ಹೇಳಲೊರಟ ವಿಷಯವೇನೋ ಒಳ್ಳೆಯದೇ. ಆದರೆ ನಿರೂಪಣೆಯನ್ನು ಇನ್ನೂ ಚುರುಕಾಗಿಸಿ ಪಾತ್ರಗಳನ್ನು ಬರವಣಿಗೆ ಹಂತದಲ್ಲಿ ಇನ್ನೂ ಗಟ್ಟಿಗೊಳಿಸಬೇಕಿತ್ತು – ‘ಒನ್‌ ಕಟ್‌ ಟೂ ಕಟ್‌’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಹೌದು ನಮ್ಮಲ್ಲಿ ಸಾಮಾಜಿಕ ಸಮಸ್ಯೆಗಳು ಬಹಳಷ್ಟಿವೆ. ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರ ಇವೆಲ್ಲದರ ಜೊತೆಗೆ ಸಾಮಾನ್ಯ ಪ್ರಜೆಗಳಾದ ನಮ್ಮಲ್ಲೂ ದಿಕ್ಕಾಪಾಲಾಗಿರುವ ಆಲೋಚನೆಯ ಸಮಸ್ಯೆಗಳಿವೆ. ಇವುಗಳನ್ನು ಮನರಂಜನೆಯೊಂದಿಗೆ ಚರ್ಚೆ ಮಾಡುವಂಥ ಪ್ರಯತ್ನಗಳು ಕಲಾಪ್ರಕಾರಗಳಲ್ಲಿ ಆಗುತ್ತವೆ ಅಂದರೆ ಅದು ಖುಷಿಯ ವಿಚಾರವೆ. ಈ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶ ಸಾರುವಂತ ಪ್ರಯತ್ನವಿದೆ ಅನ್ನೋದು ಅಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಸಂಪೂರ್ಣ ಚಿತ್ರಣ ಕಾಣುವುದಿಲ್ಲ.

ಪೆದ್ದನಂತೆ ಕಾಣುವ ವ್ಯಕ್ತಿ ಬಣ್ಣದ ಕಾಗದ ಕತ್ತರಿಸುತ್ತ ನಿಂತಿದ್ದಾನೆ. ಭೌತಿಕವಾಗಿ ಜೊತೆಗಿಲ್ಲದ ಅಮ್ಮನ ಜೀವನ್ಮಾನ ಕನಸಾಗಿದ್ದ ಮಾತುಗಳು ಕೇಳುತ್ತಿವೆ. ಇಂತಹ ಭಾವನಾತ್ಮಕ ದೃಶ್ಯದೊಂದಿಗೆ ಸಿನಿಮಾ ಶುರುವಾಗುತ್ತದೆ. ಆತ ಗೋಪಿ, Art and Craft ಶಿಕ್ಷಕ. ಅವನ ನಡವಳಿಕೆ ಒಂದು ರೀತಿ ಪೆದ್ದುಪೆದ್ದಾಗಿದೆ. ಅವನ ಮಾತುಗಳು, ಅವನ ಪಕ್ಕದ ಮನೆಯವರ ಮಾತುಗಳು ನಾರ್ಮಲ್ ಇಂಗ್ಲೀಷ್‌ಗಿಂತ ಭಿನ್ನವಾಗಿದೆ, ಅದ್ಯಾಕೋ ಗೊತ್ತಿಲ್ಲ. ಗೋಪಿ ಶಾಲೆಗೆ ಶಿಕ್ಷಕನಾಗಿ ರಿಪೋರ್ಟ್ ಆಗುವ ಮೊದಲ ದಿನ. ಸಹ ಶಿಕ್ಷಕಿಯೊಬ್ಬರು ಪ್ರಾಂಶುಪಾಲರ ಗೈರುಹಾಜರಿ ಬಗ್ಗೆ ಹೇಳಿ ಗೋಪಿಯನ್ನು ನೇರ ಕ್ಲಾಸ್ ರೂಮಿಗೆ ಬಿಡುತ್ತಾರೆ. ಅಲ್ಲಿ ಮಕ್ಕಳೆಲ್ಲ ತಮ್ಮ ತುಂಟಾಟಗಳಲ್ಲಿ ಬ್ಯುಸಿ ಇದ್ದಾರೆ.

