ಸ್ಯಾಂಡಲ್‌ವುಡ್‌ನ ಯಶಸ್ವೀ ಚಿತ್ರನಿರ್ದೇಶಕ ಪವನ್‌ ಒಡೆಯರ್‌ ‘ನೋಟರಿ’ ಹಿಂದಿ ಚಿತ್ರದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಖ್ಯಾತ ಬೆಂಗಾಲಿ ನಟ ಪರಂಬ್ರತ ಚಟ್ಟೋಪಾಧ್ಯಾಯ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದು, ಆಗಸ್ಟ್‌ನಲ್ಲಿ ಶೂಟಿಂಗ್‌ಗೆ ಚಾಲನೆ ಸಿಗಲಿದೆ.

ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ನಿರ್ಮಾಪಕ ಪವನ್ ಒಡೆಯರ್ ಈಗ ಬಾಲಿವುಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ಗೋವಿಂದಾಯ ನಮಃ, ರಣವಿಕ್ರಮ, ಗೂಗ್ಲಿ, ನಟಸಾರ್ವಭೌಮ, ಸೇರಿದಂತೆ ಹಲವು ಯಶಸ್ವೀ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಪವನ್‌. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಬಾಲಿವುಡ್ ಸಿನಿಮಾಗೆ ‘ನೋಟರಿ’ ಎಂದು ನಾಮಕರಣ ಮಾಡಲಾಗಿದೆ. ಇದೊಂದು ಕಾಮಿಡಿ – ಡ್ರಾಮಾ. ‘ಕಹಾನಿ’, ‘ಪರಿ’ ಸಿನಿಮಾಗಳು, ನೆಟ್‌ಫ್ಲಿಕ್ಸ್‌ನ ‘ಅರಣ್ಯಕ್‌’ ವೆಬ್‌ ಸರಣಿಯಲ್ಲಿ ನಟಿಸಿರುವ ಖ್ಯಾತ ಬೆಂಗಾಲಿ ನಟ, ನಿರ್ದೇಶಕ ಪರಂಬ್ರತ ಚಟ್ಟೋಪಾಧ್ಯಾಯ ‘ನೋಟರಿ’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

‘ನೋಟರಿ’ ಸಿನಿಮಾದ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ ಪವನ್‌. ಗುಪ್ತ್, ಮೋಹರಾ, ಶೇರ್‌ಷಾ ಸೇರಿದಂತೆ ಯಶಸ್ವೀ ಸಿನಿಮಾಗಳ ನಿರ್ಮಾಪಕ ಶಬೀರ್ ಅವರ ಕಾಶ್ ಎಂಟರ್‌ಟೇನ್‌ಮೆಂಟ್‌ ಜೊತೆಗೂಡಿ ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಬ್ಯಾನರ್‌ನಡಿ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಶೂಟಿಂಗ್ ಮಾಡಲು ಯೋಜನೆ ಹಾಕಿಕೊಂಡಿದೆ. ಸದ್ಯದಲ್ಲಿಯೇ ಉಳಿದ ತಾರಾಗಣ ಮತ್ತಿತರ ಅಪ್‌ಡೇಟ್ಸ್‌ ಸಿಗಲಿದೆ. ಸದ್ಯ ಪವನ್ ಒಡೆಯರ್ ‘ರೆಮೋ’ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದು, ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಇದರ ಜೊತೆಗೆ ವಿವಿಧ ದೇಶಗಳಲ್ಲಿ ಪ್ರದರ್ಶನ ಕಂಡು 12 ಪ್ರಶಸ್ತಿಗಳನ್ನು ಪಡೆದಿರುವ ‘ಡೊಳ್ಳು’ ಸಿನಿಮಾವನ್ನು ತೆರೆಗೆ ತರಲು ಆಲೋಚಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here