ಬಿಗ್‌ಬಾಸ್‌ ಮನೆಯಲ್ಲಿ ಕಳೆದೆರೆಡು ದಿನಗಳಲ್ಲಿ ವಿಶಿಷ್ಟ ಬೆಳವಣಿಗೆಗಳಾಗಿವೆ. ಹುಲಿ ಉಗುರನ್ನು ಕೊರಳಲ್ಲಿ ಧರಿಸಿದ್ದ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಅಡಿ ಅವರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಾರತದ Bigg Boss ಶೋ ಇತಿಹಾಸದಲ್ಲೇ ಇದು ಮೊದಲ ಪ್ರಕರಣ. ಇನ್ನು ಈ ವಾರ ಪತ್ರಕರ್ತ ಗೌರೀಶ್‌ ಅಕ್ಕಿ ಅವರು ಮನೆಯಿಂದ ಹೊರಬಿದ್ದಿದ್ದಾರೆ.

Bigg Boss ಮನೆ ನಿನ್ನೆಯಿಡೀ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಹುಲಿ ಉಗುರಿನ ಪೆಂಡೆಂಟ್‌ ತೊಟ್ಟಿದ್ದ ಬಿಗ್‌ಬಾಸ್‌ – 10 ಸ್ಪರ್ಧಿ ವತ್ತೂರು ಸಂತೋಷ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಅಕ್ಟೋಬರ್‌ 22ರ ರಾತ್ರಿ ಬಗ್‌ಬಾಸ್‌ ಮನೆಯಿಂದಲೇ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಗಂಭೀರತೆ ಅರಿತ ಎರಡನೇ ಎಸಿಜೆಎಂ ನ್ಯಾಯಾಧೀಶರು ನವೆಂಬರ್‌ 6ರವರೆಗೆ 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ವರ್ತೂರು ಸಂತೋಷ್‌ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ವರ್ತೂರು ಸಂತೋಷ್‌ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಳೆ ಬುಧವಾರ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.

ವನ್ಯಜೀವಿ ರಕ್ಷಣಾ ಕಾಯಿದೆ 1972 ಪ್ರಕಾರ ಕಾಡು ಪ್ರಾಣಿಗಳನ್ನು ಸಾಕಲು ಅನುಮತಿ ಇಲ್ಲ. ವನ್ಯಜೀವಿಗಳಿಗೆ ಸಂಬಂಧಿಸಿದ ದೇಹದ ಭಾಗಗಳು, ವಸ್ತುಗಳನ್ನೂ ಇಟ್ಟುಕೊಳ್ಳುವಂತಿಲ್ಲ. ಹುಲಿ ಚರ್ಮ, ಹುಲಿ ದೇಹದ ಭಾಗದಿಂದ ಮಾಡಿದ ಪೆಂಡೆಂಟ್‌ ಸೇರಿ ಇತರೆ ವಸ್ತುಗಳು, ಆನೆಗಳ ದಂತ… ಹೀಗೆ ವನ್ಯಜೀವಿಗಳಿಗೆ ಸೇರಿದ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಇದೀಗ ಇದೇ ಕೇಸ್‌ನಲ್ಲಿ ವರ್ತೂರು ಸಂತೋಷ್‌ ಅವರ ಬಂಧನವಾಗಿದೆ. ವರ್ತೂರು ಸಂತೋಷ್‌ ಅವರು ಅಖಿಲ ಭಾರತೀಯ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರೂ ಹೌದು. ಅವರಿಗೆ ಹುಲಿ ಉಗುರು ತೊಡಬಾರದು ಎನ್ನುವ ಸೂಕ್ಷ್ಮತೆಯ ಬಗ್ಗೆ ಏಕೆ ಅರಿವಿರಲಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಹುಲಿ ಉಗುರಿನ ಪೆಂಡೆಂಟ್‌ಗೆ ಸಂಬಂಧಿಸಿದಂತೆ ಹಲವು ರೀತಿ ವಿಚಾರಣೆ ನಡೆಯಲಿದೆ. ಸಂತೋಷ್‌ ಧರಿಸಿದ ಲಾಕೆಟ್ ಮಾಡಿದವರು ಯಾರು? ಲಾಕೆಟ್ ಮಾಡಿದವರಿಗೆ ಹುಲಿ ಉಗುರು ಸಿಕ್ಕಿದ್ದು ಎಲ್ಲಿ? ಯಾವುದಾದರೂ ಅರಣ್ಯದಲ್ಲಿ ಹುಲಿ ಬೇಟೆ ಆಗಿದೆಯಾ? ಪ್ರಾಣಿ ಕಳೆಬರದಲ್ಲಿ ದೇಹದ ಭಾಗಗಳು ಕಾಣೆಯಾಗಿವೆಯಾ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈ ಲಾಕೆಟ್‌ನಲ್ಲಿರೋ ಉಗುರು ಯಾವುದಾದರೂ ಸತ್ತ ಹುಲಿಗೆ ಸಂಬಂಧಪಟ್ಟ ಉಗುರಾ? ರಾಷ್ಟ್ರೀಯ ಹುಲಿ ಸಂರಕ್ಷಣಾ ವಿಭಾಗದಲ್ಲಿ ಡೇಟಾ ಜೊತೆ ಇದು ಹೋಲಿಕೆ ಆಗುತ್ತಾ ಎಂಬುದರ ತಾಳೆ ಮಾಡಲಾಗುತ್ತದೆ. ಡೇಟಾ ತಾಳೆಯಾದ್ರೆ ಆ ಹುಲಿಯ ಸಾವಿನ ಬಗ್ಗೆ ಪ್ರತ್ಯೇಕ ತನಿಖೆ ಆಗಲಿದೆ. ಅದಕ್ಕೂ ಮುನ್ನ ಎಫ್‌ಎಸ್‌‌ಎಲ್‌ ರಿಪೋರ್ಟ್ ಬಂದ ಬಳಿಕ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ.