ಗೋಪಿ ಅವರ ಗಮನವನ್ನು ತನ್ನತ್ತ ಸೆಳೆದು ‘ಒನ್ ಕಟ್ ಟೂ ಕಟ್’ ಫ್ಲವರ್‌ ಈಸ್‌ ಕೇಮ್‌, ಎಂದು ಮಕ್ಕಳಿಗೇನೊ ಹೇಳುತ್ತ ತರಗತಿ ಆರಂಭಿಸುತ್ತಾನೆ. ದಿಢೀರನೇ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾದ Money Heist ಮುಖವಾಡ ಮತ್ತು ವೇಷಭೂಷಣಗಳನ್ನು ಧರಿಸಿ ಬಂದೂಕುಗಳನ್ನಿಡಿದು ನಾಲ್ಕು ಜನ ‘ಅಟೆಕ್ಷನ್ ಎವೆರಿಬಡಿ’ ಎಂದು ಕ್ಲಾಸ್ ರೂಮಿಗೆ ನುಗ್ಗುತ್ತಾರೆ. ಶಾಲೆಯ ಮಕ್ಕಳು ಮತ್ತು ಶಿಕ್ಷಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳುತ್ತಾರೆ. ಶಿಕ್ಷಕಿಯೊಬ್ಬರು, “ನೀವೀಗ ಇಲ್ಲಿಂದ ಹೋಗಲಿಲ್ಲ ಅಂದ್ರೆ ನಾನು ಸಿ.ಎಮ್ ಸೆಕ್ರೆಟ್ರಿಗೆ ಹೆಳ್ತಿನಿ”ಎಂದಾಗ ಶಿಕ್ಷಕಿಗೆ ಚೀಫ್ ಮಿನಿಸ್ಟರ್ ಸೆಕ್ರೆಟರಿ ಪರಿಚಯವಿದೆ ಎಂಬುದು ಇವರಿಗೆ ಗೊತ್ತಾಗುತ್ತದೆ. ಗೋಪಿಯನ್ನು ಮುಂದಿಟ್ಟುಕೊಂಡು ಒಂದಷ್ಟು ಬೇಡಿಕೆಗಳನ್ನಿಡುತ್ತಾರೆ. ಅವುಗಳನ್ನು ನಿರಾಕರಿಸಿದರೆ ಮಕ್ಕಳ ಜೀವಕ್ಕೆ ಹಾನಿಯಾಗುತ್ತದೆ ಎಂದು ಬೆದರಿಕೆಯೊಡ್ಡುತ್ತಾರೆ.

ಅವರ ಬೇಡಿಕೆಗಳು ಈಡೇರುತ್ತವೆಯೇ? ಇಲ್ಲವೇ? ಆ ಬಂದೂಕು ಧಾರಿಗಳು ಯಾರು? ಕಥಾನಾಯಕ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾನಾ? ಇಲ್ಲವಾ? ಅನ್ನುವುದೇ ಚಿತ್ರದ ಅಸ್ಪಷ್ಟ ಕಥೆ. ಆ ಆಗಂತುಕರು, ಶಿಕ್ಷಕರು, ಸಿಎಂ ಮನೆ, ಮಧ್ಯವೊಂದು ಮಾಧ್ಯಮ, ಸೀಕ್ರೇಟ್ ಏಜೆನ್ಸಿ, ಶಾಲೆಯ ಬಾಗಿಲಲ್ಲೇ ಚಿತ್ರಕಥೆ ಸುತ್ತುತ್ತದೆ. ಇಲ್ಲಿ ಸಮಸ್ಯೆಗಳ ಗಂಭೀರ ಆಳವಾಗಲಿ, ಪಾತ್ರಗಳ ಹಿನ್ನೆಲೆಯಾಗಲಿ ಇಲ್ಲ. ಸಂಭಾಷಣೆಯಲ್ಲಿ ಕೇಳಿಸುವ ವಿಷಯದ ಕುರಿತು ಚಿಂತಿಸುವ ನಿಟ್ಟಿನಲ್ಲಿ ನಿರೂಪಣೆ ಸಾಧ್ಯವಾಗಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಡ್ಯಾನಿಶ್ ಸೇರ್ ಅವರ ಕಾಮಿಡಿ ವಿಡಿಯೋ ತುಣುಕುಗಳನ್ನು ಇಷ್ಟಪಡುವಡುವವರಿಗೆ ಚಿತ್ರ ಇಷ್ಟವಾಗಬಹುದೇನೋ.. ಆದರೆ ಸಾಮಾನ್ಯ ಪ್ರೇಕ್ಷಕರು ಆನಂದಿಸುವುದು ಕಷ್ಟ. ಸಿನಿಮಾ ವಿದ್ಯಾರ್ಥಿಗಳಿಗೆ ಚಿತ್ರದ ಶುರುವಿನಿಂದಲೂ ಈ ಚಿತ್ರ ಚಂದವಾಗಿಸುವ ಹಲವಾರು ಸಾಧ್ಯತೆಗಳು ಹತ್ತಾರು ರೀತಿಯಲ್ಲಿ ಗೋಚರಿಸುತ್ತದೆ. ಈ ಚಿತ್ರ ಬರವಣಿಗೆಯ ಹಂತದಲ್ಲೇ ಇನ್ನೂ ತುಸು ಗಟ್ಟಿಯಾಗಿದ್ದರೆ, ಹೂಮರಸ್ ಕಾಮಿಡಿ ಚಿತ್ರವೂ, ಸಮಾಜಕ್ಕೆ ಸಂದೇಶ ಸಾರಬಹುದಾದ ಸಾಮಾಜಿಕ ಕಳಕಳಿಯುಳ್ಳ ಚಿತ್ರದ ಗುಣ ಇದಕ್ಕೆ ಸಿಗುತ್ತಿತ್ತು.

