ಗಳನ್ನೊಳಗೊಂಡ, ದೊಡ್ಡ ಬಜೆಟ್ ಸಿನಿಮಾಗಳಾಗಿದ್ದರಿಂದ ಬಾಲಿವುಡ್ ಆರ್ಥಿಕತೆ ಇವುಗಳನ್ನು ಬಹುಮಟ್ಟಿಗೆ ಅವಲಂಬಿಸಿದ್ದವು. ಬಾಹುಬಲಿ – 1 ರಿಂದ ಶುರುವಾದ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಈ ವರ್ಷ ವೇಗ ಪಡೆದುಕೊಂಡು, ದಕ್ಷಿಣದ ದೊಡ್ಡ ಕಮರ್ಷಿಯಲ್ ಸಿನಿಮಾಗಳೆಲ್ಲಾ ಡಬ್ಬಿಂಗ್ ರೂಪದಲ್ಲೇ ಹಿಂದಿ ಭಾಷಿಕರಿಗೆ ಮನರಂಜನೆ ನೀಡಿದವು. ಹಿಂದಿ ಸಿನಿಮಾ ವಾಹಿನಿಗಳನ್ನು ದಕ್ಷಿಣದ ಡಬ್ಬಿಂಗ್ ಚಿತ್ರಗಳು ಆವರಿಸಿ ಕೆಲವು ವರ್ಷಗಳೇ ಕಳೆದಿವೆ. ಇದರಿಂದಾಗಿ ದಕ್ಷಿಣದ ಸಿನಿಮಾ, ಸಂಸ್ಕೃತಿ, ಹೀರೋಗಳ ಮುಖ ಇವೆಲ್ಲಾ ಒಂದು ಮಟ್ಟಿಗೆ ಉತ್ತರದ ಜನತೆಗೆ ಪರಿಚಯವಾಗಿರುವುದು ಈ ಬೆಳವಣಿಗೆಗೆ ನೆರವಾಯಿತು ಎನಿಸುತ್ತದೆ. ಹಿಂದಿಯ ರಿಮೇಕ್ ಉದ್ಯಮಕ್ಕೆ ಇದು ದೊಡ್ಡ ಮಟ್ಟದ ಹೊಡೆತ ನೀಡಿದೆ.

ಈ ವರ್ಷ ಹಿಂದಿಗೆ ರಿಮೇಕ್ ಆದ ಇತರ ಭಾರತೀಯ ಭಾಷೆಯ ಹಾಗೂ ಹೊರದೇಶಗಳ ಬಹುತೇಕ ಎಲ್ಲಾ ಚಿತ್ರಗಳು ನೆಲಕಚ್ಟಿದವು. ಬಚ್ಚನ್ ಪಾಂಡೆ, ಹಿಟ್, ಜೆರ್ಸಿ, ಲಾಲ್ ಸಿಂಗ್ ಚಡ್ಡಾ, ವಿಕ್ರಮ್ ವೇದ ಹೀಗೆ ಬಹುನಿರೀಕ್ಷಿತ ಚಿತ್ರಗಳು ಬಾಕ್ಸ್ ಅಫೀಸ್‌ನಲ್ಲಿ ಏನೂ ಸಾಧಿಸಲಿಲ್ಲ. ಸೀಕ್ವೇಲ್ ಎಂಬ ಕಾರಣಕ್ಕೋ ಏನೋ ದೃಶ್ಯಂ – 2 ಮಾತ್ರ ಏಕೈಕ ಹಿಟ್ ರಿಮೇಕ್ ಚಿತ್ರ ಎನಿಸಿಕೊಂಡಿತು.

