ಪ್ರವಾಸಕ್ಕೆಂದು ತೆರಳಿ ಸಂಕಷ್ಟಕ್ಕೆ ಸಿಲುಕುವ ದಂಪತಿಯ ರೋಚಕ ಎಳೆಯೊಂದಿಗೆ ನಿರ್ದೇಶಕ ಪ್ರಸನ್ನ ವಿತನಗೆ ಕತೆ ಹೇಳುತ್ತಾರೆ. ಶ್ರೀಲಂಕಾದ ರಾಜಕೀಯ, ಸಾಮಾಜಿಕ ಸಮಸ್ಯೆಗಳು ಪ್ರೇಕ್ಷಕರಿಗೆ ಪರಿಚಯವಾಗುತ್ತವೆ. ರೋಷನ್‌ ಮ್ಯಾಥ್ಯೂ, ದರ್ಶನ ರಾಜೇಂದ್ರನ್‌, ಶ್ಯಾಮ್‌ ಫರ್ನಾಂಡೋ ಸೇರಿದಂತೆ ಎಲ್ಲರ ನಟನೆ ನೈಜವಾಗಿದೆ.

ಕೇರಳದಿಂದ ದಂಪತಿಗಳಿಬ್ಬರು ತಮ್ಮ ಮದುವೆ ವಾರ್ಷಿಕೋತ್ಸವಕ್ಕೆಂದು ಶ್ರೀಲಂಕಾಗೆ ಪ್ರವಾಸ ಹೋಗುತ್ತಾರೆ. ಅದೆಂಥಾ ಕೆಟ್ಟ ಟೈಮ್ ಅಂದ್ರೆ…‌ ಅವರು ಅಲ್ಲಿಗೆ ಕಾಲಿಟ್ಟ ದಿನವೇ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತುತ್ತತುದಿಗೆ ಮುಟ್ಟಿದ ಸಮಯ. ಅಲ್ಲಿನ‌ ಜನರೆಲ್ಲ ದಂಗೆಯೆದ್ದು ಸರ್ಕಾರದ ವಿರುದ್ಧ ಗ್ಯಾಸ್, ವಿದ್ಯುಚ್ಛಕ್ತಿ ಎಲ್ಲಕ್ಕೂ ಸರಿಯಾದ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ದೇಶದ ಪ್ರಧಾನಿ ಈ‌ ಕೂಡಲೇ ರಾಜೀನಾಮೆ ಕೊಡಬೇಕೆಂದು ರಸ್ತೆರಸ್ತೆಗಳಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಇವರು ಶ್ರೀಲಂಕಾದಲ್ಲಿ ಇಳಿದ ರಾತ್ರಿಯೇ ಇವರ ಹೋಟೆಲ್ ರೂಮ್‌ಗೆ ನುಗ್ಗುವ ಕಳ್ಳರು ಇವರ ಫೋನು, ಲ್ಯಾಪ್‌ಟಾಪ್ ಎಲ್ಲವನ್ನು ಕದ್ದೊಯ್ಯುತ್ತಾರೆ.

ಅಲ್ಲಿಂದ ಶುರುವಾಗುತ್ತದೆ ಸರ್ಕಸ್. ಇಂಥ ರೋಚಕ ಎಳೆಯಿಟ್ಟುಕೊಂಡೇ ಕಥೆ ಹೇಳುತ್ತ ಅನೇಕ ರಾಜಕೀಯ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿರ್ದೇಶಕ ಪ್ರಸನ್ನ ವಿತನಗೆ (Prasanna Vithanage) ಅದ್ಭುತ ಪ್ಯಾಕೇಜ್ ಒಂದನ್ನು ‘ಪ್ಯಾರಡೈಸ್’ ಸಿನಿಮಾದ ಮೂಲಕ ನಮಗೆ ನೀಡುತ್ತಾರೆ. ಇದು ಮೂಲತಃ ಶ್ರೀಲಂಕಾ ಸಿನಿಮಾ. ಆದರೆ ಸಿಂಹಳ, ಮಲಯಾಳಂ, ಹಿಂದಿ, ‌ಇಂಗ್ಲೀಷ್ ಭಾಷೆಗಳೆಲ್ಲ ಬರುವುದರಿಂದ ಇದು ಬೇರೊಂದು ದೇಶದ ಸಿನಿಮಾ ಅಂತ ನಮಗನ್ನಿಸುವುದಿಲ್ಲ. ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಕೂಡ ತಮ್ಮ ಮದ್ರಾಸ್ ಟಾಕೀಸ್ ಮೂಲಕ ಈ ಸಿನಿಮಾದ ಸಹನಿರ್ಮಾಪಕರಾಗಿದ್ದಾರೆ.

