ಬದುಕಿನಲ್ಲಿ ಸೋಲುಗಳನ್ನೇ ಕಂಡು ಗೆಲುವು, ನೆಮ್ಮದಿ ಎಂಬುದು ದೂರದ ಬೆಟ್ಟವಾಗಿರುವ ಎಷ್ಟೋ ಜನರಿಗೆ ಈ ಚಿತ್ರ ಸ್ಫೂರ್ತಿಯ ಸೆಲೆ. ‘ದಿ ಕಿಂಗ್ಸ್‌ ಸ್ಪೀಚ್‌’ ಸಿನಿಮಾ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಇಂಗ್ಲೆಂಡಿನ ದೊರೆ ಆರನೇ ಜಾರ್ಜ್ ಹೇಗೆ ತನ್ನ ಉಗ್ಗುವಿಕೆಯ ಸಮಸ್ಯೆಯಿಂದ ಹೊರಬರುತ್ತಾನೆ ಎಂಬ ಒಂದೇ ಕಥೆಯ ಎಳೆಯಿರುವ ಈ ಚಲನಚಿತ್ರ, ಮನುಷ್ಯ ಮಾತ್ರನಾದವನು ಮನಸ್ಸು ಮಾಡಿದರೆ ಎಂತಹ ಸವಾಲನ್ನಾದರೂ ಸ್ವೀಕರಿಸಿ ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. 2011ರಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ ಸೇರಿ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಟಾಮ್ ಹೂಪರ್ ನಿರ್ದೇಶನದ ಈ ಪ್ರಯೋಗ ಸಿನಿಪ್ರಿಯರು ನೋಡಲೇಬೇಕಾದ ಚಿತ್ರಗಳಲ್ಲೊಂದು.

ಸಿನಿಮಾ ಶುರುವಾಗುವ ಕಾಲ 1925. ಇಂಗ್ಲೆಂಡ್ ದೊರೆ ಐದನೇ ಜಾರ್ಜ್ ಜಗತ್ತಿನ ಕಾಲು ಭಾಗ ಜನರನ್ನು ಆಳುತ್ತಿದ್ದ ಸಮಯ. ವಸ್ತು ಪ್ರದರ್ಶನವೊಂದರಲ್ಲಿ ಎರಡನೇ ಮಗ ಆಲ್ಬರ್ಟ್‍ಗೆ ಜನರೊಂದಿಗೆ ಮೈಕ್ರೋಫೋನ್‍ನಲ್ಲಿ ಮಾತಾಡಲು ರಾಜ ಹೇಳುತ್ತಾನೆ. ರಾಜಕುಮಾರ ಆಲ್ಬರ್ಟ್‍ಗೆ ಚಿಕ್ಕಂದಿನಿಂದಲೂ ಪ್ರತೀ ಪದವನ್ನಾಡಲೂ ಅಡ್ಡ ಬಂದು ತೊಡರುವ ಉಗ್ಗು ಸಮಸ್ಯೆ! ಒಂದಕ್ಷರವೂ ಬಾಯಿಂದ ಹೊರಡದೇ ಇಡೀ ವಾತಾವರಣ ಮುಜುಗರವನ್ನುಂಟುಮಾಡುತ್ತದೆ. ಅಲ್ಲಿಂದ 1934ಕ್ಕೆ ಸಿನಿಮಾ ನೆಗೆಯುತ್ತದೆ. ಸ್ಪೀಚ್ ಥೆರಪಿಸ್ಟರು ಆಲ್ಬರ್ಟ್ ಮೇಲೆ ವಿಧವಿಧದ ಪ್ರಯೋಗ ಮಾಡುತ್ತಿದ್ದಾರೆ. ಹಾಗಂತ ದಿನನಿತ್ಯದ ಸಂಭಾಷಣೆಯಲ್ಲಿ ಉಗ್ಗು ಆಲ್ಬರ್ಟ್‍ಗೆ ಹೇಳಿಕೊಳ್ಳುವಂತ ಸಮಸ್ಯೆಯನ್ನೇನೂ ಮಾಡುವುದಿಲ್ಲ. ಬಹಳ ಜನರನ್ನು ಉದ್ದೇಶಿಸಿ ಮಾತನಾಡಲು ಹೊರಟರೇ ಪದಗಳೇ ಹೊರಡುವುದಿಲ್ಲ. ಕೊನೆಯ ಪ್ರಯತ್ನವಾಗಿ ಪತ್ನಿ ಎಲಿಜಬೆತ್ ಆಸ್ಟ್ರೇಲಿಯಾದ ವಿಫಲ ನಟನೂ ಸ್ಪೀಚ್ ಥೆರಪಿಸ್ಟೂ ಆದ ಲಿಯೊನೆಲ್ ಲಾಗ್ ಅನ್ನು ನೇಮಿಸಿಕೊಳ್ಳುತ್ತಾಳೆ. ಜಾರ್ಜ್‍ನ ವ್ಯಕ್ತಿತ್ವವನ್ನು ನಗೆಪಾಟಲಾಗಿಸಿರುವ ಉಗ್ಗನ್ನು ಹಿಮ್ಮೆಟ್ಟಿಸಿ ಆತ ಸಹಜವಾಗಿ ಮಾತಾಡುವಂತೆ ಮಾಡಬೇಕಿರುವುದು ಲಾಗ್ ಮುಂದಿರುವ ಸವಾಲು.

