ಜೇಮ್ಸ್ ಕ್ಯಾಮರೂನ್ ನ್ಯಾಷನಲ್ ಜಿಯೋಗ್ರಫಿಕ್‌ನ ಸೀ ಎಕ್ಸಪ್ಲೋರರ್ ಕೂಡ ಹೌದು. ನೀರೊಳಗಿನ ಚಿತ್ರೀಕರಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ಒಬ್ಬ ವಿಷನರಿ ನಿರ್ದೇಶಕನ ಈ ಎರಡೂ ಪ್ಯಾಷನ್‌ಗಳು – ಸಿನಿಮಾ ಮತ್ತು ಸಮುದ್ರ – ಒಂದೆಡೆಗೆ ಸೇರಿದಾಗ ಏನಾಗಬಹುದು? ಅಲ್ಲೊಂದು ಅದ್ಭುತ ಲೋಕ ಸೃಷ್ಚಿಯಾಗುವುದು ಖಂಡಿತಾ. ಈಗ ‘ಅವತಾರ್ 2’ನಲ್ಲಿ ಆಗಿರುವುದು ಅದೇ.
ಪೆಂಡೋರಾ ಅನ್ನುವ ಹಿಂದೆಂದೂ ಕಂಡು ಕೇಳರಿಯದೇ ಇದ್ದ ಅದ್ಭುತ ಕಾಲ್ಪನಿಕ ಲೋಕವನ್ನು ಚಿತ್ರ ಪ್ರೇಮಿಗಳಿಗೆ ಪರಿಚಯಿಸಿದ್ದ ಸಿನಿಮಾ ‘ಅವತಾರ್’. ತೆರೆ ಕಂಡಾಗ ವಿಶ್ವದ ಹಲವಾರು ಬಾಕ್ಸ್ ಆಫೀಸ್ ರೆಕಾರ್ಡ್‌ಗಳನ್ನು ಮುರಿದಿದ್ದ ಈ ಸಿನಿಮಾ, ಅತೀ ಹೆಚ್ಚು ಹಣಗಳಿಸಿರುವ ಚಿತ್ರಗಳ ಸಾಲಲ್ಲಿ ಇಂದಿಗೂ ಮೊದಲ ಸ್ಥಾನದಲ್ಲೇ ಉಳಿದಿದೆ. ಇಂತಹ ಅತ್ಯಂತ ಯಶಸ್ವಿ ಸಿನಿಮಾ ಒಂದರ ಸೀಕ್ವೇಲ್ ಹೊರ ಬರಲು ಬರೋಬ್ಬರಿ 13 ವರ್ಷ ತೆಗೆದುಕೊಂಡಿತು ಎಂಬುದು ಕೊಂಚ ವಿಚಿತ್ರ ಅನ್ನಿಸಿದರೂ, ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬಗ್ಗೆ ಅರಿತಿರುವ ಯಾರಿಗಾದರೂ ಇದು ಆಶ್ಚರ್ಯ ತರುವ ಸಂಗತಿಯೇನಲ್ಲ. ಈಗ ತೆರೆ ಕಂಡಿರುವ ‘ಅವತಾರ್’ನ ಎರಡನೇ ಭಾಗ ‘ಅವತಾರ್ – ದಿ ವೇ ಆಫ್ ವಾಟರ್’ ನೋಡಿದ ಮೇಲಂತೂ ಈ ಸಿನಿಮಾ ನಿರ್ಮಾಣಕ್ಕೆ ಯಾಕೆ ಇಷ್ಟು ಸಮಯ ಹಿಡಿದಿರಬಹುದು ಎನ್ನುವುದು ಅರ್ಥವಾಗುತ್ತದೆ.
