ಸರಳ ನಿರೂಪಣೆ ಹೊಂದಿರುವ ಇದೊಂದು ಫೀಲ್-ಗುಡ್ ಚಲನಚಿತ್ರ. ಯಾವ ಹಿನ್ನೆಲೆ ಸಂಗೀತ ಹೊಂದಿರದ ಹಾಡುಗಳು ಆಲಿಸಲು ಹಿತವಾಗಿವೆ. ಸಿನಿಮಾಟೋಗ್ರಫಿ ಚಲನಚಿತ್ರದ ವಸ್ತುವಿಗೆ ತಕ್ಕಂತಿದೆ. ಕೇರಳದ ಗ್ರಾಮೀಣ ಸೊಗಡನ್ನು ಹಿಡಿಯುವುದರಲ್ಲಿ ಸಫಲವಾಗಿದೆ. ‘ತಾಹಿರಾ’ ಮಲಯಾಳಂ ಸಿನಿಮಾ ಸದ್ಯದಲ್ಲೇ OTTಯಲ್ಲಿ ಸ್ಟ್ರೀಮ್‌ ಆಗಲಿದೆ.

2022ರ ಮಾರ್ಚ್‌ನಲ್ಲಿ ಆಯೋಜನೆಗೊಂಡಿದ್ದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿದ್ದಿಕ್ ಪರವೂರು ನಿರ್ದೇಶನದ ಮಲಯಾಳಂ ಚಲನಚಿತ್ರ ‘ತಾಹಿರಾ’ (2020) ಪ್ರದರ್ಶನಗೊಂಡಿತ್ತು. ತೊಂಬತ್ತೇಳು ನಿಮಿಷಗಳ ಈ ಅರೆ- ಬಯೋಪಿಕ್ ಎನ್ನಬಹುದಾದ ಚಲನಚಿತ್ರದ ನಾಯಕಿ ತಾಹಿರಾ. ನಿಜ ಜೀವನದಲ್ಲಿ ಕೇರಳದ ಅಳೀಕೋಡ್ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ. 42 ವರ್ಷದ, ಅರೆ ಶ್ರವಣಶಕ್ತಿ ಹೊಂದಿರುವ ಅವಿವಾಹಿತೆ ತಾಹೀರಾ ಹಳ್ಳಿಯಲ್ಲಿ ತಮ್ಮ ಸ್ಕೂಟರ್‌ನಲ್ಲಿ ಕೃಷಿಗೆ ಬೇಕಾಗುವ ಪದಾರ್ಥಗಳಿರುವ ಮೂಟೆಗಳನ್ನು ಸಲೀಸಾಗಿ ಸಾಗಿಸುತ್ತಾರೆ. ಸ್ವತಃ ಟ್ರ್ಯಾಕ್ಟರನ್ನು ಚಲಿಸುತ್ತಾರೆ. ತಮ್ಮ ಹಳ್ಳಿಯ ಕೆಲವು ಮಹಿಳೆಯರಿಗೆ ಡ್ರೈವಿಂಗ್ ಹೇಳಿಕೊಡುತ್ತಾರೆ. ತಂದೆ ಮಾಡಿದ ಸಾಲವನ್ನು ತಮ್ಮ ದುಡಿಮೆಯ ಹಣದಿಂದ ತೀರಿಸಿದ್ದಾರೆ. ಅಕ್ಕನ ಮದುವೆ ನೆರವೇರಿಸಲು ಪ್ರಧಾನ ಪಾತ್ರ ವಹಿಸಿದ್ದಾರೆ. ಸಣ್ಣ ಮನೆಯನ್ನು ಕಟ್ಟಿಕೊಂಡು, ಜೀವನದ ಸಮಸ್ಯೆ – ಸವಾಲುಗಳನ್ನು ಎದುರಿಸುವ ದಿಟ್ಟೆಯಾಗಿ ಅವರಿರುವ ಹಳ್ಳಿಯ ಪ್ರಾಂತ್ಯದಲ್ಲಿ ಜನರು ಗುರುತಿಸುವಷ್ಟು ಮಾದರಿ ಮಹಿಳೆಯಾಗಿದ್ದಾರೆ. ಮೊದಮೊದಲು ಶರ್ಟ್ ಧರಿಸುವ ತಾಹಿರಾರ ಗಂಡಸರು ಮಾಡುವ ಕೆಲಸಗಳನ್ನು ಅವರ ಹಳ್ಳಿಯ ಜನರು ಸ್ವಾಗತಿಸಲಿಲ್ಲ. ತಾಹಿರಾ ಇದ್ಯಾವುದನ್ನು ಲೆಕ್ಕಿಸದೇ ಮುನ್ನಡೆದರು. ಮಹಿಳಾ ಸಬಲೀಕರಣದ ಉದಾಹರಣೆಯಾದರು.

