ಅಂದ ಹಾಗೆ ಇದು ಆ್ಯಕ್ಷನ್ ಚಿತ್ರ. ಇಲ್ಲಿ ಲಾಜಿಕ್ ಹುಡುಕಬಾರದು. ಇಲ್ಲಿ ಗುಂಡಿನ ಸುರಿಮಳೆಯಾಗುತ್ತದೆ. ಬಾಂಬ್ ಸ್ಫೋಟಗಳು ನಡೆಯುತ್ತದೆ. ವಿಮಾನಗಳು ಮತ್ತು ಕಾರುಗಳನ್ನು ಸ್ಫೋಟಿಸಲಾಗುತ್ತದೆ. ಪ್ರತಿ ಬಾರಿ ಪರದೆಯ ಮೇಲೆ ಬೆಂಕಿ ತಾಂಡವವಾಡುತ್ತಿದ್ದರೆ ನಾಯಕರು ಸ್ಲೋ ಮೋಷನ್‌ನಲ್ಲಿ ಬರುತ್ತಿರುತ್ತಾರೆ. ಅಕ್ಷಯ್ ಮತ್ತು ಟೈಗರ್, ಗಾಯಗೊಂಡಿದ್ದರೂ ಸಹ ಅಷ್ಟೇ ಎನರ್ಜಿಯಲ್ಲಿ ಹೋರಾಡುತ್ತಾರೆ. ‘ಬಡೇ ಮಿಯಾನ್ ಚೋಟೆ ಮಿಯಾನ್’ ಹಿಂದಿ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ಬಡೇ ಮಿಯಾನ್ ಚೋಟೆ ಮಿಯಾನ್’ ಹೆಸರೇ ಸೂಚಿಸುವಂತೆ ಒಬ್ಬರು ಹಿರಿಯ, ಮತ್ತೊಬ್ಬ ಕಿರಿಯ ಮಿಲಿಟರಿ ಆಫೀಸರ್‌ ಕತೆ. ಒಂದು ಧಾಮ್ ಧೂಮ್ ಚಿತ್ರ ಎಂಬುದು ಚಿತ್ರದ ಆರಂಭದಲ್ಲೇ ಗೊತ್ತಾಗಿ ಬಿಡುತ್ತದೆ. ಸಿನಿಮಾದ ನಾಯಕರಿಬ್ಬರು ಆಕ್ಷನ್ ಹೀರೋಗಳು, ಒಂದಷ್ಟು ಚೇಸಿಂಗ್, ಫೈಟಿಂಗ್, ಡ್ಯಾನ್ಸಿಂಗ್, ಅದ್ಭುತವಾದ ವಿಎಫ್ಎಕ್ಸ್, ಸುಂದರವಾದ ಹೀರೋಯಿನ್‌ಗಳು… ಇಷ್ಟಿದ್ದರೆ ಪಕ್ಕಾ ಬಾಲಿವುಡ್ ಮಸಾಲಾ ಸಿನಿಮಾ! ಅಷ್ಟೇ ಅಲ್ಲ ‘ಮೇರಿ ಬ್ರದರ್ ಕೀ ದುಲ್ಹನ್’, ‘ಸುಲ್ತಾನ್’ ಮತ್ತು ‘ಟೈಗರ್ ಜಿಂದಾ ಹೈ’ ಮುಂತಾದ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನಿರ್ದೇಶಿಸಿದ ಅಲಿ ಅಬ್ಬಾಸ್ ಜಾಫರ್ ಇದರ ನಿರ್ದೇಶಕರು ಎಂದರೆ ಹೇಳಬೇಕೇ? ಆದರೆ ‘ಬಡೇ ಮಿಯಾನ್ ಚೋಟೆ ಮಿಯಾನ್’ ಸಿನಿಮಾ ನೋಡಿದಾಗ ಮನರಂಜನೆ ನೀಡುವಲ್ಲಿ ನಿರ್ದೇಶಕರು ಎಡವಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ನಾಯಕರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಪಾಕಿಸ್ತಾನ ಮತ್ತು ಚೀನಾದಿಂದ ರಕ್ಷಿಸಿಕೊಳ್ಳಲು ಭಾರತ ತಯಾರಿಸಿದ ಅತ್ಯಂತ ಅಪಾಯಕಾರಿ ಅಸ್ತ್ರವಾದ ಕರಣ್ ಕವಚವನ್ನು ಉಳಿಸಲು ಪ್ರಯತ್ನಿಸುತ್ತಿರುವ ಯೋಧರು. ಮುಂದೆ ನೋಡುತ್ತಾ ಹೋಗುವಾಗ ಈ ಸಿನಿಮಾ ‘ಪಠಾಣ್‌’, ‘ಜವಾನ್’, ‘ವಾರ್’ ಮತ್ತು ‘ಮಾರ್ವೆಲ್’ ಚಿತ್ರಗಳಿಂದ ಆಯ್ದ ತುಣುಕುಗಳಂತೆ ಕಾಣುತ್ತದೆ. ಕ್ಯಾಪ್ಟನ್ ಫಿರೋಜ್ ಅಕಾ ಫ್ರೆಡ್ಡಿ (ಅಕ್ಷಯ್ ಕುಮಾರ್) ಮತ್ತು ಕ್ಯಾಪ್ಟನ್ ರಾಕೇಶ್ ಅಕಾ ರಾಕಿ (ಟೈಗರ್ ಶ್ರಾಫ್) ಎಂಬ ಯೋಧರನ್ನು ದೇಶದ ರಕ್ಷಣೆಗಾಗಿ ಕರ್ನಲ್ ಆದಿಲ್ ಶೇಖರ್ ಆಜಾದ್ (ರೋನಿತ್ ಬೋಸ್ ರಾಯ್) ನೇತೃತ್ವದಲ್ಲಿ ಮರಳಿ ಭಾರತೀಯ ಪಡೆಗೆ ಕರೆತರಲಾಗುತ್ತದೆ. ಈ ಹಿಂದೆ ಸೇನೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿತ್ತು.

