‘ಭಾಗ್ಯವಂತ’ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ ಹಾಡಿದ್ದ ಗೀತೆ ‘ಬಾನದಾರಿಯಲ್ಲಿ..’. ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್‌ ನಟಿಸುತ್ತಿರುವ ಚಿತ್ರಕ್ಕೆ ಈ ಹಾಡಿನ ಮೊದಲ ಪದವೇ ಶೀರ್ಷಿಕೆಯಾಯ್ತು. ಪುನೀತ್‌ ರಾಜಕುಮಾರ್‌ ಅವರ ನೆನಪಿನಲ್ಲಿ ‘ಅಪ್ಪು ಸಂಜೆ’ ಕಾರ್ಯಕ್ರಮದಲ್ಲಿ ಚಿತ್ರದ ಲಿರಿಕಲ್‌ ವೀಡಿಯೋ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ ಚಿತ್ರತಂಡ.

ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನದಾರಿಯಲ್ಲಿ’ ಸಿನಿಮಾದ ‘ಮಾತೆಲ್ಲಾ ಹಾಗೆ ಇದೆ’ ಲಿರಿಕಲ್‌ ವೀಡಿಯೋ ಸಾಂಗ್‌ USA, ಡಲ್ಲಾಸ್‌ನಲ್ಲಿ ಆಗಸ್ಟ್‌ 26ರಂದು ಸಂಜೆ ನಡೆಯಲಿರುವ ‘ಅಪ್ಪು ಸಂಜೆ’ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಗಣೇಶ್‌, ರೀಷ್ಮಾ ನಾಣಯ್ಯ ಮತ್ತು ರುಕ್ಮಿಣಿ ವಸಂತ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಇದು. ಅಂದು ಸಂಜೆ 3.30ಕ್ಕೆ ಅಮೆರಿಕಾದಲ್ಲಿ ಮತ್ತು ಆಗಸ್ಟ್‌ 27ರ ಬೆಳಗ್ಗೆ 11.30ಕ್ಕೆ ಭಾರತದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್‌ ಅವರಿಂದ ಲಿರಿಕಲ್‌ ವೀಡಿಯೋ ಬಿಡುಗಡೆಯಾಗಲಿದೆ. ‘ನೋಡು ಎಂಥ ಚೆಂದ!’ ಅಡಿಬರಹ ಹೊಂದಿರುವ ಸಿನಿಮಾದ ಚಿತ್ರಕಥೆಯನ್ನು ಜನಪ್ರಿಯ ಛಾಯಾಗ್ರಾಹಕಿ ಪ್ರೀತಾ ಜಯರಾಮನ್ ಬರೆದಿದ್ದಾರೆ. ಚಿತ್ರವನ್ನು Shri Vaare Talkies ನಿರ್ಮಿಸಿದೆ. ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಅಭಿಲಾಷ್ ಕಲಾತಿ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಮಾಸ್ತಿ ಉಪ್ಪಾರಹಳ್ಳಿ ಸಂಭಾಷಣೆ ಸಿನಿಮಾಗಿದೆ.

ನಿರ್ದೇಶಕ ಪ್ರೀತಂ ಅವರ ಈ ಚಿತ್ರವು ಈಗಾಗಲೇ ಕೆಲವು ಗ್ಲಿಂಪ್ಸಸ್‌ಗಳ ಮೂಲಕ ಪ್ರೇಕ್ಷಕರ ಮನಸೆಳೆದಿದೆ. ಸಿನಿಮಾವನ್ನು ಕೀನ್ಯಾದ ಮಸಾಯಿ ಮಾರಾ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಸಿನಿಮಾ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಆದರೆ ನಿರ್ಮಾಪಕರು ಥಿಯೇಟ್ರಿಕಲ್ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಅವರ ಚಿತ್ರದ ಬಿಡುಗಡೆಯ ಸತ್ತಲೂ ಅನೇಕ ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆ. ಸೆಪ್ಟೆಂಬರ್‌ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್- A, ‘ಕುಶಿ’ (ತೆಲುಗು), ಶಾರುಖ್ ಖಾನ್ ನಟನೆಯ ಮೆಗಾ ಕಮರ್ಷಿಯಲ್ ಎಂಟರ್‌ಟೇನರ್‌ ‘ಜವಾನ್’, ಅನುಷ್ಕಾ ಶೆಟ್ಟಿ ಮತ್ತು ನವೀನ್ ಪೋಲಿಶೆಟ್ಟಿ ನಟಿಸಿರುವ ತೆಲುಗು ಚಿತ್ರ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’, ಹಾಲಿವುಡ್ ಹಾರರ್ ಥ್ರಿಲ್ಲರ್ ‘ನನ್ 2’, ಮೇಘನಾ ರಾಜ್‌ ನಟನೆಯ ‘ತತ್ಸಮ ತತ್ಬವ’, ಅನುಪಮಾ ಪರಮೇಶ್ವರನ್ ಅಭಿನಯದ ತೆಲುಗು ಚಿತ್ರ ‘ಟಿಲ್ಲು ಸ್ಕ್ವೇರ್’, ‘ಸಲಾರ್’ ಸಿನಿಮಾಗಳು ತೆರೆಕಾಣುತ್ತಿವೆ. ಈ ಸಿನಿಮಾಗಳ ಮಧ್ಯೆ ‘ಬಾನದಾರಿಯಲ್ಲಿ’ ತೆರೆಗೆ ಬರುವುದೋ, ಇಲ್ಲವೇ ಬಿಡುಗಡೆ ಮುಂದಕ್ಕೆ ಹೋಗುವುದೋ ನೋಡಬೇಕು.

Previous articleಅದಾ ಶರ್ಮಾ ‘CD’ ತೆಲುಗು ಸಿನಿಮಾ | ಕೃಷ್ಣ ಅನ್ನಂ ನಿರ್ದೇಶನದ ಸೈಕಲಾಜಿಕಲ್‌ ಥ್ರಿಲ್ಲರ್‌
Next article‘ಉತ್ತರ ಕಾಂಡ’ ಸಿನಿಮಾ ಟೀಸರ್‌ | ನಟ ಡಾಲಿ ಧನಂಜಯ್‌ ಬರ್ತ್‌ಡೇ ಸ್ಪೆಷಲ್‌

LEAVE A REPLY

Connect with

Please enter your comment!
Please enter your name here