ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಚಿತ್ರಕ್ಕೆ ಖ್ಯಾತ ಹಿಂದಿ ಗಾಯಕ – ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಎಂಟ್ರಿ ಕೊಟ್ಟಿದ್ದಾರೆ. ಶಿವರಾಜಕುಮಾರ್‌, ಧನಂಜಯ ನಟಿಸುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರವಿದು.

ಅಮಿತ್‌ ತ್ರಿವೇದಿ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವ ಸಂಗೀತ ನಿರ್ದೇಶಕ. ಬಾಲಿವುಡ್‌ ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ‘ದೇವ್ ಡಿ’, ‘ಕ್ವೀನ್’, ‘ವೇಕ್ ಅಪ್ ಸಿದ್‌’, ‘ಇಂಗ್ಲಿಷ್ ವಿಂಗ್ಲಿಷ್’, ‘ಕಾಯ್‌ ಪೋ ಚೆ’, ‘ಲುಟೇರಾ’, ‘ಉಡ್ತಾ ಪಂಜಾಬ್’, ‘ಡಿಯರ್ ಜಿಂದಗಿ’, ‘ಸೀಕ್ರೆಟ್ ಸೂಪರ್ ಸ್ಟಾರ್’, ‘ಮನ್ಮರ್ಜಿಯಾನ್’, ‘ಅಂಧಾಧುನ್’, ‘ಸೈ ರಾ‌ ನರಸಿಂಹ ರೆಡ್ಡಿ’, ‘ಜೂಬಿಲಿ’ ವೆಬ್ ಸೀರಿಸ್ ಮತ್ತು ಇತ್ತೀಚಿಗೆ ತೆರೆಕಂಡ ಆರ್‌ ಮಾಧವನ್‌ ಹಾಗೂ ಅಜಯ್‌ ದೇವಗನ್‌ ಅಭಿನಯದ ‘ಶೈತಾನ್’ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು, ‘ಉತ್ತರಕಾಂಡ’ ಸಿನಿಮಾದ ಪ್ರೋಮೋಗೆ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.‌

ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ರೋಹಿತ್ ಪದಕಿ, ‘ಉತ್ತರಕಾಂಡ ಚಿತ್ರದ ಮೂಲಕ ಉತ್ತರ ಕರ್ನಾಟಕದ ನಾಟಿ ಮತ್ತು ಹಳ್ಳಿಗಾಡಿನ ಕಥೆಯನ್ನು ಹೇಳಬಯಸುತ್ತಿದ್ದೇವೆ. ಸ್ಥಳೀಯ ಸೊಗಡಿನ ಕಥೆಗೆ ಅಮಿತ್ ತ್ರಿವೇದಿ ಅವರ ಸಂಗೀತ ಸಾಥ್ ನೀಡಲಿದೆ. ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಚಿತ್ರದ ಮೆರುಗನ್ನು ಹೆಚ್ಚಿಸಲಿದೆ’ ಎಂದು ಪ್ರಶಂಸಿದ್ದಾರೆ. ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ, ‘ಈ ಚಿತ್ರದ ಕಥಾವಸ್ತು ಮತ್ತು ಭಾವನೆ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ‌. ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ. ಕೆಆರ್‌ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ನಿರ್ಮಿಸುತ್ತಿರುವ ‘ಉತ್ತರಕಾಂಡ’ ಚಿತ್ರತಂಡ ಸದ್ಯ ನಾಯಕಿಯ ಹುಡುಕಾಟದಲ್ಲಿದೆ. ಇದೇ ಏಪ್ರಿಲ್ 15ರಿಂದ ಚಿತ್ರೀಕರಣ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here