ಏಕತಾನತೆಯ ಕತೆಯನ್ನು ಮೀರುವುದು ರಿವರ್ಸ್‌ ಸ್ಕ್ರೀನ್‌ಪ್ಲೇ ಮತ್ತು ಡಬಲ್‌ ಕ್ಲೈಮ್ಯಾಕ್ಸ್‌. ‘Dear ಸತ್ಯ’ ಕನ್ನಡ ಚಿತ್ರದಲ್ಲಿ ಬಹಳಷ್ಟು ಸನ್ನಿವೇಶಗಳನ್ನು ರಾತ್ರಿ ವೇಳೆ ಚಿತ್ರಿಸಿದ್ದು, ಅಲ್ಲೆಲ್ಲಾ ಲೈಟಿಂಗ್‌ ಮತ್ತು ಕ್ಯಾಮೆರಾ ಕೈಚಳಕ ಇಷ್ಟವಾಗುತ್ತದೆ. ಹೀರೋ ಆರ್ಯನ್‌ ಸಂತೋಷ್‌ ಈ ಬಾರಿ ನಟನೆ ಜೊತೆ ಚಿತ್ರಕಥೆಯನ್ನೂ ರಚಿಸಿ ತಮ್ಮ ಸಿನಿಮಾ ಪ್ರೀತಿ ಮೆರೆದಿದ್ದಾರೆ.

ರಿವರ್ಸ್‌ ಸ್ಕ್ರೀನ್‌ಪ್ಲೇ ಮತ್ತು ಡಬಲ್‌ ಕ್ಲೈಮ್ಯಾಕ್ಸ್‌ ಈ ಸಿನಿಮಾದ ಗಮನ ಸೆಳೆಯುವ ಅಂಶಗಳು. ರಿವರ್ಸ್‌ ಸ್ಕ್ರೀನ್‌ಪ್ಲೇನೊಂದಿಗೆ ಸಿನಿಮಾವೊಂದನ್ನು ನಿರೂಪಿಸುವುದು ದೊಡ್ಡ ಸವಾಲು. ಈ ತಂತ್ರಕ್ಕೆ ಚಿತ್ರದ ಕತೆ, ತಂತ್ರಜ್ಞರು ಸಪೋರ್ಟ್‌ ಮಾಡಬೇಕು. ಜೊತೆಗೆ ಅನುಭವಿ ನಿರ್ದೇಶಕರು ಬೇಕು. ಆಕ್ಷನ್‌ – ಲವ್‌ – ಥ್ರಿಲ್ಲರ್‌ ಆದ್ದರಿಂದ ರಿವರ್ಸ್‌ ಸ್ಕ್ರೀನ್‌ಪ್ಲೇಗೆ ಅಗತ್ಯವಿರುವ ಕತೆಯೇನೋ ಚಿತ್ರದಲ್ಲಿದೆ. ವಿಶೇಷವೆಂದರೆ ಚಿತ್ರಕಥೆ ರಚನೆ ನಾಯಕನಟ ಆರ್ಯನ್‌ ಸಂತೋಷ್‌ ಅವರದ್ದೇ. ನಿರ್ದೇಶಕ ಶಿವಗಣೇಶ್‌ ಚಿತ್ರಕಥೆಯನ್ನು ಇನ್ನಷ್ಟು ಬಿಗಿಯಾಗಿ ನಿರೂಪಿಸಿದ್ದಿದ್ದರೆ, ಸಂಕಲನಕಾರರೊಂದಿಗೆ ಇನ್ನೊಂದೆರೆಡು ಬಾರಿ ಕುಳಿತು ಸಿನಿಮಾದ ವೇಗ ಹೆಚ್ಚಿಸಿದ್ದಿದ್ದರೆ ಒಟ್ಟಾರೆ ಸಿನಿಮಾ ಎಫೆಕ್ಟೀವ್‌ ಆಗಿರುತ್ತಿತ್ತು.