ಈ ಲಿಯೊನೆಲ್ ಲಾಗ್ ಒಬ್ಬ ವಿಚಿತ್ರ ಮನುಷ್ಯ. ರಾಜಕುಮಾರನನ್ನು ಅಷ್ಟೆತ್ತರದಲ್ಲಿಟ್ಟು ಆತನ ಸಮಸ್ಯೆ ಬಗೆಹರಿಸಲಾಗದು. ಗೆಳೆಯನಾದರೇನೇ ಆತನ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬುದು ಆತನ ಅಭಿಪ್ರಾಯ. ತಾನು ಅರಮನೆಗೆ ಬರುವುದಿಲ್ಲ, ರಾಜಕುಮಾರನೇ ತನ್ನ ಕ್ಲಿನಿಕ್‍ಗೆ ಬರಲಿ ಎಂಬುದು ಆತನ ಶರತ್ತು. ಮೊದಲ ಭೇಟಿಯಲ್ಲಿಯೇ ತನ್ನನ್ನು ಕುಟುಂಬಸ್ಥರು ಕರೆವ ಹಾಗೆ ಬರ್ಟಿ ಎಂದು ಕರೆಯುವ, ವೈಯಕ್ತಿಕ ಪ್ರಶ್ನೆಗಳನ್ನು ಕೇಳುವ ಈ ವಿಚಿತ್ರ ವೈದ್ಯ ಆಲ್ಬರ್ಟ್‍ಗೆ ಇಷ್ಟವಾಗುವುದಿಲ್ಲ. ತನಗೇ ತಾನೇ ಮಾತಾಡಿಕೊಳ್ಳುವಾಗ ತಾನು ಉಗ್ಗುವುದಿಲ್ಲ ಎಂದು ಆಲ್ಬರ್ಟ್ ಹೇಳಿದ್ದು ಕೇಳಿ ಸಂಗೀತ ಕೇಳಿಸುತ್ತ ಹ್ಯಾಮ್ಲೆಟ್ ನಾಟಕದ ಜನಪ್ರಿಯ ಸಂಭಾಷಣೆ ಹೇಳಿಸಿ ರೆಕಾರ್ಡ್ ಮಾಡಿಸುತ್ತಾನೆ ಲಿಯೊನೆಲ್. ಆದರೆ ಆಲ್ಬರ್ಟ್ ಚಿಕಿತ್ಸೆ ಮುಂದುವರೆಸಲು ಇಷ್ಟವಿಲ್ಲದೇ ಹೊರಟುಹೋಗುವಾಗ ಧ್ವನಿಮುದ್ರಿಕೆಯನ್ನು ಕೊಟ್ಟು ಕಳಿಸುತ್ತಾನೆ ಲಿಯೊನೆಲ್.

