ನಮ್ಮೊಳಗಿದ್ದೂ ನಮ್ಮಂತಾಗದೆ ಎಂಬಂತೆ, ಈ ಸಮಾಜದ ಒಳಗೇ ತನ್ನದೊಂದು ಪ್ರತ್ಯೇಕ ಲೋಕದಲ್ಲಿ ಬದುಕುವ ಕ್ರೈಸ್ತ ಕನ್ಯಾ ಸ್ತ್ರೀಯರ ಮನದಾಳದ ತುಮುಲ ‘ಅಕ್ವೇರಿಯಂ’. ಸೈನಾ ಪ್ಲೇ ಒಟಿಟಿಯಲ್ಲಿ ಈ ಮಲಯಾಳಂ ಸಿನಿಮಾ ಸ್ಟ್ರೀಂ ಆಗುತ್ತಿದೆ.
ನಮ್ಮಲ್ಲಿ ಧರ್ಮನಿರಪೇಕ್ಷತಾ ವಾದಕ್ಕೆ ಹೆಚ್ಚಾಗಿ ಸುದ್ದಿಯಾಗುವುದು ಕೇರಳ ರಾಜ್ಯ. ರಾಜಕೀಯವಿರಲಿ, ಧಾರ್ಮಿಕ ವಿಚಾರವಿರಲಿ, ಮಲಯಾಳಂ ಸಿನಿಮಾಗಳಲ್ಲಿ ಮಡಿವಂತಿಕೆ ಮೀರಿದ ಕಥಾವಸ್ತು ಇದ್ದಾಗಲೂ ಅಲ್ಲಿನ ಸಮಾಜ ಅದಕ್ಕೆ ಪ್ರತಿರೋಧ ತೋರಿದ್ದು ಕಡಿಮೆ. ಆದರೆ ‘ಅಕ್ವೇರಿಯಂ’ ಸಿನಿಮಾಕ್ಕೆ ಬಂದ ತೊಡಕುಗಳು ಒಂದೆರಡಲ್ಲ. ಸಮಾಜದ ಪ್ರತಿಕ್ರಿಯೆ ಬದಿಗಿರಲಿ, ಯಕಶ್ಚಿತ್ ಅಲ್ಲಿನ ಸೆನ್ಸಾರ್ ಮಂಡಳಿ ಕೂಡ ಸಿನಿಮಾಕ್ಕೆ ಸರ್ಟಿಫಿಕೇಟ್ ಕೊಡಲು ನಿರಾಕರಿಸಿತ್ತು. ಹಾಗೆಂದು ಅಶ್ಲೀಲವಾದ ದೃಶ್ಯಗಳು ಸಿನಿಮಾದಲ್ಲಿಲ್ಲ. ಆದರೂ ಕೇರಳ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಟಿ.ದೀಪೇಶ್ ನಿರ್ದೇಶನದ ‘ಅಕ್ವೇರಿಯಂ’ ಹತ್ತು ವರ್ಷಗಳ ಕಾಲ ಡಬ್ಬದಲ್ಲೇ ಕಳೆಯಬೇಕಾಯಿತು. ಕೊಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಏಕೈಕ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಸಿನಿಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಒಂದು ವರ್ಗಕ್ಕೆ ಅನಿಸಿದ ಕಾರಣ ಬಿಡುಗಡೆಗೆ ತೊಡಕಾಯಿತು.
