ಮನಸ್ಸಿಗೆ ವಿಲಕ್ಷಣತೆ ತುಂಬದೆ ಅಂತ್ಯದವರೆಗೂ ಕುತೂಹಲ ಕಾಪಾಡುವ ಸಿನಿಮಾ ‘ಅಂತಾಕ್ಷರಿ.’ ತಾಂತ್ರಿಕ ಮಟ್ಟುಗಳು ಉತ್ತಮವಿದ್ದು ಕತೆಯಲ್ಲಿ ಹೊಸತನವಿದೆ. ಥ್ರಿಲ್ಲರ್ ಪ್ರೇಮಿಗಳು ನೋಡಲೇಬೇಕಾದ ಈ ಚಿತ್ರ Sony Livನಲ್ಲಿ ಸ್ಟ್ರೀಂ ಆಗುತ್ತಿದೆ.
ಸಿನಿಮಾ ಮಂದಿ ಮನಶ್ಶಾಸ್ತ್ರದ ವಿಚಾರವನ್ನು ಮನುಷ್ಯತ್ವದ ನೆಲೆಗಟ್ಟಿನ ದೃಷ್ಟಿಯಲ್ಲಿ ಕಂಡದ್ದು ಕಡಿಮೆ. ಸೈಕೋ ಕಿಲ್ಲರ್‌ಗಳನ್ನು ಬೀಭತ್ಸ ರೀತಿಯಲ್ಲಿ ಚಿತ್ರಿಸಿ ಕೊನೆಗೆ ಆ ಪಾತ್ರಕ್ಕೆ ದಾರುಣ ಅಂತ್ಯ ನೀಡುವುದು ಸಿನಿಮಾ ಮಂದಿಯ ವಾಡಿಕೆ. ಆ ವಾಡಿಕೆಯನ್ನು ಮಳಯಾಳ ಸಿನಿಮಾ ‘ಅಂತಾಕ್ಷರಿ’ ಮುರಿದಿದೆ. ಖಿನ್ನತೆಯನ್ನು ಅನುಕಂಪದಿಂದ ಕಾಣುವ ಕ್ರೈಂ ಥ್ರಿಲ್ಲರ್ ಇದು.
ಒಬ್ಬ ಹಾಡಿ ಕೊನೆಗೆ ಬಿಟ್ಟ ಅಕ್ಷರ ಮತ್ತೊಬ್ಬನಿಗೆ ಹೊಸ ಹಾಡಿನ ಕೊಂಡಿಯಾಗುವುದು ಅಂತಾಕ್ಷರಿ. ಇದು ಎಲ್ಲರಿಗೂ ತಿಳಿದ ಆಟ. ಸಾಮಾಜಿಕ ಮಾಧ್ಯಮಗಳು ಬರುವ ಮೊದಲು ಸಮೂಹ ಕೂಡಿ ಆಡುತ್ತಿದ್ದ ನಿರಪಾಯಕಾರಿ ಆಟವಿದು. ಅದೇ ನಿರಪಾಯಕಾರಿ ಆಟವನ್ನು ನಿರ್ದೇಶಕ ವಿಪಿನ್ ದಾಸ್ ಬಲು ಅಪಾಯಕಾರಿ ಕ್ರೈಂನ ಜತೆ ಜೋಡಿಸಿದ್ದಾರೆ. ತನಿಖೆ ಮಾಡುವ ಪೊಲೀಸರ ಪಾಲಿಗೆ ಒಂದು ಕೇಸಿನ ಕೊನೆ ಮತ್ತೊಂದು ಕೇಸಿನ ಆರಂಭ. ಕ್ರಿಮಿನಲ್‌ಗಳಿಗೆ ಒಂದು ಘಟನೆಯ ಕೊನೆ ಮತ್ತೊಂದು ಘಟನೆಯ ಆರಂಭ. ಹಳೆಯ ನೋವಿನ ಅಂತ್ಯಾಕ್ಷರಕ್ಕೂ ಹೊಸ ನೋವಿನ ಆದಿ ಅಕ್ಷರಕ್ಕೂ ನಡುವೆ ಮನಸ್ಸು ಒಂದು ಕೊಂಡಿ.
