ತೆಲುಗು ಸಿನಿಮಾ | ಪುಷ್ಪ
‘ಪುಷ್ಪ’, ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್ ಸಿನಿಮಾ. ಈ ಒಂದು ಕಾರಣದಿಂದಲೇ ಶುರುವಾದಾಗಿನಿಂದಲೇ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ‘ಕೆಜಿಎಫ್’, ‘ಬಾಹುಬಲಿ’ ರೇಂಜ್‌ನ ಸಿನಿಮಾ ಎಂಬ ಹೋಪ್, ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ. ಆದರೆ ‘ಬಾಹುಬಲಿ’ ಆಗಲಿ, ‘ಕೆಜಿಎಫ್’ ಆಗಲಿ ಆ ಸಿನಿಮಾಗಳನ್ನ ಮಾಡುವಾಗ ಆ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳದೆ. ಒಂದೊಳ್ಳೆಯ ಸಿನಿಮಾ ಮಾಡಬೇಕು ಅಂತಷ್ಟೇ ಆಯಾ ಟೀಮ್ ಮಾಡಿರ್ತಾರೆ. ಆ ನಂತರ ರಿಸಲ್ಟ್ ನಿರೀಕ್ಷೆಗೂ ಮೀರಿ ಬಂದಿರುತ್ತೆ ಅದು ಪಾಸ್ಟ್. ಇನ್ನು ‘ಪುಷ್ಪ’ ಸಿನಿಮಾಗೆ ಬರೋದಾದ್ರೆ? ಈ ಸಿನಿಮಾನ ‘ಕೆಜಿಎಫ್’ ಅಥವಾ ‘ಬಾಹುಬಲಿ’ ಪಕ್ಕ ಇಟ್ಟು ನೋಡಲೇಬಾರದ ಸಿನಿಮಾ. ಆ ರೀತಿ ನಿರೀಕ್ಷೆ ಇಟ್ಕೊಂಡು ಖಂಡಿತ ಪ್ರೇಕ್ಷಕರು ಥಿಯೇಟರ್ ಕಡೆ ಹೋಗಲೇಬಾರದು. ಒಂದು ಹೊಸ ಸಿನಿಮಾ, ಅಲ್ಲು ಅರ್ಜುನ್ ಸಿನಿಮಾ, ಕಮರ್ಷಿಯಲ್ ಸಿನಿಮಾ ಅಂತ ಮನರಂಜನೆ ಬಯಸಿ ಥಿಯೇಟರ್ ಕಡೆ ಹೋದರೆ ಒಂದು ಮಟ್ಟಕ್ಕೆ ‘ಪುಷ್ಪ’ ಘಮಘಮಿಸಬಹುದೆನೋ?
ಈ ಸಿನಿಮಾಗೆ ‘ಪುಷ್ಪ’ ಟೈಟಲ್ ಇಟ್ಟಾಗಲೇ ಇದರಲ್ಲಿ ಅಲ್ಲು ಅರ್ಜುನ್ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಎಂಬುದು ಜಗಜಾಹೀರಾಗಿತ್ತು. ಅಷ್ಟಕ್ಕೂ ಈ ಪುಷ್ಪರಾಜ್ ಯಾರು? ಅವನ ಕೆಲಸ ಏನು? ಶೇಷಾಚಲಂ ಕಾಡಿನಲ್ಲಿ ರಕ್ತ ಚಂದನ ಸಾಗಿಸೋ ಒಬ್ಬ ಕೂಲಿ ಕಾರ್ಮಿಕ ‘ಪುಷ್ಪ’. ತನ್ನ ಶಕ್ತಿ ಹಾಗೂ ಯುಕ್ತಿಯನ್ನ ಉಪಯೋಗಿಸಿ ರಕ್ತಚಂದನವನ್ನ ಕಳ್ಳತನದಿ ಸಾಗಿಸೋಕೆ ಯಜಮಾನನಿಗೆ ನೆರವಾಗುವ ಆತ ನಿಧಾನವಾಗಿ ಕೂಲಿ ಪಟ್ಟವನ್ನು ಸರಿಸಿ ಯಜಮಾನನ ಪಟ್ಟವನ್ನ ತನ್ನದಾಗಿಸಿಕೊಳ್ಳುತ್ತಾ ಸಾಗೋದೆ ಸಿನಿಮಾದ ಜರ್ನಿ.