ಸೆನ್ಸಾರ್ ಮಂಡಳಿಯ ಅಸಮಾಧಾನಕ್ಕೆ ಕಾರಣ ಸಿನಿಮಾದ ಕಥಾ ವಸ್ತು. ತಮ್ಮದೇ ಸೀಮಿತ ಪರಿಧಿಯೊಳಗೆ ಬದುಕುವ ಕ್ರೈಸ್ತ ಕನ್ಯಾಸ್ತ್ರೀ, ಅರ್ಥಾತ್ ನನ್‌ಗಳ ಬಗೆಗಿನ ಕಥೆಯಿದು. ನಿರ್ದೇಶಕರು ಕೊನೆಗೂ ಸೆನ್ಸಾರ್ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಿ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಮತ್ತೆ ಸಿನಿಮಾಕ್ಕೆ ತಡೆ ಕೋರಿ ಸಿಸ್ಟರ್ ಜೋಸಿಯಾ ಮತ್ತು ಸಿಸ್ಟರ್ ಮೇರಿ ಹೈಕೋರ್ಟ್ ಮೆಟ್ಟಿಲೇರಿದರು. ಈ ಸಿನಿಮಾ ತಮ್ಮ ಭಾವನೆಗಳಿಗೆ ಧಕ್ಕೆ ತರುತ್ತದೆ, ಹಾಗಾಗಿ ಒಟಿಟಿ ವೇದಿಕೆಗಳಲ್ಲಿ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂಬುದು ಅವರ ವಾದದ ಮುಖ್ಯಾಂಶ. ತಡೆ ನೀಡಲು ಕೋರ್ಟ್ ಕಳೆದ ವರ್ಷ ನಿರಾಕರಿಸಿದ ನಂತರ ಈ ವಾರ ಸೈಮಾ ಪ್ಲೇ ಒಟಿಟಿಯಲ್ಲಿ ‘ಅಕ್ವೇರಿಯಂ’ ಸ್ಟ್ರೀಂ ಆಗುತ್ತಿದೆ.
ಮೂಲತಃ ಈ ಚಿತ್ರ ಕ್ರೈಸ್ತ ಧರ್ಮವನ್ನಾಗಲಿ, ಏಸು ಕ್ರಿಸ್ತನ ನೀತಿಗಳನ್ನಾಗಲಿ ಅವಹೇಳನ ಮಾಡಿಲ್ಲ. ಹಾಗೆ ನೋಡಿದರೆ ಏಸು ಕ್ರಿಸ್ತನ ಸಂದೇಶಗಳಿಗೆ ಉನ್ನತ ಸ್ಥಾನವನ್ನೇ ನೀಡಿದೆ. ಸಿನಿಮಾ ಬೊಟ್ಟು ಮಾಡುವುದು ಕ್ಯಾಥೋಲಿಕ್ ಚರ್ಚುಗಳ ಅಧಿಕಾರಿಯುತ ಧೋರಣೆಗಳ ಮೇಲೆ. ಸೂಕ್ಷ್ಮವಾಗಿ ನೋಡಿದರೆ ಕ್ಯಾಥೋಲಿಕ್ ಪಂಗಡದಿಂದ ಬೇರ್ಪಟ್ಟು ಪ್ರೊಟೆಸ್ಟೆಂಟ್ ಪಂಗಡ ಸ್ಥಾಪನೆಯಾದದ್ದು ಚರ್ಚ್‌ನ ಇವೇ ದೋಷಗಳ ಆಧಾರದ ಮೇಲೆ. ಚರ್ಚ್‌ನ ಒಟ್ಟಾರೆ ಅಧಿಕಾರ ಫಾದರ್ ಕೈಯಲ್ಲಿದ್ದರೆ ನನ್‌ಗಳ ದೇಖಾವೆ ಮಾಡುವುದು ಮದರ್‌ನ ಜವಾಬ್ದಾರಿ. ಈ ಅಧಿಕಾರಯುತ ಸ್ಥಾನಗಳಲ್ಲಿ ಅಪಾತ್ರರು ಕೂತರೆ ಏನೆಲ್ಲ ಅಪಸವ್ಯಗಳು ಆಗಬಹುದೋ ಅವುಗಳನ್ನು ‘ಅಕ್ವೇರಿಯಂ’ ಕಟ್ಟಿಕೊಡುತ್ತದೆ.
