ಆ ಕೊಲೆಗಳನ್ನು ಮಾಡಿದ್ದಕ್ಕೆ ಆತನಿಗೆ ಯಾವುದೇ ಪಶ್ಚಾತ್ತಾಪವಿರುವುದಿಲ್ಲ. “ಅವರೆಲ್ಲರನ್ನು ಅಂತ್ಯಗೊಳಿಸಿ ಇಡೀ ನಗರವನ್ನು ಇತರರಿಗೆ ವಾಸಿಸಲು ಅನುಕೂಲವಾಗುವಂತೆ ಸ್ವಚ್ಛಗೊಳಿಸುವ ಪವಿತ್ರ ಕಾರ್ಯದಲ್ಲಿ ತೊಡಗಿದೆ” ಎಂದು ಆತ ಎದೆತಟ್ಟಿ ಹೇಳಿಕೊಳ್ಳುತ್ತಾನೆ.

2000-01ನೇ ಇಸವಿಯಲ್ಲಿ ಇರಾನಿನ ಮಶಾದ್ ನಗರದ ಹೊರಭಾಗದ ಬೇರೆ ಬೇರೆ ಜಾಗಗಳಲ್ಲಿ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಹದಿನಾರು ಶವಗಳು ಪತ್ತೆಯಾಗುತ್ತವೆ. ಆ ಶವಗಳೆಲ್ಲ ಮಹಿಳೆಯರದೇ ಆಗಿರುತ್ತವೆ. ಮುಂದಿನ ಕೆಲವೇ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಯೀದ್ ಹನೈ (saeed hanai) ಎಂಬಾತ ಸಿಕ್ಕಿಬೀಳುತ್ತಾನೆ. ಅವನನ್ನು ವಿಚಾರಣೆಗೊಳಪಡಿಸಿದಾಗ ಆ ಹದಿನಾರೂ ಮಹಿಳೆಯರನ್ನು ತಾನೇ ಕೊಂದಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಅಚ್ಚರಿಯೆಂದರೆ ಆ ಕೊಲೆಗಳನ್ನು ಮಾಡಿದ್ದಕ್ಕೆ ಆತನಿಗೆ ಯಾವುದೇ ಪಶ್ಚಾತ್ತಾಪವಿರುವುದಿಲ್ಲ. ಏಕೆಂದರೆ ಆ ಕೊಲೆಯಾದ ಮಹಿಳೆಯರೆಲ್ಲ ವೇಶ್ಯಾವಾಟಿಕೆಯಲ್ಲಿ ತೊಡಗಿರುತ್ತಾರೆ. ಆತ “ಅವರೆಲ್ಲರನ್ನು ಅಂತ್ಯಗೊಳಿಸಿ ಇಡೀ ನಗರವನ್ನು ಇತರರಿಗೆ ವಾಸಿಸಲು ಅನುಕೂಲವಾಗುವಂತೆ ಸ್ವಚ್ಛಗೊಳಿಸುವ ಪವಿತ್ರ ಕಾರ್ಯದಲ್ಲಿ ತೊಡಗಿದೆ” ಎಂದು ಎದೆತಟ್ಟಿ ಹೇಳಿಕೊಳ್ಳುತ್ತಾನೆ.

ಆತನಿಗೆ ಮದುವೆಯಾಗಿ ಈಗಾಗಲೇ ಮೂವರು ಮಕ್ಕಳಿರುತ್ತಾರೆ. ಆತನ ಹೆಂಡತಿಯ ಜೊತೆ ಇನ್ಯಾರೋ ಅಶ್ಲೀಲವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಆತನಿಗಾಗಿ ಇಡೀ ಮಶಾದ್ ನಗರದಲ್ಲಿ ಹುಡುಕಾಡಿ ಸೋಲುತ್ತಾನೆ. ಇದೇ ಸಂದರ್ಭದಲ್ಲಿ ಆತನಿಗೆ ಅಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆಯ ಬಗ್ಗೆ ತಿಳಿದು ಬರುತ್ತದೆ. ಕೇವಲ ಮಹಿಳೆಯರಿಂದಲೇ ಇಂಥ ಕೆಟ್ಟ ಕೆಲಸಗಳೆಲ್ಲ ನಡೆಯುತ್ತಿವೆ ಎಂಬ ತಪ್ಪು ಗ್ರಹಿಕೆಯಿಂದ ಅಂಥವರನ್ನೆಲ್ಲ ಈ ಸಮಾಜದಿಂದಲೇ ಅಳಿಸಿ ಹಾಕುವ ಪಣತೊಟ್ಟು ಒಬ್ಬೊಬ್ಬರನ್ನಾಗಿ ಕೊಲೆ ಮಾಡುತ್ತಿರುತ್ತಾನೆ. ಅಂಥವರನ್ನು ತನ್ನ ಮನೆಗೆ ಬರುವಂತೆ ಮಾಡಿ, ಮನೆಯೊಳಗೆ ಅವರನ್ನು ಕೊಲೆ ಮಾಡುವುದರಿಂದ ಆ ಸರಣಿ ಕೊಲೆಗಳನ್ನು ‘Spider Killing’ ಅಂತ ಕರೆಯಲಾಯಿತು. ವಿಚಿತ್ರವೆಂದರೆ ಹತ್ಯೆಯಾದವರು ತಮ್ಮ ಕುಟುಂಬವನ್ನು ಮುನ್ನಡೆಸಲು ಬೇರೆ ವಿಧಿಯಿಲ್ಲದೆ ಆ ಬಗೆಯ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ.

