ZEE5ನಲ್ಲಿ ಸ್ಟ್ರೀಂ ಆಗುತ್ತಿರುವ ‘ಅನಂತಂ’ ಒಂದರ ಬೆನ್ನಿಗೆ ಒಂದು ಎಪಿಸೋಡು ನೋಡಬೇಕಾದ ಧಾವಂತದ ವೆಬ್ ಸರಣಿಯಲ್ಲ. ಕೆಲವು ಅಧ್ಯಾಯ‌ ನೋಡಿದ ಮೇಲೆ ಸ್ವಲ್ಪ ಹೊತ್ತಿಗೆ ಬೇರೇನೂ ಬೇಡವೆಂದು ಅನಿಸುವಷ್ಟು ಕಾಡುವಂಥ ಕಥಾ ಸಂಕಲನ. ವಾರದ ಒಂದೊಂದೇ‌ ದಿನ ಒಂದೋ ಎರಡೋ ಕತೆ ನೋಡಿ ಮೆಲುಕು ಹಾಕಿದರೆ ಹೆಚ್ಚು ಅರ್ಥಪೂರ್ಣ.

ವೆಬ್ ಸರಣಿಯೆಂಬ ಪ್ರಕಾರ ಬಲು ಸೊಗಸು. ಸಿನಿಮಾದ ಪರಿಧಿಗೆ ಮೀರಿದ್ದು, ಟಿವಿಯ ವ್ಯಾಪ್ತಿಯಲ್ಲಿ ಕಳೆದು ಹೋಗುವಂಥದ್ದು, ಕಾದಂಬರಿ ಆಗಬಹುದಾದ್ದು, ಸಣ್ಣ ಕತೆಯಲ್ಲಿ ಹಿಡಿದಿಡುವಂಥದ್ದು – ಇವೆಲ್ಲ ವೆಬ್ ಸರಣಿಯ ಬೊಗಸೆಯಲ್ಲಿ ಪ್ರತಿಫಲಿಸಬಹುದು. ‘ಅನಂತಂ’ ಎಂಬ ತಮಿಳು ವೆಬ್ ಸರಣಿ ಈ ಎಲ್ಲ ಗುಣಗಳನ್ನೂ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ತನ್ನದಾಗಿಸಿಕೊಂಡಿದೆ. ಇದು‌‌ ಕತೆಯೊಳಗಿನ ಕತೆ, ಇಲ್ಲಿ‌ ಕತೆಗಳು ಅನಂತ, ಕತೆಯೇ‌ ಶ್ರೀಮಂತ. ಬರುವ ಎಂಟೂ ಕತೆಗಳ ಕೇಂದ್ರಬಿಂದು ಅನಂತಂ ಎಂಬ ಮನೆ. ಅರ್ಧ ಶತಮಾನಕ್ಕೂ ಹಳೆಯದಾದ ಆ ಮನೆಗೆ ಹಲವು ಕುಟುಂಬಗಳು ಬಂದು ಹೋಗಿವೆ, ಅಲ್ಲಿ ಬದುಕು ಕಟ್ಟಿಕೊಂಡವರಿದ್ದಾರೆ, ಕೊನೆಯ ಉಸಿರೆಳೆದವರಿದ್ದಾರೆ. ಮಣಿರತ್ನಂ ಗರಡಿಯಲ್ಲಿ ಪಳಗಿದ ನಿರ್ದೇಶಕಿ ಪ್ರಿಯಾ ಆ ಕಥಾ ಸಂಕಲನದ ಬಸ್ಸಿನಲ್ಲಿ ಪ್ರೇಕ್ಷಕನನ್ನು ಕಿಟಕಿ ಬದಿಯ ಸೀಟಲ್ಲಿ ಕೂರಿಸಿ ಕರೆದೊಯ್ಯುತ್ತಾರೆ.