ಹಾಲಿವುಡ್‌ಗೆ ದೊಡ್ಡ ಮಟ್ಟದಲ್ಲಿ ಕನಸು ಕಾಣಲು ಕಲಿಸಿದ ನಿರ್ದೇಶಕ ಜೇಮ್ಸ್ ಕ್ಯಾಮರೂನ್. ಉಳಿದವರಿಗಿಂತ ಸದಾ ಒಂದು ಹೆಜ್ಜೆ ಮುಂದೆಯೇ ಯೋಚಿಸುವ ಈ ನಿರ್ದೇಶಕ ತಮ್ಮದೇ ಆದ ವೈವಿದ್ಯಮಯ ಸಿನೆಮ್ಯಾಟಿಕ್ ಪ್ರಪಂಚವನ್ನೇ ಸೃಷ್ಚಿಸಿದ್ದಾರೆ. ಟರ್ಮಿನೇಟರ್‌ನಿಂದ ಹಿಡಿದು, ಟೈಟಾನಿಕ್ ಅನ್ನು ಒಳಗೊಂಡು, ಅವತಾರ್‌ವರೆಗಿನ ಸಿನಿಮಾ ಪ್ರಯಾಣವನ್ನು ಗಮನಿಸಿದರೆ ತೆರೆಯ ಮೇಲೆ ಹೊಸ ಪ್ರಪಂಚವನ್ನು ಸೃಷ್ಚಿಸುವ ಆವರ ಕನಸು ಎಷ್ಟು ದೊಡ್ಡಮಟ್ಟದಲ್ಲಿರುತ್ತದೆ ಮತ್ತು ಅಂತಹ ದೊಡ್ಡ ಕನಸಿನ ಸಾಕಾರಕ್ಕಾಗಿ ಆತ ಎಷ್ಟು ನಿಧಾನವಾಗಿ ಮತ್ತು ಅಷ್ಟೇ ಕರಾರುವಕ್ಕಾಗಿ ವರ್ಷಗಟ್ಟಲೆ ಕೆಲಸ ಮಾಡುತ್ತಾರೆ ಎನ್ನುವುದು ಅರಿವಾಗುತ್ತದೆ. ಕ್ಯಾಮರೂನ್‌ಗೆ ಇರುವ ಇನ್ನೊಂದು ಚಂದದ ಗೀಳೆಂದರೆ ಅದು ಸಮುದ್ರ. ಕ್ಯಾಮರೂನ್ ನ್ಯಾಷನಲ್ ಜಿಯೋಗ್ರಫಿಕ್‌ನ ಸೀ ಎಕ್ಸಪ್ಲೋರರ್ ಕೂಡ ಹೌದು. ಸಮುದ್ರ ಲೋಕದ ಕುರಿತು ಹಲವು ಡಾಕ್ಯುಮೆಂಟರಿ ಮಾಡಿದ್ದಾರೆ. ನೀರೊಳಗಿನ ಚಿತ್ರೀಕರಣದ ಬಗ್ಗೆ ಅತೀವ ಆಸಕ್ತಿಯನ್ನೂ ಹೊಂದಿದ್ದಾರೆ. ಒಬ್ಬ ವಿಷನರಿ ನಿರ್ದೇಶಕನ ಈ ಎರಡೂ ಪ್ಯಾಷನ್ ಗಳು – ಸಿನಿಮಾ ಮತ್ತು ಸಮುದ್ರ – ಒಂದೆಡೆಗೆ ಸೇರಿದಾಗ ಏನಾಗಬಹುದೆಂದು ಊಹಿಸಿ ನೋಡಿ. ಅಲ್ಲೊಂದು ಅದ್ಭುತ ಲೋಕ ಸೃಷ್ಚಿಯಾಗುವುದು ಖಂಡಿತಾ. ಈಗ ‘ಅವತಾರ್ 2’ನಲ್ಲಿ ಆಗಿರುವುದು ಅದೇ.
ಹಾಗೆ ನೋಡಿದರೆ ‘ಅವತಾರ್ – 2’ನಲ್ಲಿ ದೊಡ್ಡಮಟ್ಟದ ಕತೆಯೇನೂ ಇಲ್ಲ. ಯಾವುದೇ ಅನಿರೀಕ್ಷಿತ ತಿರುವು, ಸಸ್ಪೆನ್ಸ್‌ಗಳಿಲ್ಲದ, ಹೆಚ್ಚು ಕೌಟುಂಬಿಕವೆನಿಸುವಂತಹ ಸರಳ ಕತೆ. ಮೂರೂಕಾಲು ಗಂಟೆಗಳ ದೀರ್ಘ ಸಿನಿಮಾ ಇದು ಎಂಬುದನ್ನು ಪರಿಗಣಿಸಿದಾಗ ಈ ಕಥೆ ಒಂದು ರೀತಿಯಲ್ಲಿ ನೀರಸವೆಂದೇ ಹೇಳಬಹುದು. ‘ಅವತಾರ್’ನ ಮೊದಲ ಭಾಗದಲ್ಲೇ ಅಗತ್ಯವಿರುವ ಎಲ್ಲಾ ವೈಜ್ಞಾನಿಕ ವಿವರಗಳು, ಪಾತ್ರಗಳ ಪರಿಚಯ, ಅಲ್ಲಿ ಸೃಷ್ಚಿಸಲಾಗಿರುವ ಹೊಸಲೋಕದ ಪರಿಚಯ ಎಲ್ಲವೂ ಆಗಿ ಬಿಟ್ಟಿರುವುದರಿಂದ ಅದರ ಬಗ್ಗೆ ಇಲ್ಲಿ ಯಾವ ಹೆಚ್ಚಿನ ವಿವರಣೆ ಇಲ್ಲ. ಹೀಗಾಗಿ, ನೇರವಾಗಿ ಪೆಂಡೋರಾದಲ್ಲೇ ಸಿನಿಮಾ ಆರಂಭವಾಗಿ ಬಿಡುತ್ತದೆ.