ಬಾಲಿವುಡ್ ಸೋಲಿನ ಸರಪಳಿ ಅಲ್ಲಿಗೆ ನಿಲ್ಲದೆ ಈ ವರ್ಷ ಬಂದ ಬಹುತೇಕ ಸ್ಚಾರ್ ನಟರ ಚಿತ್ರಗಳೂ ಸೋಲುಂಡವು. ಸಾಮ್ರಾಟ್ ಪೃಥ್ವಿರಾಜ್, ದಾಕಡ್, ರಾಮ್ ಸೇತು, ಶಂಶೇರ ಸೇರಿದಂತೆ ಗೆಲುವಿನ ನಿರೀಕ್ಷೆಯಲ್ಲಿದ್ದ ಚಿತ್ರಗಳು ನಿರಾಸೆ ತಂದವು. ಈ ಚಿತ್ರಗಳ ಸೋಲಿಗೆ ಸ್ಟಾರ್ ನಟರು ಪಡೆಯುವ ಭಾರೀ ಮೊತ್ತದ ಸಂಭಾವನೆಯಿಂದಾಗಿ ಹೆಚ್ಚಿದ ಸಿನಿಮಾ ಬಜೆಟ್ ಕಾರಣ ಎಂಬ ಅಸಹನೆಯೂ ಕೇಳಿಬಂತು. ಅದರ ಜೊತೆಗೆ, ದಕ್ಷಿಣದ ಲಾರ್ಜರ್ ದ್ಯಾನ್ ಲೈಫ್ ಸಿನಿಮಾಗಳು ಮತ್ತು ಪಾತ್ರಗಳಿಗೆ ಮನಸೋತಿದ್ದ ಪ್ರೇಕ್ಷಕರನ್ನು ಸೆಳೆಯುವುದು ಇವುಗಳಿಗೆ ಸಾಧ್ಯವಾಗಲಿಲ್ಲ ಎಂಬುದು ಕಾರಣವಾಗಿತ್ತು. ಈ ಸಿನಿಮಾಗಳು ಕತೆ, ಮೇಕಿಂಗ್, ಅದ್ಧೂರಿನತನದ ವಿಷಯದಲ್ಲಿ ಸಪ್ಪೆ ಎನಿಸುವ ಜೊತೆಗೆ ಅವುಗಳ ಬಜೆಟನ್ನು ಸಮರ್ಥಿಸುವ ರೀತಿಯಲ್ಲಿ ಇರಲಿಲ್ಲ ಎಂಬುದು ಅಷ್ಟೇ ನಿಜವಾಗಿತ್ತು.

ಈ ವರ್ಷದಲ್ಲಿ ಥಿಯೇಟರಿನಲ್ಲಿ ಯಶಸ್ಸು ಕಂಡ ಹಿಂದಿ ಸಿನಿಮಾಗಳ ಪಟ್ಟಿ ತೀರಾ ಸಣ್ಣದೇ. ಸಣ್ಣ ಬಜೆಟ್ಟಿನ ದಿ ಕಾಶ್ಮೀರಿ ಫೈಲ್ಸ್ ಅತೀ ದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗಿ ಹೊರಹೊಮ್ಮಿತು. ಈ ಸಿನಿಮಾ ಥಿಯೇಟರ್‌ಗಳು ಮತ್ತೆ ಮಾಸ್ ಬುಕಿಂಗ್ ನೋಡುವಂತೆ ಮಾಡಿತು. ಹಲವು ಸಿನಿಮೇತರ ಕಾರಣಗಳು ಮತ್ತು ಈ ಚಿತ್ರದ ಸುತ್ತ ಎದ್ದ ವಿವಾದವೂ ಕಾಶ್ಮೀರಿ ಫೈಲ್ಸ್ ಯಶಸ್ಸಿಗೆ ನೆರವಾದವು. ಗಂಗೂಬಾಯಿ ಕಾತೇವಾಡಿ, ಬೂಲ್ ಬುಲಯ್ಯ – 2 ಹಣ ಮಾಡಿ ಹಿಂದಿ ಚಿತ್ರರಂಗಕ್ಕೆ ಆಕ್ಸಿಜನ್ ಒದಗಿಸಿದವು. ನಂತರದಲ್ಲಿ ಬಂದ ಬಹುನಿರೀಕ್ಷಿತ, ಬಹುತಾರಾಗಣದ, ಮಹಾತ್ವಾಕಾಂಕ್ಷಿ ಚಿತ್ರ ಬ್ರಹ್ಮಾಸ್ತ್ರ ಗಲ್ಲಾ ಪೆಟ್ಟಿಗೆಯಲ್ಲಿ ಕೆಲವು ದಾಖಲೆ ನಿರ್ಮಿಸಿದ್ದು ಬಾಲಿವುಡ್ ಗೆ ಸಿಕ್ಕ ದೊಡ್ಡ ರಿಲೀಫ್.