ಅಲ್ಲೊಬ್ಬ ಮಾಸ್ಕ್ ಹಾಕಿದ ಶತ್ರು ಇದ್ದಾನೆ. ಹೆಸರು ಕಬೀರ್ (ಪೃಥ್ವಿರಾಜ್ ಸುಕುಮಾರನ್). ಅವನು ಕದ್ದಿದ್ದ ಅತ್ಯಂತ ಪ್ರಮುಖವಾದ ‘ಪ್ಯಾಕೇಜ್’ ಅಂದರೆ ಕರಣ್ ಕವಚವನ್ನು ಮರಳಿ ತರಬೇಕಾಗಿದ್ದು ಫ್ರೆಡ್ಡಿ ಮತ್ತು ರಾಕಿಯ ಕೆಲಸ. ಇದಕ್ಕಾಗಿ ಅವರ ಜತೆಗೆ ಸಹಾಯಕ್ಕೆ ನಿಲ್ಲುವವರು ಕ್ಯಾಪ್ಟನ್ ಮಿಶಾ (ಮಾನುಷಿ ಚಿಲ್ಲರ್), ಮತ್ತು ಐಟಿ ಸ್ಪೆಷಲಿಸ್ಟ್ ಪಾಮ್ (ಅಲಯಾ ಎಫ್). ಈ ಮಿಷನ್ ದೇಶವನ್ನು ಉಳಿಸುವುದಕ್ಕಾಗಿ ಇರುವುದು . ಅಧಿಕಾರಿ ಪ್ರಿಯಾ ದೀಕ್ಷಿತ್ (ಸೋನಾಕ್ಷಿ ಸಿನ್ಹಾ) ಕೂಡ ಮಿಷನ್‌ನ ಭಾಗವಾಗಿದ್ದಾಳೆ. ‘ಬಡೇ ಮಿಯಾನ್ ಚೋಟೆ ಮಿಯಾನ್’ ಈ ಕಾರ್ಯ ಹೇಗೆ ಸಾಧಿಸುತ್ತಾರೆ ಎಂಬುದೇ ಸಿನಿಮಾದ ಕತೆ.

ಅಂದ ಹಾಗೆ ಇದು ಆ್ಯಕ್ಷನ್ ಚಿತ್ರ. ಇಲ್ಲಿ ಲಾಜಿಕ್ ಹುಡುಕಬಾರದು. ಇಲ್ಲಿ ಗುಂಡಿನ ಸುರಿಮಳೆಯಾಗುತ್ತದೆ. ಬಾಂಬ್ ಸ್ಫೋಟಗಳು ನಡೆಯುತ್ತದೆ. ವಿಮಾನಗಳು ಮತ್ತು ಕಾರುಗಳನ್ನು ಸ್ಫೋಟಿಸಲಾಗುತ್ತದೆ. ಪ್ರತಿ ಬಾರಿ ಪರದೆಯ ಮೇಲೆ ಬೆಂಕಿ ತಾಂಡವವಾಡುತ್ತಿದ್ದರೆ ನಾಯಕರು ಸ್ಲೋ ಮೋಷನ್‌ನಲ್ಲಿ ಬರುತ್ತಿರುತ್ತಾರೆ. ಅಕ್ಷಯ್ ಮತ್ತು ಟೈಗರ್, ಗಾಯಗೊಂಡಿದ್ದರೂ ಸಹ ಅಷ್ಟೇ ಎನರ್ಜಿಯಲ್ಲಿ ಹೋರಾಡುತ್ತಾರೆ. ಅಧಿಕಾರಿಯೊಬ್ಬರು, ‘ಯೇ ಜಿಸ್ಸ್ ರೆಜಿಮೆಂಟ್ ಸೆ ಆತೇ ಹೈ, ಉಸ್ಕಾ ನಾಮ್ ಹೈ ಲಯನ್ಸ್, ಔರ್ ಇಸ್ ರೆಜಿಮೆಂಟ್ ಕಾ ಸೋಲ್ಜರ್ ಜಿತ್ನಾ ಝಖ್ಮಿ ಹೋತಾ ಹೈ ಉತ್ನಾ ಜ್ಯಾದಾ ಖತರ್ನಾಕ್ ಹೋತಾ ಹೈ’ ಅಂತಾರೆ. ಅಲ್ಲಿಗೆ ಈ ಇಬ್ಬರು ನಾಯಕರ ಎಕ್ಸ್ಟ್ರಾ ಎನರ್ಜಿಗೆ ಕಾರಣ ಸಿಕ್ಕಿತಲ್ಲಾ. ಎಂಥಾ ಡೈಲಾಗ್!. ಇಂಥಾ ಆಕ್ಷನ್ ಸಿನಿಮಾದಲ್ಲಿ ಅಲ್ಲಲ್ಲಿ ಹಾಸ್ಯವಿರುತ್ತದೆ. ಆದರೆ ಅದೆಲ್ಲ ಬೇಕು ಬೇಕಂತಲೇ ತುರುಕಿದಂತಿದೆ. ಕೆಲವೊಂದು ಹಾಸ್ಯಕ್ಕೆ ನಗುವೇ ಬರುವುದಿಲ್ಲ. ಅಲಿ ಅಬ್ಬಾಸ್ ಜಾಫರ್ ಮತ್ತು ಆದಿತ್ಯ ಬಸು ಅವರ ಚಿತ್ರಕಥೆಯು ಸಾಕಷ್ಟು ವೇಗವಾಗಿದೆ ಎಂದೇ ಹೇಳಬಹುದು.

ಅಕ್ಷಯ್ ಆಕ್ಷನ್ ರಂಗಗಳಲ್ಲಿ ತುಂಬಾನೇ ಚಂದದ ನಟನೆ ನೀಡಿದ್ದು, ಟೈಗರ್‌ಗೆ ಪೈಪೋಟಿ ನೀಡಿದಂತಿದೆ. ಟೈಗರ್ ಹಲವಾರು ತಮಾಷೆಗಳನ್ನು ಹೇಳುವ ಮೂಲಕ ಕೂಲ್ ಎಂದು ತೋರಿಸಲಾಗಿದೆ. ‘ವಾರ್’ ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ಟೈಗರ್ ನೃತ್ಯ ಜನರ ಮನಸ್ಸು ಸೆಳೆದಂತೆ ‘ಬಡೇ ಮಿಯಾನ್ ಚೋಟೆ ಮಿಯಾನ್’ನಲ್ಲಿ ಅಕ್ಷಯ್ ಮತ್ತು ಟೈಗರ್ ಜತೆಯಾಗಿ ಫೈಟ್ ಮಾಡುವುದು ಕಣ್ಣಿಗೆ ಹಬ್ಬ.

ಈ ಸಿನಿಮಾದಲ್ಲಿ ಪ್ರೇಕ್ಷಕರ ಮನ ಸೆಳೆಯುವ ನಟ ಎಂದರೆ ಪೃಥ್ವಿರಾಜ್ ಸುಕುಮಾರನ್. ಈತ ಇಲ್ಲಿ ಖಳನಾಯಕ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಈತ ಹೇಗೆ ಖಳನಾಯಕನಾದ ಎಂಬುದನ್ನು ತೋರಿಸುತ್ತದೆ. ಮಾಸ್ಕ್ ಧರಿಸಿದ ಗಡಸು ದನಿಯಲ್ಲಿ ಡೈಲಾಗ್ ಡೆಲಿವರಿ ಪೃಥ್ವಿರಾಜ್ ನಟನೆಯನ್ನು ಮೆಚ್ಚುವಂತೆ ಮಾಡುತ್ತದೆ. ಅದೇ ರೀತಿ ರೋನಿತ್ ರಾಯ್ ನಟನೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ, ಅವರು ನಟನಾಗಿ ತಮ್ಮ ಬಹುಮುಖ ವ್ಯಕ್ತಿತ್ವವನ್ನು ಇಲ್ಲಿ ತೋರಿಸುತ್ತಾರೆ.

