ಸಲ್ಮಾನ್‌ ನಟನೆಯ ‘ಅಂತಿಮ್‌’ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಸಿನಿಮಾ ತೆರೆಕಾಣಲಿದೆ. ‘ಕೆಜಿಎಫ್‌’ ಖ್ಯಾತಿಯ ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ ಎನ್ನುವುದು ವಿಶೇಷ.

‘ಕೆಜಿಎಫ್‌’ ಸಿನಿಮಾದ ದೊಡ್ಡ ಯಶಸ್ಸಿನಿಂದಾಗಿ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಪರಿಚಯವಾದರು. ಚಿತ್ರದ ಹಾಂಟಿಂಗ್ ಹಿನ್ನೆಲೆ ಸಂಗೀತದಿಂದ ಎಲ್ಲರ ಮನಗೆದ್ದ ರವಿ ಬಸ್ರೂರು ಅವರಿಗೆ ಅದ್ಧೂರಿ ಬಹುಭಾಷಾ ಸಿನಿಮಾಗಳಿಗೆ ಆಹ್ವಾನ ಸಿಗುತ್ತಿದೆ. ಸಲ್ಮಾನ್ ಖಾನ್ ಅಭಿನಯದ ‘ಅಂತಿಮ್‌’ ಹಿಂದಿ ಚಿತ್ರದ ಸಂಗೀತ ಅವರದ್ದೆ. ಅಚ್ಚರಿಯೆಂದರೆ ಈ ವಿಷಯ ಹೆಚ್ಚಾಗಿ ಜನರಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲ ಸಿನಿಮಾ ಕುರಿತಾಗಿಯೂ ನಿರ್ಮಾಪಕರು ಹೆಚ್ಚು ಸುದ್ದಿ ಮಾಡಿರಲಿಲ್ಲ. ಈಗ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದ್ದು, ಮಾಹಿತಿಗಳು ಸಿಗುತ್ತಿವೆ. “ಹೌದು, ಇದೊಂದು ಅಪೂರ್ವ ಅವಕಾಶ. ದೊಡ್ಡ ಸಿನಿಮಾಗೆ ಸಂಗೀತ ಸಂಯೋಜಿಸುವ ಸಂದರ್ಭ ಒದಗಿಬಂದಿದ್ದು ಒಂದು ರೀತಿ ಅಚ್ಚರಿಯೇ ಆಗಿತ್ತು. ಎಲ್ಲವೂ ಚೆನ್ನಾಗಿ ಆಗಿದ್ದು ಚಿತ್ರದ ಬಗ್ಗೆ ಹೆಚ್ಚು ಹೇಳುವಂತಿಲ್ಲ” ಎನ್ನುತ್ತಾರೆ ಸಂಗೀತ ಸಂಯೋಜಕ ರವಿ ಬಸ್ರೂರು.

ಸದ್ದಿಲ್ಲದೆ ಸಿನಿಮಾ ಪೂರ್ಣಗೊಳಿಸಿರುವ ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಮುಂದಿನ ತಿಂಗಳು ನವೆಂಬರ್‌ 26ರಂದು ಸಿನಿಮಾ ತೆರೆಕಾಣಲಿದೆ. ಇದೇ ದಿನ ಜಾನ್ ಅಬ್ರಹಾಂ ನಟನೆಯ ‘ಸತ್ಯಮೇವ ಜಯತೇ 2’ ತೆರೆಗೆ ಬರುತ್ತಿದೆ ಎನ್ನುವುದು ವಿಶೇಷ. ಚಿತ್ರದ ನಿರ್ಮಾಪಕರು ಮೋಷನ್ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ಭೂಗತ ಜಗತ್ತಿನ ಕತೆ ಎನ್ನಲಾಗಿದ್ದು, ಸಲ್ಮಾನ್ ಅವರಿಗೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರವಿದೆ. ಭೂಗತ ಪಾತಕಿ ಪಾತ್ರದಲ್ಲಿ ಸಲ್ಮಾನ್‌ ತಂಗಿಯ ಗಂಡ ಆಯುಷ್ ಶರ್ಮಾ ಇದ್ದಾರೆ. ಮಹೇಶ್ ಮಂಜ್ರೇಕರ್‌ ಚಿತ್ರದ ನಿರ್ದೇಶಕರು. ಆಯುಷ್‌ರನ್ನು ತೆರೆಗೆ ಪರಿಚಯಿಸಲು 2018ರಲ್ಲಿ ಸಲ್ಮಾನ್‌ ‘ಲವ್‌ರಾತ್ರಿ’ ಸಿನಿಮಾ ನಿರ್ಮಿಸಿದ್ದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚಿತ್ತು. ಇದೀಗ ಆಕ್ಷನ್ ಚಿತ್ರದ ಮೂಲಕ ಆಯುಷ್‌ಗೆ ಬಾಲಿವುಡ್‌ನಲ್ಲಿ ನೆಲೆ ಕಲ್ಪಿಸುವುದು ಸಲ್ಲೂ ಯೋಜನೆ. ಸದ್ಯ ಸಲ್ಮಾನ್ ಬಿಗ್‌ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಟೈಗರ್ 3, ಕಿಕ್‌ 2, ಕಭಿ ಈದ್ ಕಭಿ ದಿವಾಲಿ… ಅವರ ಮುಂದಿನ ಚಿತ್ರಗಳು. ಅಮೀರ್ ಖಾನ್‌ರ ‘ಲಾಲ್ ಸಿಮಗ್ ಛಡ್ಡಾ’ ಮತ್ತು ಶಾರುಖ್ ಖಾನ್‌ರ ‘ಪಠಾಣ್‌’ ಚಿತ್ರದ ಅತಿಥಿ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here