ವಿರಳ ಜನಸಂಖ್ಯೆಯ, ಅಷ್ಟಾಗಿ ಚಟುವಟಿಕೆಗಳಿಲ್ಲದ ಊರು ಕೇದಾರಮ್. ಅಲ್ಲಿನ ಠಾಣೆಗೆ ಸರ್ಕಲ್ ಇನ್ಸ್ಪೆಕ್ಟರ್ ದಾಸ್. ಆತ ಕಳ್ಳರನ್ನು ಹೊಡೆದು ಬಡಿದು ಬಾಯಿ ಬಿಡಿಸುವ ಪೊಲೀಸ್ ಅಧಿಕಾರಿಯಲ್ಲ. ಅಪರಾಧಿಗಳ ಜತೆ ಅಂತಾಕ್ಷರಿ ಹಾಡಿಸುತ್ತ ಮಜಾ ನೋಡುವ ಪಾಪದ ಅಧಿಕಾರಿ. ಇಂತಿಪ್ಪ ಪೊಲೀಸಪ್ಪನಿಗೇ ಒಂದು ದಿನ ಓರ್ವ ಕರೆ ಮಾಡಿ ಒಂದು ಹಾಡು ಹೇಳಿ “ಮುಂದಿನ ಅಕ್ಷರ ನಿನ್ನದು, ಹಾಡದಿದ್ದರೆ ನಿನ್ನ ಮಗಳ ಬಾಯಲ್ಲಿ ನಾನು ಹಾಡಿಸ್ತೀನಿ” ಎಂದು ಧಮ್ಕಿ ಹಾಕುತ್ತಾನೆ. ದಾಸ್‌ನ ಸನ್ನಿವೇಶದ ದೃಷ್ಟಿಯಲ್ಲಿ ಮತ್ತು ಸಿನಿಮಾದ ಅದುವರೆಗಿನ ಪಯಣದ ಮಟ್ಟಿನಲ್ಲಿ ಇದೊಂದು ಗಂಭೀರವಲ್ಲದ ಫೋನ್ ಕರೆ. ಠಾಣೆಯ ನಿತ್ಯ ಆಗುಹೋಗುಗಳ ಮಧ್ಯೆ ಬಂದ ಆ ಕರೆಯನ್ನು ದಾಸ್ ಮತ್ತು ಪ್ರೇಕ್ಷಕ ಇಬ್ಬರೂ ಒಟ್ಟಿಗೇ ಕಡೆಗಣಿಸುವಂತೆ ಚಿತ್ರಿಸಲಾಗಿದೆ.
ಅದೊಂದು ದಿನ ದಾಸ್‌ನ ಮಗಳು ರಬ್ಬರ್ ತೋಟದ ನಡುವೆ ಎಂದಿನಂತೆ ಶಾಲೆಯಿಂದ ನಡೆದು ಬರುತ್ತಿರುತ್ತಾಳೆ. ಒಂಟಿ ದಾರಿಯ ಮಧ್ಯೆ ಅಂತಾಕ್ಷರಿಯ ಸವಾಲು ಹಾಕುವ ಅಶರೀರವಾಣಿ ಕೇಳುತ್ತದೆ. ಆಕೆ ಭಯದಿಂದ ನಡುಗುವಾಗ ತೆರೆಯ ಈಚೆ ಬದಿಯ ನೋಡುಗ ಮರುಗುತ್ತಾನೆ. ಮುಸುಕುಧಾರಿ ಆಗಂತುಕ ಆ ಪುಟ್ಟ ಹುಡುಗಿಯನ್ನು ಅಟ್ಟಾಡಿಸಿಕೊಂಡು ಬಂದು ಕುತ್ತಿಗೆ ಬಿಗಿಯುತ್ತಾನೆ. ಚೀರಾಟ ಕೇಳಿ ಹುಡುಗಿಯ ತಾಯಿ ಸಮಯಕ್ಕೆ ಸರಿಯಾಗಿ ಬರದಿದ್ದರೆ ಅದೊಂದು ಯೋಜಿತ ಕೊಲೆಯಾಗುತ್ತಿತ್ತು. ಕೊಲೆ ಯತ್ನಕ್ಕೆ ಸ್ಟೆತಾಸ್ಕೋಪ್ ಬಳಕೆ ಮಾಡಲಾಗಿದೆ ಎಂಬುದಷ್ಟೇ ದಾಸ್‌ಗೆ ಸಿಗುವ ಕೊನೆಯ ಅಕ್ಷರ. ಅದಕ್ಕೆ ಹೊಂದುವ ಹಾಡನ್ನು ಹುಡುಕುವುದು ಈತನ ಮುಂದೆ ಬರುವ ಸವಾಲು. ಇಷ್ಟರ ಮೇಲೆ ಕತೆಯ ಅಂಶಗಳನ್ನು ಇಲ್ಲಿ ಬಿಟ್ಟುಕೊಟ್ಟರೆ ಕ್ರೈಂ ಥಿಲ್ಲರ್ ಕೊಡುವ ಥ್ರಿಲ್‌ಗೆ ಧಕ್ಕೆಯಾಗುವ ಅಪಾಯವಿದೆ.