ಏಸುಕ್ರಿಸ್ತನನ್ನು ತೀವ್ರವಾಗಿ ಆರಾಧಿಸುವಾಕೆ ಸಿಸ್ಟರ್ ಎಲಿಸಿ. ಕ್ಯಾಥೋಲಿಕ್ ನಂಬಿಕೆಯ ಪ್ರಕಾರ ನನ್‌ಗಳ ದೇಹ ಮತ್ತು ಆತ್ಮ ಎರಡೂ ಏಸುಕ್ರಿಸ್ತನ ಸೇವೆಗೆ ಮುಡಿಪು. ಮನಸ್ಸನ್ನು ಸಂಪೂರ್ಣ ಅವನಲ್ಲಿರಿಸಿ, ದೇಹವನ್ನು ಅವನ ಸೃಷ್ಟಿಯ ಸೇವೆಗೆ ಮೀಸಲಿಡುವುದು ಕನ್ಯಾ ಸ್ತ್ರೀಯರ ಸಿದ್ಧಾಂತ. ಈ ಸಿದ್ಧಾಂತದ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ ಎಲಿಸಿ ವಿದ್ಯಾವಂತೆ, ಶಿಲ್ಪಕಲೆಯಲ್ಲಿ ಡಾಕ್ಟರೇಟ್ ಪಡೆದಿರುವಾಕೆ.
ಕಾನ್ವೆಂಟಿನಲ್ಲಿ ಆಕೆಯ ಕೊಠಡಿ ಹಂಚಿಕೊಳ್ಳುವವಳು ಸಿಸ್ಟರ್ ಜೆಸಿಂತಾ. ಎಲಿಸಿ ಆರ್ಥಿಕವಾಗಿ ಸದೃಢ ಮನೆತನದಿಂದ ಬಂದಿದ್ದರೆ ಜೆಸಿಂತಾ ಬಡ ಕುಟುಂಬದಿಂದ ಬಂದಾಕೆ. ಏಸುವಿನೆಡೆಗಿನ ಪ್ರೇಮ ಎಲಿಸಿಯನ್ನು ಪವಿತ್ರವಾಗಿಟ್ಟಿದ್ದರೆ ಜೆಸಿಂತಾ ಅದಾಗಲೇ ಕಾನ್ವೆಂಟಿನ ಒಳರಾಜಕೀಯಕ್ಕೆ ಬಲಿಯಾದವಳು. ಸಿನಿಮಾದ ಆರಂಭದಲ್ಲೇ ಈ ಎರಡು ಪಾತ್ರಗಳ ನಡುವಿನ ಭಿನ್ನತೆಯನ್ನು ನಿರ್ದೇಶಕ ಪ್ರಚುರಪಡಿಸುತ್ತಾರೆ. ಜೆಸಿಂತಾಗೆ ಅದಾಗಲೇ ಒಟ್ಟು ವ್ಯವಸ್ಥೆಯ ಬಗೆಗೇ ಮೂದಲಿಕೆ. “ಮಾನಸಿಕ ಅಸ್ವಸ್ಥರು, ಸಲಿಂಗ ಕಾಮಿಗಳು.. ಇಂಥವರೆಲ್ಲಾ ಅದೃಷ್ಟವಂತ ಕನ್ಯಾಸ್ತ್ರೀಯರೇ?” ಎಂದು ಜೆಸಿಂತಾ ಕೇಳುವ ಹೊತ್ತಿಗೆ ನಮಗಿನ್ನೂ ಆ ಕಾನ್ವೆಂಟಿನ ಪೂರ್ಣ ಪರಿಚಯ ಆಗಿರುವುದಿಲ್ಲ. ಬಡತನದಿಂದ ಪಾರಾಗುವ ಏಕೈಕ ಉದ್ದೇಶದಿಂದ ನನ್ ಆಗಿರುವ ಜೆಸಿಂತಾ ಉತ್ಪೇಕ್ಷೆಯಿಂದ ಆಡಿದ ಮಾತಿನಂತೆ ತೋರುತ್ತದೆ.
