ಸಿನಿಮಾದ ಶೀರ್ಷಿಕೆ ಘೋಷಿಸುವುದರೊಂದಿಗೇ ಸುದ್ದಿಯಾಗುತ್ತಾರೆ ಉಪೇಂದ್ರ. ಅವರ ನಿರ್ದೇಶನದ ನೂತನ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಪೋಸ್ಟರ್‌ ನೋಡಿದಾಗ ಸದ್ಯಕ್ಕೆ ಚಿತ್ರದ ಶೀರ್ಷಿಕೆ ‘U’ ಎಂದು ಭಾವಿಸಬಹುದು.

ವಿಶಿಷ್ಟ ನಿರೂಪಣೆಯೊಂದಿಗೆ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ನಿರ್ದೇಶಕ ಉಪೇಂದ್ರ. ಕತೆ, ನಿರೂಪಣೆಯ ಜೊತೆಗೆ ಗಿಮಿಕ್‌ಗಳಿಂದಲೂ ಸುದ್ದಿಯಾಗುವ ವ್ಯಕ್ತಿ. ನಟನಾಗಿ ಯಶಸ್ಸು ಸಿಗುತ್ತಿದ್ದಂತೆ ನಿರ್ದೇಶನದಿಂದ ಅವರು ದೂರ ಉಳಿದಿದ್ದರು. ಇದೀಗ ಆರೇಳು ವರ್ಷಗಳ ನಂತರ ‘U’ ಸಿನಿಮಾದೊಂದಿಗೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಚಿತ್ರದ ಕತೆ, ಚಿತ್ರಕಥೆಯನ್ನುಅವರೇ ರಚಿಸಿದ್ದು, ಅವರೇ ಹೀರೋ. ಇಂದು ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಕೊಂಬಿನ ಕುದುರೆ ಏರಿರುವ ಅವರ ಫಸ್ಟ್‌ಲುಕ್‌ ‘ದಿ ಲಾರ್ಡ್‌ ಆಫ್‌ ದಿ ರಿಂಗ್ಸ್‌’ ಇಂಗ್ಲಿಷ್‌ ಚಿತ್ರವನ್ನು ನೆನಪಿಸುತ್ತದೆ.

ನೂತನ ಸಿನಿಮಾದ ಪೋಸ್ಟರ್‌ನಲ್ಲಿ ಉಪೇಂದ್ರ ಹಲವು ಸಂಕೇತಗಳನ್ನು ಅಳವಡಿಸಿದ್ದಾರೆ. ಕಪ್ಪು ಕುದುರೆ ಮೇಲೆ ತೀಕ್ಷ್ಣ ನೋಟದ ವ್ಯಕ್ತಿಯಾಗಿ ಅವರಿದ್ದು, ಪೋಸ್ಟರ್‌ನಲ್ಲಿ ಸ್ಯಾಟಲೈಟ್‌ ಚಿತ್ರವಿದೆ. ದೂರದಲ್ಲೆಲ್ಲೋ ಒಂದು ಊರು ಕಾಣಿಸುತ್ತದೆ. ಕುದುರೆ ಲಾಳದ ವಿನ್ಯಾಸದಲ್ಲಿರುವ ಶೀರ್ಷಿಕೆಯ ಬಗ್ಗೆ ಅವರು ವಿವರಣೆ ನೀಡಿಲ್ಲ. ಎಲ್ಲವನ್ನೂ ನೋಡುಗರ ಗ್ರಹಿಕೆಗೇ ಬಿಟ್ಟಿದ್ದಾರೆ. ಲಹರಿ ಸಂಸ್ಥೆಯ ಮನೋಹರನ್‌ ಮತ್ತು ಕೆ.ಪಿ.ಶ್ರೀಕಾಂತ್‌ ಸಿನಿಮಾ ನಿರ್ಮಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ತೆರೆಕಾಣಲಿದೆ.

ಟ್ವಿಟರ್‌ನಲ್ಲಿ ಫಸ್ಟ್‌ಲುಕ್‌ ಶೇರ್‌ ಮಾಡಿರುವ ಉಪೇಂದ್ರ, “ಸಿನಿಮಾ ರಂಗದಲ್ಲಿ 33 ವರ್ಷ ‘ಉಪೇಂದ್ರ’ ಕತೆ ಬರೆದವರು ನೀವು, ಚಿತ್ರಕಥೆ, ಸಂಭಾಷಣೆ ರಚಿಸಿದವರು ನೀವು, ನಮ್ಮ ಚಪ್ಪಾಳೆ, ಶಿಳ್ಳೆಗಳ ಮೂಲಕ ನಿರ್ದೇಶಿಸಿದಿರಿ. ಈ ಚಿತ್ರವನ್ನು ಪ್ರಜಾ ಪ್ರಭುವಾದ ಅಭಿಮಾನಿಗಳಿಗೆ ಅರ್ಪಿಸುತ್ತಿದ್ದೇನೆ” ಎಂದು ಬರೆದಿದ್ದಾರೆ. ಉಪೇಂದ್ರ ನಿರ್ದೇಶನದಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ‘ಉಪ್ಪಿ 2’ (2015). ಅವರೀಗ ‘ಕಬ್ಜ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಘನಿ’ ಬಾಕ್ಸಿಂಗ್‌ ಡ್ರಾಮಾ ತೆಲುಗು ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ವರುಣ್‌ ತೇಜ್‌ ಈ ಚಿತ್ರದ ಹೀರೋ.

LEAVE A REPLY

Connect with

Please enter your comment!
Please enter your name here