ಇಲ್ಲಿಯವರೆಗೂ ನಾವು ಅಲ್ಲು ಅರ್ಜುನ್ ನ ಸ್ಟೈಲಿಶ್ ಆಗಿ ನೋಡಿದ್ವಿ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತೆರೆಮೇಲೆ ಸ್ಟೈಲಿಶ್ ಆಗಿ ಕಾಣಿಸುವ ಹೀರೋಗಳ ಸಾಲಿನಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ‘ಪುಷ್ಪ’ ಪಾತ್ರದಲ್ಲಿ ಅಲ್ಲು ಅರ್ಜುನ್ ರಗಡ್ ಲುಕ್‌ನಲ್ಲಿ, ಡಿ ಗ್ಲಾಮರಸ್ ಆಗಿ, ಪಕ್ಕಾ ಚಿತ್ತೂರಿನ ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ. ಪುಷ್ಪರಾಜ್ ಪಾತ್ರವನ್ನು ಅವರು ನಿರ್ವಹಿಸಿರೋ ರೀತಿಯೇ ಅದ್ಭುತ. ಆ ರಗಡ್ ಮ್ಯಾನರಿಸಂ, ಡೇರ್ ಅಂಡ್ ಡೆವಿಲ್ ಲುಕ್ಕು, ಚಿತ್ತೂರ್ ಸ್ಲಾಂಗ್‌ನ ಖದರ್ ಫುಲ್ ಡೈಲಾಗ್ ಡೆಲಿವರಿ ಅಮೋಘ. ಅದರಲ್ಲೂ ಇಡೀ ಸಿನಿಮಾದಲ್ಲಿ ಅವರ ಬಲಹೆಗಲು ಕೆಳಗೆ ಇಳಿಯೋದಿಲ್ಲ. ಆ ಮಟ್ಟಿಗೆ ಇಡೀ ಸಿನಿಮಾವನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಚಿತ್ರದುದ್ದಕ್ಕೂ ಎಷ್ಟೋ ದೃಶ್ಯಗಳು ಆಕಳಿಕೆ, ತೂಕಡಿಕೆ ಬರಿಸುವಂತಿವೆ. ಆಗೆಲ್ಲಾ ಸಿನಿಮಾವನ್ನ ಆಪ್ತವಾಗಿಸೋದು, ಸೀಟಿಗೆ ಪ್ರೇಕ್ಷಕನ ಬೆನ್ನು ಒರಗದಂತೆ ಮಾಡೋದು ಅಲ್ಲು ಅರ್ಜುನ್ ಅಭಿನಯವೇ ಅಂದ್ರೆ ಅದು ಅಲ್ಲು ಅಭಿನಯಕ್ಕೆ ಕೊಡಬಹುದಾದ ಮಾರ್ಕ್ಸ್.
‘ಪುಷ್ಪ’ ಚಿತ್ರದ ಕಥೆ ತೀರ ಸರಳ. ಇಂತಹ ಕಥೆಯನ್ನ ನಾವು ಈವರೆಗೂ ಸಾಕಷ್ಟು ಬಾರಿ ತೆರೆಯ ಮೇಲೆ ನೋಡಿದ್ದೇವೆ. ಎಂಜಾಯ್ ಮಾಡಿದ್ದೇವೆ. ಆದರೆ ಸುಕುಮಾರ್ ಎಂಬ ನಿರ್ದೇಶಕ ಸರಳ ಕಥೆಯನ್ನೂ ವಿರಳ ಎಂಬಂತಹ ನಿರೂಪಣೆ ಮೂಲಕ ಆಪ್ತವಾಗಿಸೋದು ಹೊಸದೇನಲ್ಲ. ಆದರೆ ‘ಪುಷ್ಪ’ ವಿಷಯದಲ್ಲಿ ಸುಕುಮಾರ್ ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಕೆಲವು ದೃಶ್ಯಗಳನ್ನ ಅದ್ಬುತವಾಗಿ ಕಟ್ಟಿಕೊಡುತ್ತಲೇ, ಆಗಾಗ ಚಿತ್ರಕಥೆಯ ಹಳಿ ತಪ್ಪಿಸಿದ್ದಾರೆ. ಅದರಲ್ಲೂ ಈ ಸಿನಿಮಾದಲ್ಲಿ ಲವ್ ಹಾಗೂ ಸೆಂಟಿಮೆಂಟ್ ಎರಡೂ ವರ್ಕ್ ಆಗಿಲ್ಲ. ರಶ್ಮಿಕಾ ಜೊತೆಗಿನ ಅಲ್ಲು ಅರ್ಜುನ್ ಲವ್ ಪಾರ್ಟ್ ಸಿನಿಮಾದ ಡ್ರಾಬ್ಯಾಕ್. ‘ಆರ್ಯ’ದಂತಹ ಪ್ಯೂರ್ ಲವ್ ಸ್ಟೋರಿ ಕೊಟ್ಟ ಸುಕುಮಾರ್ ಲವ್ ಟ್ರ್ಯಾಕನ್ನೇ ಬೋರಿಂಗ್ ಆಗಿಸಿದ್ದಾರೆ. ಹಾಗೆ ತಾಯಿ ಸೆಂಟಿಮೆಂಟ್ ಚಿತ್ರಕ್ಕೆ ಬೇಕು ಅಂತ್ಲೇ ತುರುಕಿದಂತೆ ಭಾಸವಾಗುತ್ತದೆ.
