‘ಸೀತಾ ರಾಮಂ’ ತೆಲುಗು ಚಿತ್ರದ ಯಶಸ್ಸಿನ ನಂತರ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರಿಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರಿಗೆ PAN ಇಂಡಿಯಾ ಇಮೇಜ್ ಇದೆ. ಹೀಗಾಗಿ ಟಾಲಿವುಡ್‌ನಲ್ಲಿ ದುಲ್ಕರ್ ಬೇಡಿಕೆಯ ಹೀರೋ ಆಗಿದ್ದಾರೆ.
ದುಲ್ಕರ್ ಸಲ್ಮಾನ್ ಹೊಸ ತೆಲುಗು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಜನಪ್ರಿಯ ನಿರ್ಮಾಪಕ ಸುಧಾಕರ್ ಚೆರುಕುರಿ ಅವರ S L V Cinimas ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದಲ್ಲಿ ದುಲ್ಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವಿ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಚಿತ್ರದ ಬಹುಪಾಲು ಚಿತ್ರೀಕರಣ ಅಮೆರಿಕದಲ್ಲಿ ನಡೆಯಲಿದೆ ಮತ್ತು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯೊಬ್ಬರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
ದುಲ್ಕರ್ ಸಲ್ಮಾನ್ ಅವರು ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮತ್ತು ಅವರ ‘ಮಹಾನಟಿ’ ಮತ್ತು ‘ಸೀತಾ ರಾಮಂ’ನಂತಹ ಚಿತ್ರಗಳ ಯಶಸ್ಸಿನಿಂದ ಅದು ದುಪ್ಪಟ್ಟಾಗಿದೆ. ದುಲ್ಕರ್ ಅವರ ಹೊಸ ಚಿತ್ರ ‘ಕಿಂಗ್ ಆಫ್ ಕೋಥಾ’ ಸಹ ಪ್ರೇಕ್ಷಕರಿಂದ ಬಾರಿ ಮೆಚ್ಚುಗೆ ಪಡೆದುಕೊಂಡಿದೆ. ದುಲ್ಕರ್ ಈಗಾಗಲೇ ವೆಂಕಿ ಅಟ್ಲೂರಿ ಅವರೊಂದಿಗೆ ‘ಲಕ್ಕಿ ಭಾಸ್ಕರ್’ ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ರೋಮ್ಯಾಂಟಿಕ್ ಡ್ರಾಮಾ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನಟ ರಾಣಾ ದಗ್ಗುಬಾಟಿ ನಿರ್ಮಾಣದ ಒಂದು ತೆಲುಗು ಚಿತ್ರವನ್ನೂ ದುಲ್ಕರ್ ಒಪ್ಪಿಕೊಂಡಿದ್ದಾರೆ.