ಚಿತ್ರದಲ್ಲಿ ಡ್ಯಾನಿಶ್ ಸೇರ್ ಕಥಾನಾಯಕ ಗೋಪಿಯಾದರೆ, ಸಂಯುಕ್ತಾ ಹೊರನಾಡು ನಾಯಕಿಯಾಗಿ ಶಾಲಾಶಿಕ್ಷಕಿಯ ಪಾತ್ರದಲ್ಲಿದ್ದಾರೆ. ಮತ್ತೊಬ್ಬ ಶಿಕ್ಷಕಿಯಾಗಿ ಅರುಣಾ ಬಾಲರಾಜ್ ಜೊತೆಯಾಗಿದ್ದಾರೆ. ಇತ್ತ ಬಂದೂಕು ದಾರಿಗಳ ಗುಂಪಿನ ನಾಯಕರಾಗಿ ಪ್ರಕಾಶ್ ಬೆಳವಾಡಿಯವರಿದ್ದು, ಜೊತೆಗೆ ಮನೋಶ್ ಶೇನ್ ಗುಪ್ತ, ರೂಪ ರಾಯಪ್ಪ, ವಿನಿತ್ ಕುಮಾರ್ ಇದ್ದಾರೆ. ಮಾಧ್ಯಮವೊಂದರ ಮುಖ್ಯಸ್ಥನಾಗಿ ಅಶ್ವಿನ್ ಮತ್ತು ರಿಪೋರ್ಟರ್ ಪಾತ್ರದಲ್ಲಿ ಸೌಂದರ್ಯ ಇದ್ದಾರೆ. ಗಂಭೀರ ನೋಟದಿಂದ ಗಮನ ಸೆಳೆಯುವಂಥ ಪಾತ್ರದಲ್ಲಿ ನಿರ್ದೇಶಕರಾದ ವಂಸಿಧರ್ ಭೋಗರಾಜು ಅವರೇ ಸ್ವತಃ ಬಣ್ಣ ಹಚ್ಚಿದ್ದು, CM ಸೆಕ್ರೆಟರಿ ಸಂಪತ್ ಮೈತ್ರೇಯಾ ಮಿಂದೆದ್ದಿದಾರೆ. ಎಲ್ಲರ ಅಭಿನಯವು ಅಚ್ಚುಕಟ್ಟಾಗಿದೆ, ಯಾವ ಸ್ವರ್ಗದಿಂದ ಬಂದ ಹೋ ಅಪ್ಸರೆ ಎನ್ನುವ ಇಂಗ್ಲೀಷ್ ಮಿಶ್ರಿತ ಸಾಹಿತ್ಯದ ಇಮ್ಯಾಜಿನೇಷನ್ ಸಾಂಗ್ ಇಷ್ಟವಾಗಬಹುದು ಕೇಳಲು ಇಂಪಾಗಿದೆ.

ಹೇಳಲೊರಟ ವಿಷಯವೇನೋ ಒಳ್ಳೆಯದೇ. ಆದರೆ ನಿರೂಪಣೆಯನ್ನು ಇನ್ನೂ ಚುರುಕಾಗಿಸಿ ಪಾತ್ರಗಳನ್ನು ಬರವಣಿಗೆ ಹಂತದಲ್ಲಿ ಇನ್ನೂ ಗಟ್ಟಿಗೊಳಿಸಬೇಕಿತ್ತು. ಮೇಕಿಂಗ್ ವಿಚಾರದಲ್ಲಿ ಇದು ಓಟಿಟಿಗೆ ತಯಾರಾದ ಚಿತ್ರ ಕಡಿಮೆ ಬಜೆಟ್ ಚಿತ್ರ ಏನೇ ಅಂದುಕೊಂಡರೂ ವಾತಾವರಣ ಸೃಷ್ಟಿಸುವಲ್ಲಿ ಇನ್ನು ಕೆಲಸ ಮಾಡಬೇಕಿತ್ತು ಅನಿಸುತ್ತದೆ. ಇದು ಒಂದು ವರ್ಗದ ಪ್ರೇಕ್ಷಕರಿಗೆ ವ್ಯಂಗ್ಯ ವ್ಯಾಖ್ಯಾನದ ಪೇಲವ ಚಿತ್ರ ಅನಿಸಿದರೆ, ಮಗದೊಂದು ವರ್ಗಕ್ಕೆ ಚಿತ್ರದ ರೂಪುರೇಷೆ ಗೊಂದಲ ಮೂಡಿಸುವ ಸಾಧ್ಯತೆಗಳಿವೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಈ ಹಿಂದೆ ಎರಡು ಸಿನಿಮಾಗಳು ತಯಾರಾಗಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಇವುಗಳ ಪೈಕಿ ಒಂದು ಚಿತ್ರ ಪೇಲವ ಎನಿಸಿದರೆ, ಮತ್ತೊಂದು ಸಮಾಧಾನಕರ ಬಹುಮಾನ ಪಡೆದುಕೊಂಡಿತ್ತು. ಈಗ ‘ಒನ್ ಕಟ್ ಟೂ ಕಟ್’ ಸಿನಿರಸಿಕರಿಗೆ ನಿರಾಸೆ ಮೂಡಿಸಿದೆ.

LEAVE A REPLY

Connect with

Please enter your comment!
Please enter your name here