ವಕೀಲರು ಹೇಳುವುದೇನು? | ವರ್ತೂರು ಸಂತೋಷ್‌ ಪರ ವಕೀಲ ನಟರಾಜ್‌ ಈ ಬಗ್ಗೆ ಮಾಹಿತಿ ನೀಡಿ, ‘ಸಂತೋಷ್ ಧರಿಸಿರುವುದು ಹುಲಿ ಉಗುರು ಎಂದು ಹೇಳುತ್ತಿದ್ದಾರೆ. ಪರಿಣಿತರು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕಿದೆ. ಆ ಬಳಿಕವೇ ಅದರ ಬಗ್ಗೆ ಗೊತ್ತಾಗಲಿದೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಮೂರ್ನಾಲ್ಕು ವರ್ಷಗಳ ಹಿಂದೆ ತಮಿಳುನಾಡಿಗೆ ಹೋಗಿದ್ದಾಗ ಹೊಸೂರು – ಧರ್ಮಪುರಿ ಮಧ್ಯೆ ಅದನ್ನು ಅವರು ಖರೀದಿಸಿದ್ದಾರೆ. ಅದನ್ನು ಹಾಕಿಕೊಳ್ಳಬೇಕಾ? ಬೇಡವಾ? ಎಂಬ ಸಾಮಾನ್ಯ ಜ್ಞಾನ ಅವರಿಗೆ ಗೊತ್ತಿರಲಿಲ್ಲ. ಬಿಲ್ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ನಾವು ಜಾಮೀನು ಅರ್ಜಿ ಹಾಕಿದ್ದೀವಿ‌. ಬುಧವಾರ ವಿಚಾರಣೆ ಇದೆ’ ಎಂದಿದ್ದಾರೆ.