ಆದರೆ ನಂತರ ಅಲ್ಲಿನ ಸಹಾಯಕಿ ಪಿಸುಗುಡುವ ಮಾತಿನಲ್ಲಿ ನಮಗೆ ಕಾನ್ವೆಂಟು ಪರಿಚಯವಾಗುತ್ತದೆ. ಅದಾಗಲೇ ಅಲ್ಲಿ ಪಾದ್ರಿಯೊಬ್ಬನ ಜತೆಗಿನ ಅನೈತಿಕ ಸಂಪರ್ಕದ ಕಾರಣದಿಂದ ಮನೋರೋಗಿ ಆಗಿ ಏಕಾಂತ ಕೊಠಡಿ ಸೇರಿದ ಇಳಿವಯಸ್ಸಿನ ಸಿಸ್ಟರ್ ರೋಸಲೀನ್ ಬಗ್ಗೆ ಸಹಾಯಕಿ ತೀರಾ ಸಹಜವಾಗಿ ಪಿಸುಗುಟ್ಟಿ ಹೇಳುತ್ತಾಳೆ. ಅಪವಾದ ಹೊತ್ತ ಪಾದ್ರಿಗೆ ವರ್ಷಗಳ ಹಿಂದೆಯೇ ವರ್ಗಾವಣೆಯ ಶಿಕ್ಷೆ ದೊರಕಿದೆ. ದಶಕಗಳ ಹಿಂದೆ ಅದು ಭಾರಿ ಗುಲ್ಲೆಬ್ಬಿಸಿದ್ದ ವಿಚಾರ. ಕಾನ್ವೆಂಟಿನ ಮುಖ್ಯಸ್ಥೆ ಮದರ್ ಕೂಡ ಉಳಿದವರಿಗಿಂತ ಹೆಚ್ಚು ತನ್ನ ಬಗ್ಗೆಯೇ ಚಿಂತಿಸುವ ಸ್ವಾರ್ಥಿ ಎಂಬುದೂ ಮೊದಲಿಗೆ ನಮಗೆ ತಿಳಿಯುವುದು ಪಿಸುಮಾತಿನ ಮೂಲಕವೇ. ತದನಂತರ ತೆರೆದುಕೊಳ್ಳುವ ಮದರ್‌ನ ವ್ಯಕ್ತಿತ್ವ ನಿರೀಕ್ಷಿತವಾಗಿ ಸ್ವಾರ್ಥದಿಂದಲೇ ಕೂಡಿರುತ್ತದೆ. ಅದಕ್ಕೆ ಕಾನ್ವೆಂಟಿನ ಒಳಗಿನ ಅವಸ್ಥೆ-ಅವ್ಯವಸ್ಥೆಗಳೂ ಪೂರಕ ವೇದಿಕೆ.
ಕತೆ ಹಾಗೂ ಪಾತ್ರಗಳು ಅನಾವರಣಗೊಳ್ಳುತ್ತಾ ಸಾಗಿದ ಹಾಗೆ ಜೆಸಿಂತಾಳ ಪಾತ್ರ ಚೌಕಟ್ಟಿಗೆ ಹೆಚ್ಚು ಅರ್ಥ ದೊರಕುತ್ತಾ ಸಾಗುತ್ತದೆ. ಮೂಲತಃ ಆಕೆ ಸಾಮಾನ್ಯ ಹೆಣ್ಣು. ತಾನು ಸುಂದರಿಯಾಗಿ ಕಾಣಬೇಕು, ಬಣ್ಣದ ಬಟ್ಟೆ ಧರಿಸಬೇಕು ಎಂಬ ಮನಸ್ಥಿತಿಯ ಅವಳು ಅನಿವಾರ್ಯತೆಯ ಬ್ರಹ್ಮಚಾರಿಣಿ. ಹಾಗಾಗಿ ಆಕೆ ಬೀಳುವುದು ಅಲ್ಲಿನ ಮುಖ್ಯಪಾದ್ರಿಯ ಕಾಮಕೂಪಕ್ಕೆ. ಬಿಡುವಿನ ವೇಳೆ ಸಿಕ್ಕಾಗೆಲ್ಲಾ ಫೇಸ್ಬುಕ್ಕಿನಲ್ಲಿ ಟಾಮ್ ಆ್ಯಂಡ್ ಜೆರಿ ವೀಕ್ಷಿಸುವ ಪಾದ್ರಿಯ ಬೌದ್ಧಿಕ ಮಟ್ಟವನ್ನು ತೋರಿಸಲು ನಿರ್ದೇಶಕ ಪರಿಣಾಮಕಾರಿ ಸಂಕೇತಗಳನ್ನು ಬಳಸಿದ್ದಾರೆ.
