ಭಾರತೀಯ ಮಹಿಳಾ ಕ್ರಿಕೆಟ್‌ನ ಮಾಜಿ ಕ್ಯಾಪ್ಟನ್ ಝುಲನ್ ಗೋಸ್ವಾಮಿ ಹಿಂದಿ ಬಯೋಪಿಕ್ ಸಿನಿಮಾ ‘ಚಕ್ಡಾ ಎಕ್ಸ್‌ಪ್ರೆಸ್’ ಗೆ ನಟಿ ಅನುಷ್ಕಾ ಶರ್ಮಾ ತಯಾರಿ ನಡೆಸಿದ್ದಾರೆ. ತಮ್ಮ ತಯಾರಿ ಕುರಿತ ವೀಡಿಯೋವೊಂದನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ನಟಿ ಅನುಷ್ಕಾ ಶರ್ಮಾ ತೆರೆ ಮೇಲೆ ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ ‘ಜೀರೊ’. ಶಾರುಖ್ ಖಾನ್‌ರ ಈ ಚಿತ್ರದ ನಂತರ ಅನುಷ್ಕಾ ದೊಡ್ಡ ಬ್ರೇಕ್ ಪಡೆದಿದ್ದರು. ನಾಲ್ಕು ವರ್ಷಗಳ ನಂತರ ‘ಚಕ್ಡಾ ಎಕ್ಸ್‌ಪ್ರೆಸ್’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್‌ನ ಮಾಜಿ ಕ್ಯಾಪ್ಟನ್ ಝುಲನ್ ಗೋಸ್ವಾಮಿ ಬಯೋಪಿಕ್ ಇದು. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿರುವ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಝುಲನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಚಿತ್ರಕಥೆ ರಚಿಸಿದ್ದು ಪ್ರೋಸಿತ್ ರಾಯ್ ನಿರ್ದೇಶಿಸಲಿದ್ದಾರೆ. ಅನುಷ್ಕಾರ ಕ್ಲೀನ್ ಸ್ಟೇಟ್ ಫಿಲ್ಮ್ಸ್ ಸಿನಿಮಾ ನಿರ್ಮಿಸುತ್ತಿದೆ. “Get-Sweat-Go! #ChakdaXpress #prep getting hard and intense as we are counting days ” ಎಂದು ಚಿತ್ರಕ್ಕೆ ತಾವು ನಡೆಸುತ್ತಿರುವ ತಯಾರಿಗೆ ಸಂಬಂಧಿಸಿದ ವೀಡಿಯೋವೊಂದನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಸ್ಪೋರ್ಟ್ಸ್ ಬಯೋಪಿಕ್‌ಗಾಗಿ ಅನುಷ್ಕಾ ವಾರದ ಆರು ದಿನ ಎರಡು, ಮೂರು ಗಂಟೆಗಳ ಕಾಲ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ವರಿಸಿರುವ ಅನುಷ್ಕಾ 2021ರ ಜನವರಿಯಲ್ಲಿ ತಾಯಿಯಾದರು. ವಿರಾಟ್ – ಅನುಷ್ಕಾ ಪುತ್ರಿ ‘ವಮಿಕಾ’ ಗೆ ಈಗ ಒಂದೂಕಾಲು ವರ್ಷ. ಬೆಳ್ಳಿತೆರೆಗೆ ಮರಳುತ್ತಿರುವ ಅನುಷ್ಕಾಗೆ ಝುಲನ್ ಗೋಸ್ವಾಮಿ ಪಾತ್ರ ನಿರ್ವಹಿಸುತ್ತಿರುವುದು ಹೆಮ್ಮೆ ತಂದಿದೆ. ಝುಲನ್ ಹೆಸರಿನಲ್ಲಿ ಕೆಲವು ದಾಖಲೆಗಳೂ ಇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಅವರ ಹೆಸರಿನಲ್ಲಿದೆ. ಮಹಿಳಾ ಕ್ರಿಕೆಟ್ ವರ್ಲ್ಡ್‌ಕಪ್‌ನಲ್ಲಿ ಅತಿ ಹೆಚ್ಚು 39 ವಿಕೆಟ್ ಪಡೆದ ದಾಖಲೆಯನ್ನು ಆಸ್ಟ್ರೇಲಿಯಾದ ಲಿನ್ ಫುಲ್‌ಸ್ಟನ್ ಅವರೊಂದಿಗೆ ಶೇರ್ ಮಾಡಿದ್ದಾರೆ.
ಸಿನಿಮಾ ಕುರಿತು ಮಾತನಾಡುವ ಅನುಷ್ಕಾ, “ತ್ಯಾಗ, ಸ್ಫೂರ್ತಿಯ ಗುಣಗಳುಳ್ಳ ಈ ಸಿನಿಮಾ ವಿಶೇಷವಾದದ್ದು. ಝುಲನ್ ಗೋಸ್ವಾಮಿ ಅವರ ಬದುಕಿನ ಪ್ರೇರಣೆಯಿಂದ ತಯಾರಾಗುತ್ತಿರುವ ಸಿನಿಮಾ. ಭಾರತದ ಮಹಿಳಾ ಕ್ರಿಕೆಟ್ ಬೆಳೆದುಬಂದ ಹಾದಿಯನ್ನೊಮ್ಮೆ ತಿರುಗಿ ನೋಡುವ ಪ್ರಯತ್ನ. ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸುವುದೇ ದುಸ್ತರವಾಗಿದ್ದ ದಿನಗಳಲ್ಲಿ ಭಾರತದ ಮಹಿಳಾ ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾದ ಜರ್ನೀಯೇ ರೋಚಕವಾದದ್ದು. ಝುಲನ್ ಕ್ರಿಕೆಟ್ ಬದುಕಿನ ಚಿತ್ರಣ ಯುವ ಪೀಳಿಗೆಗೆ ಸ್ಫೂರ್ತಿಯಾಗಲಿದೆ. ಈ ಸಿನಿಮಾ ಅವರಿಗೆ ನಾವು ಸಲ್ಲಿಸುತ್ತಿರುವ ಗೌರವವೂ ಹೌದು” ಎನ್ನುತ್ತಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.