ಈ ಕತೆಗಳು ಸಣ್ಣ ಕತೆಗಳಂತೆ. ತೀರಾ ವಾಚ್ಯವಾಗಿ ಹೇಳುತ್ತಾ ಕತೆಯನ್ನು ‘ತಿಳಿಸುವ’ ಧಾವಂತಕ್ಕೆ ಕೈ ಹಾಕುವುದಿಲ್ಲ‌. ತೆರೆಯ ಮೇಲೆ ಕಾಣುವ‌ ಭಾವ ಕೆಲವಾದರೆ ಕಾಣದೇ ಉಳಿಯುವವು ಹಲವು. ‘ರೇಖಾ’‌ ಎಂಬ ಕತೆ ಇದಕ್ಕೆ ಅತಿ ಸೂಕ್ತ ಉದಾಹರಣೆ. 1975ರಲ್ಲಿ ಅನಂತಂಗೆ ಬಾಡಿಗೆಗೆ‌ ಬರುವ ರೇಖಾ‌ ಹಾಗೂ ಸಂದೀಪ್‌‌ಗೆ ಇಬ್ಬರು ಮಕ್ಕಳು. ಚೆನ್ನೈನ ಸಂದೀಪ್‌ ಮತ್ತು ತಿರುಪತಿಯ ಅರ್ಚಕರೊಬ್ಬರ ಮಗಳು ರೇಖಾ ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದರು‌ ಎಂಬುದನ್ನು ತೋರಿಸಲು ಯಾವುದೇ‌ ದೃಶ್ಯ ಹೆಣೆದಿಲ್ಲ. “ಎಲ್ಲರನ್ನೂ ಮುಂದೆ ಹೋಗಿ,‌ ಮುಂದೆ ಹೋಗಿ ಎನ್ನುವ‌ ನಿಮ್ಮಪ್ಪ ನಮ್ಮನ್ನು ಮಾತ್ರ ನಿಲ್ಲಿ ನಿಲ್ಲಿ ಎಂದುಬಿಟ್ಟರಲ್ಲಾ” ಎಂದು ಸಂದೀಪ್ ರೇಖಾಗೆ ಹೇಳುವ‌ ಮಾತಿನಲ್ಲೇ ಅವರ ಅಂದಿನ ಪ್ರೇಮಕತೆಯನ್ನು ನಾವು ಓದಿಕೊಳ್ಳಬೇಕು. ಜತೆಗೆ ಆ ಕಾಲದ ಕತೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಕೊಂಚ ಇತಿಹಾಸದ ಪರಿಜ್ಞಾನವೂ ಅಗತ್ಯ. ಇಲ್ಲವಾದರೆ ಐಐಟಿಯಲ್ಲಿ ಪದವಿ ಪಡೆದ ಆತ ಸ್ವಂತ ವ್ಯವಹಾರ ನಡೆಸಲು ಮೀಟರ್ ಬಡ್ಡಿಗೆ ಕಡ ತಂದದ್ದೇಕೆ ಎಂದು ಅರ್ಥವಾಗಲಿಕ್ಕಿಲ್ಲ. ಆಗಿನ ಭಾರತದಲ್ಲಿ‌ ಹೆಚ್ಚು ಕಲಿತವರಿಗೆ ಕೆಲಸಕ್ಕೆ ಅವಕಾಶವಿರಲಿಲ್ಲ ಎಂಬುದು‌ ತಿಳಿದಿರದಿದ್ದರೆ ಆತನ ಆತಂಕ ನಮಗೆ ನಾಟುವುದಿಲ್ಲ. ಸೋವಿಯತ್ ಮನಸ್ಥಿತಿಯ ಭಾರತ‌ದಲ್ಲಿ ಅತಿಹೆಚ್ಚು ಕಲಿತ ಬುದ್ಧಿವಂತರು ಕೆಲಸಕ್ಕಾಗಿ ದೇಶವನ್ನೇ ಬಿಟ್ಟು ಹೋಗಬೇಕಿತ್ತು ಎಂಬುದು ಗೊತ್ತಿಲ್ಲದಿದ್ದರೆ ಆ ಪಾತ್ರಗಳ ತುಡಿತ ನಮ್ಮನ್ನು ತಟ್ಟುವುದಿಲ್ಲ.