ತನಗೂ ಇತರ ಹೆಣ್ಣಿನಂತೆ ತಾಯ್ತನ ಅನುಭವಿಸಬೇಕು, ತನಗೂ ಮಕ್ಕಳಾಗಬೇಕು ಎಂಬ ಮನಸ್ಥಿತಿ ಜೆಸಿಂತಾಳದ್ದು. ಈ ಹಂತದಲ್ಲಿ ಕಾನ್ವೆಂಟಿನಲ್ಲಿ ಸಾಕಿದ ಕುರಿ ಈಯುವುದು, ಅದರ ಹೆರಿಗೆಗೆ ನನ್‌ಗಳು ಸಾಕ್ಷಿಯಾಗುವುದು ನಿರ್ದೇಶಕರು ಬಳಸಿದ ಪರಿಣಾಮಕಾರಿ ರೂಪಕ. ಜೆಸಿಂತಾಳನ್ನು ಪಾದ್ರಿ ದುರುಪಯೋಗ ಪಡಿಸಿದ ಎಂಬುದು ಆಕೆಗೆ ತಿಳಿಯುವುದು ಅತ ಮತ್ತೊಬ್ಬಳನ್ನು ಬಳಿಸಿಕೊಳ್ಳುವ ಹಂತಕ್ಕೆ ಹೋದಾಗಲೇ. ಘಾಸಿಯಾಗಿ ಆತ್ಮಹತ್ಯೆಗೆ ಶರಣಾಗುವ ಅವಳ ಸಾವು ಪೊಲೀಸ್ ವಿಚಾರಣೆಗೂ ಒಳಪಡುವುದಿಲ್ಲ. ಅದು ಅಕ್ವೇರಿಯಂನ ಒಳಗಿನ ಸಹಜ ಸಾವಷ್ಟೇ.
ಈ ನಡುವೆ ಎಲಿಸಾಗೆ ತೊಡಕಾಗುವುದು ಆಕೆಯ ಪ್ರಾಮಾಣಿಕತನ, ಧರ್ಮನಿಷ್ಠೆ. ಯೇಸುಕ್ರಿಸ್ತನ ಬೃಹತ್ ಪ್ರತಿಮೆ ಚರ್ಚ್‌ನಲ್ಲಿ ಸ್ಥಾಪನೆ ಮಾಡಲು ದೊಡ್ಡ ಪ್ರತಿಮೆ ತಯಾರು ಮಾಡುವ ಕಾಯಕದಲ್ಲಿ ತೊಡಗುವ ಆಕೆಗೆ ಮುಳುವಾಗುವುದು ಮದರ್. ಯಾವಾಗ ತನಗಿಂತ ಹೆಚ್ಚು ಮನ್ನಣೆ ಎಲಿಸಾಗೆ ಸಿಗುತ್ತಿದೆ ಎಂಬುದು ಮದರ್‌ಗೆ ಮನವರಿಕೆ ಆಗುತ್ತದೋ ಅಲ್ಲಿಂದ ಘರ್ಷಣೆ ಅಪರಿಮಿತ. ಆ ಪ್ರತಿಮೆ ಸ್ಥಾಪನೆಗೆ ಮದರ್ ಅಡ್ಡಗಾಲು ಹಾಕುವುದೂ ಅಲ್ಲದೆ ಎಲಿಸಾಳನ್ನು ಮಾನಸಿಕ ರೋಗಿ ಎಂದು ಬಿಂಬಿಸಲು ಅಧಿಕಾರದ ಸ್ಥಾನದಲ್ಲಿ ಕುಳಿತ ಮದರ್‌ಗೆ ಕಷ್ಟವಾಗದು.