ಹಾಡುಗಳು ಚಿತ್ರಕಥೆಯೊಂದಿಗೆ ಬೆಸೆದುಕೊಳ್ಳದಿದ್ದರೆ ರಿವರ್ಸ್‌ ಸ್ಕ್ರೀನ್‌ಪ್ಲೇಗೆ ತೊಡಕಾಗುತ್ತದೆ. ‘Dear ಸತ್ಯ’ ಚಿತ್ರದಲ್ಲಿ ಎರಡು ಹಾಡುಗಳು ಕತೆಯ ಓಘಕ್ಕೆ ತೊಡಕಾಗುತ್ತವೆ. ಎಷ್ಟೇ ಸುಂದರವಾಗಿ ಚಿತ್ರಿಸಿದರೂ, ಪ್ರಮುಖರಿಂದ ಹಾಡಿಸಿದರೂ ಕತೆಗೆ ಹೊಂದಿಕೊಳ್ಳದಿದ್ದರೆ ಹಾಡು ವ್ಯರ್ಥ. ಶಿವಗಣೇಶ್‌ ಅವರು ನಿರ್ದೇಶನಕ್ಕೆ ಹೊಸಬರೇನಲ್ಲ. ಹಾಡುಗಳನ್ನು ಹಾಕಲೇಕೆನ್ನುವ ಹುಕಿಯಿಂದ ಅವರು ಹೊರಬೇಕಿತ್ತು. ಚಿತ್ರದ ಛಾಯಾಗ್ರಹಣ ಮತ್ತು ಲೈಟಿಂಗ್‌ಗೆ ಪ್ರತ್ಯೇಕ ಅಂಕಗಳು ಸಿಗಬೇಕು. ಚಿತ್ರದಲ್ಲಿ ಬಹಳಷ್ಟು ಸನ್ನಿವೇಶಗಳನ್ನು ರಾತ್ರಿ ವೇಳೆ ಚಿತ್ರಿಸಿದ್ದು, ಅಲ್ಲೆಲ್ಲಾ ಲೈಟಿಂಗ್‌ ಮತ್ತು ಕ್ಯಾಮೆರಾ ಕೈಚಳಕ ಇಷ್ಟವಾಗುತ್ತದೆ. ನಟಿ ಅರುಣಾ ಬಾಲರಾಜ್‌ ಅವರ ಸಹಜಾಭಿನಯದಿಂದಾಗಿ ತಾಯಿ (ಅರುಣಾ ಬಾಲರಾಜ್‌) – ಮಗನ ಸನ್ನಿವೇಶಗಳು ಆಪ್ತವಾಗುತ್ತವೆ.

ಶೀರ್ಷಿಕೆಯೇ ಹೇಳುವಂತೆ ಚಿತ್ರದಲ್ಲಿ ನಾಯಕನಟನಿಗೆ ಲವ್‌ (Dear) ಮತ್ತು ಆಕ್ಷನ್‌ (ಸತ್ಯ) ಎರಡು ಭಿನ್ನ ಶೇಡ್‌ಗಳಿವೆ. ನಾಯಕನಟ ಫುಡ್‌ ಡೆಲಿವರಿ ಬಾಯ್‌. ಪ್ರೀತಿಸಿದ ಹುಡುಗಿಯನ್ನು ಒಲಿಸಿಕೊಳ್ಳಲು ಆಕೆ ಕೆಲಸ ಮಾಡುವ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಪ್ರೀತಿಗೆ ಒಪ್ಪಿಗೆ ಸಿಕ್ಕಿತು ಎನ್ನುವ ಹೊತ್ತಿಗೆ ದುರಂತ ಸಂಭವಿಸುತ್ತದೆ. ಅಲ್ಲಿಂದ ಮುಂದೆ ರಿವೇಂಜ್‌ ಸ್ಟೋರಿ. ಎಂದಿನ ಕಮರ್ಷಿಯಲ್‌ ಚಿತ್ರಗಳಂತೆ ವಿಚಿತ್ರ ಮ್ಯಾನರಿಸಂನ ದುಷ್ಟ ವ್ಯಕ್ತಿಗಳೊಂದಿಗೆ ನಾಯಕ ಮುಖಾಮುಖಿಯಾಗುತ್ತಾನೆ. ಇಲ್ಲಿ ಏಕತಾನತೆಯ ಕತೆಯನ್ನು ಮೀರುವುದು ರಿವರ್ಸ್‌ ಸ್ಕ್ರೀನ್‌ಪ್ಲೇ ಮತ್ತು ಡಬಲ್‌ ಕ್ಲೈಮ್ಯಾಕ್ಸ್‌. ಹಿನ್ನೆಲೆ ಸಂಗೀತ ಆಕ್ಷನ್‌ – ಥ್ರಿಲ್ಲರ್‌ ಸನ್ನಿವೇಶಗಳಿಗೆ ಪೂರಕವಾಗಿದೆ. ಸರಳ ವ್ಯಕ್ತಿತ್ವದ ಪಾತ್ರ ನಾಯಕಿ ಅರ್ಚನಾ ಕೊಟ್ಟಿಗೆ ಅವರಿಗೆ ಸೂಕ್ತವಾಗಿ ಹೊಂದಿಕೆಯಾಗಿದೆ.