ಈ ಚಲನಚಿತ್ರದ ಹೈಲೈಟ್ ಎಂದರೆ ಅದರ ಸರಳತೆ. ಸಮಾಜದಲ್ಲಿ ಮಹಿಳೆ ಎದುರಿಸುವ ಕೆಲವು ಉಪಟಳಗಳ ಝಲಕ್ ಇಲ್ಲಿದೆ. ತಾಹೀರಾ ತನ್ನ ಮನೆಯಲ್ಲಿ ತನ್ನ ಅಕ್ಕ ಮತ್ತು ಆಕೆಯ ಸಣ್ಣ ವಯಸ್ಸಿನ ಮಗಳು ವಾಸಿಸಲು ಅವಕಾಶ ಕಲ್ಪಿಸಿರುತ್ತಾಳೆ. ಆದರೆ ಆಕೆಯ ಭಾವ ಪಿತೃಪ್ರಧಾನತೆ – ಪುರುಷತ್ವದ ಪ್ರತೀಕವಾಗಿ ಆಕೆಯ ಮನೆಯನ್ನು ಮಾರಲು ಸನ್ನದ್ಧನಾಗುತ್ತಾನೆ. ಇದನ್ನು ವಿರೋಧಿಸುವ ಆಕೆಯ ಅಕ್ಕನನ್ನು ಬಯ್ಯುತ್ತಾನೆ, ಹೊಡೆಯುತ್ತಾನೆ. ಈ ಸಂದರ್ಭದಲ್ಲಿ ತಾಹೀರಾ ಒಬ್ಬ ದೃಷ್ಟಿ ವೈಕಲ್ಯತೆಯಿರುವ ವ್ಯಕ್ತಿ- ಬಿಚಪುವನ್ನು (ನಟ ಕ್ಲಿಂಟ್ ಮ್ಯಾಥ್ಯೂ – ಈತ ನಿಜ ಜೀವನದಲ್ಲೂ ದೃಷ್ಟಿಹೀನ ವ್ಯಕ್ತಿಯಾಗಿದ್ದು ಶಿಕ್ಷಕರಾಗಿದ್ದಾರೆ) ವಿವಾಹವಾಗಲು ಮುಂದಾಗುತ್ತಾಳೆ. ತನ್ನ ಗಂಡನ ಮನೆಯ ಪರಿಸ್ಥಿತಿಯಿಂದಾಗಿ ಆಕೆ ಎರಡು ಲಕ್ಷ‌ರೂಗಳನ್ನು ಹೊಂದಿಸಬೇಕಾಗುತ್ತದೆ. ಆಕೆಯ ಶ್ರಮಜೀವನ ಮತ್ತು ಪ್ರಾಮಾಣಿಕತೆಯ ಅರಿವಿರುವ ಒಬ್ಬ ಪರಿಚಿತ ಲೇವಾದೇವಿಗಾರ ಬಡ್ಡಿರಹಿತ ಸಾಲ ನೀಡುತ್ತಾನೆ. ಮದುವೆಯ ತರುವಾಯ ತಾಹೀರಾ ಮನೆಯ ಒಳಗಡೆ ಹಾಗೂ ಹೊರಗಡೆ ದುಡಿದು ಸಂಸಾರದ ಸಾರಥ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ.

ಸರಳ ನಿರೂಪಣೆ ಹೊಂದಿರುವ ಇದೊಂದು ಫೀಲ್-ಗುಡ್ ಚಲನಚಿತ್ರ. ಯಾವ ಹಿನ್ನೆಲೆ ಸಂಗೀತ ಹೊಂದಿರದ ಹಾಡುಗಳು ಆಲಿಸಲು ಹಿತವಾಗಿವೆ. ಸಿನಿಮಾಟೋಗ್ರಫಿ ಚಲನಚಿತ್ರದ ವಸ್ತುವಿಗೆ ತಕ್ಕಂತಿದೆ. ಕೇರಳದ ಗ್ರಾಮೀಣ ಸೊಗಡನ್ನು ಹಿಡಿಯುವುದರಲ್ಲಿ ಸಫಲವಾಗಿದೆ. ನಾಯಕ ಮತ್ತು ನಾಯಕಿ ಪ್ರಥಮ ಬಾರಿಗೆ ಕ್ಯಾಮೆರಾವನ್ನು ಎದುರಿಸಿದ್ದರಿಂದ ತಾವು ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಯಿತೆಂದು ನಿರ್ದೇಶಕರು ಒಂದೆಡೆ ಹೇಳಿದ್ದಾರೆ. ಭೂತಕಾಲದ ಸಂಗತಿಗಳನ್ನು ಫ್ಲಾಶ್ ಬ್ಯಾಕ್ ತಂತ್ರ ಬಳಸಿ ಚಿತ್ರೀಕರಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಭಾರತಿ ಭಾರತೀಯ ಸಿನಿಮಾ ಸ್ಪರ್ಧೆ (2020) ವಿಭಾಗದಲ್ಲಿ ‘ತಾಹಿರಾ’ಗೆ ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು. ಸ್ಫೂರ್ತಿದಾಯಕ ಕತೆಯುಳ್ಳ ಇದು ನಿಜಕ್ಕೂ ಮಹತ್ವದ ಪ್ರಯೋಗ.

LEAVE A REPLY

Connect with

Please enter your comment!
Please enter your name here