ಅರವಿಂದ್‌ ಕೌಶಿಕ್‌ ನಿರ್ದೇಶನದ ‘ಅರ್ಧಂಬರ್ದ ಪ್ರೇಮಕಥೆ’ ಸಿನಿಮಾದ ಹಾಡು ಬಿಡುಗಡೆಯಾಗಿದೆ. ‘ಬಿಗ್‌ಬಾಸ್‌’ ಖ್ಯಾತಿಯ ಕಿರುತೆರೆ ನಟಿ ದಿವ್ಯಾ ಉರುಡುಗ ಮತ್ತು ಬೈಕ್‌ ರೇಸರ್‌ ಅರವಿಂದ್‌ ಕೆ ಪಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಅಭಿಮಾನಿಗಳೇ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ್ದಾರೆ ಎನ್ನುವುದು ವಿಶೇಷ.

‘ಬಿಗ್‌ಬಾಸ್‌’ ಜೋಡಿ ದಿವ್ಯಾ ಉರುಡುಗ ಹಾಗೂ ಬೈಕ್ ರೇಸರ್ ಅರವಿಂದ್ ಕೆ ಪಿ ಈಗ ಬೆಳ್ಳಿತೆರೆಯ ಮೇಲೂ ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಹುಲಿರಾಯ’ ಖ್ಯಾತಿಯ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ‘ಅರ್ಧಂಬರ್ದ ಪ್ರೇಮಕಥೆ’. ಮುಂದಿನ ತಿಂಗಳು ರಿಲೀಸ್‌ಗೆ ಸಿದ್ಧವಾಗಿರುವ ಈ ಚಿತ್ರದ ಹಾಡೊಂದನ್ನು ಅಭಿಮಾನಿಗಳೇ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕರೇ ರಚಿಸಿರುವ ‘ಹುಚ್ಚುಮನಸಿನ ಹುಡುಗಿ’ ಎಂಬ ಹಾಡಲ್ಲಿ ನಾಯಕ – ನಾಯಕಿಯ ಮನದ ಭಾವನೆಗಳನ್ನು ತೆರೆದಿಡಲಾಗಿದೆ. ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಈ ಹಾಡಿಗೆ ಮ್ಯೂಸಿಕ್ ಕಂಪೋಸ್‌ ಮಾಡಿದ್ದು, ವಾಸುಕಿ ವೈಭವ್, ಪೃಥ್ವೀ ಭಟ್ ದನಿಯಾಗಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು ಸೆನ್ಸಾರ್ ಪ್ರಕ್ರಿಯೆ ನಡೆಯುತ್ತಿದೆ. ಅರವಿಂದ್ ಕೌಶಿಕ್ ನಿರ್ದೇಶನದ ‘ನಮ್ ಏರಿಯಾಲ್ ಒಂದಿನ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಂಗೀತ ಸಂಯೋಜಕರಾಗಿದ್ದ ಅರ್ಜುನ್ ಜನ್ಯ ಮತ್ತೊಮ್ಮೆ ಅರವಿಂದ್ ಜೊತೆ ಸೇರಿ ಚೆಂದದ ಹಾಡುಗಳನ್ನು ಕಂಪೋಸ್‌ ಮಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ಅರವಿಂದ್ ಕೌಶಿಕ್, ‘ಇವತ್ತಿನ ಕಾಲದಲ್ಲಿ ಪ್ರೀತಿ ಎನ್ನುವುದು ಒಂದು ಭಾವನೆ, ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತೆ. ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದನ್ನು ನಿಭಾಯಿಸಿಕೊಂಡು ಹೋಗೋದು ಕಷ್ಟ. ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಅದು ಬದುಕಬೇಕಾಗಿರುತ್ತೆ. ನಾಯಕ – ನಾಯಕಿಯ ಈ ಗೊಂದಲ ಹೇಗೆ ಪರಿಹಾರವಾಗುತ್ತದೆ ಎನ್ನುವುದು ಕಥಾವಸ್ತು. ಚಿತ್ರವೀಗ ಬಿಡುಗಡೆಯ ಹಂತದಲ್ಲಿದ್ದು, ಪ್ರಚಾರ ಶುರು ಮಾಡಿದ್ದೇವೆ, ನವೆಂಬರ್‌ನಲ್ಲಿ ತೆರೆಗೆ ತರೋ ಯೋಜನೆಯಿದೆ’ ಎನ್ನುತ್ತಾರೆ.

ಚಿತ್ರದ ಹೀರೋ ಅರವಿಂದ್‌ ವೃತ್ತಿಪರ ನಟನಲ್ಲ. ಅವರು ತಮ್ಮ ನಟನಾ ಅಭಿಯಾನದ ಬಗ್ಗೆ ಮಾತನಾಡುತ್ತಾ, ‘ಅಭಿನಯ ನಿಜವಾಗಿಯೂ ಕಷ್ಟದ ಕೆಲಸ. ಒಂದಷ್ಟು ದಿನ ವರ್ಕ್‌ಶಾಪ್‌ ಮಾಡಿ ನಂತರ ಬಣ್ಣ ಹಚ್ಚಿದೆ. ಆರಂಭದ ಮೂರ್ನಾಲ್ಕು ದಿನ ಸ್ವಲ್ಪ ಕಷ್ಟವಾಗಿತ್ತು, ನಿರ್ದೇಶಕ ಅರವಿಂದ್ ಹಾಗೂ ದಿವ್ಯಾ ಇಬ್ಬರೂ ನನಗೆ ತುಂಬಾ ಹೇಳಿಕೊಟ್ಟರು. ನಾನೇನೇ ಮಾಡಿದ್ರೂ ಅದಕ್ಕೆ ನಿರ್ದೇಶಕರೇ ಕಾರಣ’ ಎನ್ನುತ್ತಾರೆ. ‘ಈ ಹಾಡನ್ನು ಅಭಿಮಾನಿಗಳಿಗೋಸ್ಕರ ಡೆಡಿಕೇಟ್ ಮಾಡೋಣ ಎಂದು ಅವರಿಂದಲೇ ರಿಲೀಸ್ ಮಾಡಿಸಿದ್ದೇವೆ, ನನ್ನ ಪಾತ್ರದ ಬಗ್ಗೆ ಹೇಳೋದಾದ್ರೆ ಆಕೆ ಸ್ವಲ್ಪ ಮುಂಗೋಪಿಯಾದರೂ, ಮನಸು ಹೂವಿನಂಥದ್ದು. ಜನ ಅವಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲ್ಲ. ಆಕೆಗಿರುವ ರಿಯಲ್ ಲೈಫ್ ಪ್ರಾಬ್ಲಂಗಳಿಂದ ಹಾಗೆ ನಡೆದುಕೊಳ್ತಾಳೆ ಅಷ್ಟೇ’ ಎಂದು ನಾಯಕನಟಿ ದಿವ್ಯಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುತ್ತಾರೆ. ಬಕ್ಸಾಸ್ ಮೀಡಿಯಾ, ಆರ್‌ಎಸಿ ವಿಷುವಲ್ಸ್ ಮತ್ತು ಲೈಟ್‌ಹೌಸ್‌ ಮೀಡಿಯಾ ಈ ಚಿತ್ರವನ್ನು ನಿರ್ಮಿಸಿವೆ. Rapper ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ 25 ವರ್ಷಗಳ ನಂತರ ನಟನೆಗೆ ಮರಳಿದ್ದಾರೆ. ಸೂರ್ಯ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here