ಪ್ರೇಕ್ಷಕನ ಕುತೂಹಲ ತೀವ್ರಗೊಳಿಸುವುದು ಈ ಕತೆಗೆ ಸರಿಸಮಾನಾಗಿ ನಡೆಯುವ ಇನ್ನೆರಡು ಕತೆಗಳು. ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿ ಆ ಯಾತನೆಯನ್ನು ಈಗಲೂ ಅನುಭವಿಸುವ ನಯನ ಒಂದು ಕಡೆ. ಮತ್ತೊಂದೆಡೆ ಹೆಂಡತಿ-ಮಗನ ಜತೆ ಅಮಾನುಷವಾಗಿ ವರ್ತಿಸುವ ತಂದೆ. ಆತ ಹಾಗಾಗಲು ಅವನ ಬಾಲ್ಯ ಹೇಗಿದ್ದಿರಬಹುದು? ಅದು ಪ್ರೇಕ್ಷಕನ ಊಹೆಗೆ ಬಿಟ್ಟದ್ದು. ಆದರೆ ಆತನಿಂದಾಗಿ ಇನ್ನೊಬ್ಬ ಹುಡುಗಿ ಮತ್ತು ಯುವಕನೊಬ್ಬನ ಮನಸ್ಸಿನ ಮೇಲೆ ಆಗುತ್ತಿರುವ ಘಾಸಿ ಎದ್ದು ಕಾಣುತ್ತದೆ. ಆ ಎರಡೂ ಉಪಕತೆಗಳು ಅಂತಾಕ್ಷರಿ ಆಟದ ನಡುವೆ ಬಂದು ಹೋಗುವ ಹಾಡಿನಂತೆ. ಮೂಲ ಕತೆ ಮುಂದೆ ಹೋಗಲು ಸಹಾಯ ಮಾಡುತ್ತದೆ. ಜತೆಗೆ ಪ್ರೇಕ್ಷಕನ ಕುತೂಹಲ ಇಮ್ಮಡಿಗೊಳಿಸುವ ತಂತ್ರವಾಗಿ ಚಿತ್ರಕಥೆಯಲ್ಲಿ ಸಾಫಲ್ಯ ಕಾಣುತ್ತದೆ. ಮೂಲಕಥೆಯನ್ನು ಎಷ್ಟರ ಮಟ್ಟಿಗೆ ಅಲುಗಾಡಿಸಬೇಕೋ ಅಷ್ಟು ಅಲುಗಾಡಿಸುತ್ತದೆ.
ಒಬ್ಬ ವ್ಯಕ್ತಿ ಇವತ್ತು ಎಷ್ಟು ಕೆಟ್ಟವನಾಗಿದ್ದಾನೆ ಎಂಬುದನ್ನು ಬಾಲ್ಯದಲ್ಲಿ ಆತನಿಗೆ ಆದ ಘಾಸಿ ಮತ್ತು ಅದರಿಂದ ಹೊರಬರಲು ಅವನಿಗೆ ಸಿಕ್ಕ ಸಹಕಾರ ನಿರ್ಧರಿಸುತ್ತದೆ ಎಂಬುದು ಸಿನಿಮಾ ಒಟ್ಟಾರೆಯಾಗಿ ಹೇಳುವ ಅಂಶ. ಉಪಕತೆಯಲ್ಲಿ ಅದು ಮೇಲ್ನೋಟಕ್ಕೇ ಕಂಡರೆ ಮೂಲ ಕತೆ ಅದನ್ನು ಕೊನೆಯವರೆಗೂ ಬಚ್ಚಿಡುತ್ತದೆ. ಹಾಗೆಂದು ಬಾಲ್ಯದ ಆಘಾತಗಳೇ ಒಬ್ಬನನ್ನು ಇಂದಿಗೆ ಆಗಂತುಕನನ್ನಾಗಿ ಮಾಡಬೇಕಿಲ್ಲ. ಅದರ ಹೊರತಾಗಿಯೂ ಮನುಷ್ಯ ವಿನಾಕಾರಣ ಕೆಟ್ಟತನ ಮೈಗೂಡಿಸಿಕೊಳ್ಳಬಹುದು ಎಂಬುದಕ್ಕೆ ದಾಸ್‌ನ ಮೇಲಿನ ಒಬ್ಬ ಅಧಿಕಾರಿ ಹಾಗೂ ಕೆಳಗಿನ ಮತ್ತೊಬ್ಬ ಅಧಿಕಾರಿ ಉದಾಹರಣೆ. ಎಸ್‌ಪಿಯ ಕೆಡುಕುತನ ಸಾಂದರ್ಭಿಕವಾದರೆ ಮುಖ್ಯ ಪೇದೆಯ ಕೆಡುಕಿನಲ್ಲಿ ವೈಯಕ್ತಿಕ ಲಾಭದ ಉದ್ದೇಶವೇ ಅಧಿಕ.