ಸಂಬಂಧಗಳ ಸೂಕ್ಷ್ಮಗಳನ್ನು, ಬೇರೆ ಬೇರೆ ವ್ಯಕ್ತಿತ್ವಗಳನ್ನು ಎಷ್ಟು ಚೆನ್ನಾಗಿ ಸೆರೆಹಿಡಿದು ನಮ್ಮ ಮುಂದಿಡುತ್ತಾರೆಂದರೆ ಅದನ್ನು ನೋಡಿಯೇ ಅನುಭವಿಸಬೇಕು. ಇದು ಯಾವ Genre ಸಿನಿಮಾ ಅಂತ ಹೇಳಲು‌ ಕಷ್ಟ. ಏಕೆಂದರೆ ಎಲ್ಲವೂ ಇಲ್ಲಿ ಬರುತ್ತವೆ. ಶ್ರೀಲಂಕಾದ ಜನರು ಹೇಗೆ ನಮ್ಮನ್ನು ಟ್ರೀಟ್ ಮಾಡುತ್ತಾರೆ, ಅಲ್ಲಿನ ಸಿಂಹಳೀಯರ ದೃಷ್ಟಿಯಲ್ಲಿ ಸ್ಥಳೀಯ ತಮಿಳರು ಹೇಗಿದ್ದಾರೆ ಎಲ್ಲ ವಿಷಯಗಳು ಬರುತ್ತವೆ. ಅವೆಲ್ಲವೂ ವಾಸ್ತವಕ್ಕೆ ಸಿಕ್ಕಾಪಟ್ಟೆ ಹತ್ತಿರ. ರೋಷನ್‌ ಮ್ಯಾಥ್ಯೂ, ದರ್ಶನ ರಾಜೇಂದ್ರನ್‌, ಶ್ಯಾಮ್‌ ಫರ್ನಾಂಡೋ ಸೇರಿದಂತೆ ಎಲ್ಲರ ನಟನೆ ನೈಜವಾಗಿದೆ.

ಇತ್ತೀಚೆಗಷ್ಟೇ ಶ್ರೀಲಂಕಾ ಪ್ರವಾಸ ಮುಗಿಸಿ ಬಂದ ನನಗೆ ಮತ್ತೊಮ್ಮೆ ಹೋಗಿ‌ ಬಂದಂತಾಯ್ತು. ಅಲ್ಲಿನ ಹಸಿರು, ರಸ್ತೆಗಳು, ಜನರು, ಅವರ ಭಾಷೆ, ಪರಿಸರ, ಜನಜೀವನ, ಮುಗ್ಧತೆ ಇತ್ಯಾದಿತ್ಯಾದಿಗಳನ್ನು ಮತ್ತೊಮ್ಮೆ ನೋಡಿದಂತಾಯ್ತು. ಕಾರ್ ಚಾಲಕ ಹಾಗೂ ಗೈಡ್ ರಾಮಾಯಣ ನಡೆದ ಜಾಗಗಳನ್ನು ತೋರಿಸುತ್ತ ಅದರ ಬಗ್ಗೆ ವಿಷಯಗಳನ್ನು ಹೇಳುವಾಗ ಅಲ್ಲೇ ಇದ್ದೇನೆನ್ನಿಸಿತು. ಜೊತೆಗೆ ಆ ಜಾಗಗಳ ಬಗ್ಗೆ ಬೇರೆ ಬೇರೆ ದೃಷ್ಟಿಕೋನಗಳನ್ನು ಪಾತ್ರಗಳ‌ ಕೈಲಿ‌ ಎಷ್ಟು ಚೆನ್ನಾಗಿ ನಿರ್ಭಿಡೆಯಿಂದ ಹೇಳಿಸಿದ್ದಾರೆಂದರೆ ನಾನು ನಮ್ಮ ಗೈಡ್ ಜೊತೆ ಅದೇ ರೀತಿಯ ವಾದ ಮಾಡುತ್ತಿದ್ದುದೆಲ್ಲ ನೆನಪಾಯ್ತು.

LEAVE A REPLY

Connect with

Please enter your comment!
Please enter your name here