ಮೇಘಾ ಅಕ್ಷರಾ ನಿರ್ದೇಶನದ ‘ರಾಕ್ಷಸ ತಂತ್ರ’ ಸಿನಿಮಾ ಇದೇ ಮಾರ್ಚ್‌ 22ರಂದು ತೆರೆಕಾಣಲಿದೆ. ಹಾರರ್‌ ಕಥಾಹಂದರದ ಚಿತ್ರವಿದು. ರಕ್ಷಿತಾ ನಾಗರಾಜು, ಸುಖೇಶ್ ಆನಂದ್, ರಕ್ಷಿತಾ ಮಲ್ಲಿಕ್, ತಿಲಕ್ ಕುಮಾರ್ ಹಾಗೂ ನಿರ್ದೇಶಕಿ ಮೇಘಾ ಅಕ್ಷರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರೇಮಾ ಕಾರಂತ್, ಕವಿತಾ ಲಂಕೇಶ್, ಸುಮನಾ ಕಿತ್ತೂರು, ರೂಪಾ ಅಯ್ಯರ್, ರಿಶಿಕಾ ಶರ್ಮ ಸೇರಿದಂತೆ ನಿರ್ದೇಶಕಿಯರ ಪಟ್ಟಿಗೆ ಈಗ ಮೇಘಾ ಅಕ್ಷರ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅವರೀಗ ಕಂಪ್ಯೂಟರ್ ಸ್ಕ್ರೀನ್ ಕುರಿತಾದ ಹಾರರ್ ಕಥಾಹಂದರದ ‘ರಾಕ್ಷಸ ತಂತ್ರ’ ಸಿನಿಮಾ ತೆರೆಗೆ ತರುತ್ತಿದ್ದಾರೆ. ಚಿತ್ರದ ನಿರ್ಮಾಣವೂ ಅವರದೆ ಎನ್ನುವುದು ವಿಶೇಷ. ಈ ಚಿತ್ರ ಇದೇ ಮಾರ್ಚ್‌ 22ರಂದು ಬಿಡುಗಡೆಯಾಗುತ್ತಿದೆ. ಐವರು ಸ್ನೇಹಿತರು ವಿಡಿಯೋ ಕಾನ್ಫರೆನ್ಸ್ ಕಾಲ್ ಮಾಡಿಕೊಂಡಿರುವಾಗ ಅಚಾನಕ್ಕಾಗಿ ಒಂದು ವಿಚಿತ್ರವನ್ನು ನೋಡುತ್ತಾರೆ. ಅದರಿಂದ ಮುಂದೆ ಏನೇನಾಗುತ್ತಾ ಹೋಗುತ್ತದೆ ಎಂಬುದನ್ನು ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಘಟನಾವಳಿಗಳೊಂದಿಗೆ ನಿರ್ದೇಶಕಿ ಮೇಘಾ ಅಕ್ಷರಾ ನಿರೂಪಿಸಿದ್ದಾರೆ.

ಚಿತ್ರದಲ್ಲಿ ನಾಯಕ, ನಾಯಕಿ ಅಂತೇನಿಲ್ಲ, ಐದು ಪಾತ್ರಗಳಿವೆ. ಎಲ್ಲಾ ಪಾತ್ರಗಳೂ ಇಡೀ ಸಿನಿಮಾ ಕಾಣಿಸುತ್ತವೆ. ರಾತ್ರಿ ಆರಂಭವಾಗಿ ಬೆಳಗಿನ ಜಾವದ ವೇಳೆಗೆ ಮುಗಿಯುವ ಕಥೆಯಿದು. ಚಿತ್ರದ ಪ್ರಮುಖ ತಾರಾಗಣದಲ್ಲಿ ರಕ್ಷಿತಾ ನಾಗರಾಜು, ಸುಖೇಶ್ ಆನಂದ್, ರಕ್ಷಿತಾ ಮಲ್ಲಿಕ್, ತಿಲಕ್ ಕುಮಾರ್ ಹಾಗೂ ನಿರ್ದೇಶಕಿ ಮೇಘಾ ಅಕ್ಷರಾ ಕೂಡ ನಟಿಸಿದ್ದಾರೆ. ದಿನೇಶ್ ಬಾಬು ಅವರ ಛಾಯಾಗ್ರಹಣ, ಯಶವಂತ್ ಅವರ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ವಿರಳ. ಮೇಘಾ ಅಕ್ಷರಾ ಅವರ ಸಿನಿಮಾಗೆ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದು ಕಾದುನೋಡಬೇಕು.

LEAVE A REPLY

Connect with

Please enter your comment!
Please enter your name here