ಜೇಕ್ ಸಲ್ಲಿ ಮತ್ತು ನೇತಿರಿ ಪೆಂಡೋರಾದಲ್ಲಿನ ನೆಮ್ಮದಿಯ ಬದುಕು ಸಾಗಿಸುತ್ತಿರುತ್ತಾರೆ, ಅವರಿಗೆ ನಾಲ್ಕು ಮಕ್ಕಳಿವೆ. ಅವರ ಜೊತೆಗೆ ಒಂದು ಮಾನವ ಮಗುವೂ ಬೆಳಿಯುತ್ತಿದೆ. ಈ ಮಕ್ಕಳ ಸೈನ್ಯ ಚಿತ್ರದ ಉದ್ದಕ್ಕೂ ಪ್ರಮುಖ ಪಾತ್ರ ವಹಿಸುತ್ತಾ ಹೋಗುತ್ತದೆ. ಹೀಗಾಗಿಯೇ, ಸಲ್ಲಿ ಇಡೀ ಚಿತ್ರದಲ್ಲಿ ಹೆಚ್ಚಿನ ಮಟ್ಟಿಗೆ ತಂದೆಯಂತೆ ವರ್ತಿಸುತ್ತಾನೆ. ಮೊದಲ ಭಾಗದಲ್ಲಿ ಸಲ್ಲಿಯನ್ನು ಕಾಡಿದ್ದು ನೈತಿಕತೆಯಾದರೆ, ಇದರಲ್ಲಿ ಆತನ ಎಲ್ಲಾ ಕ್ರಿಯೆಗಳ ಹಿಂದಿರುವ ಪ್ರೇರಣಾ ಶಕ್ತಿ ಆತನ ತಂದೆತನ. ಈಗ ಮಾನವ ಸೇನೆಗೆ ಪೆಂಡೋರಾದ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ. ಏಕೆಂದರೆ ಭೂಮಿ ವಾಸಿಸೋದಕ್ಕೆ ಅನರ್ಹ ಅನ್ನುವ ಹಂತಕ್ಕೆ ಹಾಳಾಗಿ ಬಿಟ್ಟಿದೆ. ಮೊದಲ ಭಾಗದಲ್ಲಿನ ವಿಲನ್ ಕರ್ನಲ್, ಸಲ್ಲಿಯನ್ನು ಬೇಟೆಯಾಡಿ, ಹಗೆ ತೀರಿಸಿಕೊಂಡು ಪೆಂಡೋರಾವನ್ನು ವಶಕ್ಕೆ ಪಡೆಯಲು ಮತ್ತೆ ತನ್ನ ಸೈನ್ಯದ ಜೊತೆ ಬಂದಿಳಿಯುತ್ತಾನೆ.
