ಸುಕುಮಾರ್ ನಿರ್ದೇಶನದ ‘ಪುಷ್ಪ’ ಪಾರ್ಟ್ 1 ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ರಕ್ತಚಂದನ ಮಾಫಿಯಾ ಕುರಿತ ಕತೆ ಎಂದಿದ್ದರು ನಿರ್ದೇಶಕರು. ಆಕ್ಷನ್, ಲವ್, ಎಮೋಷನ್ಸ್‌ಗಳೊಂದಿಗೆ ಇದೊಂದು ಒಳ್ಳೆಯ ಕಮರ್ಷಿಯಲ್ ಪ್ಯಾಕೇಜ್ ಆಗುವ ಸೂಚನೆ ಟ್ರೈಲರ್‌ನಲ್ಲಿ ಸಿಗುತ್ತದೆ.
ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ ‘ಪುಷ್ಪ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾ ಕುರಿತಂತೆ ನಿರೀಕ್ಷೆ ಹೆಚ್ಚಿಸುವಂತಿದೆ. ಇದು ರಕ್ತಚಂದನ ಮಾಫಿಯಾ ಕುರಿತ ಕತೆ ಎನ್ನಲಾಗಿತ್ತು. ಅದರಂತೆ ಕಾಡಿನ ಸನ್ನಿವೇಶಗಳು ಹೆಚ್ಚೇ ಇವೆ. ಮೇಕಿಂಗ್ ಮತ್ತು ಟ್ರೈಲರ್ ಎಡಿಟ್ ಮಾಡಿರುವ ರೀತಿ ಸೊಗಸಾಗಿದೆ. ನಾಯಕಿ ರಶ್ಮಿಕಾ ಮಂದಣ್ಣ, ಕನ್ನಡ ನಟ ಧನಂಜಯ ಮತ್ತು ಮಲಯಾಳಂ ನಟ ಫಹಾದ್ ಫಾಸಿಲ್ ಟ್ರೈಲರ್‌ನಲ್ಲಿ ಕಾಣಿಸುತ್ತಾರೆ. ಆದರೆ ಅವರ ಪಾತ್ರಗಳ ಕುರಿತಂತೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಮೊದಲ ನೋಟಕ್ಕೆ ಇದು ಭ್ರಷ್ಟ ವ್ಯವಸ್ಥೆ ಮತ್ತು ಕಾಡಿನ ಮೂಲ ನಿವಾಸಿಗಳ ಮಧ್ಯೆಯ ಹೋರಾಟದ ಕತೆ ಎನಿಸುತ್ತದೆ. ಫಹಾದ್ ಫಾಸಿಲ್‌ಗೆ ಇದು ಮೊದಲ ತೆಲುಗು ಸಿನಿಮಾ. ‘ಪುಷ್ಪ’ ಪಾರ್ಟ್ 2ನಲ್ಲಿ ಅವರಿಗೆ ಹೆಚ್ಚು ಸ್ಕೋಪ್ ಇರುತ್ತದೆ ಎನ್ನಲಾಗಿದ್ದು, ಧನಂಜಯ ಅವರ ಪಾತ್ರ ಹೇಗಿರಬಹುದು ಎನ್ನುವ ಕುತೂಹಲ ಕನ್ನಡಿಗರದ್ದು. ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅವರ ಮೂರನೇ ಸಿನಿಮಾ ಇದು. ನಟಿ ರಶ್ಮಿಕಾ ಕಳೆದ ವರ್ಷ ‘ಸರಿಲೇರು ನೀಕೆವ್ವಾರುʼ ತೆಲುಗು ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಕಾಣಿಸಿಕೊಂಡಿದ್ದರು. ಅಲ್ಲು ಅರ್ಜುನ್ ಜೊತೆ ‘ಪುಷ್ಪ’ ಅವರ ಮೊದಲ ಪ್ರಯೋಗ. ಇದೇ ಡಿಸೆಂಬರ್ 17ರಂದು ಸಿನಿಮಾ ತೆರೆಕಾಣಲಿದೆ.