‘ಪುಷ್ಪ’ ಸಿನಿಮಾ ರಿಲೀಸ್‌ಗೂ ಮುನ್ನ ಸಖತ್ ಆಸೆ ಹುಟ್ಟಿಸಲು, ನೋಡಲೇಬೇಕಾದ ಸಿನಿಮಾ ಅಂತ ಪ್ರೇಕ್ಷಕ ಅಡ್ವಾನ್ಸ್ ಟಿಕೆಟ್ ಬುಕ್ ಮಾಡಿಕೊಳ್ಳಲು ಮತ್ತೊಂದು ಕಾರಣ ಚಿತ್ರದ ಹಾಡುಗಳು. ದೇವಿಶ್ರೀ ಪ್ರಸಾದ್ ಸಂಗೀತದ ಹಾಡುಗಳು ಅದಾಗಲೇ ಮೋಡಿ ಮಾಡಿದ್ವು. ತೆರೆಯ ಮೇಲೆ ಕೂಡ ದೇವಿಶ್ರೀ ಪ್ರಸಾದ್ ಸಂಗೀತದ ಹಾಡುಗಳು ನೋಡಲು ರಿಚ್ ಆಗಿವೆ. ಯಾವ ಹಾಡುಗಳೂ ಸಹ ಪ್ರೇಕ್ಷಕನನ್ನ ಸೀಟಿಂದ ಎದ್ದು ಆಚೆ ಹೋಗಲು ಬಿಡೋದಿಲ್ಲ. ಆದರೆ ಹಾಡಿನಲ್ಲಿ ಮಾಡಿರೋ ಮೋಡಿಯನ್ನ ಹಿನ್ನೆಲೆ ಸಂಗೀತದಲ್ಲಿ ಡಿಎಸ್‌ಪಿ ಅವರು ರಿಪೀಟ್ ಮಾಡಲು ಸಾಧ್ಯವಾಗಿಲ್ಲ. ಸಿನಿಮಾಗೆ ಬೇಕಾದ ಮೂಡ್ ಕ್ರಿಯೇಟ್ ಮಾಡುವಲ್ಲಿ ದೇವಿಶ್ರಿ ಸೋತಿದ್ದಾರೆ.
ಇಡೀ ಕಥೆ ಆಲ್‌ಮೋಸ್ಟ್ ಶೇಷಾಚಲಂ ಕಾಡಿನಲ್ಲಿಯೇ ನಡೆಯುತ್ತದೆ. ಮಿರೋ ಸ್ಲೋ ಕೂಬಾ ಛಾಯಾಗ್ರಹಣದಲ್ಲಿ ಪ್ರತಿ ದೃಶ್ಯ, ಪ್ರತಿ ಫ್ರೇಮು ಅದ್ಬುತ. ಸುಕುಮಾರ್ ಹೇಳಬೇಕಾದ ಕಥೆಯನ್ನ ತಮ್ಮ ಕಣ್ಣಿನಲ್ಲಿಯೇ ಕಟ್ಟಿಕೊಡೋದ್ರಲ್ಲಿ ಛಾಯಾಗ್ರಹಕರು ಗೆದ್ದಿದ್ದಾರೆ. ಸಿನಿಮಾದ ಎಡಿಟಿಂಗ್ ವಿಚಾರದಲ್ಲಿ ಇದೇ ಮಾತು ಹೇಳೋಕೆ ಆಗೋದಿಲ್ಲ. ‘ಪುಷ್ಪ’ ಪಯಣ ತುಸು ಧೀರ್ಘ, ತುಸು ಕಠಿಣ ಅನಿಸುತ್ತದೆ. ಕಟ್ ಮಾಡಿದ್ರೆ ಕಡಿಮೆ ಅಂದ್ರೂ ಒಂದು ಗಂಟೆ ಅವಧಿ ಕಡಿಮೆ ಮಾಡಬಹುದಿತ್ತಾ ಎಂಬ ಪ್ರಶ್ನೆ ಮೂಡಿಸುವಂತೆ ಸಾಕಷ್ಟು ಬೇಡದ ದೃಶ್ಯಗಳು ಚಿತ್ರದಲ್ಲಿ ಸೇರಿಕೊಂಡಂತಿವೆ.