ವಿಚಾರಣೆ ನಡೆಸಿದ ಘನ ನ್ಯಾಯಾಲಯ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುತ್ತದೆ. ಆಗಲೂ ಆತನ ಕೃತ್ಯದ ಬಗ್ಗೆ ಅನೇಕ ಪರ-ವಿರೋಧ ಚರ್ಚೆಗಳಾಗುತ್ತವೆ. ಎಲ್ಲ ದೇಶಗಳಲ್ಲೂ ಎಲ್ಲ ಕಾಲಗಳಲ್ಲೂ ಧರ್ಮಾಂಧರು, Extremist ಗಳು ಇದ್ದರು, ಇರುತ್ತಾರೆ ಅನ್ನುವುದು ಈ ಘಟನೆಯ ಬಗ್ಗೆ ಗೊತ್ತಾದಾಗ ಅರ್ಥವಾಗುತ್ತದೆ. ಈ ಘಟನೆಗಳನ್ನೇ ಆಧರಿಸಿದ ‘Killer Spider’ ಎಂಬ ಸಿನಿಮಾ ಇರಾನಿನಲ್ಲಿ 2020ರಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಕೊಲೆ ಮಾಡುವ ದೃಶ್ಯಗಳು ರಿಪೀಟೆಡ್ ಅನ್ನಿಸಿದವು ಅನ್ನುವುದನ್ನು ಬಿಟ್ಟರೆ, ಅನೇಕ ಸೂಕ್ಷ್ಮ ವಿಷಯಗಳನ್ನು ಸಿನಿಮಾದಲ್ಲಿ ಹೇಳಲು ಪ್ರಯತ್ನಿಸಲಾಗಿದೆ.

ಪೊಲೀಸರು ಸಯೀದ್ ಹನೈನನ್ನು ಬಂಧಿಸಿ ಕರೆದೊಯ್ಯುವಾಗ ಆತನ ತಾಯಿ ಮೊಮ್ಮಗನನ್ನು ಕಳುಹಿಸಿ “ಹೋಗು…. ಜೋರಾಗಿ ಗೋಳಾಡು…… ಮತ್ತು ನೀನು ಮಾಡಿರುವ ಕೆಲಸದ ಬಗ್ಗೆ ನಮಗೆ ಹೆಮ್ಮೆಯಿದೆ ಅಂತ ಕಿರುಚಿ ಹೇಳು” ಅಂತ ಕಳುಹಿಸುತ್ತಾಳೆ. ಆ ಮಗು ಹಾಗೆಯೇ ಮಾಡುತ್ತದೆ. ಅದೊಂದು ದೃಶ್ಯ ಅನೇಕ ವಿಷಯಗಳನ್ನು ನಮಗೆ ಹೇಳುತ್ತದೆ.

Previous articleರಿವರ್ಸ್‌ ಸ್ಕ್ರೀನ್‌ಪ್ಲೇಗೆ ಇನ್ನಷ್ಟು ಬಿಗುವು ಸಿಕ್ಕಿದ್ದಿದ್ದರೆ…
Next articleತಿಳಿಹಾಸ್ಯದ ನಿರೂಪಣೆಯಲ್ಲಿ ಗಂಭೀರ ವಿಷಯ; ‘ಹರೀಶ ವಯಸ್ಸು 36’

LEAVE A REPLY

Connect with

Please enter your comment!
Please enter your name here