ಅದು ಕ್ರಿಸ್‍ಮಸ್ ಸಮಯ. ತಂದೆ ಐದನೇ ಜಾರ್ಜ್, ಆಲ್ಬರ್ಟ್‍ಗೆ ವೈರ್‍ಲೆಸ್ ಉಪಕರಣದ ಮೂಲಕ ಹೇಗೆ ರಾಜನಾದವನು ಜನರ ಮನೆಯನ್ನು ಪ್ರವೇಶಿಸಬಹುದು ಎಂದು ಆಲ್ಬರ್ಟ್‍ಗೆ ಹೇಳುತ್ತಾರೆ. ಲಿಯೋನೆಲ್ ಕೊಟ್ಟ ಧ್ವನಿಮುದ್ರಿಕೆಯನು ಸಂಜೆ ಕೇಳಿದರೆ ಅಡೆತಡೆಯಿಲ್ಲೇ ಓದಿರುತ್ತಾನೆ ಆಲ್ಬರ್ಟ್! ಅಂದರೆ ಆದರೆ ಆತನ ಸಮಸ್ಯೆ ದೈಹಿಕವಾದದ್ದು ಮಾತ್ರವಲ್ಲ, ಮಾನಸಿಕವಾದದ್ದೂ ಕೂಡ. ತಡವರಿಸಬಹುದೆಂಬ ಭಯವೇ ಜನರೆದುರು ಮಾತಾಡಲು ಆಗದಂತೆ ಮಾಡುತ್ತಿದೆ. ಚಿಕಿತ್ಸೆ ಮುಂದುವರೆಯುತ್ತದೆ. ಅವರಿಬ್ಬರ ನಡುವೆ ಗೆಳೆತನ ಗಾಢವಾಗುತ್ತ ಹೋದಂತೆ ಆಲ್ಬರ್ಟ್‍ನ ಉಗ್ಗುವಿಕೆಯ ಮೂಲ ಕಹಿ ಬಾಲ್ಯದಲ್ಲಿರುವುದು ಗೊತ್ತಾಗುತ್ತದೆ. ಸಾಕಿದ ನ್ಯಾನಿಯರನ್ನು ಬಿಟ್ಟರೆ ಯಾರ ಜತೆಯೂ ಮಾತನಾಡಿಯೇ ಗೊತ್ತಿಲ್ಲ, ಆಲ್ಬರ್ಟ್‍ನ ಮೊದಲ ನ್ಯಾನಿಯಂತೂ ಹೊಟ್ಟೆಗೂ ಹಾಕದೇ ಗೋಳಾಡಿಸಿದವಳು. ಅಸಲಿಗೆ ಆಲ್ಬರ್ಟ್‍ಗೆ ಸ್ನೇಹಿತರೇ ಇಲ್ಲ. ಆಲ್ಬರ್ಟ್ ಮನಬಿಚ್ಚಿ ಮಾತನಾಡಿದ ಮೊದಲ ಸಾಮಾನ್ಯ ವ್ಯಕ್ತಿಯೇ ಲಿಯೊನೆಲ್! ಚಿಪ್ಪಿನೊಳಗೇ ಇರುವ ರಾಜಕುಮಾರನ ಸಮಸ್ಯೆಗೆ ಹಲವು ಆಯಾಮಗಳು.

ತಂದೆಯ ನಿಧನದ ನಂತರ ಅಣ್ಣ ಡೇವಿಡ್, ಎಂಟನೇ ಎಡ್ವರ್ಡ್ ಆಗಿ ಸಿಂಹಾಸನವನ್ನೇರುತ್ತಾನೆ. ಆದರೆ ಎರಡು ಬಾರಿ ವಿಚ್ಚೇದನ ಪಡೆದ ಅಮೆರಿಕನ್ ಮಹಿಳೆಯನ್ನಾತ ವಿವಾಹವಾಗಲಿದ್ದಾನೆ. ರಾಜನೇ ಇಂಗ್ಲೆಂಡಿನ ಚರ್ಚ್ ಮುಖ್ಯಸ್ಥನಾಗಿರುವುದರಿಂದ ಅದು ಸಾಧ್ಯವಿಲ್ಲ. ಹಾಗಾಗಿ ಪ್ರೀತಿಸಿದ ಮಹಿಳೆಗೋಸ್ಕರ ಸಿಂಹಾಸನ ತಿರಸ್ಕರಿಸುತ್ತಾನೆ ಡೇವಿಡ್. ಈಗ ಆಲ್ಬರ್ಟ್ ಆರನೇ ಜಾರ್ಜ್ ಎಂಬ ಹೆಸರಿನಲ್ಲಿ ಸಿಂಹಾಸನವನ್ನೇರಬೇಕಿದೆ. ಆತನಿಗೋ ರಾಜನಾಗುವುದೇ ಇಷ್ಟವಿಲ್ಲ. ಮಾತನಾಡಲು ತಡವರಿಸುವ ತಾನೆಂತಹ ರಾಜ ಎಂಬ ಕೀಳರಿಮೆ, ಜನರ ಅಭಿಪ್ರಾಯದ ಭಯ.

ಕೊನೆಗೂ ಆರನೇ ಜಾರ್ಜ್ ಅಧಿಕಾರ ವಹಿಸಿಕೊಳ್ಳುತ್ತಾನೆ. ಇದೀಗ ಉಗ್ಗಿನ ಸಮಸ್ಯೆ ಇದೆಯೆಂದು ಮಾತನಾಡದೇ ಇರುವಂತಿಲ್ಲ. ಅದೂ ದೇಶ ಜರ್ಮನಿಯೊಂದಿಗೆ ಯುದ್ಧದ ಹೊಸ್ತಿಲಲ್ಲಿರುವ ನಿರ್ಣಾಯಕ ಗಳಿಗೆಯಲ್ಲಿ! ಅಂತಹ ಗಂಭೀರ ವಿಷಯವನ್ನು ತಡವರಿಸುತ್ತ ಹೇಳಿದರೆ ಜನ ಅಪಹಾಸ್ಯ ಮಾಡಲಾರರೇ?
ಲಕ್ಷಾಂತರ ಜನರು ನೇರವಾಗಿ ಕೇಳುತ್ತಿರುವಂತೆಯೇ ರಾಜ ನಿರರ್ಗಳವಾಗಿ ಮಾತಾಡುವುದರಲ್ಲಿ ಹೇಗೆ ಯಶಸ್ವಿಯಾದ ಎಂಬುದನ್ನು ಚಲನಚಿತ್ರ ನೋಡಿಯೇ ಆನಂದಿಸಬೇಕು.