ಹೀಗಾಗಿ, ಸಿನಿಮಾ ಶುರುವಾದ ಸ್ವಲ್ಪ ಹೊತ್ತಿಗೆ ಕದನ ಶುರುವಾಗಿ ಬಿಡತ್ತೆ. ಸಲ್ಲಿ ಕೊನೆಗೆ ತನ್ನ ಕುಟುಂಬವನ್ನು ರಕ್ಷಿಸುವುದಕ್ಕಾಗಿ ಒಮಟಿಕಾಯವನ್ನು ತೊರೆದು, ಸಮುದ್ರತೀರದ ನಾವಿ ಜನಾಂಗ ಮೆಟಕಾಯಿನದ ರಕ್ಷಣೆ ಪಡೆಯುತ್ತಾನೆ. ಇಲ್ಲಿಂದ ಮುಂದೆ ಕ್ಯಾಮರೂನ್ ಗಂಟೆಗಳ ಕಾಲ ಪೆಂಡೋರಾದಲ್ಲಿನ ಸಾಗರದಾಳದ ಮೈಮರೆಸುವಂತಹ ಸೌಂದರ್ಯವನ್ನು ಅನಾವರಣಗೊಳಿಸುತ್ತಾ ಹೋಗುತ್ತಾನೆ. ಮಕ್ಕಳ ಜಗಳ, ತುಂಟಾಟಗಳ ನೆಪದಲ್ಲಿ ಸಮುದ್ರ, ಅಲ್ಲಿನ ಜೀವಿಗಳು, ಅವರ ಬದುಕು ತೋರಿಸುತ್ತಾ ಸ್ವತಃ ಕ್ಯಾಮರೂನ್ ಮೈಮರೆತಂತೆ ಕಾಣುತ್ತದೆ. ಹೀಗಾಗಿ, ಮದ್ಯ ಭಾಗದಲ್ಲಿ ಹೆಚ್ಚಿನ ಕತೆಯೇನೂ ಇಲ್ಲದೆ ಸಿನಿಮಾ ಅದ್ಭುತವಾದ ವಿಎಫ್ಎಕ್ಸ್ ಲೋಕದಲ್ಲಿ ವಿಹರಿಸುತ್ತಾ, ಕಳೆದುಹೋಗಿ ಬಿಡುತ್ತದೆ. ಹೊಳೆ ಹೊಳೆಯುವ ಸಮುದ್ರ ಜೀವಿಗಳು, ದೈತ್ಯಾಕಾರದ ಟಲ್ಕನ್‌ಗಳು, ಹಾರುವ, ಈಜುವ ಈಲ್‌ಗಳು ಹೀಗೆ… ಮೊದಲ ಭಾಗದಲ್ಲಿ ನೋಡಿದ್ದಕ್ಕಿಂತಲೂ ವರ್ಣಮಯವಾದ ಸಮುದ್ರದಾಳದ ವಿಸ್ಮಯ ಜಗತ್ತು ಇಲ್ಲಿದೆ. ಕೊನೆಗೆ ಕರ್ನನ್, ಸಲ್ಲಿಯನ್ನು ಹುಡುಕಿಕೊಂಡು ಅಲ್ಲಿಗೂ ಕಾಲಿಟ್ಟಾಗ ಸಿನಿಮಾದ ಕೊನೆಯ ಹಂತದ ಯುದ್ಧಕ್ಕೆ ವೇದಿಕೆ ಸಜ್ಜಾಗುತ್ತದೆ.
ಹತ್ತಿರ ಹತ್ತಿರ ಒಂದು ಗಂಟೆಯ ಈ ದೀರ್ಘ ಅಂತಿಮ ಸಮರ ಕೆಲವು ರೋಚಕ ಫೈಟ್ ಸೀಕ್ವೆನ್ಸ್ ಗಳ ಮೂಲಕ ಕ್ಯಾಮರೂನ್ ಎಂತಹ ಒಳ್ಳೆಯ ಆ್ಯಕ್ಷನ್ ನಿರ್ದೇಶಕ ಎಂಬುದನ್ನೂ ನೆನಪಿಸುತ್ತದೆ. ಈ ಹಂತದಲ್ಲಿ ಅಲ್ಲಲ್ಲಿ ಟರ್ಮಿನೇಟರ್ ಮತ್ತು ಟೈಟಾನಿಕ್ ಛಾಯೆ ಕಂಡು ಬಂದರೂ ಅಚ್ಚರಿಯಿಲ್ಲ. ಚಿತ್ರದ ವೀಕ್ ಪಾಯಿಂಟ್ ಇದರ ದುರ್ಬಲ ಕಥಾ ಹಂದರ. ಆದರೆ, ಅದನ್ನು ಮರೆಸುವಂತಹ, ಇದುವರೆಗೆ ನೋಡಿರದ ಗುಣಮಟ್ಟದ ವಿಎಫ್ಎಕ್ಸ್, ತೆರೆಯ ಮೇಲಿಂದ ನಾವು ಕಣ್ಣು ಕೀಳದಂತೆ ತಡೆಯತ್ತದೆ. ‘ಅವತಾರ್’ ಮೊದಲ ಭಾಗದಲ್ಲಿ ಮನುಷ್ಯನ ದುರಾಸೆ, ಅದರ ವಿರುದ್ಧ ನಿಲ್ಲುವ ಮೌಲ್ಯ, ನೈತಿಕತೆಯ ಆಧಾರದ ಮೇಲೆ ಕತೆಯನ್ನು ಹೆಣೆಯಲಾಗಿದ್ದರೆ, ಎರಡನೇ ಭಾಗವನ್ನು ಬಹುತೇಕ ಕುಟುಂಬ ಪ್ರೇಮ, ಹೆತ್ತವರ ಜವಾಬ್ದಾರಿ ಇಂತಹ ಹೆಚ್ಚು ಭಾವನಾತ್ಮಕವಾದ ಅಂಶಗಳ ಮೇಲೆ ಕಟ್ಟಲಾಗಿದೆ.
