ಇಂದು ನಟ ಧನಂಜಯ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಬರ್ತ್‌ಡೇಗೆಂದು ಅವರು ನಟಿಸುತ್ತಿರುವ ‘ಉತ್ತರಕಾಂಡ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅವರ ನಿರ್ಮಾಣದ ‘ಬಡವ ರಾಸ್ಕಲ್‌’ ಟೀಮ್‌ನಿಂದ ನೂತನ ಸಿನಿಮಾ ‘ಅಣ್ಣ from Mexico’ ಘೋಷಣೆಯಾಗಿದೆ.

ನಟ ಡಾಲಿ ಧನಂಜಯ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ಗಿಫ್ಟ್‌ ಆಗಿ ‘ಉತ್ತರಕಾಂಡ’ ಚಿತ್ರತಂಡ ನಿನ್ನೆ (ಆಗಸ್ಟ್ ‌22) ಪಾತ್ರವನ್ನು ಪರಿಚಯದ ಟೀಸರ್‌ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ರಮ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ. ಟೀಸರ್‌ನಲ್ಲಿ ‘ಗಬ್ರು ಸತ್ಯ’ ಪಾತ್ರದಲ್ಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಜೈಲಿನಲ್ಲಿ ಬಂಧಿಯಾಗಿರುವ ಸತ್ಯನನ್ನು ಬಿಡುಗಡೆಗೊಳಿಸಿದ ಪೊಲೀಸ್‌ ಅಧಿಕಾರಿ ಅವನನ್ನು ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸುತ್ತಾರೆ. ಹೊರ ಬಂದ ಸತ್ಯನಿಗೆ ಅವನ ಸ್ನೇಹಿತ, ‘ದೋಸ್ತಾ ಇವತ್ತು ನಿನ್‌ ಹುಟ್ದಬ್ಬ’ ಎಂದು ಬಾಕ್ಸ್‌ವೊಂದನ್ನು ಸತ್ಯನ ಕೈಗೆ ಕೊಡುತ್ತಾನೆ. ಸತ್ಯ ಅದನ್ನು ಠಾಣೆಯೊಳಗಿರುವ ಪೊಲೀಸ್‌ ಅಧಿಕಾರಿಗೆ ಕೊಟ್ಟು ಹೊರ ಬಂದ ಮರುಕ್ಷಣವೇ ಅದು ಸಿಡಿಯುತ್ತದೆ! ಸತ್ಯನನ್ನು ಹಾರ ತುರಾಯಿಗಳಿಂದ ಅವನ ಸ್ನೇಹಿತರು ಭರ್ಜರಿಯಾಗಿ ಸ್ವಾಗತಿಸುತ್ತಾರೆ.

‘ಉತ್ತರಕಾಂಡ’ ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಈ ಚಲನಚಿತ್ರವು ಕರ್ನಾಟಕದ ಒಂದು ಪ್ರದೇಶದಲ್ಲಿ ನಡೆಯುವ ದರೋಡೆಕೋರರ ಕಥಾಹಂದರ. ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. KRG Studios ಅಡಿಯಲ್ಲಿ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತವಿದೆ. ಸಿನಿಮಾವನ್ನು ಅಕ್ಟೋಬರ್‌ 20, 2023ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಮಾಡಲು ನಿರ್ಧರಿಸಲಾಗಿದೆ.

‘ಬಡವ ರಾಸ್ಕಲ್‌’ ಟೀಮ್‌ನಿಂದ ಹೊಸ ಸಿನಿಮಾ | ಯಶಸ್ವೀ ‘ಬಡವ ರಾಸ್ಕಲ್‌’ ಚಿತ್ರತಂಡದಿಂದ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಇದು ಧನಂಜಯ ಅವರೇ ತಮ್ಮ ಡಾಲಿ ಪಿಕ್ಚರ್ಸ್‌ ಅಡಿ ನಿರ್ಮಿಸಿ, ನಟಿಸಿದ್ದ ಸಿನಿಮಾ. ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಅನಾವರಣಗೊಳಿಸಲಾಗಿದೆ. ಈ ಚಿತ್ರಕ್ಕೆ ‘ಅಣ್ಣ from Mexico’ ಎನ್ನುವ ಶೀರ್ಷಿಕೆ ನಿಗದಿಯಾಗಿದೆ. ‘ಬಡವ ರಾಸ್ಕಲ್‌’ ನಿರ್ದೇಶಿಸಿದ್ದ ಶಂಕರ್‌ ಗುರು ಅವರೇ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಫಸ್ಟ್‌ಲುಕ್‌ನಲ್ಲಿ ಕೊರಳಿಗೆ ಕರ್ನಾಟಕ ನಕ್ಷೆಯನ್ನು ಹಾರವನ್ನಾಗಿ ಧರಿಸಿರುವ ವಿಭಿನ್ನ ಲುಕ್‌ನಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಆಕ್ಷನ್‌ – ಎಂಟರ್‌ಟೇನರ್‌ ಎಂದು ಹೇಳಲಾಗಿದ್ದು, ಅಜ್ಜಿ – ಮೊಮ್ಮೊಗನ ಬಾಂಧವ್ಯದ ಕತೆ ಚಿತ್ರದಲ್ಲಿ ಇರಲಿದೆಯಂತೆ. ಈ ಸಿನಿಮಾ ‘Sathya Royals’ ನಿರ್ಮಾಣ ಸಂಸ್ಥೆಯಡಿ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಈ ವರ್ಷದ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಮೆಕ್ಸಿಕೋ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಧನಂಜಯ್ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ, ”ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು ಜೊತೆಗೆ ನನ್ನ ಮುಂದಿನ ಸಿನಿಮಾ ‘ಅಣ್ಣ from Mexico’ ಪ್ರೀತಿಯಿರಲಿ” ಎಂದು ಬರೆದಿದ್ದಾರೆ.

Previous articleUSA ‘ಅಪ್ಪು ಸಂಜೆ’ ಕಾರ್ಯಕ್ರಮದಲ್ಲಿ ‘ಬಾನದಾರಿಯಲ್ಲಿ’ ಲಿರಿಕಲ್‌ ವಿಡಿಯೋ ಬಿಡುಗಡೆ
Next articleYash Raj Films ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ | ವಿಕ್ಕಿ ಕೌಶಲ್ – ಮಾನುಷಿ ಛಿಲ್ಲರ್ ಸಿನಿಮಾ

LEAVE A REPLY

Connect with

Please enter your comment!
Please enter your name here