ಬದುಕಿನಲ್ಲಿ ಸೋಲುಗಳನ್ನೇ ಕಂಡು ಗೆಲುವು, ನೆಮ್ಮದಿ ಎಂಬುದು ದೂರದ ಬೆಟ್ಟವಾಗಿರುವ ಎಷ್ಟೋ ಜನರಿಗೆ ಈ ಚಿತ್ರ ಸ್ಫೂರ್ತಿಯ ಸೆಲೆ. ಮನುಷ್ಯನ ಅಂತರಂಗದಲ್ಲಿ ಹುಟ್ಟಿ ಅಲ್ಲಿಯೇ ಬೆಳೆದು ಬದುಕನ್ನೇ ನಾಶ ಮಾಡಿಬಿಡುವ ಭಯವೆಂಬ ಕಾಣದ ಶತ್ರುವನ್ನು ಹಿಮ್ಮೆಟ್ಟಿಸುವ ಬಗ್ಗೆ, ವೈವಾಹಿಕ ಸಂಬಂಧವೆಂದರೆ ಹೇಗೆ ಒಬ್ಬರು ಮತ್ತೊಬ್ಬರ ಲೋಪಗಳನ್ನೂ ಒಪ್ಪಿಕೊಂಡು ಕೈ ಹಿಡಿದು ಮುನ್ನಡೆಯುವುದು ಎನ್ನುವ ಬಗ್ಗೆ, ಗುರು ಶಿಷ್ಯರ ಸ್ನೇಹ ಸಂಬಂಧದ ಬಗ್ಗೆ ಇನ್ನೂ ಹತ್ತಾರು ಸೂಕ್ಷ್ಮ ಸಂಗತಿಗಳನ್ನು ಅಷ್ಟೇ ಸೂಕ್ಷ್ಮವಾಗಿ ಹೇಳಿದ್ದಾರೆ ನಿರ್ದೇಶಕರು.

ಇನ್ನು ಈ ಚಿತ್ರ ಚಿತ್ರಕಥೆ, ನಿರ್ದೇಶನ, ಸಂಗೀತ, ನಟನೆ ಹೀಗೆ ಎಲ್ಲಾ ವಿಭಾಗಗಳಲ್ಲೂ ಜನರ ಮತ್ತು ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತು. ಜಾರ್ಜ್ ಆಗಿ ನಟಿಸಿದ ಕಾಲಿನ್ ಪರ್ಥ್ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯನ್ನೂ ಗಳಿಸಿದರು. ರಾಜನ ಗೊಂದಲ, ಸಂಕಟ, ಭಯ, ತನ್ನನ್ನು ತಾನು ಸಾಬೀತುಪಡಿಸಬೇಕಾದ ಅನಿವಾರ್ಯತೆ, ನಂತರ ಮುಖದಲ್ಲಿ ಪುಟಿದು ಚಿಮ್ಮುವ ಆತ್ಮವಿಶ್ವಾಸ ಇವೆಲ್ಲವನ್ನು ಅತ್ಯಂತ ಸಶಕ್ತವಾಗಿ ನಟಿಸಿ ಪಾತ್ರವೇ ತಾವಾಗಿದ್ದಾರೆ. ಲಿಯೊನೆಲ್ ಆಗಿ ಜಾಫ್ರಿ ರಶ್, ರಾಣಿಯಾಗಿ ಹೆಲೆನಾ ಕಾರ್ಟರ್ ಮತ್ತಿತರರ ಪಾತ್ರನಿರ್ವಹಣೆಯೂ ಅದ್ಭುತ. ಮಳೆಗಾಲದ ತಣ್ಣನೆಯ ವಾತಾವರಣದಿಂದ ಬೇಸರ ಬಂದಿದ್ದರೆ ಈ ಫೀಲ್ ಗುಡ್ ಸಿನಿಮಾ ಖಂಡಿತ ನೋಡಿ. ಬೆಚ್ಚನೆಯ ಭಾವನೆಗಳಲ್ಲಿ ಹೃದಯ ತೋಯ್ದು ಕಣ್ಣು ಒದ್ದೆಯಾಗುವುದಂತೂ ನಿಶ್ಚಿತ.

LEAVE A REPLY

Connect with

Please enter your comment!
Please enter your name here