ಈ ಎಲ್ಲಾ ವಿಚಾರಗಳನ್ನೂ ‘ಅನಂತಂ’ ಅವರವರ ಭಾವಕ್ಕೆ ಬಿಟ್ಟು ಕತೆ ಹೇಳುತ್ತಾ ಸಾಗುತ್ತದೆ. ಕದ ತಟ್ಟಿದಲ್ಲೆಲ್ಲಾ ಸಂದೀಪ್‌ಗೆ ಓವರ್ ಕ್ವಾಲಿಫೈಡ್ ಎಂಬ ಕಾರಣಕ್ಕೇ ಕೆಲಸ ನಿರಾಕರಣೆಯಾಗುವಾಗ ಬದುಕಲ್ಲಿ ಜೀವಂತಿಕೆ ಉಳಿಸುವವಳು ರೇಖಾ. ಅವಳು ಅಂದಿನ ಭಾರತದ ಆಶಾವಾದಿಗಳ ಪ್ರತಿನಿಧಿ‌. ಇರುವುದರಲ್ಲೇ ಸಣ್ಣ ಸಣ್ಣ ಸಂತೋಷಗಳನ್ನು ದೊಡ್ಡದಾಗಿ ಆಚರಿಸುವ ಕನಸುಗಾರ್ತಿ. ಮನೆಯ ಗೋಡೆಯೂ ಉಸಿರಾಡುತ್ತದೆ‌ ಅನ್ನುವ ಆಕೆ ನಿರ್ಜೀವ ವಸ್ತುವಲ್ಲೂ ಎದೆಬಡಿತ ಕಾಣುತ್ತಾಳೆ. ಆ ಕಾಲದಲ್ಲಿ ಅಂಥ ಅಪರಿಮಿತ‌ ಆಶಾವಾದಿ ಬೆನ್ನೆಲುಬಾಗಿ ಸಿಕ್ಕಿದ್ದ ಅದೃಷ್ಟವಂತರು ಮಾತ್ರವೇ‌ ಸಂದೀಪನಂತೆ ಭಾರತದಲ್ಲೇ ಉಳಿದರು. ಕೊನೆಗೂ ಸಂದೀಪನಂಥವರು ಆಗಿನ ಭಾರತದಲ್ಲಿ ನೆಲೆ ಕಂಡುಕೊಂಡದ್ದು ಸ್ವಂತ ಶಕ್ತಿ – ಯುಕ್ತಿಯ ಮೇಲೆಯೇ.

ಮಗನ ಹುಟ್ಟುಹಬ್ಬ ನಿಮಿತ್ತ ರೇಖಾ ನೆರೆಯ ಮಕ್ಕಳಿಗೆ ಗಾಳಿಪಟ ಮಾಡುವ ಸ್ಪರ್ಧೆ ಏರ್ಪಡಿಸುತ್ತಾಳೆ. ಉದ್ಯೋಗ‌ ಆಕಾಂಕ್ಷಿ ಸಂದೀಪನಿಗೆ ಅಂಥ ಸಮಾರಂಭದಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ಇರುವುದಿಲ್ಲ. ಆದರೂ ಮಗನ ಒತ್ತಾಯಕ್ಕೆ ಗಾಳಿಪಟ ಮಾಡುವ ಕಾಯಕದಲ್ಲಿ ಕೂರಲೇಬೇಕು. ಗಾಳಿಪಟ ಮಾಡುವುದು ಹೇಗೆ ಎಂದು ಮಗನ ಸಂಗಡಿಗರಿಗೆ ಕಲಿಸಿಕೊಡಬೇಕು. ಯಾವುದೇ ವಿಷಯವಾದರೂ ಸಂದೀಪ್ ತಂತ್ರ ಮಾತ್ರವನ್ನು ಹೇಳಿಕೊಡುವವನಲ್ಲ, ಅದರ ಹಿಂದಿನ ವಿಜ್ಞಾನ ತಿಳಿಸಿಕೊಡುವುದು ಅವನ ಜಾಯಮಾನ. ಮಕ್ಕಳಿಗೆ ಅರ್ಥವಾಗುವ ರೀತಿ ಸರಳ ಮತ್ತು ಕುತೂಹಲಕರವಾಗಿ ಹೇಳಿಕೊಡುವಾಗ ಅಲ್ಲಿದ್ದ ಮಕ್ಕಳಷ್ಟೇ ಅಲ್ಲ, ಅವರ ತಂದೆ ತಾಯಂದಿರೂ ಈತನ ಪ್ರತಿಭೆಗೆ ತಲೆದೂಗುತ್ತಾರೆ.

