ನಟ ರಜನೀಕಾಂತ್‌ ಅಭಿನಯದ ‘ಅಣ್ಣಾತ್ತೆ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕತೆಯ ಸುಳಿವು ಬಿಟ್ಟುಕೊಡದ ನಿರ್ದೇಶಕ ಶಿವ ಅವರು ಟೀಸರ್‌ನಲ್ಲಿ 70ರ ಹರೆಯದ ರಜನೀ ಎನರ್ಜಿ, ಚಾರ್ಮ್‌ ಹಿಡಿದಿಟ್ಟಿದ್ದಾರೆ. ನವೆಂಬರ್‌ 4ರಂದು ಸಿನಿಮಾ ಬಿಡುಗಡೆಯಾಗಲಿದೆ.

ರಜನೀಕಾಂತ್ ಅಭಿಮಾನಿಗಳಿಗೆ ದಸರಾ ಹಬ್ಬದ ಉಡುಗೊರೆಯಾಗಿ ‘ಅಣ್ಣಾತ್ತೆ’ ತಮಿಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹಳ್ಳಿಗ ‘ಪಾಲಸಾಮಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಜನೀಕಾಂತ್. ನಿರ್ದೇಶಕ ಶಿವ ಇಲ್ಲಿ ಮತ್ತೊಮ್ಮೆ ರಜನೀ ಚರಿಷ್ಮಾ, ಸ್ಟೈಲ್‌ ಮತ್ತು ಎನರ್ಜಿಯನ್ನು ತೋರಿಸಿದ್ದಾರೆ. ಟೀಸರ್‌ನಲ್ಲಿ ಚಿತ್ರದ ಕತೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಎಂದಿಗೂ ಮುಕ್ಕಾಗದ ತೆರೆಯ ಮೇಲಿನ ರಜನೀಕಾಂತ್‌ ಮ್ಯಾಜಿಕ್‌ ತೋರಿಸಲಷ್ಟೇ ಟೀಸರನ್ನು ಸೀಮಿತಗೊಳಿಸಿದ್ದಾರೆ ನಿರ್ದೇಶಕರು.

“ಇಲ್ಲಿಯವರೆಗೆ ಈ ಹಳ್ಳಿಗನ ಒಳ್ಳೆಯತನವನ್ನಷ್ಟೇ ನೀನು ನೋಡಿದ್ದೀಯ. ಈಗ ಅವನ ಮತ್ತೊಂದು ಮುಖ ನೋಡಲಿದ್ದೀಯ” ಎನ್ನುವ ಡೈಲಾಗ್ ಕೇಳಿಸುತ್ತದೆ. ಈ ಪಂಚ್‌ಲೈನ್‌ ಹಿಂದೆ ಅವರದ್ದೇ ಸಿನಿಮಾದ ಡೈಲಾಗ್ ನೆನಪಿಸುತ್ತದೆ. “ನೀನು ಅಣ್ಣಾಮಲೈನನ್ನು ಸ್ನೇಹಿತನನ್ನಾಗಿ ನೋಡಿದ್ದೀ. ಇನ್ನು ಮುಂದೆ ಅಣ್ಣಾಮಲೈನನ್ನು ನಿನ್ನ ಶತ್ರುವನ್ನಾಗಿ ನೋಡುತ್ತೀಯ” ಎಂದು ‘ಅಣ್ಣಾಮಲೈ’ ಚಿತ್ರದಲ್ಲಿ ಡೈಲಾಗ್ ಹೊಡೆದಿದ್ದರು. ಈಗ ‘ಅಣ್ಣಾತ್ತೆ’ ಚಿತ್ರದ ಪಂಚಿಂಗ್ ಡೈಲಾಗ್‌ ಅದನ್ನು ನೆನಪಿಸುತ್ತದೆ. ಚಿತ್ರದಲ್ಲಿ ರಜನಿ ಪಾತ್ರಕ್ಕೆ ಎರಡು ಶೇಡ್‌ ಇದ್ದಂತಿದೆ.

‘ಅಣ್ಣಾತ್ತೆ’ ಸಿನಿಮಾ ನವೆಂಬರ್‌ 4ರಂದು ತೆರೆಕಾಣಲಿದೆ. ಹಾಗೆ ನೋಡಿದರೆ ಚಿತ್ರದ ಬಿಡುಗಡೆ ದಿನಾಂಕ ನಾಲ್ಕಾರು ಬಾರಿ ಬದಲವಾವಣೆಯಾಗಿದೆ. ಕೋವಿಡ್‌ನಿಂದಾಗಿ ಸಿನಿಮಾದ ಚಿತ್ರೀಕರಣ ಸಾಕಷ್ಟು ವಿಳಂಬವಾಯ್ತು. 2020ರ ಡಿಸೆಂಬರ್‌ನಲ್ಲಿ ಚಿತ್ರತಂಡ ಕೆಲವರು ಕೋವಿಡ್‌ ಪಾಸಿಟಿವ್‌ನಿಂದ ಬಳಲಿದ್ದರು. ಆಗ ರಜನೀಕಾಂತ್‌ ಕೋವಿಡ್‌ನಿಂದ ಪಾರಾಗಿದ್ದರೂ ಅಪಾರ ಒತ್ತಡಕ್ಕೀಡಾಗಿದ್ದರು. ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಈ ವರ್ಷ ಏಪ್ರಿಲ್‌ನಲ್ಲಿ ಮತ್ತೆ ಚಿತ್ರೀಕರಣಕ್ಕೆ ಹಾಜರಾದರು. 35 ದಿನಗಳ ಕಾಲ ನಿರಂತರ ಚಿತ್ರೀಕರಣದಲ್ಲಿ ಪಾಲ್ಗೊಂಡ ಅವರು ತಮ್ಮ ಭಾಗದ ಪೋರ್ಷನ್ ಮುಗಿಸಿದರು. ನಯನತಾರಾ ಮತ್ತು ಕೀರ್ತಿ ಸುರೇಶ್ ನಾಯಕಿಯರಾಗಿ ಅಭಿನಯಿಸುತ್ತಿದ್ದು, ಖುಷ್ಬೂ, ಪ್ರಕಾಶ್ ರೈ ಚಿತ್ರದ ಇತರೆ ಪ್ರಮುಖ ತಾರೆಯರು.

LEAVE A REPLY

Connect with

Please enter your comment!
Please enter your name here