ವಿಎಫ್ಎಕ್ಸ್ ಗೆ ಪೂರಕವಾಗುವಂತಹ ಹಿನ್ನೆಲೆ ಸಂಗೀತ ಇದೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾದ, ಅದ್ದೂರಿಯಾದ ಮತ್ತು ಅತ್ಯಾಧುನಿಕವಾದ ಸಿನಿಮಾ ‘ಅವತಾರ್ 2’. ಮೊದಲ ಭಾಗದ 13 ವರ್ಷದ ಹಳೆಯ ಗ್ರಾಫಿಕ್ಸ್ ಬಗ್ಗೆಯೇ ಈಗಲೂ ಜನ ಮಾತನಾಡುತ್ತಿರುವಾಗ, ಈ ಹೊಸ ಸಿನಿಮಾ ಎಷ್ಟು ಮುಂದುವರಿದ ತಂತ್ರಜ್ಞಾನ ಬಳಸಿರಬಹುದೆಂದು ನೀವೇ ಊಹಿಸಿ. ಇನ್ನು ತಾರಾಗಣದಲ್ಲಿನ ಹೊಸ ಪ್ರಮುಖ ಸೇರ್ಪಡೆ ಅಂದರೆ ಕೇಟ್ ವಿನ್ಸ್ಲೆಟ್. ಆದರೆ, ಆಕೆಯ ತಾರಾಮೌಲ್ಯಕ್ಕೆ ಅಥವಾ ಪ್ರತಿಭೆಗೆ ತಕ್ಕನಾದ ಪಾತ್ರವಾಗಲೀ, ಸಮಯವಾಗಲಿ ಸಿಕ್ಕಿಲ್ಲ. ಇನ್ನು ಚಿತ್ರದ ಹೆಸರೇ ಭಾರತೀಯ ಮೂಲದ್ದಾಗಿರುವಾಗ ಇನ್ನೂ ಕೆಲವು ಅಂಶಗಳಲ್ಲಿ ಭಾರತೀಯತೆ ಹುಡುಕಬಹುದು. ಒಂದು ಉದಾಹರಣೆ ಕೊಡಬೇಕೆಂದರೆ ಸಿನಿಮಾದಲ್ಲಿ ವಯಸ್ಸಾಗದಂತೆ ತಡೆಯುವ ವಸ್ತುವಿನ ಹೆಸರು ಅಮೃತ್.
ಶಕ್ತ ಕಥೆಯ ಕೊರತೆ ಇದೆಯಾದರೂ, ಅದ್ಭುತ ಸಿನಿಮಾಟಿಕ್ ಅನುಭವ ಬೇಕೆಂದು ಬಯಸುವವರು ಈ ಸಿನಿಮಾವನ್ನು ಎಷ್ಟು ದೊಡ್ಡದು ಸಾಧ್ಯವೋ ಅಷ್ಚು ದೊಡ್ಡ ತೆರೆಯಲ್ಲಿ, ತ್ರೀಡಿಯಲ್ಲಿ ನೋಡಲೇಬೇಕು. ಮತ್ತು ಮುಖ್ಯವಾಗಿ ಎರಡನೇ ಭಾಗ ನೋಡುವುದಕ್ಕೆ ಮೊದಲು ‘ಅವತಾರ್’ ಮೊದಲ ಭಾಗವನ್ನು ಮತ್ತೊಮ್ಮೆ ನೋಡಿಕೊಂಡು ಹೋಗುವುದು ಉತ್ತಮ. ‘ಅವತಾರ್’ನ ಒಟ್ಟು ಐದು ಭಾಗಗಳನ್ನು ಹೊರ ತರಬೇಕೆಂಬ ಕ್ಯಾಮರೂನ್ ಕನಸಿಗೆ ಶಕ್ತಿ ತುಂಬುವ ರೀತಿಯಲ್ಲಿ ‘ಅವತಾರ್ – ದಿ ವೇ ಆಫ್ ವಾಟರ್’ ಇದೆ ಅನ್ನುವುದಕ್ಕೆ ಅಡ್ಡಿಯಿಲ್ಲ.