ಇನ್ನು ಹಿಂದಿ ಬೆಲ್ಟ್‌ನಲ್ಲಿ ಹಣ ಮಾಡಿದ್ದೆಲ್ಲಾ ದಕ್ಷಿಣದ ಡಬ್ಡ್ ಚಿತ್ರಗಳೇ. ಕೆಜಿಎಫ್ 2, RRR, ಪಿಎಸ್ – 1, ಚಾರ್ಲಿ 777, ಕಾಂತಾರ, ಹಿಂದಿನ ವರ್ಷದ ಗಳಿಕೆ ಮುಂದುವರಿಸಿದ್ದ ಪುಷ್ಪ ಹೀಗೆ ಹಣ ಬಾಚಿದ್ದು, ಕ್ರೇಜ್ ಹುಟ್ಚಿಸಿದ್ದು ದಕ್ಷಿಣದ ಸಿನಿಮಾಗಳು. ಭಾಷೆಯ ಗಡಿಗಳನ್ನು, ಮಿತಿಗಳನ್ನು ಮೀರಿದ ವರ್ಷವಾಗಿ 2022 ಭಾರತೀಯ ಚಿತ್ರರಂಗಕ್ಕೆ ವಿಶೇಷವಾಗಿ ಉಳಿಯಲಿದೆ. ಈ ನಡುವೆ, ಬಾಯ್ಕಾಟ್‌ ಬಾಲಿವುಡ್ ಟ್ರೆಂಡ್ ಸಾಕಷ್ಟು ಸದ್ದು ಮಾಡಿದರೂ, ಅದು ಜನರನ್ನು ಥಿಯೇಟರ್‌ನಿಂದ ದೂರ ಇಟ್ಟವು ಎಂಬುದಕ್ಕೆ ಆಧಾರವಿಲ್ಲ. ಏಕೆಂದರೆ, ಬಾಯ್ಕಾಟ್‌ ಕರೆಗೆ ಗುರಿಯಾಗಿದ್ದ ಬ್ರಹ್ಮಾಸ್ತ್ರ ಹಣ ಮಾಡಿದರೆ, ಸೋಷಿಯಲ್ ಮೀಡಿಯಾದಲ್ಲಿ ಬೆಂಬಲ ಗಳಿಸಿದ್ದ ರಾಮಸೇತು ಹಣ ಕಳೆದುಕೊಂಡಿತು.

ಹಾಗಿದ್ದರೆ, ಬಾಲಿವುಡ್ ತನ್ನ ಮ್ಯಾಜಿಕ್ ಕಳೆದುಕೊಂಡಿದೆಯೇ? ಬಹುತೇಕ ಮಂದಿ ಈಗ ಥಿಯೇಟರ್‌ನಲ್ಲಿ ನೋಡಿದರೆ ಮಾತ್ರ ಸರಿಯಾದ ಸಿನಿಮ್ಯಾಟಿಕ್ ಅನುಭವ ಸಿಗಲು ಸಾಧ್ಯ ಎಂಬಂತಹ ಚಿತ್ರಗಳಿಗಾಗಿ ಮಾತ್ರ ಚಿತ್ರಮಂದಿರದತ್ತ ಹೋಗುತ್ತಾರೆ. ವಿಎಫ್ಎಕ್ಸ್, ಆಡಿಯೋ ಎಫೆಕ್ಟ್ ಗಳೇ ಜೀವಾಳವಾಗಿರುವ ಅದ್ದೂರಿ ಆ್ಯಕ್ಷನ್ ಚಿತ್ರಗಳ ಬಾಕ್ಸ್ ಆಫೀಸ್ ಗೆಲುವಿಗೆ ಇದೇ ಕಾರಣ. ಉಳಿದ ಸಿನಿಮಾಗಳ ಒಟಿಟಿ ಬಿಡುಗಡೆಗಾಗಿ ಕಾಯುತ್ತಾರೆ. ಇಂತಹ ಜನರನ್ನು ಥಿಯೇಟರ್ ಕಡೆಗೆ ಎಳೆದು ತರುವ ಸಿನಿಮಾಗಳು ಹೆಚ್ಚಾಗಿ ಹಿಂದಿಯಲ್ಲಿ ಬರಲಿಲ್ಲ ಮತ್ತು ಸರಿಯಾದ ಚಿತ್ರಗಳ ಬೆಂಬಲವಿಲ್ಲದ ಕಾರಣ ದೊಡ್ಡ ನಾಯಕನಟರಿಗೂ ತಮ್ಮ ಅಭಿಮಾನಿಗಳನ್ನು ಥಿಯೇಟರ್‌ಗೆ ಕರೆ ತರುವುದು ಸಾಧ್ಯವಾಗಿಲ್ಲ. ಇನ್ನು ದೊಡ್ಡ ಓಪನಿಂಗ್‌ಗೆ ಹೆಸರಾದ ಸಲ್ಮಾನ್ ಖಾನ್, ಶಾರುಕ್ ಖಾನ್ ಸಿನಿಮಾಗಳು ಈ ವರ್ಷ ಬಿಡುಗಡೆಯಾಗಲೇ ಇಲ್ಲ.

