ಕನ್ನಡ ನಾಡಿನ ಮೇರು ಸಂತ ಸಿದ್ದಗಂಗಾ ಸ್ವಾಮೀಜಿ ಕುರಿತು ಸಂಗೀತ ಸಂಯೋಜಕ ಹಂಸಲೇಖ ಅವರು ಮಿನಿ ಸೀರೀಸ್ ಸಿದ್ಧಪಡಿಸುತ್ತಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಸಿದ್ದಗಂಗಾ ಶ್ರೀ ಪಾತ್ರ ನಿರ್ವಹಣೆಗೆ ಮೇರು ನಟ ಅಮಿತಾಭ್ ಬಚ್ಚನ್ ಅವರನ್ನು ಅಪ್ರೋಚ್ ಮಾಡಲಾಗಿದೆ.
ನಾಡಿದ್ದು ಏಪ್ರಿಲ್ 1ರಂದು ಸಿದ್ದಗಂಗಾ ಸ್ವಾಮೀಜಿ ಅವರ 115ನೇ ಜಯಂತೋತ್ಸವ ನಡೆಯಲಿದೆ. ಅಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಮಾರಂಭ ನಡೆಯಲಿದ್ದು, ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀ ಜೀವನ – ಸಾಧನೆ ಕುರಿತ ಮಿನಿ ಸೀರೀಸ್‌ಗೆ ಚಾಲನೆ ಸಿಗಲಿದೆ. ಖ್ಯಾತ ಸಂಗೀತ ಸಂಯೋಜಕ ಹಂಸಲೇಖ ಅವರ ನೇತೃತ್ವದಲ್ಲಿ ಸಿದ್ಧವಾಗಲಿರುವ ಮಹತ್ವದ ಸರಣಿಯಿದು. ಈ ಸರಣಿಯಲ್ಲಿ ಶ್ರೀಗಳ ಪಾತ್ರ ನಿರ್ವಹಿಸುವಂತೆ ಮೇರು ನಟ ಅಮಿತಾಭ್ ಬಚ್ಚನ್ ಅವರನ್ನು ಅಪ್ರೋಚ್ ಮಾಡಲಾಗಿದೆ ಎಂದು ಹಂಸಲೇಖ ತಿಳಿಸಿದ್ದಾರೆ. ಪ್ರಾಜೆಕ್ಟ್ ಕುರಿತು ಬಚ್ಚನ್‌ರಿಗೆ ಮಾಹಿತಿಯನ್ನೂ ನೀಡಲಾಗಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ ಹಂಸಲೇಖ.
ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾರಥ್ಯದಲ್ಲಿ ಒಟ್ಟು 52 ಎಪಿಸೋಡ್‌ಗಳನ್ನು ಒಳಗೊಂಡ ಮಿನಿ ಸೀರೀಸ್ ರೂಪಿಸಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಈ ಸೀರೀಸ್ ಸಿದ್ಧವಾಗಲಿದೆ. ಹಂಸಲೇಖರ ನೇತೃತ್ವದಲ್ಲಿ ಏಳು ತಂಡಗಳಲ್ಲಿ 300ಕ್ಕೂ ಹೆಚ್ಚು ತಂತ್ರಜ್ಞರು ಈ ಸರಣಿಗೆ ಕೆಲಸ ಮಾಡಲಿದ್ದಾರೆ. ಇನ್ನು ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸರಣಿಗೆ ಅಧಿಕೃತ ಚಾಲನೆ ಸಿಗಲಿದೆ. ಅಂದು ಹಂಸಲೇಖ ಅವರು ನೂರಕ್ಕೂ ಹೆಚ್ಚು ಗಾಯಕರೊಂದಿಗೆ ಸಿದ್ದಗಂಗಾ ಶ್ರೀಗಳ ಕುರಿತು ಆರು ಗೀತೆಗಳನ್ನು ಹಾಡಲಿದ್ದಾರೆ. ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ‘ಅಮೃತಧಾರೆ’ ಚಿತ್ರದ ಅತಿಥಿ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದರು. ಒಂದೊಮ್ಮೆ ಸಿದ್ದಗಂಗಾ ಶ್ರೀ ಪಾತ್ರದಲ್ಲಿ ಅವರು ನಟಿಸುವಂತಾದರೆ ಕನ್ನಡದಲ್ಲಿದು ಅವರಿಗೆ ಪೂರ್ಣಪ್ರಮಾಣದ ಪಾತ್ರವಾಗಲಿದೆ.
ಈ ಬಗ್ಗೆ ಮಾತನಾಡಿರುವ ಹಂಸಲೇಖ ಅವರು, “ಶಿವಕುಮಾರ ಸ್ವಾಮಿಗಳು ಏನು ತಮ್ಮ ಜೀವನವನ್ನು ನೆನಪಿಸಿಕೊಂಡರು, ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು, ಪುರಾಣದ ವ್ಯಕ್ತಿಗಳಿಂದ ಹೇಗೆ ತಮ್ಮ ಸಾಧನೆಯನ್ನು ಗಟ್ಟಿ ಮಾಡಿಕೊಂಡರು… ಇದನ್ನೆಲ್ಲಾ ಆಲೋಚನೆ ಮಾಡುವ ಘಟ್ಟವನ್ನು ಅಮಿತಾಭ್ ಬಚ್ಚನ್ ಅವರು ಮಾಡಿದರೆ ಚೆನ್ನಾಗಿರುತ್ತೆ ಅಂತ ಸರಣಿಯ ನಿರ್ಮಾಪಕರಾದ ರುದ್ರೇಶ್ ಅವರಿಗೆ ಹೇಳಿದೆ. ತಮಗಿರುವ ಸಂಪರ್ಕಗಳ ಮೂಲಕ ರುದ್ರೇಶ್ ಅವರು ಬಚ್ಚನ್‌ರನ್ನು ತಲುಪಿ ಸರಣಿ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ಬಚ್ಚನ್‌ರ ಆರೋಗ್ಯದಲ್ಲಿ ಸದ್ಯ ಏರುಪೇರುಗಳಾಗಿದೆ. ಅವರು ಅನಾರೋಗ್ಯದಿಂದ ಗೆದ್ದು ಬಂದರೆ ಅವರು ಇಲ್ಲಿ ಖಂಡಿತವಾಗಿ ಇರುತ್ತಾರೆ ಅಂತ ನಾನು ಭಾವಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಸರಣಿ ನಿರ್ಮಾಪಕರಿಂದ ನಮಗೆ ಸಂಪೂರ್ಣ ಸಹಕಾರ ಸಿಗಲಿದೆ” ಎನ್ನುತ್ತಾರೆ.