ಮಗನ ವಿರುದ್ಧ ಷಡ್ಯಂತ್ರ | ವತ್ತೂರು ಸಂತೋಷ್‌ ತಾಯಿ ಮಂಜುಳಾ ಅವರು, ಹುಲಿ ಉಗುರಿನ ಪೆಂಡೆಂಟ್‌ ಹತ್ತು ವರ್ಷಗಳಷ್ಟು ಹಳೆಯದು ಎಂದಿದ್ದಾರೆ. ವಕೀಲರ ಹೇಳಿಕೆಗೂ, ಮಂಜುಳಾರ ಹೇಳಿಕೆಗೂ ತಾಳೆಯಾಗುತ್ತಿಲ್ಲ. ‘ಹತ್ತು ವರ್ಷದ ಹಿಂದೆಯೇ ಇದನ್ನು ತಂದು ನನ್ನ ಕೈಗೆ ಕೊಟ್ಟಿದ್ದ. ಇದಕ್ಕೆ ಚೈನು ಮಾಡ್ಸು ಅಂದಿದ್ದ. ನಾನು ಮಾಡಿಸಿ ಕೊಟ್ಟಿದ್ದೆ. ಅದನ್ನು ಹೊರತುಪಡಿಸಿದರೆ, ನಾನು ಆ ಬಗ್ಗೆ ತುಂಬ ಡೀಪ್‌ ಆಗಿ ಹೋಗಿಲ್ಲ. ಅವನಿಗೂ ಹುಲಿ ಉಗುರನ್ನು ಹೀಗೆ ಹಾಕಿಕೊಳ್ಳಬಾರದು ಎಂಬ ಅರಿವಿಲ್ಲ. ಅರಿವಿದಿದ್ದರೆ, ಅವನು ಧರಿಸುತ್ತಿರಲಿಲ್ಲ. ಅವನು ಚೆನ್ನಾಗಿ ಅಭಿವೃದ್ಧಿ ಹೊಂದುತ್ತಿದ್ದಾನೆ. ಹಾಗಾಗಿ ಅವನಿಗೆ ಆಗದೇ ಇರುವವರು ತುಳಿಯಲು ಹೊರಟಿದ್ದಾರೆ. ಊರಲ್ಲಿದ್ದಾಗ, ಎಲ್ಲ ಕಾರ್ಯಕ್ರಮಗಳಿಗೂ ಆ ಪೆಂಡೆಂಟ್‌ ಹಾಕಿಕೊಂಡು ಹೋಗುತ್ತಿದ್ದ. ಆಗ ಬಾರದ ಈ ಪ್ರಶ್ನೆ, ಈಗ ಬಂದಿದೆ’ ಎಂದಿದ್ದಾರೆ ಮಂಜುಳಾ.

ಗೌರೀಶ್‌ ಅಕ್ಕಿ ಹೊರಕ್ಕೆ | ಬಿಗ್‌ಬಾಸ್‌ – 10 ಎರಡನೇ ವಾರದ ಎಲಿಮಿನೇಶನ್‌ನಲ್ಲಿ ಪತ್ರಕರ್ತ ಗೌರೀಶ್‌ ಅಕ್ಕಿ ಮನೆಯಿಂದ ಹೊರನಡೆದಿದ್ದಾರೆ. ಗೌರೀಶ್‌ ಅಕ್ಕಿ, ಸಂಗೀತಾ, ಕಾರ್ತೀಕ್‌, ತುಕಾಲಿ ಸಂತೋಷ್‌ ಮತ್ತು ಭಾಗ್ಯಶ್ರೀ ಎರಡನೇ ವಾರ ಮನೆಯಿಂದ ಹೊರಹೋಗುವವರ ಪಟ್ಟಿಯಲ್ಲಿ ನಾಮಿನೇಟ್‌ ಆಗಿದ್ದರು. ಶನಿವಾರದ ‘ಕಿಚ್ಚನ ಪಂಚಾಯತಿ’ಯಲ್ಲಿ ಹೆಚ್ಚು ವೋಟ್‌ಗಳನ್ನು ಪಡೆದ ತುಕಾಲಿ ಸಂತೋಷ್‌, ಕಾರ್ತೀಕ್‌ ಎಲಿಮಿನೇಷನ್‌ನಿಂದ ಉಳಿದುಕೊಂಡರು. ಭಾನುವರದ ಪಂಚಾಯತಿಯಲ್ಲಿ ಸಂಗೀತಾ ಮತ್ತು ಭಾಗ್ಯಶ್ರೀ ಉಳಿದುಕೊಂಡಿದ್ದು, ಗೌರೀಶ್‌ ಅಕ್ಕಿ ಹೊರನಡೆದಿದ್ದಾರೆ. ಮೊದಲ ವಾರ ಸ್ನೇಕ್‌ ಶ್ಯಾಂ ಎಲಿಮಿನೇಟ್‌ ಆಗಿದ್ದರು. ಗೌರೀಶ್‌ ಅಕ್ಕಿ ಅವರು ಮನೆಯಿಂದ ಹೊರನಡೆಯುವ ಮುನ್ನ ನೀತು ವನಜಾಕ್ಷಿ ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here