ನಾಯಕನಟ ಆರ್ಯನ್‌ ಸಂತೋಷ್‌ ತಮ್ಮ ಪಾತ್ರದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಆಕ್ಷನ್‌ ಸನ್ನಿವೇಶಗಳಲ್ಲಿ ಪಳಗಿರುವ ಅವರು ಇತರೆ ವಿಭಾಗಗಳಲ್ಲಿ ಕೊಂಚ ಸುಧಾರಿಸಬೇಕಿದೆ. ‘ಪ್ರೇಮಿ’ಯಾಗಿ ಪಾತ್ರಕ್ಕೆ ಇರಬೇಕಾಗಿದ್ದ ಲವಲವಿಕೆ, ರೊಮ್ಯಾನ್ಸ್‌ ಅದೇಕೋ ಅಷ್ಟಾಗಿ ಸ್ಕ್ರೀನ್‌ ಮೇಲೆ ಕಾಣಿಸುವುದಿಲ್ಲ. ಈ ಬಾರಿ ನಟನೆ ಜೊತೆ ಅವರು ಚಿತ್ರಕಥೆಯನ್ನೂ ರಚಿಸಿ ತಮ್ಮ ಸಿನಿಮಾ ಪ್ರೀತಿ ಮೆರೆದಿದ್ದಾರೆ. ಚಿತ್ರದ ಆರಂಭದಲ್ಲಿ FM ರೇಡಿಯೋ ಸ್ಟೇಷನ್‌ ದೃಶ್ಯವೊಂದು ಬರುತ್ತದೆ. ಶ್ರೋತೃಗಳೊಂದಿಗೆ RJ ಮಾತನಾಡುತ್ತಾ ಡಾ.ರಾಜಕುಮಾರ್‌ ಹಾಡಿರುವ ಭಕ್ತಿಗೀತೆ ಎಂದು ‘ಶಿವಪ್ಪ ಕಾಯೋ ತಂದೆ…’ ಹಾಡು ಹಾಕುತ್ತಾರೆ’. ಇದು ರಾಜ್‌ ಅಭಿನಯದ ‘ಬೇಡರ ಕಣ್ಣಪ್ಪ’ ಚಿತ್ರದ ಹಾಡೇನೋ ಹೌದು. ಆದರೆ ಗಾಯಕ ಸಿ.ಎಸ್‌.ಜಯರಾಮನ್‌. ಪೋಸ್ಟ್‌ ಪ್ರೊಡಕ್ಷನ್‌ ಪ್ರೊಸೆಸ್‌ನಲ್ಲಿ ಹತ್ತಾರು ಸಲ ಚಿತ್ರ ವೀಕ್ಷಿಸಲಾಗಿರುತ್ತದೆ. ಆದಾಗ್ಯೂ ಈ ತಪ್ಪು ಹಾಗೇ ಉಳಿದಿದೆ.

LEAVE A REPLY

Connect with

Please enter your comment!
Please enter your name here