ಸಿನಿಮಾದಲ್ಲಿರುವ ನಾಯಕಿಯರಿಗೆ ತಮ್ಮ ನಟನೆಯನ್ನು ಪ್ರದರ್ಶಿಸಲು ಸಾಕಷ್ಟು ಸ್ಕ್ರೀನ್ ಟೈಮ್ ಸಿಕ್ಕಿದೆ. ಮಾನುಷಿಗೆ ಕೆಲವು ಉತ್ತಮವಾದ ಆಕ್ಷನ್ ದೃಶ್ಯಗಳು ಸಿಕ್ಕಿದ್ದು ಕೆಲವು ತೀವ್ರವಾದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಚೆಂದವಾಗಿ ನಿರ್ವಹಿಸಿದ್ದಾರೆ. ಮತ್ತೊಂದೆಡೆ, ಅಲಯಾ, Gen Z ಜೀನಿಯಸ್ ಆಗಿರುವುದರಿಂದ ಈ ಪಾತ್ರ ಫ್ರೆಶ್ ಆಗಿದೆ. ಸೋನಾಕ್ಷಿ ಇಲ್ಲಿ ಅತಿಥಿ ಪಾತ್ರದಂತೆ ಕಾಣಿಸಿದ್ದು, ಅವರ ಪಾತ್ರವನ್ನು ತುಂಬಾ ಅಚ್ಚುಕಚ್ಚಾಗಿ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಸಹಿಸಲು ಅಸಹನೀಯವಾದದು ಅಂದರೆ ದೊಡ್ಡ ದೊಡ್ಡ ಡೈಲಾಗ್. ಉದಾಹರಣೆಗೆ ‘ಸಬ್ ಸೇ ಖತರ್ನಾಕ್ ದುಷ್ಮನ್ ವೋ ಹೋತಾ ಹೈ, ಜಿಸ್ಕೆ ಅಂದರ್ ಮೌತ್ ಕಾ ಡರ್ ಹೀ ನಾ ಹೋ, ಏಕ್ ನಯಾ ದುಷ್ಮನ್ ಕಯೀ ಬಾರ್ ಪುರಾನಾ ದೋಸ್ತ್ ಹೋತಾ ಹೈ, ‘ದಿಲ್ ಸೇ ಸೋಲ್ಜರ್, ದಿಮಾಗ್ ಸೇ ಶೈತಾನ್ ಹೈ ಹಮ್, ಬಚ್ಚ್ ಕೆ ರೆಹನಾ ಹಮ್ ಸೇ, ಹಿಂದೂಸ್ತಾನ್ ಹೈ ಹಮ್.’

ಛಾಯಾಗ್ರಾಹಕ ಮಾರ್ಸಿನ್ ಲಾಸ್ಕಾವಿಕ್ ಅವರು ಸ್ಕಾಟ್ಲೆಂಡ್, ಲಂಡನ್, ಲುಟನ್, ಅಬುಧಾಬಿ ಮತ್ತು ಜೋರ್ಡಾನ್‌ನ ಸೌಂದರ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಜೂಲಿಯಸ್ ಪ್ಯಾಕಿಯಾಮ್ ಅವರ ಬಿಜಿಎಂ ಸಖತ್ ಆಗಿದೆ. ಆಕ್ಷನ್ ಚಿತ್ರಗಳ ಬಗ್ಗೆ ಒಲವು ಹೊಂದಿರುವವರು ಖಂಡಿತವಾಗಿಯೂ ‘ಬಡೇ ಮಿಯಾನ್ ಚೋಟೆ ಮಿಯಾನ್’ ಸಿನಿಮಾ ಒಮ್ಮೆ ನೋಡಬಹುದು. ಅಕ್ಷಯ್ ಮತ್ತು ಟೈಗರ್ ಅವರ ತೆರೆಯ ಮೇಲಿನ ಒಡನಾಟ ಮತ್ತು ಬ್ರೋಮಾನ್ಸ್ ಸಾಕಷ್ಟು ಪ್ರಭಾವಶಾಲಿಯಾಗಿದೆ. ಪ್ರತಿ ಬಾರಿಯೂ ಚೋಟೆ, ಬಡೆಯನ್ನು ಪರಿಚಯಿಸುವಾಗ ‘ಮೇರಾ ಇಗೋ ಮೇರೆ ಟ್ಯಾಲೆಂಟ್ ಸೇ ಬಡಾ ಹೈ, ಉನ್ ಕಾ ಸಬ್ಸೇ ಬಡಾ ಟ್ಯಾಲೆಂಟ್ ಹೀ ಉನ್ ಕೀ ಇಗೋ ಹೈ’ ಎಂದು ಹೇಳುವುದನ್ನು ನಾವು ಕೇಳುತ್ತೇವೆ. ಇಂಥಾ ತೂಕದ ಡೈಲಾಗ್‌ಗಳನ್ನು ಸಹಿಸಿಕೊಂಡು, ನೋಡುವುದಾದರೆ ‘ಬಡೇ ಮಿಯಾನ್ ಚೋಟೆ ಮಿಯಾನ್’ ನೋಡಲು ಅಡ್ಡಿಯಿಲ್ಲ. ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here