ಕತೆಯ ಹೊರತಾಗಿ ಇಲ್ಲಿ ಗಮನ ಸೆಳೆಯುವ ವಿಚಾರ ಹಿನ್ನೆಲೆ ಸಂಗೀತ. ತೀರಾ ಸಾಮಾನ್ಯವಾಗಿ ಹಾದು ಹೋಗಬಹುದಾದ ದೃಶ್ಯಕ್ಕೆ ಹಿನ್ನೆಲೆಯಲ್ಲಿ ಬರುವ ವಾದ್ಯಗಳು ತೀಕ್ಷತೆಯನ್ನು ತಂದುಕೊಟ್ಟಿದೆ. ಪಾತ್ರದ ಆಲೋಚನೆಯಲ್ಲಿ ಆಗುವ ಬದಲಾವಣೆ, ದೃಶ್ಯಕ್ಕೆ ಇದ್ದಕ್ಕಿದ್ದಂತೆ ಸಿಗುವ ಓಘ ಹಾಗೂ ಭಾವ ಪಲ್ಲಟತೆ ಅಷ್ಟು ಪರಿಣಾಮಕಾರಿ ಹಿನ್ನೆಲೆ ಸಂಗೀತ ಇಲ್ಲದೆ ಸಾಧ್ಯ ಆಗುತ್ತಿರಲಿಲ್ಲ. ಆರಂಭದಿಂದ ಅಂತ್ಯದವರೆಗೆ ಪ್ರೇಕ್ಷಕನನ್ನು ಕುತೂಹಲದ ಮಡುವಿನಲ್ಲಿ ನಿಲ್ಲಿಸುವ ಮತ್ತೊಂದು ತಾಂತ್ರಿಕ ಕಸುಬುದಾರಿಕೆ ಕ್ಯಾಮರಾ. ಕೃತಕ ಬೆಳಕಿನ ಅತಿ ಕಡಿಮೆ ಪ್ರಯೋಗ ಮತ್ತು ಫ್ರೇಮ್ ಪೂರ್ತಿ ಬೆಳಕು ತುಂಬಲು ಹೊರಡದ ಕ್ಯಾಮರಾಮ್ಯಾನ್ ಕೆಲಸ ಸಿನಿಮಾದ ಉದ್ದಕ್ಕೂ ನಿರ್ದೇಶಕನಿಗೆ ಸಾಥ್ ಕೊಟ್ಟಿದೆ.
ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದೇ ಸಿದ್ಧ ಎನ್ನದೆ “ನಾನು ಅವನನ್ನು ಹಿಡಿಯಲಾರೆನೇನೋ” ಎಂದು ಹೆಂಡತಿ ಬಳಿ ಆತಂಕ ತೋಡಿಕೊಳ್ಳುವುದು ಪೊಲೀಸ್ ಪಾತ್ರಕ್ಕೆ ಸಹಜತೆ ತುಂಬಿದೆ. ಈ ಹೊತ್ತಿಗೆ ಕೊಲೆಗಾರ ಯಾರೆಂಬ ವಿವರ ಪ್ರೇಕ್ಷಕನಿಗೂ ಸಿಕ್ಕಿರುತ್ತದೆ, ಆದರೆ ದಾಸ್‌ನಂತೆಯೇ ನಾವೂ ಅವನನ್ನು ನೋಡಿರುವುದಿಲ್ಲ. ಮುಖ ತೋರಿಸುವ ಮುನ್ನವೇ ಇಂಥ ಸನ್ನಿವೇಶದ ಮೂಲಕ ಭೀಕರತೆ ತುಂಬಿಸಿರುವುದು ಅನನ್ಯ ಕಲೆಗಾರಿಕೆ. ಕೊನೆಗೂ ಕ್ರಿಮಿನಲ್ ಮೇಲೆ ಮೃದು ಧೋರಣೆ ಅನುಸರಿಸುವುದು ಹೊಸ ಪ್ರಯತ್ನ. ಮನೋರೋಗಕ್ಕೆ ಶಿಕ್ಷೆಗಿಂತಲೂ ಹೆಚ್ಚು ಮದ್ದು ಮಾಡುವುದು ಮುಖ್ಯ ಎಂದು ಸಿನಿಮಾದ ಕೊನೆಗೆ ದಪ್ಪ ಅಕ್ಷರದ ಸಂದೇಶವಿಲ್ಲ. ಆ ಸಂದೇಶ ಕತೆಯ ಭಾಗವಾಗಿದೆ. ಮನಸ್ಸಿಗೆ ವಿಲಕ್ಷಣತೆ ತುಂಬದೆ ಅಂತ್ಯದವರೆಗೂ ಕುತೂಹಲ ಕಾಪಾಡುವ ಸಿನಿಮಾ ‘ಅಂತಾಕ್ಷರಿ.’