ಇನ್ನು ಅಭಿನಯದ ವಿಚಾರಕ್ಕೆ ಬಂದ್ರೆ? ಅಲ್ಲು ಅರ್ಜುನ್ ಒನ್ ಮ್ಯಾನ್ ಶೋ. ಜಾಲಿ ರೆಡ್ಡಿ ಅವತಾರದಲ್ಲಿ ಧನಂಜಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಂಗಳಂ ಶ್ರೀನು ಮೊದಲ ದೃಶ್ಯದಲ್ಲಿ ನಿರೀಕ್ಷೆ ಹುಟ್ಟಿಸಿ ಆಮೇಲೆ ಪೇಲವ ಅನಿಸುತ್ತಾರೆ. ನಾಯಕ ನಟಿಯಾಗಿ ರಶ್ಮಿಕಾ ಯಾವುದೇ ಇಂಪ್ಯಾಕ್ಟ್ ಮಾಡೋದಿಲ್ಲ. ಜಿಲ್ಲಾ ಎಸ್‌ಪಿ ಪಾತ್ರದಲ್ಲಿ ಫಹಾದ್ ಅಭಿನಯ ಸಹಜವಾಗಿದೆ. ಮುಂಬರುವ ಚಿತ್ರದ ಎರಡನೇ ಭಾಗದಲ್ಲಿ ಇನ್ನಷ್ಟು ಮಜಾ ಕೊಡೋ ಭರವಸೆ ಹುಟ್ಟಿಸುತ್ತದೆ. ‘ಪುಷ್ಪ’ ಎರಡು ಪಾರ್ಟ್‌ಗಳಲ್ಲಿ ಬರ್ತಿದೆ. ಈಗ ಮೊದಲ ಪಾರ್ಟ್ ನೋಡಿದೋರಿಗೆ ಎರಡನೇ ಪಾರ್ಟ್ ನೋಡಲೇಬೇಕು ಎಂಬ ಯಾವ ಕುತೂಹಲವೂ ಹುಟ್ಟೋದಿಲ್ಲ. ಯಾವಾಗ ಬರುತ್ತದೆ ಎಂಬ ಕಾತರಕ್ಕಂತೂ ಅವಕಾಶವೇ ಇಲ್ಲ. ಒಟ್ಟಾರೆ ‘ಪುಷ್ಪ ಅಂದರೆ ಹೂವು ಅಂದ್ಕೊಂಡಿದಿಯಾ? ಫೈಯರ್’ ಅಂತ ನಾಯಕ ಡೈಲಾಗ್ ಹೊಡಿತಾನೆ. ಬಟ್ ಪ್ರೇಕ್ಷಕ ಮಾತ್ರ “ಫೈಯರ್ ಅಲ್ಲ ಗುರೂ ಖಾಲಿ ಫ್ಲವರ್!” ಅಂತ ಥಿಯೇಟರ್‌ನಿಂದ ಆಚೆ ಬರ್ತಿದ್ದಾನೆ.
ನಿರ್ಮಾಣ : ನವೀನ್ ಯೆರ್ನೇನಿ, ರವಿಶಂಕರ್ | ನಿರ್ದೇಶನ : ಸುಕುಮಾರ್ | ಸಂಗೀತ : ದೇವಿಶ್ರೀ ಪ್ರಸಾದ್ | ತಾರಾಬಗಳ : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಝಿಲ್, ಧನಂಜಯ, ಸುನಿಲ್, ಹರೀಶ್ ಉತ್ತಮನ್