ಹೀಗಾಗಿ, ಬಾಲಿವುಡ್‌ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದ್ದು ನಿಜವಾದರೂ ದೊಡ್ಡ ಸಿನಿಮಾಗಳಲ್ಲಿ ಕಳೆದುಕೊಂಡ ಮಾನವನ್ನು ಒಟಿಟಿಯಲ್ಲಿ ಬಿಡುಗಡೆಗೊಂಡ ಸಣ್ಣ ಬೆಜೆಟ್‌ನ ಹಿಂದಿ ಸಿನಿಮಾಗಳು ಸ್ವಲ್ಪಮಟ್ಟಿಗೆ ಮರಳಿ ತಂದುಕೊಟ್ಟವು. ಈ ವರ್ಷ ಡಾರ್ಲಿಂಗ್ಸ್, ಮೋನಿಕಾ ಓ ಮೈ ಡಾರ್ಲಿಂಗ್, ಫ್ರೆಡ್ಡಿ, ದಸ್ವಿ, ಖಾಲಾ, ಗೆಹರಾಯಿಯಾ, ಮಜಾ ಮಾ ಹೀಗೆ ಹಲವಾರು ಚಿತ್ರಗಳು ಚಿತ್ರರಸಿಕರ ಗಮನ ಸೆಳೆದವು. ಇವಲ್ಲಿ ಹೆಚ್ಚಿನವು ಹೊಸ ರೀತಿಯ ಕತೆಗಳನ್ನು, ಹೊಸ ರೀತಿಯಲ್ಲಿ ಹೇಳಿದ್ದವು. ಸಿನಿಮಾದ ವಸ್ತು, ವಿಷಯ, ನಿರೂಪಣೆಯಲ್ಲಿ ಅಸಂಪ್ರದಾಯಿಕ ಎನಿಸುವ ವಿಧಾನಗಳನ್ನು ಅನುಸರಿಸಿ ಯಶಸ್ಸು ಕಂಡವು ಎಂಬುದು ಗಮನಾರ್ಹ. ಇದೇ ಸಾಲಿನಲ್ಲಿ ಜನಪ್ರಿಯತೆ ಗಳಿಸಿರುವ ಹಿಂದಿ ಸೀರೀಸ್ ಗಳನ್ನು ಹೆಸರಿಸಬಹುದು. ಹಳೆಯ ಪಂಚಾಯತ್, ಡೆಲ್ಲಿ ಕ್ರೈಂ, ಗುಲ್ಲಕ್, ಅಪಹರಣ್ ಮುಂತಾದವು ತಮ್ಮ ಹೊಸ ಸೀಸನ್‌ಗಳ ಮೂಲಕ ಯಶಸ್ಸಿನ ಓಟ ಮುಂದುವರಿಸಿದರೆ, ರಾಕೆಟ್ ಬಾಯ್ಸ್, ಮಾಯಿ, ಅರಣ್ಯಕ್ ಮುಂತಾದ ಹೊಸ ಸೀರೀಸ್‌ಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. ಹೀಗಾಗಿ, ಒಟಿಟಿಯಲ್ಲಿ ಹಿಂದಿ ಚಿತ್ರೋದ್ಯಮ ಹಲವು ಪ್ರಯೋಗಗಳನ್ನು ಮಾಡಿ ಕೆಲ ಮಟ್ಟಿನ ಯಶಸ್ಸು ಕಂಡಿತು ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