ಮೊದಲು ವೀಕ್ಷಕರ ಪಾಲಿಗೆ ಧರೆಗಿಳಿದ ಏಸುಕ್ರಿಸ್ತ ಕಾಣುವುದು ಎಲಿಸಾಳ ಭ್ರಮೆಯ ರೂಪದಲ್ಲಿ. ಪ್ರಾಮಾಣಿಕ ನನ್‌ಗಳ ಪವಿತ್ರ ಮನೋಧೋರಣೆ ಆ ದೃಶ್ಯಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಆಕೆಯ ಕಷ್ಟಕಾಲದಲ್ಲಿ ಸ್ವತಃ ಏಸುವೇ ಕೊಠಡಿಗೆ ಬಂದು ತುತ್ತು ನೀಡುವ ಸನ್ನಿವೇಶದಲ್ಲಿ ದೀಪೇಶ್ ಏಸುಕ್ರಿಸ್ತನ ತತ್ವಗಳನ್ನು ಎತ್ತಿ ಹಿಡಿದಿದ್ದಾರೆ. ಕೊನೆಗೂ ಎಲಿಸಾಳ ಸಹಾಯಕ್ಕೆ ಬರುವ ಕಿರಿಯ ಪಾದ್ರಿಯ ಮೇಲೆ ಅಪವಾದ ಹೊರಿಸಿ ದೂರದ ಊರಿಗೆ ವರ್ಗ ಮಾಡುವಲ್ಲಿ ಮತ್ತದೇ ಅಕ್ವೇರಿಯಂನ ಮನೆಯೊಳಗಿದ್ದೂ ಪ್ರತ್ಯೇಕವಾಗಿರುವ ಗುಣ ಎದ್ದು ಕಾಣುತ್ತದೆ.
ಹತ್ತು ವರ್ಷಗಳ ಹಿಂದೆಯೇ ಚಿತ್ರಿಕರಣವಾದ ಈ ಸಿನಿಮಾ ಚಲನಚಿತ್ರ ವಿದ್ಯಾರ್ಥಿಗಳಿಗೆ ತಾಂತ್ರಿಕ ಕಾರಣಕ್ಕೆ ಸೆಳೆಯಬೇಕು. ಕ್ಯಾಮರಾ ಹಾಗೂ ಬೆಳಕು ಸಂಯೋಜನೆಯಲ್ಲಿ ಹಲವು ವಿಶಿಷ್ಟ ಪ್ರಯೋಗಗಳನ್ನು ಹೊಂದಿದೆ. ಬಹಳಷ್ಟು ಕಡೆಗಳಲ್ಲಿ ಕ್ಯಾಮರಾ ಇಟ್ಟ ಕೋನವೂ ಸನ್ನಿವೇಶಕ್ಕೆ ಅರ್ಥ ಕೊಡುತ್ತದೆ. ಧ್ವನಿ ಸಂಯೋಜನೆಯಲ್ಲಿ ಹೆಚ್ಚಿನ ಅಬ್ಬರವಿಲ್ಲ. ಸಂದರ್ಭೋಚಿತ ಧ್ವನಿ ವ್ಯವಸ್ಥೆ ಸರೌಂಡ್ ಸೌಂಡ್ ವ್ಯವಸ್ಥೆಯಲ್ಲಿ ಕೇಳಿದಾಗ ಸೂಕ್ಷ್ಮತೆಯ ಕಾರಣದಿಂದ ಗಮನ ಸೆಳೆಯುತ್ತದೆ. ಟಕ್ ಎನ್ನುವ ಬಾಗಿಲ ಚಿಲಕ ಶಬ್ದ ಬಂದ ಕಡೆಗೆ ತಿರುಗಿ ನೋಡಿಸುತ್ತದೆ.
‘ದ ಗ್ರೇಟ್ ಇಂಡಿಯನ್ ಕಿಚನ್’ಗೆ ಪ್ರಶಂಸೆ ನೀಡಿದ ಮಲಯಾಳಂ ಮಾಧ್ಯಮ ವಲಯ ‘ಅಕ್ವೇರಿಯಂ’ ವಿಚಾರದಲ್ಲಿ ಒಂದು ವಿಮರ್ಶೆಯನ್ನೂ ನೀಡದಿರುವ ಕಾರಣ ಅಕ್ವೇರಿಯಂ ಎಂಬ ಹೆಸರು ಉಳಿದ ಕಾರಣಕ್ಕೂ ಅರ್ಥಗರ್ಭಿತ.