ಈ ಘಟನೆಯಿಂದ ಪ್ರೇರಿತನಾದ ತಂದೆಯೊಬ್ಬ ಕೊಡುವ ಸಲಹೆಯೇ ಕೋಚಿಂಗ್ ಸೆಂಟರ್. ಅದುವೇ ಕಡೆಗೆ ಊರುಗೋಲಾಗಿ ಒಂದು‌ ದಶಕದಲ್ಲಿ‌ ರಾಷ್ಟ್ರಮಟ್ಟಕ್ಕೆ ಬೆಳೆಯುತ್ತದೆ. ಶೈಕ್ಷಣಿಕ ‌ಸಲಹೆಗಾರನಾಗಲು‌ ಕೇಂದ್ರ ಸರ್ಕಾರದಿಂದ ಬುಲಾವು ಬರುತ್ತದೆ ಎನ್ನುತ್ತದೆ‌ ಕತೆ. ಆಗಿನ ಕಾಲದಲ್ಲಿ ಅಷ್ಟೆಲ್ಲಾ ಸುದ್ದಿಯಾದರೂ ಸರ್ಕಾರವೇ ಕರೆದು ಕೆಲಸ ಕೊಡಿಸಬೇಕಿತ್ತು. ಈಗಿನ ಬೈಜೂಸ್‌ ಸ್ಥಾಪಕನ ಹಿಂದೆ ಕೋಟಿಗಟ್ಟಲೆ ಹಣಹಿಡಿದ ಹೂಡಿಕೆದಾರರು ಕ್ಯೂ‌ ನಿಂತಿದ್ದರು. ಆದರೆ ಅದರ ಸಮೀಕರಣ ಮಾಡುವ ಕೆಲಸ ತನ್ನದಲ್ಲ ಎಂದು ‘ಅನಂತಂ’ ಮತ್ತೊಂದು ಕತೆಯ ಕಡೆಗೆ ಹೆಜ್ಜೆ ಹಾಕುತ್ತದೆ.

ಅಷ್ಟು ಮಾತ್ರಕ್ಕೆ ‘ಅನಂತಂ’ನಲ್ಲಿ ಬರುವ ಎಲ್ಲಾ ಕತೆಗಳೂ ಒಂದಕ್ಕಿಂತ ಒಂದು ಮೇಲು ಎನ್ನಲಾಗುವುದಿಲ್ಲ. ನೀವು ಯಾವ ಭಾವಲಹರಿಯಲ್ಲಿ‌ ಇದ್ದೀರಿ ಎಂಬುದರ ಮೇಲೆ ನಿಮಗೆ ಅಧ್ಯಾಯಗಳು ಇಷ್ಟವಾಗುತ್ತವೆ. ಮೊದಲ ಅಧ್ಯಾಯ‌ ‘ಮರಗತಂ’ ಕತೆಯ ಆಚೆಗೆ ನಮ್ಮನ್ನು ಬೇರೆಲ್ಲಿಗೂ ಕೊಂಡೊಯ್ಯುವುದಿಲ್ಲ. ಆದರೆ ‘ಸೀತಾ’ ತೀವ್ರವಾಗಿ ಭಾವ ಕಲಕಬಹುದು. ಅತಿ ಪ್ರತಿಭಾವಂತೆ ಅಂಧ ಹುಡುಗಿಯ ಕತೆ ನನಗಂತೂ ನೋಡಿ ಅರಗಿಸಿಕೊಳ್ಳುವುದಕ್ಕೇ ಕಷ್ಟವಾಯಿತು. ನಾನು ಕಣ್ಣಂಚಿನ ನೀರನ್ನು ಸಹಿಸಬಲ್ಲೆ, ಹೃದಯವೇ ಹಿಂಡಿ‌ ಬರುವಾಗ ತಾಳಲು ಕಷ್ಟವಾಗುತ್ತದೆ. ಆದಾಗ್ಯೂ ಸೀತಾ ಇಷ್ಟವಾಗುತ್ತಾಳೆ, ಮನದೊಳಗೆ ಬಂಧಿಯಾಗುತ್ತಾಳೆ.