ಜೊತೆಗೆ, ಒಟಿಟಿ ಪ್ಲಾಟ್ ಫಾರ್ಮ್‌ಗಳು ಪ್ರತಿಭಾವಂತ ನಟರಿಗೆ ಸೂಕ್ತ ವೇದಿಕೆಯಾಗಿ ಮಾರ್ಪಾಡುಗುತ್ತಿರುವುದಲ್ಲದೆ, ಥಿಯೇಟರ್ ಬಿಡುಗಡೆಗೆ ಕಷ್ಟಪಡಬೇಕಾದ ಮಹಿಳಾ ಪ್ರಧಾನ ಚಿತ್ರಗಳಿಗೂ ಒಳ್ಳೆಯ ಅವಕಾಶ ಒದಗಿಸುತ್ತಿದೆ. ಈ ವರ್ಷ ಬಾಲಿವುಡ್‌ನ ಖ್ಯಾತನಾಮರು ಒಟಿಟಿ ಮೆಟ್ಟಿಲು ಹತ್ತಿದರು. ಮಾಧುರಿ ದೀಕ್ಷಿತ್, ಜ್ಯೂಹಿ ಚಾವ್ಲಾ, ಅಜಯ್ ದೇವಗನ್, ಸುನಿಲ್ ಶೆಟ್ಟಿ ಹೀಗೆ ಹಲವು ನಟ ನಟಿಯರು ಒಟಿಟಿಯ ಭವಿಷ್ಯದ ಸಾಧ್ಯತೆಗಳನ್ನು ಅರಿತು ಅಲ್ಲಿಗೆ ಅಡಿಗಾಲಿಟ್ಟರು.

2022ರಲ್ಲಿ ಚಿತ್ರೋದ್ಯಮದ ಜಮಾಬಂದಿ ಮಾಡುವಾಗ ಬದಲಾದ, ಬದಲಾಗುತ್ತಿರುವ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಣ ಮಾಡುವ ವಿಷಯದಲ್ಲಿ ದಕ್ಷಿಣದ ಮಾಸ್ ಎಂಟರ್‌ಟೇನರ್‌ಗಳು ಗೆದ್ದಿವೆಯಾದರೂ, ಒಟಿಟಿ ಕಾಂಟೆಂಟ್ ಸೃಷ್ಟಿಯಲ್ಲಿ ಬಾಲಿವುಡ್ ತೀರಾ ಹಿಂದೇನೂ ಬಿದ್ದಿಲ್ಲ. ಈ ವರ್ಷದ ಕಮರ್ಷಿಯಲ್ ಚಿತ್ರಗಳ ಸೋಲು, ಅಲ್ಲಿ ಹೊಸ ಅಲೆಗೆ ಕಾರಣವಾದರೆ ಅದು ಒಟ್ಟಾರೆ ಲೆಕ್ಕಾಚಾರದಲ್ಲಿ ನಷ್ಟವಂತೂ ಅಲ್ಲ. ಮುಂದಿನ ಕೆಲ ದಿನಗಳಲ್ಲೇ ಹಲವಾರು ಭಾರೀ ಚಿತ್ರಗಳು ಸಾಲುಸಾಲಾಗಿ ಬಿಡುಗಡೆಗೆ ಸಿದ್ಧವಾಗಿ ನಿಂತಿರುವಾಗ 2023ರಲ್ಲಿ ಬಾಲಿವುಡ್ ಭವಿಷ್ಯ ಹೇಗಿರುತ್ತದೆ ಎಂಬುದು ಕುತೂಹಲ ಕೆರಳಿಸಿರುವ ಸಂಗತಿಯಾಗಿದೆ.

LEAVE A REPLY

Connect with

Please enter your comment!
Please enter your name here