‘ಅನಂತ’ನ ಕತೆ ಸಲಿಂಗ ಪ್ರೇಮದ ಸಾಮಾಜಿಕ ಅಸ್ಪೃಶ್ಯತೆ ಬಗ್ಗೆ ಹೇಳಿದರೆ ‘ಮೆನನ್’ ವಯಸ್ಸಿನ ಪರಿಧಿಯ ಆಚೆಗೆ ನಿಲ್ಲುವ‌ ಪ್ರೀತಿಯನ್ನು ಕಟ್ಟಿಕೊಡುತ್ತದೆ. ಮೂರೂ ತಲೆಮಾರಿನ ಮಹಿಳೆಯರು ಒಬ್ಬನೇ ಹುಡುಗನನ್ನು ಇಷ್ಟಪಡುತ್ತಾರೆ ಎಂಬುದನ್ನು ಮಾತಲ್ಲಿ ಕೇಳಿದರೆ ಅಲ್ಲಿ ಸಾಮಾಜಿಕ ಇತಿಮಿತಿಯ ಮೀರುವಿಕೆ ಇದೆ ಅನಿಸಬಹುದು. ಆದರೆ ನಿರ್ದೇಶಕಿ ಪ್ರಿಯಾ ಅಂಥ ಅನಿಸಿಕೆಗೆ ಆಸ್ಪದ ಕೊಡುವುದಿಲ್ಲ. ಜವಾಬ್ದಾರಿ ಹೆಚ್ಚಾದಂತೆ ತಾನು ಪ್ರೀತಿಗೆ ಬೀಳಲು ಯೋಗ್ಯವಲ್ಲ, ಅಥವಾ ತನ್ನ ವಯಸ್ಸಿಗೆ ಪ್ರೀತಿ-ಗೀತಿ ಎಲ್ಲ ಒಗ್ಗುವುದಿಲ್ಲ ಎಂದು‌‌ ಮಿತಿ ಹಾಕಿಕೊಳ್ಳುವ ಹೆಣ್ಣಿನ ಅಂತರಂಗಕ್ಕೆ ಪ್ರಿಯಾ ಕನ್ನಡಿ ಹಿಡಿದಿದ್ದಾರೆ. ನಿಷ್ಕಾಮ ಪ್ರೇಮ ಎಲ್ಲರಿಗೂ ಸಲ್ಲುತ್ತದೆ ಎಂಬುದನ್ನು ತೋರಿಸಿದ್ದಾರೆ. ಆದರೆ ಲಘು ಧಾಟಿಯಲ್ಲಿ ಹೇಳಹೊರಟ ಕಾರಣ ಕೆಲವು ಕಡೆ ಭಾವ ತೆಳುವಾಗುತ್ತದೆ.

Zee5ನಲ್ಲಿ ಸ್ಟ್ರೀಂ ಆಗುತ್ತಿರುವ ‘ಅನಂತಂ’ ಒಂದರ ಬೆನ್ನಿಗೆ ಒಂದು ಎಪಿಸೋಡು ನೋಡುವ ಧಾವಂತದ ಮನಸ್ಥಿತಿಗಲ್ಲ. ಕೆಲವು ಅಧ್ಯಾಯ‌ ನೋಡಿದ ಮೇಲೆ ಸ್ವಲ್ಪ ಹೊತ್ತಿಗೆ ಬೇರೇನೂ ಬೇಡವೆಂದು ಅನಿಸುವಷ್ಟು ಕಾಡುವಂಥ ಕಥಾ ಸಂಕಲನ. ವಾರದ ಒಂದೊಂದೇ‌ ದಿನ ಒಂದೋ ಎರಡೋ ಕತೆ ನೋಡಿ ಮೆಲುಕು ಹಾಕಿದರೆ ಹೆಚ್ಚು ಅರ್ಥಪೂರ್ಣ.

LEAVE A REPLY

Connect with

Please enter your comment!
Please enter your name here